ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 18 ಜೂನ್ 2024, 23:30 IST
Last Updated 18 ಜೂನ್ 2024, 23:30 IST
ಅಕ್ಷರ ಗಾತ್ರ

ಮುಖಂಡರ ಪಾತ್ರ ಸೀಮಿತವಾಗಿರಲಿ

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು ಭಾಗಿಯಾಗಿದ್ದರ ಬಗ್ಗೆ ಶಶಿಧರ ಭಾರಿಘಾಟ್ ಅವರ ಪತ್ರ ಪ್ರಕಟವಾದ ದಿನವೇ (ಪ್ರ.ವಾ., ಜೂನ್ 17) ‘ಕಾಂಗ್ರೆಸ್ ಪಕ್ಷವನ್ನು ಸರಿದಾರಿಗೆ ತರುವ ಜವಾಬ್ದಾರಿ ನಮ್ಮಂತಹವರ ಮೇಲೆ ಇದೆ’ ಎಂಬ ಎಲ್.ಎನ್.ಮುಕುಂದರಾಜ್ ಅವರ ಹೇಳಿಕೆಯನ್ನು ಓದಿ ಬೇಸರವಾಯಿತು. ಹಿಂದೆ ರಂಗಾಯಣ, ನಾಟಕ ಅಕಾಡೆಮಿ ಅಧ್ಯಕ್ಷರ ವಿಷಯದಲ್ಲಿ ಬಂದ ಟೀಕೆಗಳು ನೆನಪಾದವು. ಚಲನಚಿತ್ರ ಸೇರಿದಂತೆ ವಿವಿಧ ಅಕಾಡೆಮಿಗಳಿಗೆ ನೇಮಕ‌ ಆದಾಗಲೇ ವ್ಯಕ್ತಿಗಳ ರಾಜಕೀಯ ಸಂಬಂಧ, ಒಲವುಗಳ ಬಗ್ಗೆ ಚರ್ಚೆ ಆಗುತ್ತಾ ಬಂದಿದೆ.

ವೈಯಕ್ತಿಕ ಮಟ್ಟದಲ್ಲಿ ಏನು ಮಾಡಬೇಕು ಎಂಬುದು ಅವರವರ ವಿವೇಚನೆಗೆ ಬಿಟ್ಟಿದ್ದು. ಆದರೆ ಅಕಾಡೆಮಿ ಸದಸ್ಯ ಅಥವಾ ಅಧ್ಯಕ್ಷರಾಗಿ ಪಕ್ಷಗಳಿಂದ ಅಂತರ ಕಾಯ್ದುಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ನನಗೆ ‘ಆ್ಯನ್‌ ಹೂಸ್‌ ಸೈಡ್‌ ಆರ್‌ ಯೂ, ಮಾಸ್ಟರ್ಸ್‌ ಆಫ್‌ ಕಲ್ಚರ್‌?’ ಪುಸ್ತಕದ ನೆನಪಾಗುತ್ತಿದೆ. ಕಮ್ಯುನಿಸ್ಟ್, ಸಂಘ ಪರಿವಾರ ಅಲ್ಲದೆ ಬೇರೆಲ್ಲ ಸಂಘಟನೆಗಳ ನಂಟು ಇರುವವರಿಗೂ ಇದು ಅನ್ವಯಿಸುತ್ತದೆ. ಆರ್ಥಿಕ ವಿಷಯದಲ್ಲಿ ಸರ್ಕಾರಿ ಅಧಿಕಾರಿಗಳ ‘ನಿಯಂತ್ರಣ’ ಇರಬೇಕಾಗುತ್ತದೆ. ಸರ್ಕಾರ ನಡೆಸುವ ಮುಖಂಡರ ಪಾತ್ರ ಒಟ್ಟಾರೆ ಪ್ರಾಶಸ್ತ್ಯಗಳನ್ನು ಸೂಚಿಸುವ ಮಟ್ಟಿಗೆ ಸೀಮಿತವಾಗಿರಬೇಕು. ಉಳಿದಂತೆ ನಡೆ, ನುಡಿಗಳಲ್ಲಿ ಶಿಸ್ತು (ಅನುಶಾಸನ) ಪಾಲಿಸುವುದು ಸೂಕ್ತ, ಅಗತ್ಯ.

-ಎಚ್.ಎಸ್.ಮಂಜುನಾಥ, ಗೌರಿಬಿದನೂರು 

**

ಗ್ಯಾರಂಟಿಗಳ ಬಗ್ಗೆ ತಾತ್ಸಾರವೇಕೆ?

