ಬುಧವಾರ, ಮಾರ್ಚ್ 22, 2023
32 °C

ಒಳನೋಟ | ಬಾಯ್ತೆರೆಯಲು ಕಾದಿದೆ ಸಹ್ಯಾದ್ರಿ: ಪ್ರತಿಕ್ರಿಯೆಗಳು

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

‘ಬಾಯ್ತೆರೆಯಲು ಕಾದಿದೆ ಸಹ್ಯಾದ್ರಿ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ(ಜನವರಿ 22) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

ಒಳನೋಟ | ಬಾಯ್ತೆರೆಯಲು ಕಾದಿದೆ ಸಹ್ಯಾದ್ರಿ

‘ಅಭಿವೃದ್ಧಿ ಹೆಸರಿನಲ್ಲಿ ಕರಗುತ್ತಿದೆ’

ಜಗತ್ತಿನ ಪ್ರಮುಖ ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟ ಅಭಿವೃದ್ಧಿಯ ಹೆಸರಿನಲ್ಲಿ ಕರಗುತ್ತಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಈ ಭಾಗದಲ್ಲಿ ಸಂಭವಿಸಿದ ಭೂ ಕುಸಿತವೇ ಅದಕ್ಕೆ ಸಾಕ್ಷಿ. ಜಾಗತಿಕ ತಾಪಮಾನ ಏರಿಕೆ, ಪ್ರವಾಹ, ಅತಿವೃಷ್ಟಿ ಮುಂತಾದ ಎಚ್ಚರಿಕೆಗಳಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬುದ್ಧಿ ಕಲಿತಂತೆ ಕಾಣುವುದಿಲ್ಲ. ಜನಸಾಮಾನ್ಯರಿಗೆ ಅರಿವು ಉಂಟಾದರೂ ಏನೂ ಪ್ರಯೋಜನವಿಲ್ಲ. ಸಂಬಂಧಪಟ್ಟವರು ಎಚ್ಚೆತ್ತು ಕೊಳ್ಳುವರೆ? ಎಂಬುದನ್ನು ಕಾದು ನೋಡಬೇಕು.

–ಡಾ. ಎಸ್. ಶಿಶುಪಾಲ, ದಾವಣಗೆರೆ

==

‘ಗಣಿ ಮಾಫಿಯಾ ತಡೆಗಟ್ಟಿ’

ಸುಮಾರು ವರ್ಷಗಳಿಂದ ಪಶ್ಚಿಮಘಟ್ಟಗಳಲ್ಲಿ ಭೂಕುಸಿತ ಸಂಭವಿಸುತ್ತಿದೆ. ಇಲ್ಲಿ ನಡೆಯುತ್ತಿರುವ ಟಿಂಬರ್ ಮತ್ತು ಗಣಿ ಮಾಫಿಯಾವೇ ಇದಕ್ಕೆ ಕಾರಣ. ಆದರೆ ಇದುವರೆಗೂ ಅವರ ವಿರುದ್ಧ ಕ್ರಮ ಕೈಗೊಳ್ಳದಿರಲು ಏನು ಕಾರಣ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಅಕ್ರಮವಾಗಿ ನಿರ್ಮಿಸುತ್ತಿರುವ ರೆಸಾರ್ಟ್‌ಗಳ ಪರಿಣಾಮದಿಂದ  ಭೂಕುಸಿತ ಆಗುತ್ತಿದೆ. ಇಲ್ಲಿನ ನಿವಾಸಿಗಳು ನಿತ್ಯ ಜೀವ ಭಯದಲ್ಲೇ ಬದುಕುವ ಅನಿವಾರ್ಯ ಸೃಷ್ಟಿಯಾಗಿದೆ. ಸರ್ಕಾರ ಈ ಸಮಸ್ಯೆ ಬಗ್ಗೆ ಪ‍ರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು.

ಗಿರೀಶ ಜೆ., ಪತ್ರಿಕೋದ್ಯಮ ವಿದ್ಯಾರ್ಥಿ, ತುಮಕೂರು ವಿಶ್ವವಿದ್ಯಾಲಯ

==

‘ಅಕ್ರಮ ಗಣಿಗಾರಿಕೆ ಕಡಿವಾಣ ಹಾಕಿ’

ಮಾನವ ಹಸ್ತಕ್ಷೇಪದಿಂದಲೇ ಇಂದು ಭೂ ಕುಸಿತ ಸಂಭವಿಸುತ್ತಿರುವುದು. ಅಭಿವೃದ್ಧಿ ಹೆಸರಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅರಣ್ಯ ನಾಶಕ್ಕೆ ಕೊನೆಯೇ ಇಲ್ಲದಂತಾಗಿದೆ. ಗಣಿಗಾರಿಕೆಗೆ ಅವಕಾಶ ನೀಡುವುದರಿಂದ ಭೂ ಕುಸಿತ, ಪ್ರಾಣಿ–ಪಕ್ಷಿಗಳ ಸಂಕುಲಕ್ಕೆ ಅಪಾಯ ಎದುರಾಗಿದೆ. ನದಿ ಪಾತ್ರದಲ್ಲಿ ನಡೆಯುವ ಮರಳು ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬೇಕು. ಜೋಶಿಮಠ ದುರಂತದಿಂದಾದರೂ ನಾವು ಪಾಠ ಕಲಿಯಬೇಕಾಗಿದೆ. ಪಶ್ಚಿಮ ಘಟ್ಟಗಳು ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದ್ದು, ಸರ್ಕಾರ ಇದರ ಸಂರಕ್ಷಣೆಗೆ ಒತ್ತು ನೀಡಬೇಕು. ಪರಿಸರವನ್ನು ಸಂರಕ್ಷಿಸಲು ಹೆಚ್ಚು ಹೆಚ್ಚು ಗಿಡ–ಮರಗಳನ್ನು ಬೆಳೆಸಲು ಕ್ರಮ ಕೈಗೊಳ್ಳಬೇಕು.

-ಆಶಾಬಾಯಿ ಆರ್. ಬೆಂಗಳೂರು

==

‘ಯೋಚನೆಗಳಿಲ್ಲದ ಯೋಜನೆಗಳು ಜಾರಿಯಾಗದಿರಲಿ’

ಪಶ್ಚಿಮಘಟ್ಟಗಳು ನಾಡಿನ ಪ್ರಾಕೃತಿಕ ಸಮೃದ್ಧತೆಯ ಪ್ರತೀಕ. ಈ ಪರಿಸರ ಎಷ್ಟು ಸುಂದರವಾಗಿದೆಯೋ, ಅಷ್ಟೇ ಸೂಕ್ಷ್ಮವೂ ಹೌದು. ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮಘಟ್ಟಗಳ ಅಗಾಧ ನೈಸರ್ಗಿಕ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುತ್ತಿರುವ ಆಳುವ ವರ್ಗ, ಕೇವಲ ಖಜಾನೆ ಕಾಸಿನ ಆಸೆಗೆ ಅವೈಜ್ಞಾನಿಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇಂತಹ ದೂರದೃಷ್ಟಿಯಿಲ್ಲದ ನೀತಿಗಳಿಂದ ಪರಿಸರ ಸೂಕ್ಷ್ಮ ಪ್ರದೇಶ ಒತ್ತಡಕ್ಕೊಳಗಾಗಿ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ. ಇದರಿಂದಾಗಿ ಇಲ್ಲಿನ ಜೀವರಾಶಿ ಅಪಾಯದಂಚಿಗೆ ಸಿಲುಕಿದೆ. ಇನ್ನಾದರೂ ಇದನ್ನರಿತು ವಿವೇಚನೆಯಿಂದ ಯೋಚಿಸಿ ನಂತರ ಯೋಜನೆ ರೂಪಿಸಬೇಕು. ಇಲ್ಲ‌ದ್ದಿದರೆ ಇಂತಹ ಯೋಜನೆಗಳು ಮನುಕುಲದ ವಿನಾಶಕ್ಕೆ ಸಾಕ್ಷಿಯಾಗುವುದರಲ್ಲಿ ಸಂದೇಹವಿಲ್ಲ.

ಅಂಕಿತ್ ಜಿ ಎನ್, ತೀರ್ಥಹಳ್ಳಿ

==

‘ಸಹ್ಯಾದ್ರಿಯ ಅಳಲಿಗೆ ಕಿವಿಗೊಡುವ ಅಗತ್ಯವಿದೆ’

ಭೂ ಕುಸಿತದ ಮುನ್ಸೂಚನೆ ನೀಡುವ ತಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಭೂ ಬಳಕೆ ಯೋಜನಾ ನಕ್ಷೆ ರೂಪಿಸಬೇಕು. ಅನಧಿಕೃತ ಗಣಿ- ಕ್ವಾರಿಗಳ ನಿಯಂತ್ರಣ, ಕಾಡು ಸೀಳುವ ಯೋಜನೆಗಳ ನಿರ್ವಹಣೆಗೆ ಕ್ರಮ, ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ವಿಪತ್ತು ನಿರ್ವಹಣಾ ಸಮಿತಿಗಳನ್ನು ಸಶಕ್ತಗೊಳಿಸಬೇಕು. ಸೂಕ್ಷ್ಮ ಪ್ರದೇಶಗಳಲ್ಲಿನ ದೊಡ್ದ ಪ್ರಮಾಣದ ಯೋಜನೆಗಳನ್ನು ನಿಯಂತ್ರಿಸಬೇಕು. ಹೀಗೆ ಭೂಕುಸಿತ ನಿಯಂತ್ರಣಕ್ಕೆ ರಾಜ್ಯ ಸರ್ಕಾರವು ಈಗಾಗಲೇ ಒಪ್ಪಿರುವ ‘ಸುಸ್ಥಿರ ಅಭಿವೃದ್ಧಿ ಗುರಿ’ಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಜನಜೀವನಕ್ಕೆ ಅಡಚಣೆಯಾಗದಂತೆ ಜಾರಿಗೊಳಿಸಬೇಕು.

– ಕೋರಿ ಮಂಜುನಾಥ ಚಿಲುಗೋಡು, ವಿಜಯನಗರ ಜಿಲ್ಲೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು