ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ನಿಷ್ಪಕ್ಷಪಾತ ತನಿಖೆ ನಡೆಯಲಿ

Published 17 ಡಿಸೆಂಬರ್ 2023, 23:30 IST
Last Updated 17 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗಾಗಿ ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿಯಂತಹ ವಸತಿ ಶಾಲೆಗಳನ್ನು ತೆರೆದು ಕೋಟ್ಯಂತರ ರೂಪಾಯಿ ಅನುದಾನವನ್ನು ವ್ಯಯಿಸುವ ಮೂಲಕ ಉಚಿತ ಸೌಲಭ್ಯಗಳನ್ನು ಸರ್ಕಾರವೇನೊ ಒದಗಿಸಿದೆ. ಆದರೆ ಈ ಕೆಲವು ಶಾಲೆಗಳಲ್ಲಿನ ಪ್ರಾಂಶುಪಾಲರು ಮತ್ತು ಶಿಕ್ಷಕರು ಯಾವುದೇ ಲಂಗುಲಗಾಮಿಲ್ಲದೆ ಮೇಲಧಿಕಾರಿಗಳೊಂದಿಗೆ ಶಾಮೀಲಾಗಿ, ಮನಬಂದಂತೆ ಕರ್ತವ್ಯ ನಿರ್ವಹಿಸುತ್ತಿರುವುದು ಆಗಾಗ ಪತ್ರಿಕೆಗಳಲ್ಲಿ ವರದಿಯಾಗುತ್ತಿರುತ್ತದೆ.

ಅದರಂತೆಯೇ ಈಗ ನಡೆದಿರುವುದು, ಮಾಲೂರು ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರಲ್ಲಿ ಮಲಗುಂಡಿಯ ಸ್ವಚ್ಛತಾ ಕಾರ್ಯಕ್ಕೆ ಮಕ್ಕಳನ್ನು ಇಳಿಸಿದ ಪ್ರಕರಣ. ಮಲಗುಂಡಿಗೆ ಮಕ್ಕಳನ್ನು ಇಳಿಸುವುದನ್ನು ತಡೆಯುವ ಅವಕಾಶವಿದ್ದರೂ ತಡೆಯದೆ, ಅದರ ಫೋಟೊ ತೆಗೆದು, ಆ ಮಕ್ಕಳ ಹೇಳಿಕೆಯನ್ನು ಗುಟ್ಟಾಗಿ ವಿಡಿಯೊ ಮಾಡಿರುವ ಶಿಕ್ಷಕ ಸಹ ಇಲ್ಲಿ ತಪ್ಪಿತಸ್ಥನಂತೆ ಕಾಣುತ್ತಾರೆ. ಇಲ್ಲಿಯ ಮಕ್ಕಳಿಗಾಗಲೀ ಪೋಷಕರಿಗಾಗಲೀ ಹಣಬಲ, ಜಾತಿಬಲ, ಜನಬಲವಿಲ್ಲವೆಂಬ ಕಾರಣದಿಂದ ಈ ಪ್ರಕರಣ ಕೂಡ ಹತ್ತರಲ್ಲಿ ಹನ್ನೊಂದಾಗದೆ, ನಿಷ್ಪಕ್ಷಪಾತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ.

–ಮಂಜುನಾಥ್ ಕೇಶವ್, ಕೃಷ್ಣರಾಜಪೇಟೆ, ಮಂಡ್ಯ

**

ಪಠ್ಯಕ್ರಮ: ಕೃಷಿ, ಪರಿಸರಕ್ಕಿರಲಿ ಆದ್ಯತೆ

ಪಠ್ಯಕ್ರಮದಲ್ಲಿ ಸಾಮಾಜಿಕ, ಆರ್ಥಿಕ ವೈವಿಧ್ಯಗಳ ಕುರಿತು ಅರಿವು ಮೂಡಿಸುವುದು ಅಗತ್ಯ ಎಂದು ಬರಗೂರು ರಾಮಚಂದ್ರಪ್ಪ ತಮ್ಮ ಲೇಖನದಲ್ಲಿ (ಪ್ರ.ವಾ., ಡಿ.16) ಅಭಿಪ್ರಾಯಪಟ್ಟಿದ್ದಾರೆ. ನಮ್ಮ ಹಾಲಿ ಪಠ್ಯಕ್ರಮದಲ್ಲಿ ಕೃಷಿ, ಪರಿಸರ ವಿಜ್ಞಾನಕ್ಕೆ ಅತಿ ಕಡಿಮೆ ಮಹತ್ವ ನೀಡಲಾಗಿದೆ. ಜಪಾನ್, ಜರ್ಮನಿ, ಅಮೆರಿಕ, ಚೀನಾ ದೇಶಗಳಲ್ಲಿ ಪರಿಸರವನ್ನು ಪಠ್ಯಕ್ರಮದಲ್ಲಿ ಸೇರಿಸಿ ಬೋಧಿಸಲಾಗುತ್ತಿದೆ. ಮಣ್ಣು, ನೀರು, ಗಾಳಿ, ಬಿಸಿಲು, ಮರ, ಪ್ರಾಣಿ, ಪಕ್ಷಿಗಳ ಮಹತ್ವ, ಉತ್ತಮ ಆಹಾರ ಪದಾರ್ಥ ಮತ್ತು ರೈತನಿಗೆ ನೀಡಬೇಕಾದ ಆದ್ಯತೆ, ವಾಯು, ಜಲ, ಮಣ್ಣಿನ ಮಾಲಿನ್ಯ ತಡೆಗಟ್ಟುವಿಕೆ, ಅರಣ್ಯದ ಮಹತ್ವ, ಜಾಗತಿಕ ತಾಪಮಾನದಂತಹ ವಿಷಯಗಳು ಪಠ್ಯಕ್ರಮದಲ್ಲಿ ಸೇರ್ಪಡೆಯಾಗಲಿ. ಕೃಷಿ ತಂತ್ರಜ್ಞರ ಸಂಸ್ಥೆಯು ಪಠ್ಯಕ್ರಮದಲ್ಲಿ ಕೃಷಿ, ಪರಿಸರ ವಿಜ್ಞಾನ ವಿಷಯಗಳ ಸೇರ್ಪಡೆ ಕುರಿತು ಸಲಹೆ ನೀಡಿದೆ. ಪಠ್ಯಕ್ರಮ ರೂಪಿಸಲು ಕೃಷಿ ತಂತ್ರಜ್ಞರನ್ನು ವಿಷಯತಜ್ಞರಾಗಿ ಸೇರಿಸಿಕೊಳ್ಳಬೇಕು.

ಎಚ್.ಆರ್‌.ಪ್ರಕಾಶ್, ಕೆ.ಬಿ.ದೊಡ್ಡಿ, ಮಂಡ್ಯ

**

ಎಥೆನಾಲ್ ಉತ್ಪಾದನೆ: ಅಕ್ಕಿ ಬಳಕೆ ಬೇಡ

ಎಥೆನಾಲ್ ಒಂದು ಜೈವಿಕ ಇಂಧನವಾಗಿದ್ದು, ಇದನ್ನು ಕಬ್ಬು, ಜೋಳ, ಅಕ್ಕಿ, ಗೋಧಿಯಂತಹ ಮೂಲಗಳಿಂದ ಉತ್ಪಾದಿಸಲಾಗುತ್ತದೆ. ಪೆಟ್ರೋಲ್‌ಗೆ ಮಿಶ್ರಣ ಮಾಡಿ ವಾಹನಗಳಿಗೆ ಬಳಸಬಹುದಾದ್ದರಿಂದ, ಇದೊಂದು ತುಂಬಾ ಮಹತ್ವದ ವಸ್ತುವಾಗಿದೆ. ಇದರ ಬಳಕೆಯಿಂದ ಮಾಲಿನ್ಯವನ್ನು ತಡೆಗಟ್ಟಬಹುದಾಗಿದೆ. ಕಚ್ಚಾತೈಲ ಆಮದಿನ ಪ್ರಮಾಣವನ್ನು ತಗ್ಗಿಸುವ ಮೂಲಕ ದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಹಣದ ಉಳಿತಾಯವಾಗುವಂತೆ ಮಾಡಬಹುದಾಗಿದೆ. ಅದರೆ ಕೇಂದ್ರ ಸರ್ಕಾರವು ಉತ್ತಮ ಗುಣಮಟ್ಟದ ಅಕ್ಕಿಯನ್ನು 2020ರಿಂದಲೇ ಎಥೆನಾಲ್ ಉತ್ಪಾದನೆಗೆ ಬಳಸಲು ಅವಕಾಶ ಮಾಡಿಕೊಟ್ಟಿದೆ. ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಹೆಚ್ಚಾಗಲು ಇದು ಕೂಡ ಒಂದು ಕಾರಣ ಆಗಿರಬಹುದು.

2022- 23ನೇ ಸಾಲಿನಲ್ಲಿ ‌16 ಲಕ್ಷ ಟನ್ ಉತ್ತಮ ಗುಣಮಟ್ಟದ ಅಕ್ಕಿಯು ಎಥೆನಾಲ್ ಉತ್ಪಾದನೆಗೆ ಬಳಕೆಯಾಗಿದ್ದು, ಅಕ್ಕಿಯ ಬೆಲೆ ಗಗನಕ್ಕೇರುವಂತೆ ಮಾಡುವಲ್ಲಿ ಕೊಡುಗೆ ನೀಡಿದೆ. ಇದರ ಜೊತೆಗೆ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಭತ್ತದ  ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದೆ. ಎಥೆನಾಲ್ ಉತ್ಪಾದನೆಗೆ ಉತ್ತಮ ಗುಣಮಟ್ಟದ ಅಕ್ಕಿ ಬಳಸುವುದನ್ನು ತಡೆಯಬೇಕು. ಎಥೆನಾಲ್ ಉತ್ಪಾದನೆ ಮಾಡಲು ಅಕ್ಕಿಗೆ ಪರ್ಯಾಯವಾಗಿ ಬೇರೆ ವಸ್ತುಗಳನ್ನು ಬಳಸುವ ಬಗ್ಗೆ ಯೋಚಿಸಬೇಕಾಗಿದೆ.

–ರಾಸುಮ ಭಟ್, ಚಿಕ್ಕಮಗಳೂರು

**

‘ಟೂ ಮಚ್‌ ಪಾಲಿಟಿಕ್ಸ್‌’...!

ಬೇರೆ ಬೇರೆ ರಾಜ್ಯಗಳಿಗೆ ಸೇರಿದ ಕೆಲವು ಯುವಕರು ಸಂಸತ್ ಅಧಿವೇಶನದ ಸಂದರ್ಭದಲ್ಲಿ ನಡೆಸಿದ ದಾಂದಲೆ ವೇಳೆ, ದೇಶದೆಲ್ಲೆಡೆ ಇರುವ ನಿರುದ್ಯೋಗ ಹಾಗೂ ಪರಿಹಾರ ಕಾಣದ ರೈತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ. ದೇಶದ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಶಾಸನಸಭೆಗೆ ತಮ್ಮ ಪಕ್ಷದ ಹೆಚ್ಚು ಸಂಖ್ಯೆಯ ಸದಸ್ಯರನ್ನು ಆಯ್ಕೆ ಮಾಡಿಸುವ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿವೆಯೇ ವಿನಾ ದೇಶದ ಸಮಸ್ಯೆಗಳ ಪರಿಹಾರ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತಿಲ್ಲ ಎಂಬುದು ಕಣ್ಣಿಗೆ ಕಟ್ಟುವಂತೆ ಇದೆ. ಕ್ರಿಕೆಟ್ ಪಂದ್ಯಗಳು ಇತ್ತೀಚೆಗೆ ಅತಿಯಾಗಿ ನಡೆಯುತ್ತಿರುವ ಬಗ್ಗೆ ‘ಟೂ ಮಚ್‌ ಕ್ರಿಕೆಟ್‌’ ಎಂದು ವಿಶ್ಲೇಷಿಸಲಾಗಿದೆ. ಅದರಂತೆ ದೇಶದಲ್ಲಿ ‘ಟೂ ಮಚ್‌ ಪಾಲಿಟಿಕ್ಸ್‌’ ಆಟ ನಡೆಯುತ್ತಿದೆ ಎಂಬುದನ್ನು ಪುನಃ ಹೇಳಬೇಕಿಲ್ಲ.

ಇಲ್ಲಿ ಆ ಯುವಕರಿಗೆ ಇದ್ದಿರಬಹುದಾದ ರಾಜಕೀಯ ಹಿನ್ನೆಲೆ ಅಥವಾ ಆಗಿರುವ ಭದ್ರತಾ ಲೋಪವನ್ನಷ್ಟೇ ಪ್ರಮುಖ ಅಂಶಗಳನ್ನಾಗಿ ಪರಿಗಣಿಸದೆ, ಯುವಕರು ಮತ್ತು ರೈತರ ಸಮಸ್ಯೆಗಳಿಗೆ ಸರ್ಕಾರಗಳು ಹೇಗೆ ಸ್ಪಂದಿಸಿವೆ ಎಂಬುದನ್ನು ವ್ಯವಧಾನದಿಂದ ವಿವೇಚಿಸಬೇಕಾಗಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ನಿರುದ್ಯೋಗ ಹಾಗೂ ರೈತರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ.
–ಎಂ.ಜಿ.ರಂಗಸ್ವಾಮಿ, ಹಿರಿಯೂರು 

**

ದಾರಿ ತಪ್ಪುತ್ತಿದೆ ಕಲಾಪ

ಶಾಸನಸಭೆಯ ನಡಾವಳಿಗಳು ಇತ್ತೀಚಿನ ವರ್ಷಗಳಲ್ಲಿ ಸಂಸದೀಯ ಘನತೆ, ಗೌರವವನ್ನು ಕಳೆದುಕೊಳ್ಳುತ್ತಿವೆ. ಶಾಸನವನ್ನು ರೂಪಿಸಬೇಕಾದ ಸದಸ್ಯರು ಯಾವುದೇ ರೀತಿಯ ಪೂರ್ವಸಿದ್ಧತೆ ಇಲ್ಲದೆ ಪಾಲ್ಗೊಳ್ಳುತ್ತಿದ್ದಾರೆ. ಬರೀ ವ್ಯಕ್ತಿನಿಂದನೆ, ಪರಸ್ಪರ ದೋಷಾರೋಪ, ಏಕವಚನದಲ್ಲಿ ನಿಂದಿಸುವುದು ವಿಧಾನಸಭೆಗೆ ಶೋಭೆಯಲ್ಲ. ಇಂತಹ ನಡವಳಿಕೆಗಳಿಗೆ ಸಭಾಧ್ಯಕ್ಷರು ಕಡಿವಾಣ ಹಾಕಬೇಕು. ಈ ದಿಸೆಯಲ್ಲಿ ಕಠಿಣವಾಗಿ ವರ್ತಿಸಬೇಕು. ಕಲಾಪ ನಡೆಸಲು ಅಪಾರ ಹಣ ವೆಚ್ಚವಾಗುತ್ತದೆ. ಹಾಗಿರುವಾಗ ಸದನದ ಕಾರ್ಯದಕ್ಷತೆಯು ಯೋಗ್ಯ ರೀತಿಯಲ್ಲಿ ಇರಬೇಕಾದುದು ಅಪೇಕ್ಷಣೀಯವಲ್ಲವೇ?

–ಟಿ.ವಿ.ನಾಗರಾಜ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT