ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: 02 ಏಪ್ರಿಲ್ 2024

Published 2 ಏಪ್ರಿಲ್ 2024, 0:14 IST
Last Updated 2 ಏಪ್ರಿಲ್ 2024, 0:14 IST
ಅಕ್ಷರ ಗಾತ್ರ

ಹೆಸರಿನ ತಂತ್ರಗಾರಿಕೆ ನಡೆಯದು

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್.ಮಂಜುನಾಥ್‌ ಅವರ ವಿರುದ್ಧ ಅದೇ ಹೆಸರಿನ ಮತ್ತೊಬ್ಬ ಅಭ್ಯರ್ಥಿಯನ್ನು ಎಲ್ಲಿಂದಲೋ ಹುಡುಕಿ ತಂದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವುದು ಅಚ್ಚರಿಯ ಸಂಗತಿಯೇನಲ್ಲ. ಇಂತಹ ತಂತ್ರಗಳು ವಿಧಾನಸಭಾ ಚುನಾವಣೆಯಲ್ಲೂ ನಡೆದಿದ್ದವು. ಆದರೆ ಈ ಬಗೆಯ ತಂತ್ರಗಾರಿಕೆ ಕೆಲಸಕ್ಕೆ ಬಾರದು. ಏಕೆಂದರೆ ಈ ರೀತಿಯಾದ ಹೆಸರಿನ ಗೊಂದಲದ ನಿವಾರಣೆಗಾಗಿ ಚುನಾವಣಾ ಆಯೋಗವು ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಭಾವಚಿತ್ರ ಹಾಗೂ ಪಕ್ಷದ ಚಿಹ್ನೆ ಎರಡನ್ನೂ ಮತಯಂತ್ರದಲ್ಲಿ ಸ್ಪಷ್ಟವಾಗಿ ನಮೂದಿಸಿತ್ತು. ಇದರಿಂದ ಮತದಾರರಲ್ಲಿ ಗೊಂದಲಕ್ಕೆ ಆಸ್ಪದ ಇರುವುದಿಲ್ಲ. ಆದ್ದರಿಂದ ಇಂತಹ ಕೆಳಮಟ್ಟದ ತಂತ್ರಗಾರಿಕೆ ಕೈಬಿಟ್ಟು, ಅಭಿವೃದ್ಧಿಪರ ವಿಚಾರಗಳಿಂದ ಮತದಾರರ ಮನ ಗೆಲ್ಲುವುದು ಹೆಚ್ಚು ಸೂಕ್ತ.

– ಸುರೇಂದ್ರ ಪೈ, ಭಟ್ಕಳ

ಅನಿವಾರ್ಯವಾದ ಪಕ್ಷಾಂತರ ರಾಜಕೀಯ

90ರ ದಶಕದಲ್ಲಿ ಖಾಸಗಿ ಟಿ.ವಿ. ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ‘ಮುಖಾಮುಖಿ’ ಎಂಬ ಜನಪ್ರಿಯ ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿಗಳು ಹಾಗೂ ಇತರ ಖ್ಯಾತನಾಮರ ಸಂದರ್ಶನ ಮಾಡಿ, ಕೆಲವು ಖಡಕ್ ಪ್ರಶ್ನೆಗಳ ಮೂಲಕ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ತೇಜಸ್ವಿನಿ ಗೌಡ ಈಗ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಂದಿನ ಕಾಲದಲ್ಲಿ ಅವರ ಈ ಕಾರ್ಯಕ್ರಮ ಬಹಳ ಜನಪ್ರಿಯವಾಗಿತ್ತು. ಬಳಿಕ 2004ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ತೇಜಸ್ವಿನಿ, ನಂತರ 2014ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡು, ಟಿ.ವಿ. ಚರ್ಚೆ- ಸಂವಾದ ಮತ್ತು ಸಂದರ್ಶನ ಕಾರ್ಯಕ್ರಮಗಳಲ್ಲಿ ತಮ್ಮ ಮಾತಿನ ಮೋಡಿಯಿಂದ ಪಕ್ಷವನ್ನು ಸಮರ್ಥಿಸಿಕೊಳ್ಳುತ್ತಿದ್ದ ರೀತಿ ಕಣ್ಣಿಗೆ ಕಟ್ಟಿದಂತಿದೆ. ಬಿಜೆಪಿಯಲ್ಲಿ ತಮಗೆ ಉಳಿಗಾಲವಿಲ್ಲ ಎಂದು ಭಾವಿಸಿ, ಮರಳಿ ಗೂಡಿಗೆ ಅನ್ನುವಂತೆ ಅವರೀಗ ಕಾಂಗ್ರೆಸ್ ಸೇರಿದ್ದಾರೆ.

ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಪಕ್ಷಾಂತರ ಅನಿವಾರ್ಯವಾಗಿ ಹೋಗಿದೆ. ಅದನ್ನು ತಪ್ಪು ಎನ್ನುವ ಕಾಲ ಸಹ ದೂರವಾಗಿದೆ. ಏನಾದರೂ ಅಪೇಕ್ಷೆ ಇಟ್ಟುಕೊಂಡೇ ತಮಗೆ ಇಷ್ಟವಾದ ಪಕ್ಷಕ್ಕೆ ಎಡತಾಕುವ ರಾಜಕಾರಣಿಗಳು, ಅಲ್ಲಿ ತಮಗೆ ಬೆಲೆ ಸಿಗದೇಹೋದರೆ ಬೇರೊಂದು ಪಕ್ಷಕ್ಕೆ ಅನಿವಾರ್ಯವಾಗಿ ಜಿಗಿಯಲೇ ಬೇಕಾಗುತ್ತದೆ. ಏಕೆಂದರೆ ರಾಜಕೀಯ ನಿಂತ ನೀರಲ್ಲ, ಅಲ್ಲವೇ?

ಕೆ.ವಿ.ವಾಸು, ಮೈಸೂರು

ಸ್ವಾಮಿಗಳ ನಡೆ ಮೇಲ್ಪಂಕ್ತಿಯಾಗಲಿ

ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮಿಗಳು ಕಲಬುರಗಿ ಜಿಲ್ಲೆಯ ಮರ್ತೂರು ಎಂಬ ಗ್ರಾಮಕ್ಕೆ ‘ಮಿತಾಕ್ಷರ ಸಂಹಿತೆ’ಯ ಕರ್ತೃ ವಿಜ್ಞಾನೇಶ್ವರರ ಸ್ಮಾರಕವನ್ನು ಉದ್ಘಾಟಿಸಲು ಬಂದಿದ್ದರು. ವೇದಿಕೆಯ ಮೇಲೆ ಒಂದೇ ರೀತಿಯ ಆಸನಗಳನ್ನು ಹಾಕಲಾಗಿತ್ತು. ಆದರೆ ಸಿದ್ಧೇಶ್ವರ ಸ್ವಾಮಿಗಳು ಕುಳಿತುಕೊಳ್ಳುವ ಆಸನದ ಮೇಲೆ ಒಂದು ಬಿಳಿ ವಸ್ತ್ರವನ್ನು ಹಾಕಲಾಗಿತ್ತು. ಅದನ್ನು ನೋಡಿದ ಶ್ರೀಗಳು ಆ ವಸ್ತ್ರವನ್ನು ತೆಗೆಸಿದರು. ಇತರ ಅತಿಥಿಗಳಿಗಿಂತ ತಾನು ‘ಮೇಲು’ ಅಲ್ಲ ಎಂಬುದನ್ನು ಆ ಮೂಲಕ ನಿರೂಪಿಸಿದರು!

ಹುಬ್ಬಳ್ಳಿಯಲ್ಲಿ ಕೆಲ ದಿನಗಳ ಹಿಂದೆ ಹಮ್ಮಿಕೊಳ್ಳಲಾಗಿದ್ದ ಜಯಂತಿಯೊಂದರ ಕಾರ್ಯಕ್ರಮದ ವೇದಿಕೆಯ ಮೇಲೆ ಎತ್ತರದ ಸಿಂಹಾಸನದಲ್ಲಿ ಒಬ್ಬರು ಸ್ವಾಮಿಗಳು ಕುಳಿತಿದ್ದರೆ, ಕೆಳಗಿನ ಆಸನದಲ್ಲಿ ಮತ್ತೊಬ್ಬರು ಸ್ವಾಮೀಜಿ ಕುಳಿತಿದ್ದುದನ್ನು ದೃಶ್ಯ ಮಾಧ್ಯಮದಲ್ಲಿ ನೋಡಿ ಖೇದವೆನಿಸಿತು. ಸನ್ಯಾಸಿಗಳ ಮಧ್ಯೆಯೇ ಇಂಥ ಭೇದ ಬುದ್ಧಿಯಿದ್ದರೆ ಭಕ್ತರನ್ನು ಇವರು ಯಾವ ರೀತಿ ಕಾಣುತ್ತಾರೆ? ಬಸವಣ್ಣನವರ ತತ್ವಕ್ಕೆ ಅಪಚಾರವಾಗುವ ಈ ವರ್ತನೆ ದೂರವಾಗಿ, ಸಿದ್ಧೇಶ್ವರ ಸ್ವಾಮಿಗಳ ನಡೆ ಇಂತಹವರಿಗೆ ಮೇಲ್ಪಂಕ್ತಿಯಾಗಲಿ.

– ಶಿವಕುಮಾರ ಬಂಡೋಳಿ, ಹುಣಸಗಿ

ರೈಲುಗಳಲ್ಲಿ ಬದಲಾಗಲಿ ಶೌಚಾಲಯ ವ್ಯವಸ್ಥೆ

ಮೈಸೂರಿನಿಂದ ಬೆಂಗಳೂರಿಗೆ ಹೊರಡುವ ಬಹುತೇಕ ಎಲ್ಲ ರೈಲುಗಾಡಿಗಳಲ್ಲಿ ಓಬಿರಾಯನ ಕಾಲದ ಶೌಚಾಲಯಗಳ ವ್ಯವಸ್ಥೆಯೇ ಇದೆ. ರೈಲುಗಾಡಿಗಳಲ್ಲಿ ಹೆಚ್ಚಾಗಿ ಪ್ರಯಾಣಿಸುವ ಹಿರಿಯ ನಾಗರಿಕರಲ್ಲಿ ಕೆಲವರು ಮಂಡಿ ನೋವಿನಿಂದ ಬಳಲುತ್ತಿರುತ್ತಾರೆ. ಅವರಿಗೆ ಈ ಶೌಚಾಲಯಗಳನ್ನು ಬಳಸುವುದು ಕಷ್ಟವಾಗುತ್ತದೆ ಮತ್ತು ಕೆಲವೊಮ್ಮೆ ಅದು ಮುಜುಗರಕ್ಕೂ ಕಾರಣವಾಗುತ್ತದೆ. ಹೀಗಾಗಿ, ಇಲ್ಲಿ ಕಮೋಡ್‌ಗಳನ್ನು ಅಳವಡಿಸುವುದು ಸೂಕ್ತ.

– ಬೂಕನಕೆರೆ ವಿಜೇಂದ್ರ, ಮೈಸೂರು

ಸಾಲುಮರದ ಪರಿಕಲ್ಪನೆ ಕೊನೆಯಾಯಿತೇ?

ಸಾಲುಮರ ಎಂದಾಕ್ಷಣ ನೆನಪಾಗುವುದು ರಾಜ್ಯದ ಹೆಮ್ಮೆಯ ಸಾಲುಮರದ ತಿಮ್ಮಕ್ಕ ಮತ್ತು ಅವರು ನೆಟ್ಟ ಸಾಲುಮರದ ಸಾಧನೆ. ಇಂಥ ಸಾಲುಮರದ ಪರಿಕಲ್ಪನೆ ಪುರಾತನವಾದುದಾಗಿದ್ದು, ಹಳೆಯ ಕಾಲದ ಎಲ್ಲ ರಸ್ತೆಗಳ ಬದಿಯಲ್ಲೂ ವೈವಿಧ್ಯಮಯ ವೃಕ್ಷಗಳು ಸಾಲುಸಾಲಾಗಿ ಕಂಗೊಳಿಸುತ್ತಿದ್ದುದನ್ನು ಇತ್ತೀಚಿನವರೆಗೂ ಕಂಡಿದ್ದೇವೆ. ಪ್ರಸ್ತುತ ರಾಷ್ಟ್ರದಾದ್ಯಂತ ಹೆದ್ದಾರಿ ಯೋಜನೆಗಳು ಭರದಿಂದ ಅನುಷ್ಠಾನಗೊಳ್ಳುತ್ತಿವೆ. ಚತುಷ್ಪಥ, ಷಟ್ಪಥದಂತಹ ನವೀನ ವಿನ್ಯಾಸಗಳಲ್ಲಿ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು ಆಕರ್ಷಕವಾಗಿ ರೂಪುಗೊಳ್ಳುತ್ತಿವೆ. ನಗರಗಳಿಂದ ಹಿಡಿದು ಹಳ್ಳಿಹಳ್ಳಿಯ ರಸ್ತೆಗಳೂ ಟಾರ್‌-ಕಾಂಕ್ರೀಟ್ ರಸ್ತೆಗಳಾಗಿ ಮಾರ್ಪಡುತ್ತಿವೆ. ಹೆಚ್ಚುತ್ತಿರುವ ಜನ-ವಾಹನ ಸಂಚಾರದ ಸುರಕ್ಷತೆಗಾಗಿ, ವೇಗದ ಸಂಚಾರಕ್ಕಾಗಿ, ಒಟ್ಟಾರೆ ಅಭಿವೃದ್ಧಿಗಾಗಿ ಇವು ಅನಿವಾರ್ಯವೂ ಸ್ವಾಗತಾರ್ಹವೂ ಆದ ಸಾಧನೆಗಳೇ.

ಆದರೆ ಇದಕ್ಕಾಗಿ, ನೂರಾರು ವರ್ಷಗಳಿಂದ ರಸ್ತೆಯುದ್ದಕ್ಕೂ ತಂಪೆರೆಯುತ್ತ ಪರಿಸರ ಸಮತೋಲನ ಕಾಯುತ್ತಿದ್ದ, ಪಕ್ಷಿ-ಪ್ರಾಣಿಗಳಿಗೆ ಆಸರೆಯಾಗಿದ್ದ ಲಕ್ಷಾಂತರ ಸಾಲುಮರಗಳನ್ನು ನಾವೀಗ ಕಳೆದುಕೊಳ್ಳುತ್ತಿದ್ದೇವೆ. ಅತ್ಯಾಕರ್ಷಕ, ಅತ್ಯಾಧುನಿಕ ತಂತ್ರಜ್ಞಾನದ ಟಾರ್–ಕಾಂಕ್ರೀಟ್ ರಸ್ತೆಗಳನ್ನು ನೋಡಬಹುದೇ ವಿನಾ ಪುರಾತನ ಪರಿಕಲ್ಪನೆಯ ಸುಂದರ ಸಾಲುಮರದ ದೃಶ್ಯವೇ ಇಲ್ಲದಂತಾಗಿದೆ. ಹೊಸ ಹೊಸ ರಸ್ತೆಗಳ ನಿರ್ಮಾಣದೊಡನೆ, ರಸ್ತೆಗಳ ಬದಿಯಲ್ಲಿ ವೈವಿಧ್ಯಮಯ ವೃಕ್ಷಗಳನ್ನು ಬೆಳೆಸುವ ನಮ್ಮ ಪುರಾತನ ಸಾಲುಮರದ ಪರಿಕಲ್ಪನೆಗೆ ಈಗ ಅಂತ್ಯ ಹಾಡಲಾಗಿದೆಯೇ?

–ಆರ್.ಎಸ್.ಅಯ್ಯರ್, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT