ಹಿತ–ಮಿತ ಮಾತು ಮಾಣಿಕ್ಯ
ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸುದೀರ್ಘ 98 ನಿಮಿಷಗಳ ಭಾಷಣ ಮಾಡಿದ್ದಾರೆ. ತಮ್ಮ ಭಾಷಣದಲ್ಲಿ ಅವರು ಅನೇಕ ವಿಷಯಗಳು ಕುರಿತು ಪ್ರಸ್ತಾಪಿಸಿದ್ದಾರೆ. ಈ ಹಿಂದಿನ ಪ್ರಧಾನಮಂತ್ರಿಗಳು ಮಾಡಿದ ಭಾಷಣಗಳ ಅವಧಿ ಕುರಿತು ಕೂಡ ವರದಿಯಾಗಿದೆ. ಸ್ವಾತಂತ್ರ್ಯ ದಿನದಂದು ಇಷ್ಟು ಸುದೀರ್ಘ ಅವಧಿಯ ಭಾಷಣಗಳು ಬೇಕೆ ಎಂಬುದೇ ಮುಖ್ಯ ಪ್ರಶ್ನೆ. ಸ್ವಾತಂತ್ರ್ಯದ ದಿನ ಅನೇಕ ಗಣ್ಯಮಾನ್ಯರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಧ್ವಜಾರೋಹಣಕ್ಕೆ ಪ್ರೇಕ್ಷಕರಾಗಿರುತ್ತಾರೆ. ಇಂಥ ಸಂದರ್ಭದಲ್ಲಿ ಅವರ ತಾಳ್ಮೆ ಪರೀಕ್ಷಿಸುವಷ್ಟು ದೀರ್ಘ ಭಾಷಣ ಅಗತ್ಯವೇ? ಪ್ರಸ್ತಾಪಿಸಲಿರುವ ವಿಷಯಗಳನ್ನು ಇನ್ನೂ ಕ್ಲುಪ್ತವಾಗಿ ಕಡಿಮೆ ಅವಧಿಯಲ್ಲಿ ಹೇಳಬಹುದಲ್ಲವೇ?
ಸರ್ಕಾರದ ನೀತಿ–ನಿರೂಪಣೆ, ಧ್ಯೇಯ– ಧೋರಣೆಗಳ ಕುರಿತು ಹೇಳಲು ಪ್ರಧಾನಿಯವರಿಗೆ ಅನೇಕ ವೇದಿಕೆ
ಗಳಿರುತ್ತವೆ. ಸಂಸತ್ತು ಅದಕ್ಕೆ ಅತಿ ಪ್ರಶಸ್ತವಾದ ವೇದಿಕೆ. ಪ್ರಧಾನಿಯವರ ಮನ್ ಕಿ ಬಾತ್, ಚಾಯ್ ಪೆ ಚರ್ಚಾ ಅಥವಾ ಪಕ್ಷದ ಪದಾಧಿಕಾರಿಗಳು, ಪ್ರತಿನಿಧಿಗಳೊಂದಿಗೆ ಅಥವಾ ಸಮಾಜದ ವಿವಿಧ ಸ್ತರದ ಜನರೊಂದಿಗೆ ನಡೆಸುವ ಆನ್‌ಲೈನ್ ಸಭೆ–ಸಮಾರಂಭ, ಚುನಾವಣಾ ರ್‍ಯಾಲಿಗಳ ಭಾಷಣಗಳು ಕೂಡ ದೀರ್ಘ ಒಮ್ಮುಖ ಮಾತುಗಳಾಗಿರುವುದನ್ನು ನೋಡಬಹುದು. ಅದರ ಬದಲು ದೇಶದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಆಗಾಗ ಸಂವಾದ ನಡೆಸಿ, ಅವರ ಪ್ರಶ್ನೋತ್ತರಗಳಿಗೆ ಉತ್ತರ ನೀಡಬಹುದು, ದೇಶದ ಜನರೊಂದಿಗೆ ಸಂವಹನ ನಡೆಸಬಹುದು, ವಿಚಾರ ವಿನಿಮಯ ಮಾಡಬಹುದು... ಇವೆಲ್ಲ ಉತ್ತಮ ಮಾರ್ಗ. ಅದರಿಂದ ಜನರ ನಾಡಿಮಿಡಿತವನ್ನು ಕೂಡ ಅರಿಯಲು ಸಹಾಯವಾಗಬಲ್ಲದು. ಮಾಧ್ಯಮಗಳೊಂದಿಗೆ ಪ್ರಧಾನಿಯವರ ಸಂಪರ್ಕವಂತೂ ಈಗ ಮಾಯವಾಗಿಬಿಟ್ಟಿದೆ. ಇಷ್ಟಾಗಿಯೂ ಮಾತನಾಡಲೇಬೇಕಾದ ವಿಷಯಗಳ ಕುರಿತು ಮಾತನಾಡದೇ ಇರುವುದು ಕೂಡ ಅಪಾರ್ಥಕ್ಕೆ ಎಡೆ ಮಾಡಿಕೊಡುತ್ತದೆ. ಈ ಹಿಂದಿನ ಪ್ರಧಾನಮಂತ್ರಿಯವರ ಮೌನ ಅನೇಕ ಟೀಕೆಗಳಿಗೆ ಎಡೆ ಮಾಡಿಕೊಟ್ಟರೆ, ಈಗಿನ ಪ್ರಧಾನಿಯ ಮಾತುಗಳು ಅತಿ ಭಾರದಿಂದ ಬಸವಳಿಯುತ್ತಿವೆ. ಹಿತಮಿತವಾದ ಮಾತುಗಳೇ ಮಾಣಿಕ್ಯವಿದ್ದಂತೆ.
ವೆಂಕಟೇಶ ಮಾಚಕನೂರ, ಧಾರವಾಡ
ಸವಾಲು ಮತ್ತು ನಗು
ರಾಜ್ಯ ವಿಧಾನಸಭೆಗೆ ಹೋದ ವರ್ಷ ಅಷ್ಟೇ ಚುನಾವಣೆ ನಡೆದಿದೆ. ‘ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ’ ಎಂದು ಬಿಜೆಪಿಯ ಕೆಲವು ಮುಖಂಡರು ಸವಾಲು ಹಾಕಿದ್ದಾರೆ. ಈ ಸವಾಲು ಸುದ್ದಿ ಓದಿ ನಕ್ಕೂ ನಕ್ಕೂ ಸಾಕಾಯಿತು.
- ಎಸ್.ಎನ್. ಕೃಷ್ಣಮೂರ್ತಿ, ಕಡೂರು
ಹೆಸರುಳಿಸುವ ಅಭಿಯಾನ: ಮೂಲ ಅರಿಯಲು ವರದಾನ
ನಾಡಿನ ಊರೂರ ಹೆಸರುಳಿಸುವ ಉದ್ದೇಶದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಭಿಯಾನ ಸ್ವಾಗತಾರ್ಹ. ಇದರ ಅಗತ್ಯ ಇತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಜಿ. ನಾರಾಯಣ ಅವರಿಗಿದ್ದ ಇಂತಹ ‘ಮಣ್ಣಿನ’ ಕಳಕಳಿ ಬಹಳಷ್ಟು ವರ್ಷಗಳ ಬಳಿಕ ಈಗ ಮರುಕಳಿಸಿರುವುದಕ್ಕೆ ಸಂತೋಷಪಡಬೇಕಾಗಿದೆ! ಯಾವುದೇ ಊರಿಗೆ ಸುಖಾಸುಮ್ಮನೆ ಆ ಹೆಸರು ಬಂದಿರುವುದಿಲ್ಲ. ಆ ಹೆಸರು ಬಂದ ಕಾಲದಲ್ಲಿ ಈಗಿನಂತೆ ಬರೀ ರಾಜಕೀಯ ದಬ್ಬಾಳಿಕೆ ಇದ್ದಿರುವ ಸಾಧ್ಯತೆಯಿಲ್ಲ. ಕಲ್ಗುಣಿ, ಚೀಣ್ಯ, ಕಾಸರವಾಡಿ, ಕೊತ್ತತ್ತಿ, ಮುಡುಕುತೊರೆ, ಮದ್ದೂರು, ಮಳವಳ್ಳಿ, ಮಳೂರು, ಎಡಕ್ಕುಮರಿ, ಹೆಜ್ಜಾಲ, ಚೆಲ್ಲಘಟ್ಟ, ಹೊಗೆಯ್ಯನಕಲ್ಲು ಎಂಬಂತಹ ಹೆಸರುಗಳಿಗೆ ಗಾಢವಾದ ಹಿನ್ನೆಲೆಯೇ ಇರಬಹುದು. ನಾನು ಈಗಿರುವ ಎಳೇನ್ಹಳ್ಳಿ (ಎಳೆಯನ ಅಥವಾ ಎಳ್ಳಯ್ಯನ ಹಳ್ಳಿ) ಬಗ್ಗೆ ನನಗೆ ಇನ್ನಿಲ್ಲದ ಕುತೂಹಲವಿದೆ. ಆದರೆ ತಿಳಿಸಬಲ್ಲ
ಹಿರಿತಲೆಗಳಿಲ್ಲ! ಇಂಥವುಗಳ ಮೂಲವನ್ನು ಅರ್ಥಮಾಡಿಕೊಂಡರೆ, ಆ ಇಡೀ ಪ್ರದೇಶದ ಸ್ವರೂಪ, ಸಂಸ್ಕೃತಿ, ಇತಿಹಾಸ ಅದರಲ್ಲಿ ಅಡಕವಾಗಿರುವ ಸಾಧ್ಯತೆ ಕಂಡುಬರಬಹುದು.
ಆರ್.ಕೆ.ದಿವಾಕರ, ಬೆಂಗಳೂರು
ಆಮೂಲಾಗ್ರ ವಿಶ್ಲೇಷಣೆ ಅಗತ್ಯ
ಇಷ್ಟೊಂದು ಜನಸಂಖ್ಯೆ, ಆದರೆ ಒಂದೂ ಚಿನ್ನ ಇಲ್ಲ– ಹಲವು ವರ್ಷಗಳ ಹಿಂದಿನ ಸುದ್ದಿಯ ಶೀರ್ಷಿಕೆ. ಇತ್ತೀಚಿನ ಒಲಿಂಪಿಕ್ಸ್‌ನಲ್ಲಿ ಅದು ಮರುಕಳಿಸಿದೆ. ಕ್ರೀಡಾಪಟುಗಳಿಗೆ ಸರ್ಕಾರಗಳ ಆರ್ಥಿಕ ಬೆಂಬಲ ಹೆಚ್ಚಿದೆ. ಆದರೆ ಅಶ್ವಿನಿ ಪೊನ್ನಪ್ಪ ಅವರು ಈ ಬಗೆಗೆ ನೀಡಿರುವ ಸ್ಪಷ್ಟೀಕರಣ ( ಪ್ರ.ವಾ., ಆ. 14) ಈ ಬೆಂಬಲ ಅಪೇಕ್ಷಿತ ರೂಪದಲ್ಲಿ ಇದೆಯೇ ಎಂಬ ಸಂದೇಹ ಉಂಟುಮಾಡುವಂತಿದೆ.
ಸ್ಪರ್ಧೆಯಲ್ಲಿನ ಸಾಧನೆ ಹಲವು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಕೆಲವರು ಸ್ವಂತ ಹಣವನ್ನೂ ವಿನಿಯೋಗಿಸುವ ಸ್ಥಿತಿಯಲ್ಲಿ ಇರುತ್ತಾರೆ; ಇನ್ನು ಕೆಲವರಿಗೆ ಸರ್ಕಾರ, ಸಂಘ–ಸಂಸ್ಥೆಗಳ ಆರ್ಥಿಕ ನೆರವು ಅನಿವಾರ್ಯ. ‘ಇಷ್ಟು ಕೋಟಿ ವಿನಿಯೋಗಿಸಿದ್ದೇವೆ. ಆದರೂ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಇಲ್ಲ’ ಎಂಬ ಹೇಳಿಕೆ ಸರಳೀಕರಣ ಆಗುತ್ತದೆ. ಕೆಲವು ಸ್ಪರ್ಧೆಗಳಲ್ಲಿ ಹೊಸಬರು ಸಾಧನೆ ತೋರಿಸಿ ಭರವಸೆ ಮೂಡಿಸಿದ್ದಾರೆ. ಆದರೆ ಹಳಬರು ತಮ್ಮ ಅನುಭವ, ಖ್ಯಾತಿಗೆ ತಕ್ಕ ಪ್ರದರ್ಶನ ನೀಡಿಲ್ಲ. ಒಟ್ಟಿನಲ್ಲಿ ಈ ಬಗೆಗೆ ಸಮಗ್ರ, ಆಮೂಲಾಗ್ರ ವಿಶ್ಲೇಷಣೆ ಅಗತ್ಯ.
ಎಚ್.ಎಸ್.ಮಂಜುನಾಥ, ಗೌರಿಬಿದನೂರು
ಮಕ್ಕಳ ಜ್ಞಾನ ವಿಕಸನಕ್ಕೆ ಆದ್ಯತೆ
‘ಬೇಡದ್ದನ್ನು ಕೊಟ್ಟರೆ ದಾನವೆನಿಸದು’ ಶೀರ್ಷಿಕೆಯಡಿ ಸಿ. ಚಿಕ್ಕತಿಮ್ಮಯ್ಯ ಹಂದನಕೆರೆ ಬರೆದಿರುವ ಪತ್ರಕ್ಕೆ
(ವಾ.ವಾ., ಆ. 16) ಪ್ರತಿಕ್ರಿಯೆ. ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಆಶ್ರಯದಲ್ಲಿ ಈಗಾಗಲೇ 8 ಜಿಲ್ಲೆಗಳ 800 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಮಕ್ಕಳ ಜ್ಞಾನವಿಕಸನಕ್ಕೆ ಉಪಯುಕ್ತವಾಗುವ ಆಯ್ದ ನೀತಿ ಕಥೆಗಳು, ವಿಜ್ಞಾನ, ಸಚಿತ್ರ ಕಥೆಗಳು, ವ್ಯಾಕರಣ, ಶಬ್ದಕೋಶ, ಮನೋವಿಕಸನ ಹೀಗೆ ಹಲವು ಪ್ರಕಾರಗಳ 80 ಸಾವಿರ ಪುಸ್ತಕಗಳನ್ನು ನೀಡಿದ್ದೇವೆ. ಹಳೆಯದಾದ, ದೂಳಿಡಿದ, ಅನುಪಯುಕ್ತ ಹಾಗೂ ಮಾರಾಟವಾಗದ, ಮಕ್ಕಳೇತರ ಪುಸ್ತಕಗಳನ್ನು ಸ್ವೀಕರಿಸುವುದಿಲ್ಲ. 100 ಪುಸ್ತಕಗಳನ್ನು ಆಯ್ಕೆ ಮಾಡಿ ಬಾಕ್ಸ್‌ಗೆ ತುಂಬಿಸುವಾಗಲೂ ಕೆಲವನ್ನು ತಿರಸ್ಕರಿಸಿದ್ದಿದೆ. ನಾವು ವಿತರಿಸುತ್ತಿರುವ ಪುಸ್ತಕಗಳನ್ನು ಯಾರು ಬೇಕಾದರೂ ಬಂದು ವೀಕ್ಷಿಸಬಹುದು.
ನಿಡಸಾಲೆ ಪುಟ್ಟಸ್ವಾಮಯ್ಯ, ಅಧ್ಯಕ್ಷ, ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.