ಶುಕ್ರವಾರ, ಡಿಸೆಂಬರ್ 2, 2022
21 °C

ಪ್ರಜಾವಾಣಿ@75 | ನೋವಿಗೆ ಮಿಡಿಯುವ ಪ್ರಾಣಮಿತ್ರ ಪ್ರಜಾವಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜಾವಾಣಿ ಜಾತ್ಯಾತೀತ ಮನಸ್ಸನ್ನು, ನೋವಿಗೆ ಮಿಡಿಯುವ ಮಾನವೀಯತೆಯನ್ನು ಉಳಿಸಿಕೊಂಡಿದೆ. ಜನ ಸಾಮಾನ್ಯರಿಗೆ ಚೈತನ್ಯ ತುಂಬುವ ಆಶಾಕಿರಣದ ಪತ್ರಿಕೆಯಾಗಿದೆ. 1996 ರಿಂದ ಕಾರವಾರದಲ್ಲಿ ನೆಲಸಿದ ನಾನು,  ಅಂದಿನಿಂದ ಇಂದಿನವರೆಗೂ ಪ್ರಜಾವಾಣಿಯನ್ನು ಮನೆಗೆ ತರಿಸಿ ಓದುವುದು ಬದುಕಿನ ಭಾಗವಾಗಿದೆ. ಇದು ಮುಂದುವರಿಯಲಿದೆ . ನಾಡಿನ ಸಾಕ್ಷಿ ಪ್ರಜ್ಞೆ ಪ್ರಜಾವಾಣಿ ‌. ಸರ್ಕಾರದ ತಪ್ಪುಗಳನ್ನು, ಸಚಿವರ ಎಡವಟ್ಟುಗಳನ್ನು ಎತ್ತಿ ತೋರಿಸುವ ಧೈರ್ಯವನ್ನು ಪ್ರಜಾವಾಣಿ ಉಳಿಸಿಕೊಂಡಿದೆ.ಪ್ರತಿವಾರ ಒಂದೊಂದು ಸಮಸ್ಯೆಯ ಮೇಲೆ ಸಮಗ್ರವಾಗಿ ಬೆಳಕು ಚೆಲ್ಲುತ್ತಾ ಬಂದಿದೆ. ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಎಡವಟ್ಟು ಗಳನ್ನು ಬಿಚ್ಚಿಟ್ಟಿತಲ್ಲದೆ ,ಪರ್ಯಾಯವನ್ನು ಸಹ ನಾಡಿನ ಪ್ರಾಜ್ಞರಿಂದ‌ ಬರೆಯಿಸಿತು. ಪತ್ರಿಕೋದ್ಯಮದ ಎಥಿಕ್ಸ ಉಳಿಸಿಕೊಂಡಿರುವ ಕರ್ನಾಟಕದ ಏಕೈಕ ಪತ್ರಿಕೆ ಪ್ರಜಾವಾಣಿ.

    - ನಾಗರಾಜ್ ಹರಪನಹಳ್ಳಿ. ಕಾರವಾರ.

---

ನಾನು ಹತ್ತು ವರುಷವಿದ್ದಾಗಲೇ ಶಾಲೆ ಬಿಟ್ಟ ಕಾರಣ, ನನ್ನ ಅಪ್ಪಯ್ಯ ಪೇಪರ್ ಓದಲು ಒತ್ತಾಸೆ ನೀಡುತ್ತಿದ್ದರು. ಪೇಪರ್ ಓಡುವುದರಿಂದ ಅಕ್ಷರ ಜ್ನ್ಯಾನವಿರುತ್ತದೆ ಎಂಬುದು ಅವರ ನಂಬಿಕೆ. ಆಗ, 1959ನೇ ಇಸವಿಯಲ್ಲಿ, ನಮ್ಮ ಹೋಟೆಲ್ಗೆ ಪ್ರಜಾವಾಣಿ ಬರುತಿತ್ತು. ನನ್ನ ಕೆಲಸ ಮುಗಿಸಿ ಪೇಪರ್ ಓದುತ್ತಿದ್ದೆ. ಪ್ರಜಾವಾಣಿ ಓದು ಮುಗಿಸದೆ ಎಂದೂ ಮಲಗಿಲ್ಲ. ಸುಭಾಷಿತ ಹಾಗು ವಾಚಕರ ವಾಣಿ ನನಗೆ ಪ್ರಿಯವಾದವು. ನನ್ನ ಭಾವನವರು, ಪ್ರಜಾವಾಣಿ ಓದುವ ಕ್ರಮ ತಿಳಿ ಹೇಳಿದರು. ಚಿಕ್ಕ ವಯಸ್ಸಿನ ಹುಡುಗಿಯಾದ ನನಗೆ ಇದರಿಂದ ಸುತ್ತ ಮುತ್ತಲಿನ ಆಗು ಹೋಗುಗಳ ಬಗ್ಗೆ ತಿಳಿಯಲಾರಂಭಿಸಿತು. ಈ ಜ್ಯ್ನಾನದ ಧಾರೆಯನ್ನು, ನನ್ನ ಮಗಳಿಗೆ ಶಾಲೆಯಲ್ಲಿ ಪ್ರಜಾವಾಣಿ ಏರ್ಪಡಿಸಿದ ರಸ ಪ್ರಶ್ನೆ ಕಾರ್ಯಕ್ರಮಕ್ಕೆ ಅನುಕೂಲವಾಗುವಂತೆ ನೀಡಿದೆ. ಅವಳಿಗೆ ಮೊದಲ ಬಹುಮಾನ ದೊರಕಿದಾಗ ಬಹಳ ಸಂತೋಷವಾಯಿತು. ಇಂದಿಗೂ ನನ್ನ ದೈನಂದಿನ ಕಾರ್ಯಕ್ರಮ ಮುಗಿದ ನಂತರ ಪ್ರಜಾವಾಣಿ ಹಿಡಿದು ಕೂಡುತ್ತೇನೆ. ಲೋಕದ ಆಗು ಹೋಗುಗಳನ್ನು ತಿಳಿದರೆ, ಸಮಾಜದಲ್ಲಿ ಬದುಕಲು ಧೈರ್ಯ, ಜನರೊಡನೆ ಬೆರೆಯುವ ರೀತಿ ಸಾಧ್ಯವಾಗುತ್ತದೆ. ಈ ಆತ್ಮಸ್ಥೈರ್ಯ ಹಾಗು ವಿಶ್ವಾಸ ನೀಡಿದ್ದಕ್ಕೆ ಪ್ರಜಾವಾಣಿಗೆ ನನ್ನ ಹೃತ್ಪೂರ್ವಕ ವಂದನೆಗಳು.

–ಪಲ್ಲವಿ ಶ್ರೀನಿವಾಸ್

––

ಸುಮಾರು 35 ವರ್ಷ  ಗಳಿಂದ ನನ್ನ ನೆಚ್ಚಿನ ಪ್ರಜಾವಾಣಿ ಪತ್ರಿಕೆ ಓದುತ್ತಿರುವೆ. ಕನ್ನಡ ಸುಲಲಿತವಾಗಿ ಮಾತಾಡಲು ಹಾಗೂ ಬರೆಯಲು ಕಲಿತದ್ದು ಪ್ರಜಾವಾಣಿ ಇಂದ. ಬೆಳಿಗ್ಗೆ ಕಾಫಿ ಜೊತೆ ಪ್ರಜಾವಾಣಿ ಇಲ್ಲದಿದ್ದರೆ ಏನೋ ಕಿರಿಕಿರಿ.

ದೇಶದ ಹಾಗೂ ಪ್ರಪಂಚದಲ್ಲಿ ನಡೆಯುವ ವಿದ್ಯಾಮನಗಳನ್ನು ಅರಿಯಲು ಪ್ರಜಾವಾಣಿ ಸಹಕಾರಿ. ಸಂಪಾದಕೀಯ ಬಹಳ ಚೆನ್ನಾಗಿದೆ

ಅಮೃತ ಮಹೋತ್ಸವದ ಹೊಸ್ತಿಲಲ್ಲಿ ಇರುವ ನನ್ನ ಪತ್ರಿಕೆಗೆ ಅಭಿನಂದನೆಗಳು

–ಶಂಕರಮಣಿ. ಆರ್ 

––

ಸುಮಾರು 1981 ಇಸ್ವಿಯಲ್ಲಿ ನಾನು ಮುದ್ದೇಬಿಹಾಳ VBC ಹೈಸ್ಕೂಲನಲ್ಲಿ 8 ನೇಯ ತರಗತಿ ಓದುವಾಗ,ನಾನು ಹಾಸ್ಟೇಲ್ ದಲ್ಲಿ ಇದ್ದೆ.ದಿನ ಪತ್ರಿಕೆ ಓದುವದಾದರೆ ಪ್ರಜಾವಾಣಿ ಓದಿರಿ,ಮತ್ತು ತಪ್ಪದೆ ಸಂಪಾದಕೀಯ ಓದಿರಿ ಎಂದು ಸುಪರ್ಡೆಂಟರಾದ ಹಾಲವರ ಸರ್ ಹೇಳಿದರು.ನಾನು ಶುಕ್ರವಾರ ಮಾತ್ರ ವಾಚನಾಲಯದಲ್ಲಿ ಓದುತ್ತಿದ್ದೆ.ನಂತರ PUC  ನಂತರ ದಿನಾಲು ಪತ್ರಿಕೆ  ಓದುವ ಹವ್ಯಾಸ ಆಯಿತು.ಈಗಲೂ ಸಹ ಸ್ವಂತಿಕೆ  ಉಳಿಸಿಕೊಂಡಿರುವದು ಪ್ರಜಾವಾಣಿ ಮಾತ್ರ.ಇಂದಿನ ಕಾಲ ಗಟ್ಟದಲ್ಲಿ ಕಲುಷಿತ ವಾಗದ ಪತ್ರಿಕೆಯನ್ನು ಓದುವದು ನನಗೆ ಹೆಮ್ಮೆಯ ವಿಷಯ.ಟೀವಿ ಮಾಧ್ಯಮದಲ್ಲಿಯ ವಿವಾದಾತ್ಮಕ ವಿಷಯಗಳನ್ನು ನೋಡಿದ ನಂತರ ಪ್ರಜಾವಾಣಿ  ಓದಿ ಕಾತ್ರಿ ಪಡಿಸಿಕೊಳ್ಳುತ್ತೇನೆ.ಇದೆ ರೀತಿ ಮುಂದಿನ ಪೀಳಿಗೆಗೂಸಹ ಮುಂದುವರೆಯಲಿ ಅನ್ನುವ ಆಸೆ

–ನಾರಾಯಣಪ್ಪ ಕುರಬರ

–––

ಪ್ರಜಾವಾಣಿ ಪತ್ರಿಕೆಯನ್ನು ಪ್ರತಿ ದಿನವೂ ತಪ್ಪದೇ ಓದುತ್ತೇನೆ. ಕಳೆದ 15 ವರ್ಷಗಳಿಂದ ನಾನು ಗಮನಿಸುತ್ತಾ ಬಂದ ಹಾಗೆ ಪ್ರತಿ ದಿನವೂ ಹೊಸತಾದ ವಿಷಯಗಳನ್ನು ಪ್ರಜಾವಾಣಿ ಹೊತ್ತು ತರುತ್ತದೆ.

ಚಿಕ್ಕವನು ಇರಬೇಕಾದರೆ ನನ್ನ ಅಪ್ಪನಿಂದ ಪತ್ರಿಕೆ ಓದುವ ಹುಚ್ಚು ಬಳುವಳಿಯಾಗಿ ಇಲ್ಲಿಯವರೆಗೂ ಬಂದಿದೆ. ಅಂದಿನಿಂದ ಪ್ರಜಾವಾಣಿ ನನ್ನ ನಾಡಿ ಮಿಡಿತದಂತೆ ಸದಾ ಜೊತೆಗಾರ. ಸಾಹಿತ್ಯಿಕವಾಗಿ, ಸಾಮಾಜಿಕವಾಗಿ ಗುಣಮಟ್ಟ ಕಾಪಾಡಿಕೊಂಡು ಬಂದಿರುವುದು ಪತ್ರಿಕೆಯು 75 ನೇ ವರ್ಷಕ್ಕೆ ಕಾಲಿಟ್ಟಿರುವುದನ್ನು ನೋಡಿದರೆ ಗೊತ್ತಾಗುತ್ತದೆ. ಎಂದೆಂದಿಗೂ ಕನ್ನಡಕ್ಕೆ ತನ್ನದೇ ರೀತಿಯಲ್ಲಿ ಓದುಗರ ಮನಸ್ಸಿನಲ್ಲಿ ನೆಲೆ ನಿಂತ ಏಕೈಕ ಪತ್ರಿಕೆ ಅದು ಪ್ರಜಾವಾಣಿ.

ಓದುಗರ ಬೌದ್ಧಿಕ ಮಟ್ಟವನ್ನು ವಿಸ್ತರಿಸುವಲ್ಲಿ ಪ್ರಜಾವಾಣಿ ಪತ್ರಿಕೆಯ ಕಾರ್ಯ ಶ್ಲಾಘನೀಯ..

ಪ್ರಜಾವಾಣಿ ಬಳಗಕ್ಕೆ ವಂದನೆಗಳು.  

ಧ್ರುವ ಪಾಟೀಲ್, ಕನ್ನಡ ವಿಶ್ವವಿದ್ಯಾಲಯ, ಹಂಪಿ

––

ಸಾಹಿತ್ಯ ಕೃಷಿ ಆರಂಭವಾಗಿದ್ದೇ ಪ್ರಜಾವಾಣಿಯಿಂದ

 

ನನಗೂ.., ಪ್ರಜಾವಾಣಿಗೂ ಎರಡು ದಶಕಗಳ ನಂಟು. ಮೊದಲು ಕೇವಲ ಪತ್ರಿಕಾ ಓದುಗನಾಗಿದ್ದ ನನ್ನನ್ನು ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಹೆಚ್ ಡುಂಡಿರಾಜ್ ರ ಹನಿಗವನಗಳು ಆಕರ್ಷಿಸಿದವು. ತದನಂತರ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿದ್ದ ಶಿಶು ಪ್ರಾಸಗಳು,ಮಕ್ಕಳ ಕತೆಗಳು,ಕವನಗಳು,ಲೇಖನಗಳು ಸಾಹಿತ್ಯಾಸಕ್ತಿಯನ್ನು ಇಮ್ಮಡಿಗೊಳಿಸಿದವು. ಪತ್ರಿಕೆಯೂ ಸಹ ಆಗಾಗ್ಗೆ ಸಹೃದಯ ಓದುಗರಿಂದ ಅಭಿಪ್ರಾಯ ನಿರೀಕ್ಷಿಸುತಿತ್ತು.ಎಲ್ಲಾ ಓದುಗರಂತೆ ನಾನು ಸಹ ಬರೆದು ಅವರು ನೀಡಿದ್ದ ವಿಳಾಸಕ್ಕೆ ಪೋಸ್ಟ್ ಮಾಡುತ್ತಿದ್ದ ನನ್ನನ್ನು ವಾಚಕರ ವಾಣಿಯಲ್ಲಿ ಪ್ರಕಟಗೊಳ್ಳುತ್ತಿದ್ದ ಪುಟ್ಟ ಕವನಗಳು ಆಕರ್ಷಿಸಿದವು. ಅವು ಸರಳರೂಪದಲ್ಲಿ ಇದ್ದದ್ದರಿಂದ ನಾನು ಸಹ ಅದೇ ರೀತಿಯಲ್ಲಿ ಪ್ರಯತ್ನಿಸಿ ಪತ್ರಿಕೆಗೆ ಕಳುಹಿಸಿ ಕೊಟ್ಟೆ. ಪತ್ರಿಕೆಯಲ್ಲಿ ಮೊದಲಿಗೆ ಪ್ರಕಟವಾದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ.ಅನೇಕರಿಗೆ ಕರೆ ಮಾಡಿ ತಿಳಿಸಿದೆ. ಅದರ ತುಣುಕನ್ನು ತುಂಡು ಮಾಡಿ ಜೋಪಾನವಾಗಿ ಇಟ್ಟುಕೊಂಡಿರುವೆ. ಬರೆದು ಕಳುಹಿಸಿದ ಎಲ್ಲವೂ ಪ್ರಕಟಗೊಳ್ಳದಿದ್ದರೂ ವಿಶೇಷವಾಗಿ ರುವ ಕೆಲವು ಹನಿಗವಿತೆಗಳು ಪ್ರಕಟಗೊಂಡಿವೆ. ಪ್ರತಿನಿತ್ಯ ಒಂದು ಲೇಖನವನ್ನಾದರು ಓದುವುದು ಅಭ್ಯಾಸವಾಗಿದೆ. ಏಳನೇ ತರಗತಿ ಓದುತ್ತಿರುವ ಮಗಳೂ ಸಹ ಓದಲು ಹಾತೊರೆಯುತ್ತಾಳೆ.ಪ್ರತಿನಿತ್ಯ ಸುದ್ದಿಯ ಹಣೆಬರಹವನ್ನು ಓದುತ್ತಾಳೆ. ಮೊದ ಮೊದಲು ತೊದಲಿಸಿಕೊಂಡು ಓದುತ್ತಿದ್ದವಳು ಸರಾಗವಾಗಿ ಓದುತ್ತಾಳೆ. ಹೀಗೆ ನಮ್ಮ ಮನೆಯ ಜ್ಞಾನದ ಸಂಗಾತಿಯಾಗಿದೆ.

ಸಮುದ್ರವಳ್ಳಿ ವಾಸು, ಹಾಸನ

–––

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು