ಶನಿವಾರ, ಜನವರಿ 25, 2020
27 °C

ಹೀಗೆಲ್ಲ ಕಿರುಕುಳ ನೀಡಬಹುದು...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ನಡುವಿನ ಹೊಂದಾಣಿಕೆ ಕೊರತೆ ಮತ್ತು ಶೀತಲ ಸಮರದಿಂದ ಮನನೊಂದು ಪ್ರಸೂತಿ ತಜ್ಞ ಡಾ. ಅಮೃತಾಂಶು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುದ್ದಿ (ಪ್ರ.ವಾ., ಜ. 2) ಓದಿ ನನ್ನ ರಕ್ತ ಕುದಿಯಿತು. ಅಮೃತಾಂಶು ಅವರು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ. ತಾಲ್ಲೂಕು ಕೇಂದ್ರಗಳು, ಗ್ರಾಮಾಂತರ ಪ್ರದೇಶದಲ್ಲೂ ಇಂತಹ ಸಂದರ್ಭಗಳು ಎದುರಾಗುತ್ತವೆ.

ನಾನು ದಾವಣಗೆರೆ ಜಿಲ್ಲೆಯ ಹರಿಹರ ಸಾರ್ವಜನಿಕ ಆಸ್ಪತ್ರೆಗೆ ಸ್ತ್ರೀರೋಗ ತಜ್ಞೆಯಾಗಿ ಕರ್ತವ್ಯ ನಿರ್ವಹಿಸಲು ನಿಯೋಜನೆಗೊಂಡೆ. ಸ್ನಾತಕ ಪದವಿ ಹೊಂದಿದ್ದ ಮೂವರು ಪುರುಷ ವೈದ್ಯರೂ ನನ್ನ ಜೊತೆ ಇದ್ದರು. ಹೊಸದಾಗಿ ಹೋಗಿದ್ದ ನಮ್ಮ ಕೆಲಸಕ್ಕೆ ಅಲ್ಲಿನ ಹಳೆಯ ಹುಲಿಗಳು ಅಡ್ಡಿ ಉಂಟುಮಾಡತೊಡಗಿದವು. ಪ್ರಾರಂಭವಾಯಿತು ನೋಡಿ ಕಿರುಕುಳ, ಮಾನಸಿಕ ಹಿಂಸೆ, ವೈದ್ಯಕೀಯೇತರ ಸಿಬ್ಬಂದಿ ನಮ್ಮ ಮಾತು ಕೇಳದಂತೆ ಮಾಡುವ ಸರ್ವಾಧಿಕಾರಿ ಧೋರಣೆ... ಅಷ್ಟಾದರೂ ನಾವು ತಲೆ ಕೆಡಿಸಿಕೊಳ್ಳದೆ ನಮ್ಮ ಕರ್ತವ್ಯದಲ್ಲಿ ಮಗ್ನರಾಗಿದ್ದೆವು. ಜನಪ್ರಿಯತೆ ತುಂಬಾ ನಂಜು ಎಂದು ಆಗಲೇ ನನಗೆ ತಿಳಿದದ್ದು.

ಆಸ್ಪತ್ರೆಯಲ್ಲಿ ನೀಡುತ್ತಿದ್ದ ಕಿರುಕುಳ ಸಾಲದೆಂಬಂತೆ, ಸುಳ್ಳುಸುದ್ದಿಯೊಂದನ್ನು ರಾತ್ರೋರಾತ್ರಿ ಹಬ್ಬಿಸಿದ್ದರು. ನಾನು ಮರುದಿನ ಬೆಳಿಗ್ಗೆ ಆಸ್ಪತ್ರೆಗೆ ಹೋದಾಗ, ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಆಗಿದೆ, ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ, ಸೀರಿಯಸ್ ಆಗಿದ್ದೇನೆ ಎಂಬ ಸುದ್ದಿ ಹರಡಿತ್ತು. ಖುದ್ದಾಗಿ ಅಲ್ಲೇ ನಿಂತಿದ್ದಾಗ ಆಸ್ಪತ್ರೆಗೆ ಸೇರಲು ಹೇಗೆ ಸಾಧ್ಯ? ಇನ್ನೂ ಅನೇಕ ವಿಧದ ಕಿರುಕುಳಗಳನ್ನು ನೀಡಿದರೂ ನಾನು ಗಟ್ಟಿಯಾಗಿದ್ದೆ. ‘ಅತ್ಯಾಚಾರ’ ಎಂದರೆ ಹೆಣ್ಣು ಹೆದರುತ್ತಾಳೆ ಎಂಬುದು ‘ಹಳೆ ಹುಲಿ’ಯೊಂದರ ತಪ್ಪುಕಲ್ಪನೆಯಾಗಿತ್ತು. ನಾನು ಹೆದರಲಿಲ್ಲ. ನನಗೆ ನನ್ನಾಸೆಯ ವೃತ್ತಿ ಮುಖ್ಯವಾಗಿತ್ತು. ನನ್ನ ಬದುಕಿಗೆ ಅದು ‘ಕವಚ’ದಂತಿತ್ತು. ಹೀಗೂ ಇರುತ್ತಾರೆ.

ಡಾ. ಎಚ್.ಗಿರಿಜಮ್ಮ, ದಾವಣಗೆರೆ

ಪ್ರತಿಕ್ರಿಯಿಸಿ (+)