ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯ ಒಪ್ಪಲು ಮೀನಮೇಷವೇಕೆ?

Last Updated 14 ಮೇ 2021, 19:31 IST
ಅಕ್ಷರ ಗಾತ್ರ

ಹೈಕೋರ್ಟ್ ಚಾಟಿ ಬೀಸಿದ ರೀತಿಯಿಂದ ಕಂಗಾಲಾಗಿ ಕೇಂದ್ರ ಸಚಿವ ಸದಾನಂದಗೌಡ ಮತ್ತು ಬಿಜೆಪಿ ಮುಖಂಡ ಸಿ.ಟಿ.ರವಿ ಅವರು ಅಸಮಾಧಾನದಿಂದ ಮಾತನಾಡಿದ್ದಾರೆ. ಅವರ ಕೆರಳುವಿಕೆ ಅರ್ಥವಾಗುತ್ತದೆ! ಅವರ ಹೇಳಿಕೆಗಳನ್ನು ಗಮನಿಸಿದಾಗ, ಕೆಲವು ಸಂಗತಿಗಳು ಸಾರ್ವಜನಿಕರಿಗೆ ಗೊತ್ತಾಗುವುದು ಅವಶ್ಯ ಎನಿಸುತ್ತದೆ. ಅಲ್ಲದೆ ಕೇಂದ್ರ ಸರ್ಕಾರವು ಎರಡನೇ ಅಲೆಯ ಬಗ್ಗೆ ಜಾಗರೂಕತೆಯಿಂದ ಇತ್ತು ಅಥವಾ ಇಲ್ಲವೆನ್ನುವ ಬಗ್ಗೆಯೂ ತಿಳಿಯುತ್ತದೆ. ಅಗತ್ಯ ಪ್ರಮಾಣದಲ್ಲಿ ಲಸಿಕೆ ಲಭ್ಯವಾಗದಿದ್ದಕ್ಕೆ ಕೆಲವು ರಾಷ್ಟ್ರಗಳಿಂದ ಕಚ್ಚಾ ಸಾಮಗ್ರಿಗಳು ಬರುವುದು ತಡವಾದದ್ದು ಒಂದು ಕಾರಣ ಎಂದಿದ್ದಾರೆ ಸದಾನಂದಗೌಡರು. ಹಾಗಾದರೆ ಲಸಿಕೆ ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುಗಳಿಗಾಗಿ ಬೇಡಿಕೆ ಸಲ್ಲಿಸಿದ್ದು ಯಾವ ಯಾವ ರಾಷ್ಟ್ರಗಳಿಗೆ, ಆ ವಸ್ತುಗಳೆಲ್ಲ ಸಂಪೂರ್ಣವಾಗಿ ದೊರಕಿ ಉತ್ಪಾದನೆ ಪ್ರಾರಂಭವಾದುದು ಎಂದಿನಿಂದ?

ಎರಡನೆಯದಾಗಿ, ಎರಡನೇ ಅಲೆಯು ಸುಮಾರಾಗಿ ಎಂದಿನಿಂದ ಪ್ರಾರಂಭವಾಗಲಿದೆ ಎಂದು ತಜ್ಞರು ಮುಂಚೆಯೇ ಎಚ್ಚರಿಸಿದ್ದರೇ? ಇದನ್ನು ಗಮನದಲ್ಲಿಟ್ಟು ಸರ್ಕಾರವು ಉತ್ಪಾದನಾ ಕಂಪನಿಗಳಿಗೆ ಮುಂದಾಗಿಯೇ ತನ್ನ ಅಗತ್ಯವನ್ನು ತಿಳಿಸಿತ್ತೇ? ಮೊದಲನೇ ಅಲೆಯು ಉಪಶಮನಗೊಂಡು, ಎರಡನೇ ಅಲೆಯು ಹಠಾತ್ತನೆ ಹರಡಲು ಶುರುವಾದ ಸಂದರ್ಭದಲ್ಲಿ ಲಸಿಕೆಯ ಉತ್ಪಾದನಾ ಪ್ರಮಾಣ ಎಷ್ಟಿತ್ತು? ಎಲ್ಲ ರಾಜ್ಯಗಳಿಂದಲೂ ಹೆಚ್ಚಿನ ಬೇಡಿಕೆ ಬಂದುದು ಯಾವಾಗ? ಕರ್ನಾಟಕದಿಂದ ಯಾವಾಗ, ಎಷ್ಟು ಪ್ರಮಾಣದ ಬೇಡಿಕೆ ಇತ್ತು? ವಿರೋಧ ಪಕ್ಷಗಳ ಅಪಪ್ರಚಾರದ ಕಾರಣ ಶೇ 48ರಷ್ಟು ಮಂದಿ ಮೊದಲ ಲಸಿಕೆಯನ್ನು ಪಡೆಯಲಿಲ್ಲ, ಹಾಗಾಗಿ ಉಳಿದ ಲಸಿಕೆಯನ್ನು ಮಾತ್ರವೇ 18 ವರ್ಷ ಮೇಲ್ಪಟ್ಟವರಿಗೆ ಕೊಡಲು ಶುರುಮಾಡಿದ್ದು ಎಂದು ಸದಾನಂದಗೌಡರು ಹೇಳುತ್ತಾರೆ. ಆದರೆ, ನಾವು ಗಮನಿಸಬೇಕಾದ್ದೇನೆಂದರೆ, ಭಾರತದಂಥ ಬೃಹತ್ ರಾಷ್ಟ್ರದಲ್ಲಿ ಮೊದಲ ಲಸಿಕೆ ನೀಡಿಕೆ ಇಂತಿಷ್ಟು ಸಮಯದಲ್ಲಿ ಮುಗಿಯುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ. ಇದು ತಿಂಗಳಾನುಗಟ್ಟಲೆ ನಡೆಯುವ ಕಾರ್ಯವಾದ್ದರಿಂದ, ಅಷ್ಟರಲ್ಲಿ ಎರಡನೆಯ ಲಸಿಕೆ ನೀಡಿಕೆಯ ಅವಧಿಯೂ ಬಂದಿರುತ್ತದಾದ್ದರಿಂದ ಎರಡು ಪ್ರಕ್ರಿಯೆಗಳೂ ಜೊತೆಜೊತೆಯಾಗಿಯೇ ಸಾಗಿ, ಒಂದು ನಿರ್ದಿಷ್ಟ ಪ್ರಮಾಣದ ಜನಸಂಖ್ಯೆಯನ್ನು ಎರಡು ಬಾರಿ ಲಸಿಕೆಗೆ ಒಳಪಡಿಸುವವರೆಗೂ ಈ ಕಾರ್ಯಕ್ರಮ ಬಿಡುವಿಲ್ಲದೆ ನಡೆಯಬೇಕಾಗುತ್ತದೆ. ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಿಯೇ ಮನಗಂಡಿದ್ದರೆ ಇಂದಿನ ಅವ್ಯವಸ್ಥೆ ಇರುತ್ತಿರಲಿಲ್ಲ.

ಮೊದಲನೇ ಅಲೆಯ ತೀವ್ರತೆ ಸಾಕಷ್ಟು ಕಡಿಮೆಯಾಯಿತು ಎಂದಾಗ ನಮ್ಮ ಸರ್ಕಾರಗಳು ಅದೊಂದು ಮಹತ್ಸಾಧನೆ ಎಂಬ ಸುಲಭತೃಪ್ತಿ ಪಟ್ಟುಕೊಂಡಿದ್ದೇ ಇಂದಿನ ಸಂಕಷ್ಟಗಳಿಗೆ ಕಾರಣ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದನ್ನು ಯಾಕೆ ಒಪ್ಪಿಕೊಳ್ಳುತ್ತಿಲ್ಲ? ನ್ಯಾಯಾಲಯಗಳ ಮೇಲೆ, ವಿರೋಧ ಪಕ್ಷದವರ ಮೇಲೆ ಹರಿಹಾಯುವುದು ಸುಮ್ಮನೆ ಮೈಪರಚಿಕೊಂಡವರ ಸ್ಥಿತಿ ಅಷ್ಟೆ!

–ಸಾಮಗ ದತ್ತಾತ್ರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT