ಮಂಗಳವಾರ, ಮಾರ್ಚ್ 21, 2023
29 °C

ಪ್ರಕೃತಿಯಲ್ಲಿ ದೈವತ್ವ ಕಾಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾನುವಾರದ ಪುರವಣಿಯಲ್ಲಿ ದೇವಾಲಯಗಳ ಕುರಿತು ಪ್ರಕಟವಾದ ಲೇಖನಗಳನ್ನು ಓದಿದ ಮೇಲೆ ‘ಅಯ್ಯೋ ದೇವರೇ, ನಿನ್ನನ್ನೇ ಬಡಪಾಯಿ ಮಾಡಿಬಿಟ್ಟ ನಿನ್ನ ಭಕ್ತರೆಂಥವರು? ನಾವೆಂತಹ ಧಾರ್ಮಿಕರು’ ಎಂಬ ನೋವು, ಆತಂಕ, ಉದ್ವೇಗ ಉಂಟಾಗದೇ ಇರದು.

ಆಹ್ಲಾದಕರವೆನಿಸುವ ‘ನಾಳೆಯ ಕಲ್ಪನೆಯ ಸುಖ’ಕ್ಕೆ ನಾವು ಬಲಿಯಾಗುತ್ತಿದ್ದೇವೆ. ಇದು ಪಲಾಯನವಾದ. ಇಷ್ಟೆಲ್ಲಾ ವೈಭವಪೂರಿತ ದೇವರುಗಳು ಮತ್ತು ಧಾರ್ಮಿಕ ಪ್ರತಿಷ್ಠೆ, ಪ್ರಚಾರದ ನಡುವೆ ನಮ್ಮ ಹೃದಯವೇಕೆ ಇಷ್ಟು ಬಡವಾಗಿದೆ ಎಂದು ಕೇಳಬೇಕಲ್ಲವೇ? ನಮ್ಮ ಕಾಲದ ದಾರ್ಶನಿಕ ಜಿಡ್ಡು ಕೃಷ್ಣಮೂರ್ತಿ ಹೇಳಿದ ‘ಕ್ಷುಲ್ಲಕ ಮನಸ್ಸುಗಳ ದೇವರು ಕ್ಷುಲ್ಲಕ ದೇವರು’ ಮತ್ತು ‘(ಸಂಘಟಿತ) ಧರ್ಮ’ವೆಂಬುದು ಮನುಕುಲದ ಮರಗಟ್ಟಿದ/ಹೆಪ್ಪುಗಟ್ಟಿದ (frozen thought) ವಿಚಾರ’ (ವಿಚಾರಗಳೆಲ್ಲವೂ ಹೆಪ್ಪುಗಟ್ಟಿ ಪ್ರಶ್ನೆ, ಸಂಶಯ, ಶೋಧನೆಗೊಳಪಡಿಸದ ಲೊಳಲೊಟ್ಟೆ) ಎಂಬ ಮಾತು ಸತ್ಯವಲ್ಲವೇ?  ಧರ್ಮದ ಹರಹು ಹೆಚ್ಚಿನದು. ಅದನ್ನು ನಿರ್ದಿಷ್ಟ ಅರ್ಥದಲ್ಲಿ, ಸಮುದಾಯದ ನಂಬಿಕೆ, ಆಚರಣೆಯಲ್ಲಿ ಕಟ್ಟಿಹಾಕಿ ಕ್ಷೀಣಗೊಳಿಸಿದ್ದೇವೆ.

ನೀನೇ ಮನುಕುಲ. ಜಗತ್ತಿನ ಸಮಸ್ಯೆಗಳಿಗೆಲ್ಲ ನೀನೇ ಕಾರಣ. ‘ನಿನಗೆ ನೀನೇ ಬೆಳಕಾಗು’- Be light to yourself ಎಂಬುದು ಅವರ  ಪ್ರಮುಖ ಬೋಧನೆ. ಇದನ್ನೇ ಬುದ್ಧ, ಸಾಕ್ರೆಟೀಸ್‌ ಅವರ ಕಾಲದಿಂದಲೂ ಋಷಿಗಳು, ತತ್ವಜ್ಞಾನಿಗಳು, ದಾಸರು, ಶರಣರು ಹೇಳುತ್ತಲೇ ಬಂದಿದ್ದಾರೆ.

‘ದೇವರ್ಕಳುದಿಸಿ ಮರೆಯಹರು; ದೇವತ್ವ ಚಿರ ‌
ಜಾವ ದಿನ ಬಂದು ಪೋಗುವುವು; ಕಾಲ ಚಿರ
ಜೀವದ ವ್ಯಕ್ತಿ ಸಾಯ್ವುದು; ಜೀವಸತ್ವ ಚಿರ
ಭಾವಿಸಾ ಕೇವಲವ-ಮಂಕುತಿಮ್ಮ-’ ಎಂಬ ಡಿವಿಜಿಯವರ ಮಾತು ಕೂಡ ಬಹಳೇ ಅರ್ಥಗರ್ಭಿತವಾಗಿದೆ. ದೇವರುಗಳು ಹುಟ್ಟಿ ಮರೆಯಾಗುತ್ತಾರೆ. ಆದರೆ, ದೈವತ್ವವೆನ್ನುವುದು ಸದಾಕಾಲ ಇರುತ್ತದೆ. ಬೆಳಗು ರಾತ್ರಿ ಮತ್ತು ದಿನಗಳು ಬಂದು ಹೋಗುತ್ತವೆ. ಕಾಲ ಎನ್ನುವುದು ಯಾವಾಗಲೂ ಇರುತ್ತದೆ. ಪ್ರತಿಯೊಂದು ಜೀವಿಯೂ ಸಾಯುತ್ತದೆ. ಆದರೆ, ಜೀವಸತ್ವ ಎನ್ನುವುದು ಚಿರಾಯು. ಈ ಸಂಪೂರ್ಣ ತತ್ವದ ಬಗ್ಗೆ ಯೋಚಿಸು ಎಂದು ಅವರು ಹೇಳುತ್ತಾರೆ. ಹೌದು, ದೈವತ್ವದ ಹಾದಿಯಲ್ಲಿ ನಡೆಯಲೇ ಬೇಕಾದ ತುರ್ತು ಕಾಲವಿದು.

ಹವಾಮಾನ ಬದಲಾವಣೆ, ಸಂಪನ್ಮೂಲಗಳ ಕುಸಿತ, ಜಗತ್ತನ್ನೇ ನಲುಗಿಸಿದ ಕೊರೊನಾ ಇವೆಲ್ಲವೂ ಮನುಕುಲ ಒಂದೇ ಎಂದು ತಿಳಿಸಿ, ಪ್ರಕೃತಿಯಲ್ಲಿ ದೈವತ್ವವನ್ನು ಕಾಣಲು ಒತ್ತಾಯಿಸುತ್ತಿವೆ.

ಸುಮಾರು 90 ವರ್ಷಗಳ ಹಿಂದೆಯೇ, ತಮ್ಮನ್ನು ಅರಸಿಬಂದ ಜಗತ್ತಿನ ಗುರುಪಟ್ಟವನ್ನೇ ಧಿಕ್ಕರಿಸಿದ ದಾರ್ಶನಿಕ ಜಿಡ್ಡು ಕೃಷ್ಣಮೂರ್ತಿಯವರ ಮಾತು: ‘ಮುಂದಾಳುಗಳು ಹಿಂಬಾಲಕರನ್ನು, ಹಿಂಬಾಲಕರು ಮುಂದಾಳುಗಳನ್ನು; ಗುರುಗಳು ಶಿಷ್ಯಂದಿರನ್ನು, ಶಿಷ್ಯರು ಗುರುಗಳನ್ನು ನಾಶಮಾಡುತ್ತಾರೆ’. ನಾವು ಆಯ್ದುಕೊಂಡ ಆಧುನಿಕ, ಮುಂದುವರಿದ ಶಿಕ್ಷಣ, ನಾಗರಿಕತೆ ಎಂಬುದು ನಮ್ಮನ್ನು ಪ್ರಕೃತಿಯಿಂದ ಅಗಲಿಸಿವೆ. ಗ್ರೇಟಾ ಥುನ್ಬರ್ಗ್ ಎಂಬ ಹುಡುಗಿಯ ಅಂತರಂಗದಿಂದ ಹೊರಹೊಮ್ಮಿದ ಭವಿಷ್ಯದ ಪೀಳಿಗೆಯ ಸಂಕಟ, ನೋವಿನ ತುಡಿತ-ಮಿಡಿತದ ಮಾತುಗಳು ಅದೆಷ್ಟು ಅರ್ಥಗರ್ಭಿತ. ಪ್ರಗತಿಗಾಗಿ ಪ್ರಗತಿ ಎಂಬುದು ಕ್ಯಾನ್ಸರ್ ಸೆಲ್‌ಗಳ  ಪ್ರಗತಿ. ಹೌದು, ನಮಗೆ ನಾವೇ ಬೆಳಕಾಗುವುದು, ಪ್ರಕೃತಿಯಲ್ಲಿ ದೈವತ್ವವನ್ನು ಕಾಣುವುದು ಇಂದಿನ ಅಗತ್ಯ.

-ಸಿದ್ರಾಮಪ್ಪ ದಿನ್ನಿ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು