ಗುರುವಾರ , ಮಾರ್ಚ್ 30, 2023
24 °C

ವಾಚಕರ ವಾಣಿ: ಶನಿವಾರ, ಮಾರ್ಚ್ 18, 2023

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾರಿಗೆ ಮುಷ್ಕರ ತರವೇ?
ಸಾರಿಗೆ ನಿಗಮಗಳ ನೌಕರರು ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಇದೇ 21ರಿಂದ ಮುಷ್ಕರ ಆರಂಭಿಸಲು ನಿರ್ಧರಿಸಿ ದ್ದಾರೆ. ಆದರೆ ಈಗ ಶಾಲಾ ಕಾಲೇಜು ಮಕ್ಕಳಿಗೆ ಪರೀಕ್ಷಾ ಸಮಯ ಮತ್ತು ಇದೇ 22ರಂದು ಯುಗಾದಿ ಹಬ್ಬ ಇದೆ. ಉದ್ಯೋಗ ನಿಮಿತ್ತ ದೂರದ ಊರುಗಳಲ್ಲಿ ನೆಲೆಸಿರುವವರು ಸ್ವಗ್ರಾಮಗಳಿಗೆ ಬಂದು ತಮ್ಮ ಪೂರ್ವಿಕರಿಗೆ ಎಡೆ ಇಡುವುದು ಸಂಪ್ರದಾಯ. ಯುಗಾದಿ ಹಬ್ಬದ ಮಾರನೇ ದಿನ ಮಾಂಸಾಹಾರಿಗಳಿಗೆ ವರ್ಷತೊಡಕು ವಿಶೇಷ ಹಬ್ಬ. ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಳ್ಳದೆ ಮುಷ್ಕರಕ್ಕೆ ಕರೆ ಕೊಟ್ಟಿರುವುದು ಎಷ್ಟು ಸರಿ? ಇದರಿಂದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆ ಆಗುವುದು ನಿಶ್ಚಿತ. ನೌಕರರ ಸಂಘಟನೆಗಳು ತಮ್ಮ ನಿರ್ಧಾರವನ್ನು ಪುನರ್‌ಪರಿಶೀಲಿಸಬೇಕು. ಇಲ್ಲವಾದರೆ ನಿಗಮಗಳು ಸಾರ್ವಜನಿಕರ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.
–ಎಲ್‌ಐಸಿ ವಿಜೇಂದ್ರ, ಮೈಸೂರು

ಚುನಾವಣಾಪೂರ್ವ ಸಮೀಕ್ಷೆ: ಇರಲಿ ಕಡಿವಾಣ
ದೇಶದ ಪ್ರಜಾಪ್ರಭುತ್ವದ ಪರಿಕಲ್ಪನೆಯಲ್ಲಿ ಗೋಪ್ಯ ಮತದಾನ ಎನ್ನುವುದು ಒಂದು ಅದ್ಭುತ ವಿಧಾನವಾಗಿದೆ. ಇದರಿಂದ ಮುಕ್ತವಾಗಿ ಮತ್ತು ಧೈರ್ಯವಾಗಿ, ಯಾರ ಹಂಗಿಗೂ ಒಳಗಾಗದೆ, ಯಾರ ಮನಸ್ಸನ್ನೂ ನೇರವಾಗಿ ನೋಯಿಸದೆ ನಮ್ಮ ಮತವನ್ನು ಅತ್ಯಂತ ವಿವೇಚನೆಯಿಂದ ಚಲಾಯಿಸಬಹುದು. ಆದರೆ ದುರಂತವೆಂದರೆ, ಕೆಲವು ಸುದ್ದಿ ಮಾಧ್ಯಮಗಳು ಚುನಾವಣೆಗೆ ಇನ್ನೂ ಎರಡು– ಮೂರು ತಿಂಗಳುಗಳ ಮೊದಲೇ ಅನವಶ್ಯಕವಾಗಿ ಮತ್ತು ಬಹಿರಂಗವಾಗಿ ಜನರ ಮುಂದೆ ಕ್ಯಾಮೆರಾ ಮತ್ತು ಮೈಕ್ ಹಿಡಿದು, ‘ನಿಮ್ಮ ಮತವನ್ನು ಯಾರಿಗೆ ನೀಡುವಿರಿ ಮತ್ತು ಯಾಕೆ?’ ಎಂದು ಕೇಳಿ ಮತದಾನದ ಪಾವಿತ್ರ್ಯ ಹಾಗೂ ಗಾಂಭೀರ್ಯವನ್ನು ಹಾಳು ಮಾಡುತ್ತಿವೆ. ಇಂತಹ ಕಾರ್ಯದ ಮೂಲಕ ಸಾಂಕೇತಿಕವಾಗಿ ಜನರ ನಾಡಿಮಿಡಿತ ಗ್ರಹಿಸುತ್ತೇವೆ ಎಂದು ಅವು ಸಮರ್ಥಿಸಿಕೊಳ್ಳಬಹುದು. ಆದರೆ ಕಾನೂನಾತ್ಮಕವಾಗಿ ಮತ್ತು ತಾಂತ್ರಿಕವಾಗಿ ಇದು ಸರಿ ಇರಬಹುದಾದರೂ ಸಾಮಾಜಿಕವಾಗಿ ಮತ್ತು ಪ್ರಜಾಪ್ರಭುತ್ವದ ಮುಕ್ತತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ.

ಸಾಮಾನ್ಯ ಜನರಾದ ನಮಗೆ ನಮ್ಮ ‌ದಿನನಿತ್ಯದ ವ್ಯವಹಾರಗಳಿಗೆ ಇದರಿಂದ ಮುಂದೆ ಅಡ್ಡಿಯೂ ಆಗಬಹುದು. ಮಾಧ್ಯಮದಲ್ಲಿ ನಾವು ಬಹಿರಂಗವಾಗಿ ಒಬ್ಬರ ಪರವಾಗಿ ಮಾತನಾಡಿ, ಮುಂದೆ ಆ ವ್ಯಕ್ತಿ ಸೋತು, ನಾವು ವಿರೋಧಿಸಿದವರು ಆಯ್ಕೆಯಾಗಿ, ಅದನ್ನು ಅವರ ಹಿಂಬಾಲಕರು ಗುರುತಿಸಿ ನಮ್ಮ ವಿರುದ್ಧ ಸಲ್ಲದ ಚಟುವಟಿಕೆಗಳನ್ನು ನಡೆಸಬಹುದು. ಇಂತಹ ಅಪಾಯಕಾರಿ ಸನ್ನಿವೇಶಗಳನ್ನು ಮನಗಂಡು ಮತದಾರರು ಗೋಪ್ಯ ಮತದಾನದ ವ್ಯವಸ್ಥೆಯನ್ನು ಹಾಳು ಮಾಡದಂತೆ ಅವರಿಗೆ ವಿನಯಪೂರ್ವಕವಾಗಿ ತಿಳಿ ಹೇಳುವುದು ಸೂಕ್ತ.
–ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ಚೀನಾ ಮಾದರಿಯಾಗಬೇಕಾದುದು...
ಚೀನಾದಲ್ಲಿ ಮಕ್ಕಳನ್ನು ಹೆರಲು ಹಿಂದೆ ಇದ್ದ ಮತ್ತು ಈಗ ಇಲ್ಲದ ನಿರ್ಬಂಧಗಳ ಕುರಿತು ನಿಕೋಲ್ ಹಾಂಗ್ ಮತ್ತು ಜಿಕ್ಸು ವಾಂಗ್ ಅವರು ತಮ್ಮ ಲೇಖನದಲ್ಲಿ (ಪ್ರ.ವಾ., ಮಾರ್ಚ್‌ 17) ವಿವರವಾಗಿ ಚರ್ಚಿಸಿದ್ದಾರೆ. ಮಾನವ ಸಂಪನ್ಮೂಲ ಒಂದು ಮಿತಿಯಲ್ಲಿದ್ದರೆ, ಅದು ದೇಶದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ, ಮಿತಿ ಮೀರಿದರೆ ಅಭಿವೃದ್ಧಿಗೆ ಮಾರಕವಾಗುತ್ತದೆ. ಮಿತಿಯಿಲ್ಲದೆ ಮಕ್ಕಳನ್ನು ಹೆತ್ತು ಬಾಲ್ಯದಲ್ಲೇ ಅವರಿಂದ ದುಡಿಸಿಕೊಳ್ಳುವಂಥ ಪೋಷಕರಿಗೆ ಹೆಚ್ಚು ಮಕ್ಕಳನ್ನು ಹೆರುವುದು ಲಾಭದಾಯಕ.

ಯಾವ ಪೋಷಕರು ಮಕ್ಕಳನ್ನು ಶಾಲಾ-ಕಾಲೇಜಿಗೆ ಕಳಿಸಿ ಉತ್ತಮ ಶಿಕ್ಷಣವನ್ನು ಕೊಡಿಸುವ ಮತ್ತು ಅವರು ಸಮಾಜದ ಉತ್ತಮ ಪ್ರಜೆಗಳಾಗುವಂತೆ ರೂಪಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಾರೋ ಅಂಥವರಿಗೆ ಮಕ್ಕಳ ಸಂಖ್ಯೆಯನ್ನು ನಿಯಂತ್ರಿಸುವುದು ಅನಿವಾರ್ಯ. ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ಚೀನಾವನ್ನು ನಾವು ಮಾದರಿಯಾಗಿ ಸ್ವೀಕರಿಸಬೇಕೇ ವಿನಾ ಜನಸಂಖ್ಯೆಯನ್ನು ಹೆಚ್ಚಿಸುವ ವಿಷಯದಲ್ಲಿ ಅಲ್ಲ.
–ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಬಹುಜನರ ಅಗತ್ಯಕ್ಕೆ ಸಿಗಲಿ ಆದ್ಯತೆ
ರಾಜ್ಯದಲ್ಲಿ ಇನ್ನೂ ಆರು ವಿಮಾನ ನಿಲ್ದಾಣಗಳು ಪ್ರಾರಂಭವಾಗಲಿವೆಯಂತೆ. ವಿಮಾನ ನಿಲ್ದಾಣ ಇರಲಿ. ಆದರೆ ಅದಕ್ಕೂ ಮೊದಲು ರಸ್ತೆ, ಕುಡಿಯುವ ನೀರು ಪೂರೈಸುವುದು ಅಗತ್ಯ. ಶಾಲಾ ಕಟ್ಟಡಗಳ ಕೊರತೆ ನಿವಾರಿಸುವುದು ಅವಶ್ಯ. ಆಳುವ ವರ್ಗದ ಹಿತಾಸಕ್ತಿಗಳೇ ಆದ್ಯತೆಯಾದಾಗ ಜನಸಾಮಾನ್ಯರ ಮೂಲಭೂತ ಅಗತ್ಯಗಳು ಮೂಲೆಗೆ ಸರಿಯುತ್ತವೆ. ವಿಮಾನ ನಿಲ್ದಾಣಗಳಿಗೆ ಅಪಾರ ಜಮೀನು ಮತ್ತು ಬಂಡವಾಳ ಬೇಕು. ಇಂತಹ ಐಷಾರಾಮಿ ಸೌಲಭ್ಯಕ್ಕಿಂತ ಬಹುಜನರ ಮೂಲಭೂತ ಅಗತ್ಯಗಳು ಸರ್ಕಾರದ ಆದ್ಯತೆ ಆಗಬೇಕು.
–ಡಾ. ಟಿ.ವಿ. ನಾಗರಾಜ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.