ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ರಾಗಿ ಬೆಳೆಯುವವರಿಗೆ ಏಕೆ ‘ರಾಗಿ ಭಾಗ್ಯ’?

Last Updated 6 ಮೇ 2021, 19:30 IST
ಅಕ್ಷರ ಗಾತ್ರ

ಪಡಿತರ ವಲಯಕ್ಕೆ ‘ರಾಗಿ ಭಾಗ್ಯ’ವಿರಲಿ ಎಂದು ಲೇಖನದಲ್ಲಿ (ಸಂಗತ, ಮೇ 6) ಹೇಳಿರುವ ಹೊರೆಯಾಲ ದೊರೆಸ್ವಾಮಿ ಅವರು ರಾಗಿಯ ಬಗೆಗಿನ ಉಪಯೋಗಗಳನ್ನು ವಿವರಿಸಿದ್ದಾರೆ. ಜೊತೆಗೆ ರಾಗಿ ಹಾಗೂ ಅಕ್ಕಿಯ ನಡುವೆ ತಾರತಮ್ಯ ಏಕೆ ಎಂಬ ಪ್ರಶ್ನೆಯನ್ನೂ ಕೇಳಿದ್ದಾರೆ. ಆದರೆ ವಾಸ್ತವವಾಗಿ ನೋಡಿದರೆ, ದಕ್ಷಿಣ ಕರ್ನಾಟಕ ಭಾಗದ ಬಹುತೇಕ ಪಡಿತರ ಚೀಟಿದಾರರು ರಾಗಿಯ ಬದಲು 5 ಕೆ.ಜಿ.ಯಷ್ಟು ಅಕ್ಕಿಯನ್ನೇ ಕೊಡಲಿ ಎಂಬ ನಿಲುವನ್ನು ಹೊಂದಿದ್ದಾರೆ.

ದಕ್ಷಿಣ ಕರ್ನಾಟಕ ಭಾಗದ ಜನ, ಅದರಲ್ಲೂ ಮೈಸೂರು ಭಾಗದವರು (ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಹಾಸನ, ಚಾಮರಾಜನಗರ) ರಾಗಿಯನ್ನು ಹೆಚ್ಚು ಬಳಸುತ್ತಾರೆ. ರಾಗಿ ಮುದ್ದೆ ಈ ಭಾಗದ ಜನರಿಗೆ ದಿನವೂ ಬೇಕಿರುವ ಆಹಾರ. ಹಿಂದಿನ ಕಾಲದಿಂದಲೂ ರಾಗಿಯನ್ನೇ ಉಪಯೋಗಿಸಿ ರಾಗಿಯನ್ನೇ ಹೆಚ್ಚು ಹೆಚ್ಚು ಬೆಳೆಯುತ್ತಾ ಬಂದಿದ್ದಾರೆ. 50– 60 ವರ್ಷಗಳ ಹಿಂದೆ ನೀರಾವರಿ ಇಲ್ಲದೆ ಭತ್ತ ಬೆಳೆಯಲು ಆಗದವರು, ಅಕ್ಕಿ ಕೊಳ್ಳಲು ಆಗದವರು ವಾರಕ್ಕೊಮ್ಮೆ, ಹಬ್ಬ ಹರಿದಿನಗಳಲ್ಲಿ ಅನ್ನ ತಿನ್ನುತ್ತಿದ್ದರು ಎಂಬ ಮಾತು ಸಹ ಇದೆ. ಇವರು ಅಕ್ಕಿಯನ್ನು ತಮ್ಮ ದಿನನಿತ್ಯದ ಆಹಾರದಲ್ಲಿ ಬಳಸಲು ಪ್ರಾರಂಭಿಸಿದ್ದು ಪಡಿತರ ಅಕ್ಕಿ ನೀಡಲಾರಂಭಿಸಿದ ಮೇಲೆ. ಕಡಿಮೆ ಖರ್ಚಿನಲ್ಲಿ ರಾಗಿ ಬೆಳೆದು, ಯಾವಾಗಲೂ ಉತ್ತಮ ಇಳುವರಿಯಾಗದಿದ್ದರೂ ತಮ್ಮ ಹೊಟ್ಟೆಪಾಡಿಗೆ ಸಾಕಾಗುವುದರಿಂದ ಈ ಪ್ರದೇಶದ ಜನರಿಗೆ ರಾಗಿ ಉತ್ತಮ ಆಯ್ಕೆಯಾಗಿತ್ತು. ಹೀಗೆ ರಾಗಿಯನ್ನೇ ಬೆಳೆದು ತಿನ್ನುವವರಿಗೆ ಅಕ್ಕಿಯ ಬದಲು ರಾಗಿ ಕೊಡುತ್ತೇವೆ ಎಂದರೆ ಸಹಜವಾಗಿ ಅಕ್ಕಿ ಕೊಡಿ ಎಂದೇ ಕೇಳುತ್ತಾರೆ.

ಇದರಲ್ಲಿ ರಾಗಿ ಮತ್ತು ಅಕ್ಕಿಯ ನಡುವೆ ಭೇದಭಾವದ ಪ್ರಶ್ನೆಯೇ ಇಲ್ಲ. ಅಕ್ಕಿಯ ಮೇಲಿನ ಒಲವು ಬಿಳಿಬಣ್ಣದ ಶ್ರೇಷ್ಠತೆ ಎಂಬುದೂ ಸಮಂಜಸವಲ್ಲ. ಉತ್ತರ ಕರ್ನಾಟಕ ಭಾಗದ ಜನರೂ ಜೋಳದ ಬದಲು ಅಕ್ಕಿಯನ್ನೇ ಕೊಡಿ ಎನ್ನುವುದು ಇದೇ ಕಾರಣಕ್ಕೆ ಇದ್ದರೂ ಇರಬಹುದು. ಸರ್ಕಾರ ತನಗೆ ಅನುಕೂಲವಾಗುವ ಆಹಾರ ಧಾನ್ಯವನ್ನು ನೀಡುವ ಬದಲು, ಪಡಿತರ ಚೀಟಿ ಹೊಂದಿರುವವರಿಗೆ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಲು ಬಿಡಬೇಕು.

ಯಾದವ್ ಎಂ.ಎಸ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT