ಭಾನುವಾರ, ಏಪ್ರಿಲ್ 2, 2023
23 °C

ವಾಚಕರ ವಾಣಿ| ದಿ ಕಾಶ್ಮೀರ್‌ ಫೈಲ್ಸ್‌: ಸಂಗತಿಗಳು ಅವಾಸ್ತವಿಕವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರವು ತೆರೆಗೆ ಬಂದ ದಿನದಿಂದಲೂ ರಾಜಕೀಯ ವಲಯದೊಳಗೆ ಸೆಳೆಯಲ್ಪಟ್ಟು, ಪರ- ವಿರೋಧದ ಚರ್ಚೆಗಳಿಗೆ ಮುಕ್ತ ಗ್ರಾಸವಾಗಿದೆ. ಗೋವಾದಲ್ಲಿ ನಡೆಯುವ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರ ಮಂಡಳಿಯ ಅಧ್ಯಕ್ಷ ನೆದಾವ್‌ ಲಪಿಡ್ ಅವರು ಈಗ ಈ ಚಿತ್ರವು ‘ಅಸಭ್ಯವಾದ, ನಿರ್ದಿಷ್ಟ ವಿಚಾರದ ಪ್ರಚಾರಕ್ಕೆ ರೂಪಿಸಿದ್ದು’ ಎಂದು ವಿಮರ್ಶಿಸಿದ್ದಾರೆ. ವಲ್ಗರ್ ಪ್ರಾಪಗ್ಯಾಂಡ ಎನ್ನುವ ಪದಗಳನ್ನೂ ಬಳಸಿದ್ದಾರೆ. ಅರ್ಥಾತ್, ಈ ಚಿತ್ರವು ಕೀಳು ಅಭಿರುಚಿಯಿಂದ ಕೂಡಿದ, ಪಕ್ಷಪಾತದ ಅಥವಾ ದಾರಿತಪ್ಪಿಸುವ ರಾಜಕೀಯ ಉದ್ದೇಶವನ್ನು ಹೊಂದಿದೆ ಎಂದಾಯಿತು!

ಚಲನಚಿತ್ರದಲ್ಲಿ ಕಾಣಬರುವ ಘಟನೆಗಳು ಮತ್ತು ಸಂಗತಿಗಳು ಅವಾಸ್ತವಿಕವಾದವು ಎಂದು ಯಾರೂ ಹೇಳಿಲ್ಲ ಎನ್ನುವುದನ್ನು ಈ ಸಂದರ್ಭದಲ್ಲಿ ನೆನೆಯಬೇಕು. ತೀರ್ಪುಗಾರರ ಸಮಿತಿಯ ಅಧ್ಯಕ್ಷರಾಗಿ ಲಪಿಡ್ ಅವರಿಗೆ ಸಮಿತಿಯ ಅಭಿಪ್ರಾಯ ತಿಳಿಸುವ ಸ್ವಾತಂತ್ರ್ಯವಿದೆ. ಹೀಗಾಗಿ, ಅವರು ಹೇಳಿರುವುದು ಸಮಿತಿಯ ಒಟ್ಟು ಅಭಿಪ್ರಾಯ ಎಂದು ಭಾವಿಸಬೇಕಾಗಿದೆ. ಹಾಗಿದ್ದರೆ ಸಮಿತಿಯ ಸದಸ್ಯರೆಲ್ಲರೂ ಹೀಗೆ ಏಕಾಭಿಪ್ರಾಯದವರೇ? ಈ ಚಿತ್ರದಲ್ಲಿ ಕಲಾತ್ಮಕತೆಯ ಕೊರತೆ ಕಾಣುತ್ತದೆ ಎಂದೂ ಲಪಿಡ್ ಹೇಳಿದ್ದಾರಂತೆ.

ಚಲನಚಿತ್ರಗಳ ಕಲಾತ್ಮಕತೆಯನ್ನು ಅಳೆಯುವ ಮಾಪನಗಳು ಸಾಮಾನ್ಯವಾಗಿ ಚಿತ್ರವೊಂದರ ಅನನ್ಯತೆ, ಸೃಷ್ಟ್ಯಾತ್ಮಕತೆ, ವಸ್ತು ವಿಷಯ, ಅಭಿನಯದ ನಡೆ ಅಥವಾ ಗತಿ, ಚಿತ್ರದ ರಾಚನಿಕತೆ, ಪಾತ್ರಗಳು, ಕ್ಯಾಮೆರಾ ಬಳಕೆ, ಮನರಂಜನೆಯ ಮೌಲ್ಯ, ತಾಂತ್ರಿಕ ಕೌಶಲ, ಚಿತ್ರ ಕೊಡುವ ಸಂದೇಶದ ಮೌಲ್ಯ- ಇಂಥವು ಎಂದು ಹೇಳಲಾಗುತ್ತದೆ. ಈ ನೆಲೆಯಿಂದ ಮಾತ್ರವೇ ಚಿತ್ರವನ್ನು ಅಳೆದಿದ್ದರೆ, ಚಿತ್ರದ ಯಾವ ಭಾಗ, ಎಲ್ಲಿ, ಹೇಗೆ ಅಸಭ್ಯ ಮತ್ತು ಪ್ರಾಪಗ್ಯಾಂಡ ವಾಸನೆಯನ್ನು ಹೇಗೆ ಹೊಡೆಯುತ್ತಿದೆ ಎನ್ನುವುದನ್ನು ಲಪಿಡ್ ವಿವರಿಸಿಲ್ಲ ಏಕೆ? ಅಥವಾ ಅವರ ಮಾತಿನ ಅರ್ಥ, ಮೊದಲಿನಿಂದ ಕೊನೆಯವರೆಗೂ ಈ ಅಂಶಗಳಿಂದಲೇ ಚಿತ್ರ ಕೂಡಿದೆ ಎಂದೇ? ಈ ಪ್ರಶ್ನೆಗಳು ಈಗ ಪ್ರಸ್ತುತ ಆಗುತ್ತವೆ. ಇಲ್ಲವಾದರೆ ವಲ್ಗರ್ ಪ್ರಾಪಗ್ಯಾಂಡ ಎಂದು ಸಾರಾಸಗಟಾಗಿ ಚಿತ್ರವೊಂದನ್ನು ಹಳಿಯುವುದು ಹೊಣೆಗಾರಿಕೆಯ ಲಕ್ಷಣ ಅಲ್ಲ.

- ಸಾಮಗ ದತ್ತಾತ್ರಿ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು