ಸೋಮವಾರ, ಸೆಪ್ಟೆಂಬರ್ 27, 2021
25 °C

ವಾಚಕರ ವಾಣಿ | ಅಪೌಷ್ಟಿಕತೆಯ ಪ್ರಾದೇಶಿಕ ಆಯಾಮ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಅಪೌಷ್ಟಿಕತೆಯನ್ನು ‘ಮರೆಮಾಚಿದ ಹಸಿವು’ ಎನ್ನುತ್ತಾರೆ ತಜ್ಞರು. ರಾಜ್ಯದ ಮಕ್ಕಳು ಮತ್ತು ಮಹಿಳೆಯರಲ್ಲಿ ರಕ್ತಹೀನತೆಯು (ಅನೀಮಿಯಾ) 2015- 16ರಿಂದ 2019- 20ರ ಅವಧಿಯಲ್ಲಿ ಅಧಿಕಗೊಂಡಿರುವುದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5ರಲ್ಲಿ ಬಹಿರಂಗವಾಗಿದೆ (ಪ್ರ.ವಾ., ಆ. 15). ಕಲಬುರ್ಗಿ ವಿಭಾಗದ ಆರು ಜಿಲ್ಲೆಗಳನ್ನು 2019ರಲ್ಲಿ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಲಾಗಿದೆ. ಅಂದು ಮುಖ್ಯಮಂತ್ರಿ ನೀಡಿದ್ದ ಒಂದೂ ಭರವಸೆ ಈಡೇರಿಲ್ಲ. ಅಲ್ಲಿ ಮಕ್ಕಳ ಮತ್ತು ಮಹಿಳೆಯರ ಕಲ್ಯಾಣ ಸ್ಥಿತಿಯು ಚಿಂತಾಜನಕವಾಗಿದೆ.

ಅಪೌಷ್ಟಿಕತೆಯನ್ನು ಪ್ರಾದೇಶಿಕ ಚೌಕಟ್ಟಿನಲ್ಲಿ ಪರಿಶೀಲಿಸುವ ಅಗತ್ಯವಿದೆ. ಉದಾ: 6-59 ತಿಂಗಳ ವಯೋಮಾನದ ರಾಜ್ಯದ ಒಟ್ಟು ಮಕ್ಕಳಲ್ಲಿ ಅನೀಮಿಯಾ ಎದುರಿಸುತ್ತಿರುವ ಮಕ್ಕಳ ಪ್ರಮಾಣ 2015- 16ರಲ್ಲಿ ಶೇ 60.9ರಷ್ಟಿದ್ದರೆ 2019- 20ರಲ್ಲಿ ಇದು ಶೇ 65.5ಕ್ಕೇರಿದೆ. ಕಲ್ಯಾಣ ಕರ್ನಾಟಕದ ಕೊಪ್ಪಳ, ಕಲಬುರ್ಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಇದರ ಪ್ರಮಾಣ ಶೇ 70ಕ್ಕಿಂತ ಅಧಿಕವಾಗಿದೆ.

ಮಹಿಳೆಯರಲ್ಲಿನ ಅನೀಮಿಯಾ 2015-16ರಲ್ಲಿ ಶೇ 44.8ರಷ್ಟಿದ್ದರೆ, 2019- 20ರಲ್ಲಿ ಇದು ಶೇ 47.8ಕ್ಕೇರಿದೆ. ರಾಜ್ಯದಲ್ಲಿನ 30 ಜಿಲ್ಲೆಗಳ ಪೈಕಿ ಅನೀಮಿಯಾ ಎದುರಿಸುತ್ತಿರುವ ಮಹಿಳೆಯರ ಪ್ರಮಾಣವು ಕಲ್ಯಾಣ ಕರ್ನಾಟಕದ 5 ಜಿಲ್ಲೆಗಳಲ್ಲಿ ಶೇ 55ಕ್ಕಿಂತ ಅಧಿಕವಾಗಿದೆ. ಪ್ರಾದೇಶಿಕ ಅಸಮಾನತೆ ಬಗ್ಗೆ ನಮ್ಮ ಸರ್ಕಾರ ನಿರ್ಲಕ್ಷ್ಯ ತಳೆದಂತೆ ಕಾಣುತ್ತಿದೆ. ಅಪೌಷ್ಟಿಕತೆಗೂ ಮಕ್ಕಳ ಶೈಕ್ಷಣಿಕ ಸಾಧನೆಗೂ ಮತ್ತು ಇವೆರಡಕ್ಕೂ ಹಾಗೂ ಅಭಿವೃದ್ಧಿಗೂ ನಡುವೆ ಸಂಬಂಧವಿದೆ. ಈ ದುಃಸ್ಥಿತಿ ಬಗ್ಗೆ ಸರ್ಕಾರ ವಿಶೇಷ ಗಮನ ನೀಡಬೇಕಾದ ಅಗತ್ಯವಿದೆ.

 - ಟಿ.ಆರ್.ಚಂದ್ರಶೇಖರ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.