‘ಯಾವುದೇ ವಿವೇಚನೆ, ಲೆಕ್ಕಾಚಾರ ಇಲ್ಲದೇ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ನಂತರ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಸಿಗದ ಹಿನ್ನೆಲೆಯಲ್ಲಿ ಬೇಸತ್ತಿರುವ ಕಾಂಗ್ರೆಸ್ಸಿನ 40 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ’ ಎಂದು ಸಂಸದ ಗೋವಿಂದ ಕಾರಜೋಳ ಅವರು ಹೇಳಿರುವುದು (ಪ್ರ.ವಾ., ಜೂನ್ 18) ವರದಿಯಾಗಿದೆ. ಕಾಂಗ್ರೆಸ್ಸಿನ ಪಂಚ ಗ್ಯಾರಂಟಿಗಳಲ್ಲಿ ಒಂದಿಲ್ಲೊಂದು ಗ್ಯಾರಂಟಿ ಮುಟ್ಟದ ಮನೆ ಬಹುಶಃ ಕರ್ನಾಟಕದಲ್ಲಿ ಇರಲಿಕ್ಕಿಲ್ಲ. ಎಲ್ಲರೂ ಲಾಭಾರ್ಥಿಗಳೇ. ಈ ಆರ್ಥಿಕ ವಿಕೇಂದ್ರೀಕರಣದಿಂದ ಬಹುಜನರ ಸಾಮಾಜಿಕ ಸಮಾನತೆ ಹಾಗೂ ಬೆಳವಣಿಗೆಗೊಂದು ಚಾಲನೆ ಸಿಕ್ಕಂತಾಗಿದೆ. ಬಹುಜನರ ಕೈಯಲ್ಲಿ ಎರಡು ಕಾಸು ಆಡುವಂತಾಗಿದೆ. ಅನೇಕ ಆರ್ಥಿಕ ತಜ್ಞರ ಮತವೂ ಇಂತಹುದೇ ಆಶಯದ್ದಾಗಿರುವುದನ್ನು ಮರೆಯಬಾರದು.

ಇಷ್ಟೊಂದು ಗಾಢವಾಗಿ ಪ್ರತಿಯೊಬ್ಬರ ಜೀವನವನ್ನೂ ಪ್ರಭಾವಿಸಿರುವ ಈ ಗ್ಯಾರಂಟಿಗಳ ಬಗ್ಗೆ ಆಡಳಿತ ಪಕ್ಷದ ಶಾಸಕರಾಗಲೀ ಮಂತ್ರಿಗಳಾಗಲೀ ಆತ್ಮವಿಶ್ವಾಸದಿಂದ ಗಟ್ಟಿಯಾಗಿ ಸಮರ್ಥಿಸಿಕೊಂಡಿದ್ದೇ ಕಾಣಲಿಲ್ಲ. ಈ ಗ್ಯಾರಂಟಿಗಳ ಭರವಸೆಯ ಮೇಲೇ ಗೆದ್ದು ಬಂದವರು ಇವರು. ಅದರ ಬಗ್ಗೆ ಇಷ್ಟೊಂದು ತಾತ್ಸಾರವೇ?

-ಶ್ರೀಧರ ಗಾರೆಮನೆ, ಬೆಂಗಳೂರು

**

ಕಂದಾಯ: ಬೇಕು ಬದಲಾವಣೆ

ರೈತರು ತಮ್ಮ ಜಮೀನುಗಳ ಪೋಡಿ ಮತ್ತು ಖಾತೆ ಮಾಡಿಸಿಕೊಳ್ಳಲು ಕಂದಾಯ ಇಲಾಖೆಗೆ ವರ್ಷಗಟ್ಟಲೆ ಅಲೆಯುವುದನ್ನು ತಪ್ಪಿಸಲು ಹೊಸ ರೂಪುರೇಷೆಗಳನ್ನು ಜಾರಿಗೆ ತರಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿರುವುದು ವರದಿಯಾಗಿದೆ. ಇದು ಸ್ವಾಗತಾರ್ಹ. ರೈತರ ಅಲೆದಾಟದ ಕುರಿತಾಗಿ ‘ತಬರನ ಕಥೆ’ಯಂತೆ ಇರುವ ಸ್ವಂತ ಅನುಭವವೊಂದನ್ನು ಹೇಳುತ್ತೇನೆ.

ನಮ್ಮ ತಂದೆ 1974ರಲ್ಲಿ 15 ಗುಂಟೆ ಜಮೀನನ್ನು ಕ್ರಯಕ್ಕೆ ಪಡೆದಿದ್ದು, ಕೆ.ಆರ್.ಪೇಟೆ ತಾಲ್ಲೂಕಿನ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಆಗಿದೆ. ಅವರ ನಿಧನಾನಂತರ ನಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು 12 ವರ್ಷಗಳ ಹಿಂದೆ ಕಂದಾಯ ಇಲಾಖೆಗೆ ಹೋದಾಗ, ‘ನೀವು ಪಾಂಡವಪುರ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿ, ಅವರಿಂದ ಆದೇಶ ತರಬೇಕು’ ಎಂದರು. ಎ.ಸಿ. ನ್ಯಾಯಾಲಯ ಕೂಲಂಕಷವಾಗಿ ಪರಿಶೀಲಿಸಿ, ಕ್ರಯಪತ್ರದಂತೆ ಖಾತೆ ಮಾಡಲು ಕೆ.ಆರ್.ಪೇಟೆ ತಾಲ್ಲೂಕು ಕಚೇರಿಗೆ ಆದೇಶ ನೀಡಿತು. ಈ ಆದೇಶ ತಿಳಿಯುತ್ತಿದ್ದಂತೆ, ನಮಗೆ ಕ್ರಯಕ್ಕೆ ಕೊಟ್ಟಿದ್ದವರೇ ಅವರ ಮೊಮ್ಮಕ್ಕಳ ಹೆಸರಿಗೆ ಕಾನೂನಿಗೆ ವಿರುದ್ಧವಾಗಿ ದಾನಪತ್ರ ಬರೆದಿದ್ದಾರೆ.

ಈ ದಾನಪತ್ರವನ್ನು ರದ್ದು ಮಾಡಲು ಮತ್ತೆ ಪಾಂಡವಪುರ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿ, ದಾನಪತ್ರ ಬರೆದವರು, ಅವರ ಮೊಮ್ಮಕ್ಕಳು ಮತ್ತು ಇದಕ್ಕೆ ಸಹಕರಿಸಿದವರ ಮೇಲೆ ಕೆ.ಆರ್.ಪೇಟೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದೇವೆ. ಸುಮಾರು 12 ವರ್ಷಗಳಿಂದ ಇದೊಂದು ಕೆಲಸಕ್ಕಾಗಿ ಅಲೆದಿದ್ದೇನೆ. ಇದರಿಂದ ಒಂದು ರೀತಿಯಲ್ಲಿ ಹಿಮಾಲಯ ಪರ್ವತವನ್ನೇ ಹತ್ತಿದ ಅನುಭವವಾಗಿದೆ. ಕಂದಾಯ ಸಚಿವರು ತಮ್ಮ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಮೂಲಕ ಹೊಸ ಚರಿತ್ರೆಯನ್ನು ಬರೆಯುವಂತಾಗಲಿ.

-ಬೂಕನಕೆರೆ ವಿಜೇಂದ್ರ, ಮೈಸೂರು

**

ಅಂಧಾಭಿಮಾನದಿಂದ ಕೆಟ್ಟ ನಾಯಕರ ಸೃಷ್ಟಿ

ವಿಶಿಷ್ಟ ಪ್ರತಿಭೆಯಿಂದ ಪ್ರಸಿದ್ಧಿಗೆ ಬರುವವರಲ್ಲಿ ಕೆಲವರು ಜೀವನಶೈಲಿಯನ್ನು ರೂಪಿಸಿಕೊಳ್ಳುವಲ್ಲಿ ಎಡವುತ್ತಾರೆ. ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಂಡು ಅಭಿಮಾನಿಗಳಿಗೆ ಆದರ್ಶವಾಗುವ ಅವಕಾಶವನ್ನು ಕಳೆದು
ಕೊಳ್ಳುತ್ತಾರೆ. ಸಿನಿಮಾಗಳಲ್ಲಿ ಸಮಾಜ ಬದಲಾವಣೆಗೆ ಮುಂದಾಗುವ ನಾಯಕರಾಗಿ ಕಾಣಿಸಿಕೊಳ್ಳುವ ವ್ಯಕ್ತಿಗಳು ನಿಜ ಜೀವನದಲ್ಲಿ ಖಳನಾಯಕರಾಗುತ್ತಿದ್ದಾರೆ. ಅವರಿಗೆ ದೊರಕಿದ ಶಿಕ್ಷಣ ಅವರನ್ನು ಪ್ರಬುದ್ಧರನ್ನಾಗಿ, ಒಳ್ಳೆಯ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ವಿಫಲವಾಗಿದೆ ಎನ್ನಬಹುದು. ಅವರ ಪಾಲಕರು, ಸ್ನೇಹಿತರು, ಬೆಂಬಲಿಗರು ಸಹ ಅವರನ್ನು ತಿದ್ದುವಲ್ಲಿ ವಿಫಲರಾದರೇ? ಹಾಗಾದರೆ ಅವರನ್ನು ತಿದ್ದುವವರಾರು? ಸೆಲೆಬ್ರಿಟಿಗಳೆಂಬ ಬೆಕ್ಕಿಗೆ ಗಂಟೆ ಕಟ್ಟುವವರಾರು? ಅವರನ್ನು ಬೆಂಬಲಿಸಿ ಬೆಳೆಸಿದ ಅಭಿಮಾನಿಗಳೇ ಆ ಕೆಲಸವನ್ನು ಮಾಡಬೇಕು. ನಾವು ಅಂಧಾಭಿಮಾನಿಗಳಾಗಿ ಕೆಟ್ಟ ನಾಯಕರನ್ನು ಸೃಷ್ಟಿಸಬಾರದು.

-ಭೀಮರಾಯ ಮ. ಉಪ್ಪಾರ, ಕೊಂಡಗೂಳಿ, ವಿಜಯಪುರ

**

ನ(ಘ)ಟನೆ…!

ವ್ಯಕ್ತಿ, ವ್ಯಕ್ತಿಯನ್ನು

ಮುಗಿಸಿದಂತೆ

ನಟಿಸಿದರೆ

ಅದು ಕಲೆ,

ನೈಜವಾಗಿ

‘ಘಟಿಸಿದರೆ’

ಅದು ಕೊಲೆ!

-ಮ.ಗು.ಬಸವಣ್ಣ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT