ವೃದ್ಧರ ಆರೈಕೆ ಬಗ್ಗೆ ಡಾ. ವಿನಯ ಶ್ರೀನಿವಾಸ್ ಚೆನ್ನಾಗಿ ವಿವರಿಸಿದ್ದಾರೆ (ಸಂಗತ, ಅ. 4). ಯುವಕರು ಹೊರಗಿನ ವೃದ್ಧರ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಎಂಬುದನ್ನು ವಿವರಿಸಿದ್ದಾರೆ. ಆದರೆ ನಿಜವಾದ ಸಮಸ್ಯೆ ಇರುವುದು ಯುವಕರು ಮನೆಯೊಳಗಿನ ಹಿರಿಯರನ್ನು ನೋಡಿಕೊಳ್ಳುವ ರೀತಿಯಲ್ಲಿ!
ಇಂದು ಮದುವೆಯಾಗಬೇಕಾದ ಕನ್ಯೆಯರು ಮೊದಲು ಕೇಳುವುದು, ತಾವು ಮದುವೆಯಾಗಿ ಹೋಗುವ ಮನೆಯಲ್ಲಿ ‘ರಾಹು, ಕೇತುಗಳು (ಅತ್ತೆ, ಮಾವ) ಇದ್ದಾರಾ?’ ಅಂತ. ಹಾಗಾದರೆ ಅತ್ತೆ ಮಾವ ಇಲ್ಲದೇ ಮಗ ಬರುವುದು ಎಲ್ಲಿಂದ?! ಮಕ್ಕಳನ್ನು ತಂದೆ ತಾಯಿ ಚಿಕ್ಕ ವಯಸ್ಸಿನಿಂದಲೂ ಕಷ್ಟಪಟ್ಟು ಬೆಳೆಸಿರುತ್ತಾರೆ. ಆದರೆ ಮಕ್ಕಳು ದೊಡ್ಡವರಾದ ಮೇಲೆ ಅವರ ಆಶಯಕ್ಕೆ ಎಳ್ಳುನೀರು ಬಿಟ್ಟು ಅವರನ್ನು ಎಷ್ಟು ಬೇಕೋ ಅಷ್ಟು ಹಿಂಸಿಸಲು ಶುರು ಮಾಡುತ್ತಾರೆ. ಗಂಡು ಮಕ್ಕಳು ಮದುವೆಯಾದ ಮೇಲಂತೂ ಈ ಹಿಂಸೆ ತಾರಕಾವಸ್ಥೆಗೆ ಏರಿಬಿಡುತ್ತದೆ. ಅವರಿಗೆ ಹೊಡೆತ ಬಡಿತ ಎಲ್ಲಾ ಶುರುವಾಗಿ ಬಿಡುತ್ತದೆ. ಆಗ ಎಷ್ಟೋ ವೃದ್ಧರು ‘ಮಕ್ಕಳಿಲ್ಲದಿರುವವರೇ ಪುಣ್ಯಾತ್ಮರಪ್ಪಾ’ ಅಂತ ಹೇಳುತ್ತಾ ಒದ್ದಾಡುವುದನ್ನು ನಮ್ಮ ಹಳ್ಳಿಗಳಲ್ಲಿ ಹೆಚ್ಚಾಗಿ ಕಾಣುತ್ತೇವೆ. ವಯಸ್ಸಾದಂತೆ ಮನುಷ್ಯ ಮಗುವಿನಂತಾಗುತ್ತಾನೆ ಎಂದು ತಿಳಿದವರು ಹೇಳುತ್ತಾರೆ. ನಾವು ಚಿಕ್ಕವರಿದ್ದಾಗ ನಮ್ಮ ಎಲ್ಲ ಕುಚೇಷ್ಟೆಗಳನ್ನೂ ಸಹಿಸಿಕೊಂಡು ನಮ್ಮನ್ನು ಪಾಲನೆ ಪೋಷಣೆ ಮಾಡಿರುವ ನಮ್ಮ ತಂದೆ ತಾಯಿ ವಯಸ್ಸಾಗಿ ಮಕ್ಕಳಂತಾಗಿರುವಾಗ ಅವರ ವಯೋಸಹಜವಾದ ವರ್ತನೆಗಳನ್ನು ಸಹಿಸಿಕೊಳ್ಳಲು ನಾವು ಸಿದ್ಧರಿಲ್ಲ. ಹಾಗಿದ್ದಮೇಲೆ ನಮ್ಮದೆಂಥ ಮಾನವೀಯತೆ? ಅವರನ್ನು ಇಳಿವಯಸ್ಸಿನಲ್ಲಿ ಹೊರೆ ಎಂದು ಭಾವಿಸಿ ವೃದ್ಧಾಶ್ರಮಗಳಿಗೆ ಅಟ್ಟುತ್ತಿರುವ ನಾವು ನಿಜವಾಗಿಯೂ ಮಾನವರೇ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ.
ಚಾವಲ್ಮನೆ ಸುರೇಶ್ ನಾಯಕ್,ಹಾಲ್ಮತ್ತೂರು, ಕೊಪ್ಪ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.