ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಸುಂದರ ಪದ ಸೃಜಿಸುವ ಜನಪದರು

Last Updated 19 ಆಗಸ್ಟ್ 2020, 20:00 IST
ಅಕ್ಷರ ಗಾತ್ರ

ಸ್ನೇಹಿತನ ಗೂಡಂಗಡಿಯ ಬಳಿ ಹರಟುತ್ತಾ ಕೂತಿದ್ದಾಗ, ಅನಕ್ಷರಸ್ಥ ವೃದ್ಧರೊಬ್ಬರು ಬಂದು ‘ಮನುಷ್ಯಾನ ಚಿಕ್ಕ ಕೊಡ್ರಿ’ ಎಂದರು. ‘ಚಿಕ್ಕ’ ಎಂದರೆ ಬೇಸಾಯದ ಕೆಲಸಗಳಲ್ಲಿ ಎತ್ತುಗಳು ಬೆಳೆಗೆ ಬಾಯಿ ಹಾಕದಂತೆ ತಡೆಯಲು ಹೆಣೆದಿರುವ ದುಂಡನೆಯ ವಸ್ತು. ದನಗಳಿಗೆ ಮಾತ್ರ ಬಳಸುವ ಚಿಕ್ಕವನ್ನು ನೋಡಿದ್ದ ನಮಗೆ, ಮನುಷ್ಯರು ಬಳಸುವ ಚಿಕ್ಕದ ಬಗ್ಗೆ ಕೇಳಿ ಕುತೂಹಲ ಮೂಡಿತು.

ಅಂಗಡಿಯ‌ ಬಾಗಿಲ ಬಳಿ ತೂಗುಹಾಕಿದ್ದ ‘ಮಾಸ್ಕ್’ಗಳ‌ ಕಡೆಗೆ ಕೈ ತೋರಿಸಿದ ಆ ಹಿರಿಯರು ‘ಈ ಚಿಕ್ಕ ಕೊಡ್ರಿ’ ಎಂದರು. ಮಾಸ್ಕ್ ಎಂದು ಉಚ್ಚರಿಸಲು ಬಾರದ ಅವರು, ಅದಕ್ಕೆ ಕನ್ನಡದ ಸಮಾನಾರ್ಥಕ ಪದವನ್ನು ಯಾವ ಭಾಷಾ ಪಂಡಿತನಿಗೂ ಕಡಿಮೆಯಿಲ್ಲದಂತೆ ನಿಘಂಟಿನ ಸಹಾಯವಿಲ್ಲದೆ ಕಂಡುಹಿಡಿದದ್ದು ನಮ್ಮೆಲ್ಲರ ಅಚ್ಚರಿಗೆ ಕಾರಣವಾಯಿತು.

ಅದೇ ರೀತಿ, ಉಗುರು ಕತ್ತರಿಸುವ ‘ನೇಲ್ ಕಟರ್’ ವೃದ್ಧರ ಬತ್ತಳಿಕೆಯಲ್ಲಿ ನೀಲಕಂಠನಾಗಿ, ಸ್ಯಾನಿಟೈಸರ್ ಎಂಬುದು ಸಂತೆಣ್ಣೆ ಎಂಬ ಪದಗಳಾಗಿ ಬಳಕೆಯಾಗುತ್ತಿವೆ. ಇಂಗ್ಲಿಷ್‌ ಭಾಷೆಯ ಕ್ಲಿಷ್ಟಕರವಾದ ಪ್ರತಿಯೊಂದು ಪದಕ್ಕೂ ತಮ್ಮ ಅನುಕೂಲಕ್ಕೆ ತಕ್ಕಂತೆ ದೇಶೀಯವಾದ ಸರಳ ಮತ್ತು ಸುಂದರ ಪದಗಳನ್ನು ನಮ್ಮ ಜನಪದರು ಸೃಜಿಸಬಲ್ಲರು. ಹೀಗೆ ಸೃಜಿಸಲಾದ ಬಹುತೇಕ ಪದಗಳಿಗೆ ನಿರ್ದಿಷ್ಟ ಅರ್ಥಗಳನ್ನು ಪಡೆಯಲು ಸಾಧ್ಯವಿಲ್ಲ. ಆದರೆ ಈ ರೀತಿಯ ಪದಗಳನ್ನು ಸಾಧ್ಯವಾದರೆ ಬಳಸಿ ಬೆಳೆಸಿ ಖುಷಿಪಡಬಹುದಷ್ಟೇ.

-ಮಹೇಶ್ವರ ಹುರುಕಡ್ಲಿ,ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT