ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: 02 ಸೆಪ್ಟೆಂಬರ್ 2023

Published 1 ಸೆಪ್ಟೆಂಬರ್ 2023, 23:44 IST
Last Updated 1 ಸೆಪ್ಟೆಂಬರ್ 2023, 23:44 IST
ಅಕ್ಷರ ಗಾತ್ರ

ನಿಯಂತ್ರಣಕ್ಕೆ ಬೇಕು ಬದ್ಧತೆ

ಗಣಪತಿ ಹಬ್ಬ ಸಮೀಪಿಸುತ್ತಿದೆ. ನಗರಗಳಲ್ಲಿ ಕಾಣಸಿಗುತ್ತಿದ್ದ, ಪ್ಲಾಸ್ಟರ್‌ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಅಗ್ಗದ ಬೆಲೆಯ ಗಣಪನ ಮೂರ್ತಿಗಳು ಇಂದು ಸಣ್ಣ ಸಣ್ಣ ಊರುಗಳಲ್ಲೂ ಕಾಣತೊಡಗಿವೆ. ಹಳ್ಳಿಯ ಚೌಕಗಳಲ್ಲಿ ಗಣಪತಿ ಕೂರಿಸುವ ಹುಡುಗರಿಗೆ ಈ ಮೂರ್ತಿಗಳು ಆಕರ್ಷಕವಾಗಿ ಕಾಣುತ್ತವೆ. ಅಗ್ಗದ ಬೆಲೆಗೆ ದೊಡ್ಡದಾದ, ಆಕರ್ಷಕವಾದ ಗಾಢ ಬಣ್ಣದ ಗಣಪನ ಮೂರ್ತಿಗಳು ಸಿಗುತ್ತವೆ ಮತ್ತು ಸಾಗಿಸಲು ಹಗುರವಾಗಿರುತ್ತವೆ. ಅದೇ ಈ ಆಕರ್ಷಣೆಗೆ ಕಾರಣ. ಆದರೆ ಈ ಮೂರ್ತಿಗಳ ತಯಾರಿಕೆಯಲ್ಲಿ ಬಳಸುವ ರಾಸಾಯನಿಕ ಬಣ್ಣಗಳು ಪರಿಸರಕ್ಕೆ ಬಹಳ ಅಪಾಯಕಾರಿಯಾಗಿರುತ್ತವೆ.

ಗಣಪತಿ ಮೂರ್ತಿಗಳನ್ನು ಊರಿನ ಕೆರೆ ಇಲ್ಲವೆ ಕೊಳದಲ್ಲಿ ವಿಸರ್ಜಿಸಲಾಗುತ್ತದೆ. ಆಗ ಈ ರಾಸಾಯನಿಕ ಬಣ್ಣಗಳು ನೀರನ್ನು ಮಲಿನಗೊಳಿಸುತ್ತವೆ. ಅಲ್ಲದೆ ಗಣೇಶನ ಮೂರ್ತಿಗಳು ತಿಂಗಳಾನುಗಟ್ಟಲೆ ಆ ನೀರಿನಲ್ಲಿ ತೇಲುತ್ತಿರುತ್ತವೆ. ಇದು ಧಾರ್ಮಿಕ ದೃಷ್ಟಿಯಿಂದ ಗಣೇಶನಿಗೆ ಮಾಡುವ ಅವಮಾನ ಹಾಗೂ ಪರಿಸರದ ಮೇಲೆ ಎಸಗುವ ದೌರ್ಜನ್ಯ. ಪ್ಲಾಸ್ಟರ್‌ ಆಫ್ ಪ್ಯಾರಿಸ್‌ನಿಂದ ಮೂರ್ತಿಗಳನ್ನು ಮಾಡಬಾರದೆಂಬ ನಿಯಮ ಇದೆ. ಆದರೂ ಈ ಮೂರ್ತಿಗಳು ರಾಜಾರೋಷವಾಗಿ ಎಲ್ಲೆಡೆ ಮಾರಾಟವಾಗುತ್ತವೆ. ನಿಯಮಗಳನ್ನು ಅನುಷ್ಠಾನಗೊಳಿಸಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ಧೈರ್ಯ ಮತ್ತು ಬದ್ಧತೆ ಇದ್ದಂತಿಲ್ಲ. ಪರಿಸರ ಸಂರಕ್ಷಣೆಯು ಇಂದು ಅತ್ಯಂತ ಜರೂರಾಗಿರುವುದರಿಂದ, ಮಂಡಳಿಯು ಯಾವುದೇ ಮುಲಾಜಿಲ್ಲದೆ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ನಿಂದ ಮೂರ್ತಿಗಳ ತಯಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು.

– ಸಂತೋಷ ಕೌಲಗಿ, ಮೇಲುಕೋಟೆ

ಹೊಗೆದುರಂತ: ಜೀವ ರಕ್ಷಣೆ ಸಾಧ್ಯ

ಅಗ್ನಿದುರಂತಗಳಿಂದ ಪದೇ ಪದೇ ಸಾವಿನ ಸುದ್ದಿಗಳನ್ನು ನಾವು ಓದುತ್ತಿರುತ್ತೇವೆ. ಹಾವೇರಿಯ ದುರಂತ ಸೇರಿದಂತೆ ಆಗಸ್ಟ್‌ ತಿಂಗಳಲ್ಲಿ ದೇಶದ ಆರು ಕಡೆ ಪಟಾಕಿ ಗೋದಾಮುಗಳ ಸ್ಫೋಟದಿಂದ ಜನರು ಸಾವಪ್ಪಿದ್ದಾರೆ. ಇದೀಗ ದಕ್ಷಿಣ ಆಫ್ರಿಕಾದ ರಾಜಧಾನಿ ಜೋಹಾನ್ಸ್‌ಬರ್ಗ್‌ನಲ್ಲಿ 74 ನತದೃಷ್ಟರ ಸಾವು ಸಂಭವಿಸಿದೆ. ಇಂಥ ಸಂದರ್ಭಗಳಲ್ಲಿ ಬಹುತೇಕ ಸಾವು ಅಗ್ನಿಯಿಂದಲ್ಲ, ಉಸಿರುಗಟ್ಟಿಸುವ ಹೊಗೆಯಿಂದ ಸಂಭವಿಸುತ್ತದೆ. ಭಯಭೀತರಾದ ಜನ ಅತ್ತಿತ್ತ ಧಾವಿಸುತ್ತ, ಏದುಸಿರು ಬಿಡುತ್ತ ತಮ್ಮ ಶ್ವಾಸಕೋಶಕ್ಕೆ ಇನ್ನಷ್ಟು ಮತ್ತಷ್ಟು ಇಂಗಾಲ (ಕಾರ್ಬನ್‌ ಡೈಆಕ್ಸೈಡನ್ನು) ತುಂಬಿಕೊಳ್ಳುತ್ತಿರುತ್ತಾರೆ. ಎಚ್ಚರ ತಪ್ಪಿ ಬಿದ್ದು ಕೊನೆಯುಸಿರಿನ ಹಂತಕ್ಕೆ ಬರುತ್ತಾರೆ.

ಇಂಥ ದುರಂತದಿಂದ ಬಚಾವಾಗಲು ಒಂದು ಸರಳ ಕ್ರಮವಿದೆ. ಹೊಗೆ ತುಂಬಿದ ಕೋಣೆಯಲ್ಲಿ ಗಡಿಬಿಡಿಯಿಂದ ಓಡುವ ಬದಲು ನೆಲದ ಮೇಲೆ ಮಲಗಬೇಕು. ಹೊಗೆ ಯಾವಾಗಲೂ ಎತ್ತರದಲ್ಲಿರುತ್ತದೆ. ನೆಲದ ಸಮೀಪದಲ್ಲಿ ಪ್ರಾಣವಾಯು (ಆಮ್ಲಜನಕದ) ಪದರ ಇರುತ್ತದೆ. ಅಲ್ಲೇ ತೆವಳುತ್ತ, ಸಲೀಸಾಗಿ ಉಸಿರಾಡುತ್ತ ದ್ವಾರದ ಕಡೆ ಮೆಲ್ಲಗೆ ಚಲಿಸಬೇಕು. ಹೊಗೆಯ ಮಧ್ಯೆ ಓಡಲೇಬೇಕೆಂದಿದ್ದರೆ ಕೈಗೆ ಸಿಕ್ಕ ಒಂದು ಖಾಲಿ ಚೀಲವನ್ನು ಅಥವಾ ಕಾಗದದ ದೊಡ್ಡ ಲಕೋಟೆಯಾದರೂ ಸರಿ ಮೂಗು, ಬಾಯಿಗೆ ಕವುಚಿಕೊಂಡು ಸಾಗಬೇಕು. ಅದರಲ್ಲಿರುವ ಆಮ್ಲಜನಕದಿಂದ 3–4 ನಿಮಿಷ ಉಸಿರಾಡಬಹುದು. ಅಲ್ಲೂ ಉಸಿರುಗಟ್ಟುವಂತಿದ್ದರೆ ನೆಲಕ್ಕೆ ಬಾಗಿ, ಅದೇ ಚೀಲದಲ್ಲಿ ಮತ್ತಷ್ಟು ಗಾಳಿಯನ್ನು ತುಂಬಿಕೊಂಡು ಅದನ್ನೇ ಮುಖಕ್ಕೆ ಒತ್ತಿಕೊಂಡು ಚಲಿಸಬಹುದು. ಇಂಥ ಆಪತ್ತಿನಲ್ಲಿ ನೆಲಮಟ್ಟದಲ್ಲಿ ಉಸಿರಾಟ ಯಾವತ್ತೂ ಕ್ಷೇಮ.

– ನಾಗೇಶ ಹೆಗಡೆ, ಕೆಂಗೇರಿ

ಅನ್ಯರ ನಂಬಿಕೆಗಳ ಮೇಲೆ ಆಕ್ರಮಣ ಸಲ್ಲ

ವಾಟ್ಸ್ಆ್ಯಪ್ ಮತ್ತು ಫೇಸ್‌ಬುಕ್‌ನಲ್ಲಿ ಇತ್ತೀಚೆಗೆ ಬೇರೆ ಬೇರೆಯವರ ನಂಬಿಕೆಗಳ ಬಗ್ಗೆ ಎಂಥೆಂಥವೋ ಹೇಳಿಕೆಗಳು ಕಾಣಿಸಿಕೊಳ್ಳುತ್ತಿವೆ. ಒಮ್ಮೊಮ್ಮೆ ಇಂಥವುಗಳ ಕುರಿತು ಯಾವ ವಿಧವಾದ ತೀರ್ಮಾನ ತೆಗೆದುಕೊಳ್ಳಬೇಕೊ ತಿಳಿಯದಾಗುತ್ತದೆ. ನಾವು ಜನರಿಗೆ ಮಾಹಿತಿಯನ್ನು ತಲುಪಿಸುವುದು ಮುಖ್ಯ. ಆದರೆ, ಅದರ ಕುರಿತು ತೀರ್ಪುಗಾರ ರಾಗುವುದು ಸರಿಯಲ್ಲ. ಎಲ್ಲಾ ವಿಷಯಗಳ ಕುರಿತು ಯೋಚಿಸುವ ಮುಕ್ತ ವಾತಾವರಣವನ್ನು ಬೆಳೆಸುವುದು ಮಾತ್ರ ನಮ್ಮ ಕರ್ತವ್ಯ ಆಗಬೇಕು. ಆಗ ಮಾತ್ರ ಆರೋಗ್ಯಪೂರ್ಣ ಸಮಾಜವನ್ನು ಜೀವಂತವಾಗಿಡಲು ಸಾಧ್ಯ.

ನಾವು ಎಂಥೆಂಥವೋ ಚಿಂತನೆಯ ಹಂತಗಳನ್ನು ದಾಟಿ ಬಂದಿರುತ್ತೇವೆ. ಯಾರೇ ಆಗಲಿ ಸಾರ್ವಕಾಲಿಕವಾಗಿ ಪರಿಪೂರ್ಣರಾಗಿ ಇರುವುದಿಲ್ಲ. ಜಗತ್ತಿನ ಎಲ್ಲಾ ಮಹನೀಯರು ಈ ಹಂತಗಳನ್ನು ದಾಟಿ ಬಂದವರೇ ಆಗಿರುತ್ತಾರೆ.

– ಶೂದ್ರ ಶ್ರೀನಿವಾಸ್, ಬೆಂಗಳೂರು

ಸಂವಿಧಾನದ ಪ್ರಸ್ತಾವನೆ: ಪಠ್ಯಕ್ರಮದ ಭಾಗವಾಗಲಿ

ರಾಜ್ಯದ ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ದಿನವೂ ಪಠಿಸುವ ಕ್ರಮವನ್ನು ಜಾರಿಗೆ ತರಲು ಸರ್ಕಾರ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಕಿರಿಯರಿಗೆಂತೋ ಹಿರಿಯರಿಗೂ ಸಂವಿಧಾನದ ಅರಿವು ಅಗತ್ಯವಾಗಿ ಬೇಕೇಬೇಕು. ಆದರೆ ಹಿರಿಯರಿಗೆ ಕಲಿಸುವ ಯೋಜನೆ ಸರ್ಕಾರದ ಮುಂದೆ ಇಲ್ಲ. ಈಗಿನ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇತಿಹಾಸ ಮತ್ತು ರಾಜ್ಯಶಾಸ್ತ್ರ ಓದುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಹೆಚ್ಚಿನವರು ಸಂವಿಧಾನ ಕುರಿತು ಗಂಭೀರವಾಗಿ ಓದುವುದಿಲ್ಲ. ಅದು ಅಗತ್ಯ ಎಂದು ಅವರಿಗೆ ಅನ್ನಿಸುವುದೂ ಇಲ್ಲ. ಈ ಕಾರಣದಿಂದ, ಶಾಲೆಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯಗಳನ್ನು ತಿಳಿಸಬೇಕೆಂಬ ಸರ್ಕಾರದ ಆಲೋಚನೆ ಉತ್ತಮವಾದುದಾಗಿದೆ.

ಆದರೆ, ಸಂವಿಧಾನದ ಪ್ರಸ್ತಾವನೆಯ ಓದನ್ನು ಪಠ್ಯೇತರ ಚಟುವಟಿಕೆಯಾಗಿ ಸರ್ಕಾರ ಪರಿಗಣಿಸುತ್ತದೆಯೋ ಅಥವಾ ಪಠ್ಯದ ಭಾಗವಾಗಿಯೋ ಎಂಬುದು ಸ್ಪಷ್ಟವಿಲ್ಲ. ಪಠ್ಯಕ್ರಮದ ಭಾಗವಾಗಿ ಸಂವಿಧಾನದ ಪ್ರಸ್ತಾವನೆಯ ಓದನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಸರಿಯಾದ ಕ್ರಮವಾಗುತ್ತದೆ. ಪಠ್ಯೇತರ ಚಟುವಟಿಕೆಗೆ ಪರೀಕ್ಷೆ ಮತ್ತು ಅಂಕಗಳ ಹಂಗು ಇರುವುದಿಲ್ಲವಾದ್ದರಿಂದ ಇದನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಕಡಿಮೆ. ಈ ಮೊದಲು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಾರಂಭದ ಹಂತದಲ್ಲಿ ಕನ್ನಡ ಸಾಹಿತ್ಯವನ್ನು ಪಠ್ಯೇತರವಾಗಿ ಬೋಧಿಸಲಾಗುತ್ತಿತ್ತು. ಆ ಯೋಜನೆ ಮುಂದುವರಿಯಲಿಲ್ಲ. ಹತ್ತನೇ ತರಗತಯವರೆಗೆ ಈಗಾಗಲೇ ನಿಗದಿಯಾಗಿರುವ ‘ಸಮಾಜ ವಿಜ್ಞಾನ’ದಲ್ಲಿ ಸಂವಿಧಾನದ ಪ್ರಸ್ತಾವನೆಯ ವಿವರವಾದ ಅಧ್ಯಾಯವನ್ನು ಅಳವಡಿಸಿ ಬೋಧಿಸುವುದು ಸರಿಯಾದ ಕ್ರಮವಾಗಿದೆ.

– ಚಿನ್ನಗಿರಿಶೆಟ್ಟಿ ತಿಮ್ಮಯ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT