ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 16 ಜೂನ್ 2024, 23:30 IST
Last Updated 16 ಜೂನ್ 2024, 23:30 IST
ಅಕ್ಷರ ಗಾತ್ರ

ಹೊರವಲಯಕ್ಕೂ ಬರಲಿ ‘ನಮ್ಮ ಕ್ಲಿನಿಕ್’

ಬೆಂಗಳೂರಿನಲ್ಲಿ ಇನ್ನೂ ಹಲವೆಡೆ ‘ನಮ್ಮ ಕ್ಲಿನಿಕ್’ ಆರಂಭಿಸಲು ಆರೋಗ್ಯ ಇಲಾಖೆ ತೀರ್ಮಾನಿಸಿದ್ದು, ಅಗತ್ಯ ಸ್ಥಳ ಗುರುತಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಅಧಿಕಾರಿಗಳಿಗೆ ಸೂಚಿಸಿರುವುದು ವರದಿಯಾಗಿದೆ (ಪ್ರ.ವಾ., ಜೂನ್‌ 14). ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಬರುವ ಹಲವರು ಬೆಂಗಳೂರಿನ ಹೊರವಲಯ ಮತ್ತು ಅದಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಪ್ರದೇಶದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮನೆ ಬಾಡಿಗೆ ಕಡಿಮೆ ಎಂಬ ಕಾರಣಕ್ಕಾಗಿ ನೆಲಸಿದ್ದಾರೆ. ಜನಸಂದಣಿ ಹೆಚ್ಚಾಗಿರುವ ಆ ವ್ಯಾಪ್ತಿಯಲ್ಲಿ ಸರಿಯಾಗಿ ನೀರು, ನಲ್ಲಿ, ಒಳಚರಂಡಿ, ರಸ್ತೆ, ಬಸ್ ಸೌಲಭ್ಯಗಳಿಲ್ಲ. ಆರೋಗ್ಯ ಸೇವೆಯಂತಹ ಮೂಲಸೌಲಭ್ಯಗಳ ಕೊರತೆಯಿದೆ. ಅಂತಹ ಕಡೆಗಳಲ್ಲಿ ‘ನಮ್ಮ ಕ್ಲಿನಿಕ್‌‘ ಜೊತೆಗೆ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆಯುವ ಅಗತ್ಯವಿದೆ. ‘ನಮ್ಮ ಕ್ಲಿನಿಕ್’ಗಳಲ್ಲಿ ಅಲೋಪಥಿ ವೈದ್ಯರ ಜೊತೆಗೆ ಆಯುರ್ವೇದ ವೈದ್ಯರ ನೇಮಕಾತಿಗೂ ಸರ್ಕಾರ ಚಿಂತಿಸಲಿ.

-ತಾ.ಸಿ.ತಿಮ್ಮಯ್ಯ, ಬೆಂಗಳೂರು

**

ವಂಶಾಡಳಿತದ ವಿರುದ್ಧ ಸೂಕ್ತ ಸಂದೇಶ

ಲೋಕಸಭಾ ಚುನಾವಣೆಯಲ್ಲಿ ತಮ್ಮದೇ ಮಾತೃಪಕ್ಷದ ಅಭ್ಯರ್ಥಿಗೆ ಸಡ್ಡು ಹೊಡೆದು, ವಂಶಾಡಳಿತದ ವಿರುದ್ಧ ತೋಳು ತಟ್ಟಿ ಸ್ಪರ್ಧಿಸಿದ್ದ ಕೆ.ಎಸ್‌.ಈಶ್ವರಪ್ಪ ಠೇವಣಿಯನ್ನೂ ಕಳೆದುಕೊಂಡಿದ್ದು ಅನಿರೀಕ್ಷಿತವೇನಲ್ಲ. ಚುನಾವಣೆಯಲ್ಲಿ ಅವರು ಸೋತರೂ ತಮ್ಮ ಸೈದ್ಧಾಂತಿಕ ನಿಲುವನ್ನು ಸ್ಪಷ್ಟಪಡಿಸಿ, ರಾಜ್ಯದಲ್ಲಿ ವಂಶಾಡಳಿತದ ಬಗ್ಗೆ ಹೈಕಮಾಂಡ್‌ಗೆ ಸಂದೇಶವೊಂದನ್ನು ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತರ ಪಕ್ಷಗಳಲ್ಲಿ ಹೀಗೆ ದಿಟ್ಟವಾಗಿ ಪ್ರಶ್ನಿಸುವವರು ಇಲ್ಲದಿರುವುದರಿಂದ ವಂಶಾಡಳಿತದ ಪ್ರಭಾವಕ್ಕೆ ಸಿಲುಕಿ ದಿನದಿಂದ ದಿನಕ್ಕೆ ಅವು ಕುಂದುತ್ತಿವೆ.

-ಸತ್ಯಬೋಧ, ಬೆಂಗಳೂರು

**

ಪೋಲಿಸರ ಕಾರ್ಯಶೈಲಿ ಅಭಿನಂದನಾರ್ಹ

ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯ ಕೊಲೆ ಪ್ರಕರಣವನ್ನು ಅತ್ಯಂತ ಯಶಸ್ವಿಯಾಗಿ  ಭೇಧಿಸಿರುವ ರಾಜ್ಯದ ಪೋಲಿಸರ ಕಾರ್ಯಶೈಲಿ ಅಭಿನಂದನಾರ್ಹವಾಗಿದೆ. ಅತ್ಯಂತ ಬರ್ಬರ ರೀತಿಯ ಕೊಲೆ ಮತ್ತು ಹತ್ಯೆ ಇದಾಗಿದ್ದು, ಪ್ರಕರಣದ ಎಲ್ಲಾ ಆರೋಪಿಗಳನ್ನು ಪೋಲಿಸರು ಅತ್ಯಂತ ತ್ವರಿತವಾಗಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿರುವುದು ಶ್ಲಾಘನೀಯ ವಿಚಾರ. ಕೆಲವು ಆರೋಪಿಗಳು ತಾವಾಗಿಯೇ ಪೋಲಿಸರಿಗೆ ಶರಣಾಗಿದ್ದಾರೆ.  ಈ ಪ್ರಕರಣದಲ್ಲಿ ಸಿಲುಕಿರುವ ನಟನನ್ನು ಬಚಾವ್ ಮಾಡಲು ಕೆಲವು ಪ್ರಭಾವಿ ವ್ಯಕ್ತಿಗಳು ನಡೆಸಿದ ಅವಿರತ ಪ್ರಯತ್ನ ವಿಫಲವಾಗಿದೆಯೆಂದು ಹೇಳಲಾಗಿದೆ.  ಅಂತಹ ಪ್ರಾಮಾಣಿಕತೆ ಮತ್ತು ಕರ್ತವ್ಯ ನಿಷ್ಠೆ ಮೆರೆದ ಪೋಲಿಸ್ ಅಧಿಕಾರಿಗಳಿಗೆ  ಅದರಲ್ಲೂ ವಿಶೇಷವಾಗಿ  ಪ್ರಕರಣದ ತನಿಖಾಧಾರಿಗೆ ಹಾಗೂ ಇತರ ಸಿಬ್ಬಂಧಿಗಳಿಗೆ ಮತ್ತೊಂದು ಬಾರಿ ಅಭಿನಂದನೆಗಳು.  ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದು ಪರಮ ಸತ್ಯವಾದ ಮಾತು.

–ಕೆ.ವಿ.ವಾಸು, ಮೈಸೂರು

**

ಪಕ್ಷದ ಕಚೇರಿಯಲ್ಲಿ ಸಭೆ ಸರಿಯೇ?

ವಿವಿಧ ಅಕಾಡೆಮಿಗಳು ಹಾಗೂ ನಿಗಮಗಳ ಅಧ್ಯಕ್ಷರ ಜೊತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಮಾಲೋಚನಾ ಸಭೆ ನಡೆಸಿರುವುದು ಸರಿಯೇ. ಅವರ ಸಾಂಸ್ಕೃತಿಕ ಕಾಳಜಿಯನ್ನು ಮೆಚ್ಚೋಣ. ಆದರೆ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಿಗಮ, ಮಂಡಳಿಗಳ ಅಧ್ಯಕ್ಷರ ಜೊತೆ ಸಾಂಸ್ಕೃತಿಕ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳ ಅಧ್ಯಕ್ಷರನ್ನೂ ಆಹ್ವಾನಿಸಿ ಸಭೆ ನಡೆಸಿರುವುದು ಸಾಂಸ್ಕೃತಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ರಾಜಕೀಯ ನೇಮಕಾತಿಗಳ ಮೂಲಕ ಅಧಿಕಾರ ಪಡೆದಿರುವ ನಿಗಮ, ಮಂಡಳಿ ಅಧ್ಯಕ್ಷರ ಜೊತೆ ಉಪಮುಖ್ಯಮಂತ್ರಿ ಸಮಾಲೋಚನೆ ಸರಿ ಇರಬಹುದು. ಆದರೆ ಅವರ ಜೊತೆ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳ ಅಧ್ಯಕ್ಷರನ್ನೂ ಕರೆದು ಒಟ್ಟಾಗಿ ಮಾತನಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ರೀತಿಯ ಬೆಳವಣಿಗೆ ಮುಂದಿನ ದಿನಗಳಲ್ಲಿ ಹೊಸ ಸಂಪ್ರದಾಯಕ್ಕೆ ಕಾರಣವಾಗಬಹುದು. ಏಕೆಂದರೆ, ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳು ಸ್ವಾಯತ್ತ ಸಂಸ್ಥೆಗಳಾಗಿ ತಮ್ಮ ಕೆಲಸಗಳನ್ನು ನಿರ್ವಹಿಸಬೇಕು ಎನ್ನುವ ಅಭಿಪ್ರಾಯ ಇದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಂಗಸಂಸ್ಥೆಗಳಾಗಿ ಇವು ಕೆಲಸ ಮಾಡಿದರೂ ಅವುಗಳ ಕ್ರಿಯಾಯೋಜನೆ ಹಾಗೂ ಅನುಷ್ಠಾನದಲ್ಲಿ ಸರ್ಕಾರ ಸಾಮಾನ್ಯವಾಗಿ ತನ್ನ ಮೂಗು ತೂರಿಸಲಾರದು ಎಂಬ ನಂಬಿಕೆ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳನ್ನು ನೇರವಾಗಿ ಪಕ್ಷಗಳೇ ನಿಯಂತ್ರಿಸುವ ಕಾರ್ಯಕ್ಕೆ ಮುಂದಾಗಿರುವುದು ಈ ಹಿಂದಿನ ಸರ್ಕಾರದ ಸಂದರ್ಭದಲ್ಲೂ ಅನುಭವಕ್ಕೆ ಬಂದಿದೆ. ಈ ಪರಂಪರೆ ಪ್ರಸ್ತುತ ಸರ್ಕಾರದಲ್ಲೂ ಮುಂದುವರಿಯುತ್ತಿರುವ ಬಗ್ಗೆ ಸಾಂಸ್ಕೃತಿಕ ರಂಗ ಕಳವಳ ವ್ಯಕ್ತಪಡಿಸುತ್ತಿದೆ. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯಲ್ಲೇ ಉಪಮುಖ್ಯಮಂತ್ರಿ ಸಭೆ ನಡೆಸಬಹುದಿತ್ತು. ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸಭೆಗೆ ನೂತನವಾಗಿ ನೇಮಕಗೊಂಡಿರುವ ಅಧ್ಯಕ್ಷರು ಹೋಗಿರುವುದು ಅಷ್ಟು ಸರಿಯಾದ ನಡೆಯಲ್ಲ. ಇನ್ನು ಮುಂದಾದರೂ ಈ ಬಗ್ಗೆ ಅಧಿಕಾರಸ್ಥರಾಗಲೀ ಅಧ್ಯಕ್ಷರಾಗಲೀ ಸ್ವಲ್ಪ ಆಲೋಚಿಸಿ ಹೆಜ್ಜೆ ಇಡುವಂತಾಗಲಿ. ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತತೆಗಾಗಿ ಬಹಳಷ್ಟು ಹೋರಾಟಗಳು ನಡೆಯುತ್ತಿದ್ದರೂ ಅವನ್ನೆಲ್ಲ ನಿರ್ಲಕ್ಷಿಸಿ ಸರ್ಕಾರ ಹಾಗೂ ಅಧಿಕಾರಿಗಳೇ ಎಲ್ಲವನ್ನೂ ನಿಯಂತ್ರಿಸುತ್ತಿರುವುದು ಈಗಾಗಲೇ ಅನೇಕ ಬಾರಿ ಚರ್ಚೆಗೆ ಬಂದಿದೆ. ಮುಂದಾದರೂ ನಮ್ಮ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳು ತಮ್ಮ ಸ್ವಾಯತ್ತತೆಯ ಪರಿಧಿಯೊಳಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಮುಂದಾಗುತ್ತವೆ ಎಂದು ಆಶಿಸಬಹುದೇ?

-ಶಶಿಧರ ಭಾರಿಘಾಟ್, ಬೆಂಗಳೂರು

**

ನೀಟು... ಘಾಟು!

ಎಷ್ಟೊಂದು
ಶಿಸ್ತು, ಕ್ರಮವಾಗಿ
ನಡೆಯುತ್ತಿತ್ತು
ಪರೀಕ್ಷೆ ‘ನೀಟ್’
ಈಗ ಅದಕ್ಕೂ
ಅಂಟಿಬಿಟ್ಟಿತಲ್ಲ
ಅಕ್ರಮಗಳ ಘಾಟು!

-ಮ.ಗು.ಬಸವಣ್ಣ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT