ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಅಧಿಕಾರಕ್ಕೆ ಅಂಟಿಕೊಳ್ಳದ ಈ ಪರಿ

Last Updated 22 ಜನವರಿ 2023, 19:30 IST
ಅಕ್ಷರ ಗಾತ್ರ

ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಆರ್ಡೆರ್ನ್‌ ಅವರು ಹುದ್ದೆ ಬಯಸಿದ್ದನ್ನು ನೀಡುವ ಶಕ್ತಿ ತಮ್ಮಲ್ಲಿ ಖಾಲಿಯಾಗಿದೆ ಎಂದು ಹೇಳುತ್ತಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿರುವುದು ಸೋಜಿಗವನ್ನುಂಟು ಮಾಡಿದೆ. ಕ್ಲಿಷ್ಟ ಸಂದರ್ಭದಲ್ಲಿ ತಮ್ಮ ದೇಶವನ್ನು ಸಮರ್ಥವಾಗಿ ಮುನ್ನಡೆಸಿದ ಕೀರ್ತಿ ಅವರಿಗೆ ಇದೆ. ಆದರೂ ಅವರು ಅಧಿಕಾರಕ್ಕೆ ವಿದಾಯ ಹೇಳುತ್ತಿದ್ದಾರೆ. ಪದ್ಮಪತ್ರದ ಮೇಲಿನ ಜಲಬಿಂದುವಿನಂತೆ ಅಧಿಕಾರಕ್ಕೆ ಅಂಟಿಕೊಳ್ಳದ ಪರಿ ಇದು. ಜಗತ್ತಿನ ಎಲ್ಲ ಅಧಿಕಾರಸ್ಥ ನೇತಾರರಿಗೆ ಇದೊಂದು ಮಾದರಿ ನಡವಳಿಕೆಯಾಗಿದೆ.

ಕೆಲವು ದೇಶಗಳಲ್ಲಿ ಸಂವಿಧಾನದ ವಿಧಿ ವಿಧಾನಗಳಿಗೆ ಅನುಗುಣವಾಗಿ ಅಧಿಕಾರದ ಅವಧಿ ನಿಗದಿಯಾಗಿದ್ದರೆ,
ಇಂಥ ಯಾವುದೇ ನಿರ್ಬಂಧಗಳಿರದ ಕೆಲವು ದೇಶಗಳ ನೇತಾರರು ಹಲವಾರು ವಾಮಮಾರ್ಗಗಳ ಮೂಲಕ ಅಧಿಕಾರಕ್ಕೆ ಏರಲು ಮತ್ತು ಅಧಿಕಾರದಲ್ಲಿ ಉಳಿಯಲು ಯತ್ನಿಸುತ್ತಿರುವುದನ್ನು ನಾವು ನೋಡುತ್ತೇವೆ. ಇನ್ನು ನಮ್ಮ ದೇಶದಲ್ಲಂತೂ ರಾಜಕೀಯ ನೇತಾರರು ಎಷ್ಟೇ ವಯಸ್ಸಾಗಲಿ, ತಮಗೆ ಅಗತ್ಯ ಸಾಮರ್ಥ್ಯ, ಶಕ್ತಿ ಇರಲಿ ಬಿಡಲಿ, ಸಲ್ಲದ ಮಾರ್ಗಗಳ ಮೂಲಕ ಅಧಿಕಾರಕ್ಕೆ ಏರಲು ಮತ್ತು ಅಧಿಕಾರಕ್ಕೆ ಅಂಟಿಕೊಂಡಿರಲು ಯತ್ನಿಸುವುದು ಹೇವರಿಕೆ ಹುಟ್ಟಿಸುತ್ತದೆ. ಹಿಂದೆ ನೈತಿಕ ಹೊಣೆ ಹೊತ್ತು ಅಥವಾ ವಯಸ್ಸಿನ ಕಾರಣದಿಂದ ರಾಜಕೀಯದಿಂದ ನಿವೃತ್ತಿ ಹೊಂದಿದ ಕೆಲವು ಅಪರೂಪದ ರಾಜಕಾರಣಿಗಳು ಇದ್ದರು. ಆದರೆ ಆ ಸಂತತಿ ಇಂದು ಉಳಿದಿಲ್ಲ. ಇಂದು ಹಲವರಿಗೆ ಅನೈತಿಕತೆಯೇ ದೈನಂದಿನ ರಾಜಕೀಯ ಮಾರ್ಗವಾಗಿರುವಾಗ ಮತ್ತು ಅಧಿಕಾರದ ಗದ್ದುಗೆಗೆ ಏರುವುದೇ ಸರ್ವಸ್ವ ಆಗಿರುವಾಗ ನ್ಯೂಜಿಲೆಂಡ್‌ ಪ್ರಧಾನಿಯವರ ನಡೆ ಎಂದಾದರೂ ನಮ್ಮ ರಾಜಕೀಯ ಪ್ರಭುಗಳಿಗೆ ಮಾದರಿಯಾಗಬಲ್ಲದೇ

- ವೆಂಕಟೇಶ ಮಾಚಕನೂರ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT