ಮನೆ ಗೆದ್ದು ಮಾರು ಗೆಲ್ಲಲಿ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಹುದ್ದೆಗಳನ್ನು ಖಾಲಿ ಬಿಟ್ಟಿರುವುದು ದಲಿತ ವಿರೋಧಿ ಧೋರಣೆ ಎಂದಿದ್ದಾರೆ. ಅವರ ಕಾಳಜಿ ಮೆಚ್ಚ ತಕ್ಕದ್ದು. ಅವರದೇ ಪಕ್ಷ ಕರ್ನಾಟಕದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಕಾಂಗ್ರೆಸ್ ಪಕ್ಷವು ಕರ್ನಾಟಕದ ವಿಧಾನಸಭಾ ಚುನಾವಣೆಯ ವೇಳೆ ಸಿದ್ಧಪಡಿಸಿದ್ದ ಪ್ರಣಾಳಿಕೆಯಲ್ಲಿ ಘೋಷಿಸಿತ್ತು.

ಸರ್ಕಾರಿ ನೌಕರರಿಗೆ ಎನ್ಪಿಎಸ್ ಪಿಂಚಣಿ ವ್ಯವಸ್ಥೆ ಕೈಬಿಟ್ಟು ಒಪಿಎಸ್ ಜಾರಿಗೊಳಿಸುವುದಾಗಿಯೂ ಹೇಳಲಾಗಿತ್ತು. ಕರ್ನಾಟಕದಲ್ಲಿ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಿ, ಒಪಿಎಸ್ ಜಾರಿಗೊಳಿಸಲಿ. ಆ ಮೂಲಕ ಮನೆ ಗೆದ್ದು ಮಾರು ಗೆಲ್ಲಲಿ. ಇಲ್ಲವಾದರೆ, ವಿರೋಧ ಪಕ್ಷದಲ್ಲಿ ಇರುವುದಕ್ಕಾಗಿ ಕೇಂದ್ರದ ನಡೆಯನ್ನು ವಿರೋಧ ಮಾಡಿದಂತೆ, ಟೀಕಿಸಿದಂತೆ ಆಗುತ್ತದೆ.

⇒ಮಲ್ಲಿಕಾರ್ಜುನ, ಸುರಧೇನುಪುರ

ಸೊಗಸಾದ ನಿರೂಪಣೆಗೆ ಹೆಸರುವಾಸಿ...

ಅಚ್ಚುಕಟ್ಟಾದ, ಅಚ್ಚಕನ್ನಡದ ನಿರೂಪಕಿಯಾಗಿದ್ದ ಅಪರ್ಣಾ ವಸ್ತಾರೆ ಅವರು ತಮ್ಮ ಬಾಳ ನಿರೂಪಣೆ ಮುಗಿಸಿರುವುದು ಕನ್ನಡಿಗರೆಲ್ಲರಿಗೂ ದುಃಖದ ಸಂಗತಿ. ಅಪರ್ಣಾ ಅವರು, ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ‘ಮಸಣದ ಹೂವು’ (1985) ಚಿತ್ರದಲ್ಲಿ ಹದಿಹರೆಯದಲ್ಲೇ ನಾಯಕಿಯಾಗಿ ಅಭಿನಯಿಸಿದ್ದರು.

ನಂತರ ರೇಡಿಯೊ ಜಾಕಿಯಾಗಿ, ಆಕಾಶವಾಣಿ, ಎಫ್.ಎಂ. ವಾಹಿನಿಗಳಲ್ಲಿ ಉದ್ಘೋಷಕಿಯಾಗಿ ಕಾರ್ಯನಿರ್ವಹಿಸಿದ್ದರು. ಟಿ.ಎನ್. ಸೀತಾರಾಂ ಅವರ ಧಾರಾವಾಹಿಯೊಂದರಲ್ಲಿ ವಕೀಲೆಯ ಪಾತ್ರದಲ್ಲೂ ಗಮನ ಸೆಳೆದಿದ್ದರು. ಕಿರುಚಾಡುವ ಇಂದಿನ ಅನೇಕ ನಿರೂಪಕರ ನಡುವೆ ಬಹಳ ಸಂಯಮದಿಂದ ಸ್ಪಷ್ಟ, ನಿರರ್ಗಳ, ಸೊಗಸಾದ ಕನ್ನಡ ನಿರೂಪಣೆಗೆ ಹೆಸರುವಾಸಿಯಾಗಿದ್ದರು.

⇒ಎಚ್.ವಿ. ಶ್ರೀಧರ್, ಬೆಂಗಳೂರು

ರೈತರ ಆತ್ಮಹತ್ಯೆ: ಪರಿಹಾರ ಕಂಡುಕೊಳ್ಳಿ

ಬೆಳೆಹಾನಿ, ಬರ, ಸಾಲದ ಹೊರೆ ಇತ್ಯಾದಿ ಕಾರಣಗಳಿಂದಾಗಿ ದೇಶದ ರೈತರು ದೊಡ್ಡ ಸಂಖ್ಯೆಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದರೂ ಸಮಸ್ಯೆಯ ಪರಿಹಾರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವ ಕ್ರಮ ಕೈಗೊಂಡಿವೆ ಎಂಬುದು ಯಕ್ಷಪ್ರಶ್ನೆಯಾಗೇ ಉಳಿದಿದೆ. 15 ತಿಂಗಳಲ್ಲಿ ಕರ್ನಾಟಕದಲ್ಲಿ 1,182 ರೈತರು ಆತ್ಮಹತ್ಯೆಗೆ (ಪ್ರ.ವಾ., ಜುಲೈ 8) ಶರಣಾಗಿದ್ದರೆ, ಆರು ತಿಂಗಳ ಅವಧಿಯಲ್ಲಿ ಮಹಾರಾಷ್ಟ್ರದ ಐದು ಜಿಲ್ಲೆಗಳಲ್ಲಿ 557 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ (ಪ್ರ.ವಾ., ಜುಲೈ 11). ಇದು ನಿಜಕ್ಕೂ ಆಘಾತಕಾರಿ.

ಇದು ಕೇವಲ ಎರಡು ರಾಜ್ಯಗಳ ಅಂಕಿ ಅಂಶ. ಇಡೀ ದೇಶದಲ್ಲಿ ಒಂದು ವರ್ಷದಲ್ಲಿ ನಡೆದಿರುವ ರೈತರ ಆತ್ಮಹತ್ಯೆಗಳ ಸಂಖ್ಯೆ ಇನ್ನೂ ಹೆಚ್ಚಿರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಸರ್ಕಾರಗಳು ಕೃಷಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ದಿಸೆಯಲ್ಲಿ ನದಿಗಳ ಜೋಡಣೆ, ಕೆರೆಗಳಿಗೆ ನೀರು ತುಂಬಿಸುವುದು, ಮಳೆ ನೀರು ಸಂಗ್ರಹ ಹಾಗೂ ನೀರಿಂಗಿಸುವ ಕೆಲಸಗಳನ್ನು ಚುರುಕುಗೊಳಿಸಬೇಕಿದೆ. ರೈತರು ಬೆಳೆದ ಫಸಲನ್ನು ಬೆಂಬಲ ಬೆಲೆ ನೀಡಿ ರೈತರ ಮನೆ ಬಾಗಿಲಲ್ಲೇ ಖರೀದಿಸುವ ವ್ಯವಸ್ಥೆ ಕಲ್ಪಿಸಿದರೆ ಆತ್ಮಹತ್ಯೆಯನ್ನು ಸ್ವಲ್ಪವಾದರೂ ತಡೆಯಲು ಸಾಧ್ಯವಿದೆ.

⇒ಎಂ.ಜಿ. ರಂಗಸ್ವಾಮಿ, ಹಿರಿಯೂರು

ಬಾಲಕಿಯ ಮೇಲೆ ಅತ್ಯಾಚಾರ: ಕಾರಣರಾರು?

ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ಎಂಟು ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ನಂತರ ಆಕೆಯನ್ನು ಕೊಲೆ ಮಾಡಿದ ಆರೋಪದ ಮೇಲೆ 12 ಹಾಗೂ 13 ವರ್ಷ ವಯಸ್ಸಿನ ಮೂವರು ಬಾಲಕರನ್ನು ಬಂಧಿಸಲಾಗಿದೆ ಎಂಬ ಸಂಗತಿ ತಿಳಿದು ಆಘಾತವಾಯಿತು (ಪ್ರ.ವಾ., ಜುಲೈ 12). ಸೂಕ್ಷ್ಮವಾಗಿ ಗಮನಿಸಿದರೆ ಇಂಥದ್ದಕ್ಕೆಲ್ಲ ಕಾರಣ ಇಂದಿನ ಮಕ್ಕಳ ಕೈಗೆ ಸಿಕ್ಕಿರುವ ಮೊಬೈಲ್ ಫೋನ್ಗಳು. ಅವುಗಳನ್ನು ಮಕ್ಕಳು ಆನ್ಲೈನ್ ತರಗತಿಗಳಿಗಾಗಿ ಅಥವಾ ಆಟ ಆಡುವುದಕ್ಕೆ ಮಾತ್ರ ಬಳಸುತ್ತಾರೆ ಎಂದು ಪೋಷಕರು ಭಾವಿಸುತ್ತಾರೆ. ಆದರೆ ಮೊಬೈಲ್ ಫೋನ್ ಮೂಲಕ ಹಲವು ಬಗೆಯ ಕೆಟ್ಟ ಸಂಗತಿಗಳನ್ನು ಮಕ್ಕಳು ಗಮನಿಸುತ್ತಾರೆ.

ಪ್ರೌಢಾವಸ್ಥೆಗೆ ಆಗಷ್ಟೇ ಕಾಲಿಟ್ಟಿರುವ, ಸಹಜ ಆಸೆ ಹಾಗೂ ಕುತೂಹಲಗಳಿರುವ, ಆದರೆ ಮನಸ್ಸಿನ ಮೇಲೆ ಹತೋಟಿ ಇಲ್ಲದ ಮಕ್ಕಳು ಕಾಮಪ್ರಚೋದಕ ದೃಶ್ಯಗಳನ್ನು ತಮ್ಮ ಸ್ನೇಹಿತರ ಜೊತೆಗೂಡಿ ವೀಕ್ಷಿಸಿದಾಗ ಆಗುವ ಪರಿಣಾಮ ಬಹಳ ಕೆಟ್ಟದ್ದಾಗಿರುತ್ತದೆ. ಆಂಧ್ರದಲ್ಲಿ ನಡೆದಿರುವ ಕೆಟ್ಟ ಘಟನೆಗೆ ಆ ಬಾಲಕರ ವಯಸ್ಸು ಭಾಗಶಃ ಕಾರಣ. ಮಕ್ಕಳ ಮೇಲೆ ನಿಗಾ ಇಡದೆ, ಅವರನ್ನು ಬೇಕಾಬಿಟ್ಟಿಯಾಗಿ ಬೆಳೆಸುವ ಪೋಷಕರೂ ಇದಕ್ಕೆ ಕಾರಣ.

⇒ರವಿಕಿರಣ್ ಶೇಖರ್, ಬೆಂಗಳೂರು

ಜನರ ಅನಿಸಿಕೆಗೂ ಬೆಲೆ ಕೊಡಿ

ಜಿಲ್ಲೆಗಳ ಪುನರ್ರಚನೆಯು ಆಡಳಿತದ ಸುಧಾರಣಾ ಕ್ರಮಗಳಲ್ಲಿ ಒಂದು. ಜನಸಂಖ್ಯೆ ಮತ್ತು ಇಲಾಖಾ ಕಾರ್ಯಗಳು ಹೆಚ್ಚಾದಂತೆ ಸುಗಮ ಆಡಳಿತಕ್ಕೆ ಜಿಲ್ಲೆಗಳನ್ನು ಪುನರ್ರಚಿಸುವುದು ನಡೆದುಬಂದಿದೆ. ಉತ್ತರ ಕನ್ನಡ ಮತ್ತು ಬೆಳಗಾವಿಯಂತಹ ದೊಡ್ಡ ಜಿಲ್ಲೆಗಳ ವಿಭಜನೆ ಅಗತ್ಯ. ಆದರೆ, ಅದು ಆಗಿಯೇ ಇಲ್ಲ. ಕೆಲವು ಜಿಲ್ಲೆಗಳು ರಾಜಕಾರಣಿಗಳ ಸ್ವಹಿತಾಸಕ್ತಿಗಳಿಂದಾಗಿ ಅಗತ್ಯವಿಲ್ಲದಿದ್ದರೂ ವಿಭಜನೆ ಆಗಿವೆ.

ಜಿಲ್ಲೆಗಳ ಪುನರ್ರಚನೆ ಪ್ರಕ್ರಿಯೆಯಲ್ಲಿ ಪರ–ವಿರೋಧ ಸಹಜ. ಈಗ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಿಸುವ ಮಾತು ಮುನ್ನೆಲೆಗೆ ಬಂದಿದೆ. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳ ಕುರಿತಾದ ಚರ್ಚೆಯೂ ನಡೆದಿದೆ. ಹೆಸರಿನ ವಿಚಾರದಲ್ಲಿ ಚುನಾಯಿತ ಪ್ರತಿನಿಧಿಗಳು ಹಟಮಾರಿ ಧೋರಣೆ ಅನುಸರಿಸುತ್ತಿರುವುದು ತಪ್ಪು. ಮತ ನೀಡಿ ಚುನಾಯಿಸಿರುವುದು ಮನಸೋ ಇಚ್ಛೆ ಆಡಳಿತ ನಡೆಸಲು ಪರವಾನಗಿ ಅಲ್ಲ. ಜಿಲ್ಲೆ ಹೆಸರು ಬದಲಾಯಿಸುವುದಾದರೆ ಜನರ ಅಭಿಪ್ರಾಯಕ್ಕೂ ತುಸು ಬೆಲೆ ಕೊಡಬೇಕು.

⇒ಟಿ.ವಿ. ನಾಗರಾಜ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.