ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 16 ಆಗಸ್ಟ್ 2024, 0:40 IST
Last Updated 16 ಆಗಸ್ಟ್ 2024, 0:40 IST
ಅಕ್ಷರ ಗಾತ್ರ

ಒಂದು ದೇಶ, ಒಂದು ಚುನಾವಣೆ: ಚರ್ಚೆ ಅವಶ್ಯ

‘ಒಂದು ದೇಶ, ಒಂದು ಚುನಾವಣೆ’ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಸ್ತಾಪಿಸಿ ಸಮರ್ಥಿಸಿಕೊಂಡಿದ್ದಾರೆ. ಲೋಕಸಭಾ ಅಧಿವೇಶನ ಮುಗಿದ ಬಳಿಕ, ತಮ್ಮ ಪ್ರಮುಖ ಭಾಷಣವೊಂದರಲ್ಲಿ ಸಾರ್ವಜನಿಕವಾಗಿ ಅವರು ಈ ಪ್ರಸ್ತಾಪ ಮಾಡಿರುವುದು ‘ಉದ್ದೇಶಿತ’ ಯೋಜನೆಯನ್ನು ಜಾಣ್ಮೆಯಿಂದ ಜಾರಿಗೊಳಿಸುವ ಸೂಚನೆಯಂತೆ ತೋರುತ್ತಿದೆ. ಈ ಯೋಜನೆಯ ವಿರುದ್ಧ ಈಗಾಗಲೇ ಬಂದಿರುವ ಮತ್ತು ಮುಂದೆ ಬರಬಹುದಾದ ಆಕ್ಷೇಪಗಳ ನೈತಿಕ ಬಲ ಕುಗ್ಗಿಸುವ ಉಪಾಯವನ್ನೂ ಅವರು ಮಾಡುತ್ತಿರಬಹುದು ಎಂಬ ಅನುಮಾನಕ್ಕೂ ಇಲ್ಲಿ ಆಸ್ಪದವಿದೆ.

ಈ ಯೋಜನೆಯ ‘ಒಂದು ಸಾಧಕ’ದ ಬಗ್ಗೆಯೇ ಪ್ರಧಾನಿ ಪದೇ ಪದೇ ಮಾತನಾಡುತ್ತಿದ್ದಾರೆ, ‘ಹಲವು ಬಾಧಕ’ಗಳ ಬಗ್ಗೆ ಜಾಣಮೌನ ವಹಿಸಿದ್ದಾರೆ. ಇಡೀ ದೇಶದ ಭವಿಷ್ಯದ ದಿಕ್ಕನ್ನೇ ಬದಲಿಸಬಲ್ಲ ಇಂತಹದ್ದೊಂದು ಪ್ರಮುಖ ನಡೆಯು ಜಾರಿಗೆ ಬರುವ ಮುನ್ನ ದೇಶದಾದ್ಯಂತ ವ್ಯಾಪಕವಾಗಿ ಮತ್ತು ವ್ಯವಸ್ಥಿತವಾಗಿ ಚರ್ಚೆ ಆಗಬೇಕಿರುವುದು ಅಪೇಕ್ಷಾರ್ಹ.

⇒ಎಚ್.ಆನಂದರಾಮ ಶಾಸ್ತ್ರೀ, ಬೆಂಗಳೂರು

ಬೇಡದ್ದನ್ನು ಕೊಟ್ಟರೆ ದಾನವೆನಿಸದು

ಚಿತ್ರದುರ್ಗ ಜಿಲ್ಲೆಯ ನೂರು ಸರ್ಕಾರಿ ಶಾಲಾ ಮಕ್ಕಳಿಗೆ ಹತ್ತು ಸಾವಿರ ಪುಸ್ತಕಗಳನ್ನು ವಿತರಿಸಲಾಗು
ತ್ತಿದ್ದು, ದಾನಿಗಳು ಪುಸ್ತಕಗಳನ್ನು ಒದಗಿಸಬೇಕು ಎಂದು ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಕೋರಿರುವುದಾಗಿ ವರದಿಯಾಗಿದೆ (ಪ್ರ.ವಾ., ಆ. 15). ಇದೊಂದು ಸ್ತುತ್ಯರ್ಹ ಕೆಲಸ. ನನಗೆ ತಿಳಿದಿರುವಂತೆ, ಒಂದು ಸಂಸ್ಥೆಯವರು, ತಮಗೆ ಮಾರಲು ಸಾಧ್ಯವಿಲ್ಲ ಎಂಬುದು ಖಚಿತವಾದಾಗ, ದಾಸ್ತಾನಿನಲ್ಲಿ ದೂಳು ತಿನ್ನುತ್ತ ಬಿದ್ದಿರುವ ಪುಸ್ತಕಗಳನ್ನು ಪತ್ರಿಕಾ ಪ್ರಕಟಣೆಯ ಮೂಲಕ, ಶಾಲೆಗಳ ಶಿಕ್ಷಕರನ್ನು ಕರೆಸಿಕೊಂಡು, ಆಗಾಗ್ಗೆ ಅವುಗಳನ್ನು ಕೊಡುವ ಪರಿಪಾಟವನ್ನು ಇಟ್ಟುಕೊಂಡಿದ್ದಾರೆ. ಕೆಲವು ವ್ಯಕ್ತಿಗಳೂ ತಮಗೆ ಬೇಡವಾದ, ತುಂಬ ಹಳೆಯದಾದ, ಶಿಥಿಲವಾದ ಪುಸ್ತಕಗಳನ್ನು ಕೊಡುತ್ತಾರೆ. ಇಂಥ ಪುಸ್ತಕಗಳು ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಉದ್ದೀಪಿಸುವುದಕ್ಕಿಂತ ಅವರನ್ನು ಪುಸ್ತಕಗಳಿಂದ ವಿಮುಖರಾಗುವಂತೆ ಮಾಡುವ ಸಂಭವವೇ ಹೆಚ್ಚು. ತಾವು ಓದಿ ಮನಸಾರೆ ಮೆಚ್ಚಿದ ಪುಸ್ತಕಗಳನ್ನು ಬೇರೆಯವರೂ ಓದಲಿ ಎಂಬ ಸದುದ್ದೇಶದಿಂದ ಕೊಟ್ಟರೆ ಮಾತ್ರ ಅದು ದಾನ. ತಮಗೆ ಬೇಡದ್ದನ್ನು ಕೊಟ್ಟರೆ ಅದು ದಾನವೆನಿಸದು.

ಮಕ್ಕಳಿಗೆ ಒದಗಿಸುವ ಪುಸ್ತಕಗಳು ಚಿಕ್ಕದಾಗಿ, ಅಂದರೆ 150 ಪುಟಗಳಿಗೆ ಮೀರದಂತೆ ಇರಬೇಕು. ಬಳಸುವ ಭಾಷೆ ಸರಳವಾಗಿಯೂ ಹಿತಕರವಾಗಿಯೂ ಇರಬೇಕು ಮತ್ತು ಲೇಖನಗಳು ದೀರ್ಘವಾಗಿ ಇರಬಾರದು. ಲೇಖನಗಳು ಮಧ್ಯೆ ಮಧ್ಯೆ ಕನ್ನಡ ನುಡಿಗಟ್ಟುಗಳು, ಗಾದೆಗಳು, ಸಂದರ್ಭಕ್ಕೆ ತಕ್ಕಂತೆ ಚಿಕ್ಕ ಚಿಕ್ಕ ಕತೆಗಳನ್ನು ಒಳಗೊಂಡಿದ್ದು ಆಕರ್ಷಕವಾಗಿರಬೇಕು. ಮುಖ್ಯವಾಗಿ, ಶಿಕ್ಷಕರು ತಮ್ಮ ವ್ಯಾಪ್ತಿಗೆ ಬರುವ ಪುಸ್ತಕಗಳನ್ನು ಓದಿ, ತರಗತಿಗಳಲ್ಲಿ ಮಕ್ಕಳಿಗೆ ಅವುಗಳ ಸಂಕ್ಷಿಪ್ತ ಪರಿಚಯ ಮಾಡಿಕೊಡುವ ಮೂಲಕ ಅವರಲ್ಲಿ ಓದುವ ಆಸಕ್ತಿ ಕೆರಳುವಂತೆ ಮಾಡಬೇಕು. ಹೀಗೆ ಮಾಡಿದಾಗ ಮಾತ್ರ ಶಾಲೆಗಳಿಗೆ ಪುಸ್ತಕಗಳನ್ನು ಒದಗಿಸುವ ಯೋಜನೆ ಸಫಲವಾಗುತ್ತದೆ.

⇒ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಪ್ರಥಮ ಸ್ವಾತಂತ್ರ್ಯೋತ್ಸವ: ಮಾದರಿ ಆಚರಣೆ

ಸಾಹಿತಿ ಹಾಗೂ ಸಾಮಾಜಿಕ ಹೋರಾಟಗಾರರಾಗಿದ್ದ ಬೆಳಗೆರೆ ಕೃಷ್ಣಶಾಸ್ತ್ರಿ ಅವರು ಚಿತ್ರದುರ್ಗ ಜಿಲ್ಲೆಯ ಹೆಗ್ಗೇರಿ ಗ್ರಾಮದಲ್ಲಿ ಶಿಕ್ಷಕರಾಗಿದ್ದರು. ಆಗ ನಡೆದ 1947ರ ಪ್ರಥಮ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದ ಎರಡು ಅಪರೂಪದ ಸಂಗತಿಗಳನ್ನು ತಮ್ಮ ‘ಎಲೆ ಮರೆಯ ಅಲರು’ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ.

ಧ್ವಜಾರೋಹಣ ಮಾಡಿದ ಹಿರಿಯರೊಬ್ಬರು ‘ನಾವು ಇವತ್ತಿನಿಂದ ಸ್ವತಂತ್ರರು. ನಮ್ಮಲ್ಲಿರುವ ಜಾತಿಯ ವ್ಯವಸ್ಥೆಯನ್ನು ಬಿಟ್ಟುಬಿಡಬೇಕು. ಇಂದು ಸಂಜೆ ನಮ್ಮೂರ ಕೆರೆಯ ದಂಡೆಯ ಮೇಲೆ ಎಲ್ಲರೂ ಕೂಡಿ ಊಟ ಮಾಡೋಣ’ ಎಂದು ಸಲಹೆ ನೀಡಿದರು. ಎಲ್ಲರೂ ಒಪ್ಪಿ ಚಪ್ಪಾಳೆ ತಟ್ಟಿದರು. ಗ್ರಾಮಸ್ಥರು ಹಿಟ್ಟು, ಅಕ್ಕಿ, ಬೆಲ್ಲ, ಬೇಳೆಕಾಳು, ಖಾದ್ಯತೈಲ, ತರಕಾರಿ ತಂದು ಶಾಲೆಯ ಆವರಣದಲ್ಲಿ ಇಟ್ಟರು. ಇವನ್ನೆಲ್ಲ ಕೆರೆ ಆವರಣಕ್ಕೆ ಸಾಗಿಸಿ ಅಡುಗೆ ಮಾಡಿದರು. ಸಂಜೆ ಜಾತಿ, ಅಂತಸ್ತು ಮರೆತು ಎಲ್ಲರೂ ಒಂದೇ ಪಂಕ್ತಿಯಲ್ಲಿ ಕುಳಿತು ಊಟ ಮಾಡಿದರು. ಅಂದಿನಿಂದ ಕೆರೆಯ ನೀರು ಬಳಸುವುದಕ್ಕೆ ಮುಕ್ತ ಅವಕಾಶ ನೀಡಲಾಯಿತು.

ಈ ಕಾರ್ಯಕ್ರಮದಿಂದ ಪ್ರಭಾವಿತರಾದ ನೆರೆಯ ಸಾಣೆಕೆರೆ ಗ್ರಾಮದ ಹಿರಿಯರು ಸಾಮೂಹಿಕ ಭಜನೆ ಹಾಗೂ ಮೆರವಣಿಗೆ ನಡೆಸಿದರು. ಮೆರವಣಿಗೆಯು ಗ್ರಾಮದ ದೇವಸ್ಥಾನದ ಹತ್ತಿರ ಬಂತು. ‘ಇವತ್ತು ಹರಿಜನರು ದೇವರಿಗೆ ಪೂಜೆ ಮಾಡಲಿ’ ಎಂದು ಕೆಲವರು ಹೇಳಿದರು. ಪೂಜಾರಿ ಓಡಿ ಹೋಗಿ ಬಾಗಿಲು ತೆರೆದು ಅವಕಾಶ ಮಾಡಿಕೊಟ್ಟರು. ಪರಿಶಿಷ್ಟ ಸಮುದಾಯದವರು ಪೂಜೆ ಮಾಡಿ ಪ್ರಸಾದ ವಿತರಿಸಿದರು.

ಅಷ್ಟು ವರ್ಷಗಳ ಹಿಂದೆಯೇ ಇಂಥದ್ದೊಂದು ಸೌಹಾರ್ದ ಸಾಧ್ಯವಾಗಿತ್ತು ಎಂಬುದು ಹೆಮ್ಮೆಯ ಸಂಗತಿ. ಆದರೆ ದೇಶದ ಹಲವೆಡೆ ಇಂದಿಗೂ ಜಾತೀಯತೆ ತಾಂಡವವಾಡುತ್ತಿರುವುದು ವಿಷಾದ ಹುಟ್ಟಿಸುತ್ತದೆ. ಇಂತಹ ಸಂದರ್ಭದಲ್ಲಿ, ಸ್ವಾತಂತ್ರ್ಯೋತ್ಸವ ಆಚರಣೆ ಬರೀ ಆಚರಣೆಯಾಗದೆ ಸಾಮಾಜಿಕ ಉನ್ನತಿಗೆ ಕಾರಣವಾಗಬೇಕು.

⇒ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ

ಜನೌಷಧ ಕೇಂದ್ರ: ಸದುದ್ದೇಶ ಮುಕ್ಕಾಗದಿರಲಿ

ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧ ಕೇಂದ್ರಗಳಿಗೆ ಹೊಸದಾಗಿ ಅನುಮತಿ ನೀಡುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಹೇಳಿರುವುದು ಅಚ್ಚರಿ ಉಂಟುಮಾಡಿದೆ. ಆಸ್ಪತ್ರೆ ಆವರಣದಲ್ಲಿ ಜನೌಷಧ ಕೇಂದ್ರಗಳನ್ನು ತೆರೆಯುವುದು, ರೋಗಿಗಳ ಸಂಬಂಧಿಕರು ಅಗ್ಗದ ಔಷಧವನ್ನು ಹುಡುಕಿಕೊಂಡು ಹೊರಗೆ ಹೋಗುವುದನ್ನು ತಪ್ಪಿಸಬೇಕೆಂಬ ಸದುದ್ದೇಶದಿಂದ. ಅದಕ್ಕೆ ವ್ಯತಿರಿಕ್ತವಾಗಿ, ಆಸ್ಪತ್ರೆಯಿಂದ ದೂರವಿರುವ ಮಾರುಕಟ್ಟೆ ಪ್ರದೇಶದಲ್ಲಿ ಜನೌಷಧ ಕೇಂದ್ರಗಳು ಇದ್ದರೆ, ಜನ ಅವನ್ನು ಅರಸಿಕೊಂಡು ಹೋದಾರೆಯೇ? ಈ ವ್ಯವಸ್ಥೆಯಿಂದ ಖಾಸಗಿ ಅಂಗಡಿಗಳ ವ್ಯಾಪಾರ ವೃದ್ಧಿಸುವುದು ನಿಸ್ಸಂದೇಹ. ಇಂತಹ ತರ್ಕಹೀನ ನಡೆಯಿಂದ ಆಗುವ ಅನನು
ಕೂಲವನ್ನು ಅನುಭವಿಸಬೇಕಾದುದು ಜನರ ದೌರ್ಭಾಗ್ಯ.

⇒ಎಸ್.ವೆಂಕಟಕೃಷ್ಣ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT