ಮಂಗಳವಾರ, ಮಾರ್ಚ್ 28, 2023
33 °C

ಪ್ರಜಾವಾಣಿ@75: ಪ್ರಜಾವಾಣಿ ಅಮೃತ ಮಹೋತ್ಸವ- ಓದುಗರಿಂದ ಅಭಿನಂದನಾ ಸಂದೇಶಗಳು

. Updated:

ಅಕ್ಷರ ಗಾತ್ರ : | |

ಅವಿನಾಭಾವ ಸಂಬಂಧ....
ಕೋಲಾರಕ್ಕೆ 10 ಕಿ ಮೀ ದೂರದ ಅಬ್ಬಣಿ ನನ್ನ ಹುಟ್ಟೂರು. ನಮ್ಮ ಊರಿನಲ್ಲಿ 4ನೆಯ ತರಗತಿಯವರಿಗೆ ಮಾತ್ರ ಶಾಲೆ ಇತ್ತು. 1956-60ರ ಸಮಯದಲ್ಲಿ ಬಸ್ ಸೌಲಭ್ಯ ಇರಲಿಲ್ಲ. ನಾನು ಆಗ ಪ್ರಾಥಮಿಕ ಶಾಲೆ ಅಭ್ಯಾಸ ಮಾಡುತ್ತಿದ್ದೆ. ನನ್ನ ತಂದೆ ಊರಿನಲ್ಲಿ ಒಂದು ಚಿಕ್ಕ ಕಿರಾಣಿ ಅಂಗಡಿ ಇರಿಸಿಕೊಂಡಿದ್ದರು. ವಾರಕ್ಕೊಮ್ಮೆ ಎತ್ತಿನ ಗಾಡಿ ಕಟ್ಟಿಸಿಕೊಂಡು ಹೋಗಿ ಸರಕು ಸರಂಜಾಮು ತರುತ್ತಿದ್ದರು. ಅವರು ಪೇಟೆಗೆ ಹೋಗಿ ಬಂದ ದಿನ ಪ್ರಜಾವಾಣಿ ಪತ್ರಿಕೆಯನ್ನು ತರುತ್ತಿದ್ದರು. ಒಮ್ಮೊಮ್ಮೆ ಕೋಲಾರದ ಬಸ್ ನಿಲ್ದಾಣದಲ್ಲಿ ಪ್ರಜಾವಾಣಿ ಸಿಗಲಿಲ್ಲ ಎಂದು ಪೇಚಾಡಿಕೊಳ್ಳುತ್ತಿದ್ದರು.

ಶಾಲೆ ಇಲ್ಲದ ಕಾರಣ 5ರಿಂದ 7ನೆ ತರಗತಿಯನ್ನು ಹೋಸಕೋಟೆ ತಾಲ್ಲೂಕಿನ ಬಿದರಹಳ್ಳಿಯಲ್ಲಿ ನನ್ನ ತಾಯಿ ತವರಿನಲ್ಲಿ ಓದಿದೆ. ಅಲ್ಲಿ ಪತ್ರಿಕೆ ಬರುತ್ತಿರಲಿಲ್ಲ. 8ನೆ ತರಗತಿಗಾಗಿ ನನ್ನ ಸೋದರಮಾವನ ಮನೆಯಲ್ಲಿದ್ದು, ಬೆಂಗಳೂರಿನ ಚಾಮರಾಜಪೇಟೆ ಕಾರ್ಪೋರೇಷನ್ ಶಾಲೆಯಲ್ಲಿ ವ್ಯಾಸಂಗ ಮಾಡಿದೆ. ಮಾವ ಮನೆಗೆ ಪ್ರಜಾವಾಣಿ ತರಿಸುತ್ತಿದ್ದರು. 1965ರಲ್ಲಿ ಆರಂಭಗೊಂಡ ಪ್ರಜಾವಾಣಿ ಓದು ಇಂದಿನವರೆಗೂ ಮುಂದುವರೆದಿದೆ.

ಒಂಬತ್ತನೆ ತರಗತಿ ಓದಲು ನನ್ನೂರಿಗೆ ಮರಳಿ, 6 ಕಿ ಮೀ ದೂರದ ಹರಟಿ ಪ್ರೌಢಶಾಲೆಗೆ ಸೇರಿಕೊಂಡೆ. ನಾವು ಮೊದಲನೆ ಬ್ಯಾಚ್ ವಿದ್ಯಾರ್ಥಿಗಳು. ಪ್ರತಿ ನಿತ್ಯ 12 ಕಿ.ಮೀ ನಡೆದು ಹೋಗಿ ಬರುತ್ತಿದ್ದೆ. ಇಲ್ಲಿ ಆರಂಭವಾಯಿತು ಪ್ರಜಾವಾಣಿ ಪತ್ರಿಕೆಗಾಗಿ ನನ್ನ ಹೋರಾಟ. ಕೋಲಾರದಿಂದ ಮುಖ್ಯೋಪಾಧ್ಯಾಯ ಜಾನ್ ದೇವಪ್ರಿಯ ಪ್ರತಿ ನಿತ್ಯ ಸೈಕಲ್ ಏರಿ ಬರುತ್ತಿದ್ದರು. ನಮ್ಮ ತಂದೆ ಹೇಳಿದ ಪ್ಲಾನಿನಂತೆ ಪ್ರತಿ ನಿತ್ಯ ಕೋಲಾರದಲ್ಲಿ ಜಾನ್ ದೇವಪ್ರಿಯ ಅವರ ಮನೆಗೆ ಪತ್ರಿಕೆ ಹಾಕಿಸುವುದು, ಅವರು ಶಾಲೆಗೆ ತರುವುದು. ಸಂಜೆ ನಾನು ಮನೆಗೆ ಬರುವಾಗ ಪತ್ರಿಕೆ ಹಿಡಿದು ಬರುವುದು. ಜಾನ್ ದೇವಪ್ರಿಯ ಅವರ ತಂದೆ ಬೆಳಗ್ಗೆ ಪತ್ರಿಕೆಯನ್ನು ಪೂರ್ಣ ಓದಿ ಮಗನಿಗೆ ಕೊಡುವುದು, ಶಾಲೆಯಲ್ಲಿ ಸ್ಟ್ಯಾಫ್ ಸಂಜೆಯವರೆಗೂ ಓದುವುದು, ನಂತರ ನಾನು ಮನೆಗೆ ತರುವುದು. ಮರು ದಿನ ತಂದೆಯವರು ಅಂಗಡಿಯಲ್ಲಿ ಕುಳಿತು ಬಿಡುವಾದಾಗ ಓದಿಕೊಳ್ಳುವುದು. ಇಷ್ಟಕ್ಕೆ ನಿಲ್ಲುತ್ತಿರಲಿಲ್ಲ.

ಊರ ಪಟೇಲರು, ಅನಕ್ಷರಸ್ಥರಾದರೂ ಪ್ರಪಂಚದ ಆಗುಹೋಗುಗಳ ಬಗ್ಗೆ ಆಸಕ್ತಿ ಇರುವ ಜನರು ಬಂದು ಅಂಗಡಿ ಪಡಸಾಲೆಯಲ್ಲಿ ಕುಳಿತು ಸುದ್ದಿಗಳನ್ನು ಕೇಳುವರು, ತಂದೆ ಸುದ್ದಿಯನ್ನು ಓದಿ ಹೇಳಿ ಜನಗಳಿಗೆ ವಿದ್ಯಮಾನಗಳನ್ನು ಅರುಹುವರು. ಶಾಲೆ ನಡೆಯುತ್ತಿದ್ದ ದಿನಗಳೇನೋ ಸರಿ, ರಜದ ದಿನಗಳಲ್ಲಿ ಮರು ಕೆಲಸದ ದಿನ ನಮ್ಮ ಮೇಷ್ಟರು ಹಿಂದಿನ ಪ್ರಜಾವಾಣಿ ಪತ್ರಿಕೆಗಳನ್ನು ತರಬೇಕು ಎಂಬುದು ತಂದೆ ನನಗೆ ವಿಧಿಸಿದ್ದ ನಿಯಮ. 3-4 ದಿನ ರಜೆ ಇದ್ದರೆ ಮೇಷ್ಟರು ಒಂದೋ ಎರಡೋ ಪತ್ರಿಕೆಗಳನ್ನು ತರುತ್ತಿದ್ದರು. ಅಂತಹ ದಿನ ತಂದೆ ಮುಂದೆ ನಿಲ್ಲಲೂ ನನಗೆ ಭಯ. ನನಗೆ ಮಂಗಳಾರತಿ ಆಗುತ್ತಿತ್ತು.

ಎರಡು ವರ್ಷ ಶಾಲೆ ಮುಗಿಸಿ, ಕೋಲಾರದಲ್ಲಿ ಕಾಲೇಜಿಗೆ ಸೇರಿದೆ. ನಿತ್ಯ ಸೈಕಲ್ ತುಳಿದು ಹೋಗುತ್ತಿದ್ದೆ. ಆಗ ದಿನವೂ ಪ್ರಜಾವಾಣಿ ತರಬಹುದೆಂದು ಖುಷಿ ಆಯಿತು. ಆದರೆ ಈ ಸಂಕಲ್ಪವೂ ಹೆಚ್ಚು ಮುದ ತರಲಿಲ್ಲ. ನಾನು ಬೆಳಗ್ಗೆ ಹೋಗಿ ಬಸ್ ನಿಲ್ದಾಣದ ಪೇಪರ್ ಅಂಗಡಿ ತಲುಪುವ ವೇಳೆಗೆ ಬಹುಪಾಲು ದಿನ ಪ್ರಜಾವಾಣಿ ಮುಗಿದು ಹೋಗಿರುತ್ತಿತ್ತು. (ಸೋಲ್ಡ್ ಔಟ್) ಅದಕ್ಕೆ ಮತ್ತೆ ತಂದೆಯಿಂದ ಬೈಸಿಕೊಳ್ಳುವುದೇ ಆಯಿತು.

ಪೇಪರ್ ಅಂಗಡಿಯಲ್ಲಿ ಗೋವಿಂದರಾವ್ ಎನ್ನುವವರು ಕೆಲಸಕ್ಕಿದ್ದರು. ಅವರಿಗೆ ಇಡ್ಲಿ ಸಾಂಬಾರ್, ಕಾಫಿ ಕೊಡಿಸಿ ಸ್ನೇಹ ಸಂಪಾದಿಸಿದೆ. ನಾನು ಬರುವುದು ತಡವಾದರೂ ನನಗೆ ಪ್ರಜಾವಾಣಿ ತೆಗೆದಿರಿಸಿ ಎಂದು ಹೇಳಿದೆ. ಇದೂ ಕೊಂಚ ದಿನ ನಡೆಯಿತು. ತಿಂಗಳಿಗೊಮ್ಮೆ ಚಂದಾ ಕೊಡುವ ಪರಿಪಾಠ ಜಾರಿಗೆ ತಂದೆವು. ಕಾಲೇಜಿನ ರಜಾ ದಿನಗಳಲ್ಲಿ ಬಂಡಲ್ ಕಟ್ಟಿ ಪತ್ರಿಕೆಗಳನ್ನು ಜೋಪಾನ ಮಾಡುತ್ತಿದ್ದರು ಗೋವಿಂದರಾವ್. ನಾನು ಕೋಲಾರದಲ್ಲಿಯೇ ಕೊಠಡಿ ಮಾಡಿಕೊಂಡು ವಾಸ ಮಾಡಲು ಆರಂಭಿಸಿದೆ. ಆ ವೇಳೆಗೆ ನಮ್ಮ ಊರಿಗೆ ಸರ್ಕಾರಿ ಬಸ್ ಬರಲಾರಂಭಿಸಿತ್ತು. ಬೆಳಗ್ಗೆ 7.30ಕ್ಕೆ ಕೋಲಾರ ಬಿಡುವ ಬಸ್ಸಿನ ಡ್ರೈವರ್ ಬಳಿ ಪತ್ರಿಕೆ ಕಳುಹಿಸುವ ಏರ್ಪಾಟು ಆಯಿತು. ತಂದೆಯವರಿಗೂ ನೆಮ್ಮದಿ ಆಯಿತು. ಕೋಲಾರದಲ್ಲಿ ಇರುವಷ್ಟು ದಿನ ನಾನು ವಾಚನಾಲಯಕ್ಕೆ ಹೋಗಿ ಪ್ರಜಾವಾಣಿ ಓದುತ್ತಿದ್ದೆ. ಪದವಿ ಮುಗಿದ ಕೂಡಲೇ ಕೋಲಾರ ಪತ್ರಿಕೆಯಲ್ಲಿ ವರದಿಗಾರನಾಗಿ ಸೇರಿಕೊಂಡೆ. ಪ್ರಜಾವಾಣಿ ವರದಿಗಾರರಾದ ಕೃಷ್ಣಸ್ವಾಮಿಗಳು ಹಾಗೂ ಪ್ರಜಾವಾಣಿ ಏಜೆಂಟರಾದ ಗೋಪಾಲ್ ಆತ್ಮೀಯರೂ ಆದರು. 1983ರಲ್ಲಿ ವಾರ್ತಾ ಇಲಾಖೆ ಸೇರ್ಪಡೆಯಾದ ನಂತರ ಪ್ರಜಾವಾಣಿ ಪತ್ರಿಕೆಯ ಹಲವಾರು ಹಿರಿಯ ಸಂಪಾದಕರು, ವರದಿಗಾರರು, ಉಪ ಸಂಪಾದಕರೂ ಆತ್ಮೀಯರಾದರು. 1994ರಲ್ಲಿ ಪ್ರತಿ ಶುಕ್ರವಾರ ಪ್ರಜಾವಾಣಿ ಸಿನಿಮಾ ಪುಟಕ್ಕೆ ಚಿತ್ರಬಂಧ ರಚಿಸುವ ಅವಕಾಶ ದೊರೆತು ಅಂಕಣಕಾರನೂ ಆದೆ. ಸುಮಾರು 16 ವರ್ಷ ಈ ಅಂಕಣವನ್ನು ಪ್ರತಿ ವಾರ ಬರೆದುಕೊಟ್ಟೆ.

ನಾನು ನನ್ನ ಹಳ್ಳಿಯಲ್ಲಿದ್ದಾಗ ಪ್ರಕಾಶ ಲೈಬ್ರರಿ ಎಂದು ನನ್ನ ಕಲ್ಪನೆಯ ಪುಸ್ತಕಾಲಯ ಆರಂಭಿಸಿ ಪುಸ್ತಕಗಳು, ನಿಯತಕಾಲಿಕೆಗಳು, ಮುಖ್ಯವಾದ ಪತ್ರಿಕೆಗಳನ್ನು ಶೇಖರಿಸಿ, ಅವುಗಳಿಗೆ ಪಿ.ನಂಬರ್ ಕೊಡುತ್ತಿದ್ದೆ. ಲಾಲ್ ಬಹದೂರ್ ಶಾಸ್ತ್ರಿ ಅವರು ನಿಧನರಾದ ಸುದ್ದಿ ಪ್ರಕಟಗೊಂಡ ಪ್ರಜಾವಾಣಿ13.1.1966, ಗುರುವಾರದ ಸಂಚಿಕೆಯ ಪಿ.ನಂಬರ್ 110. ಅಂದು ಪತ್ರಿಕೆಯ ವಯಸ್ಸು 18 ವರ್ಷ ಆಗಿತ್ತು. ಟಿ.ಎಸ್.ಆರ್ ಸಂಪಾದಕರಾಗಿದ್ದರು.

ನನ್ನ ತಂದೆ, ನಾನು, ನನ್ನ ಮಕ್ಕಳು ಓದು ಓದುತ್ತಲೇ ಪ್ರಜಾವಾಣಿ ಪತ್ರಿಕೆಗೆ 75 ವರ್ಷ ಆಯಿತು. 2ನೆ ತರಗತಿಯ ನನ್ನ ಮೊಮ್ಮಗ ಸಹ ಅಕ್ಷರಗಳನ್ನು ಕೂಡಿಸಿಕೊಂಡು ಶಿರೋನಾಮೆಗಳನ್ನು ಓದಲು ಆರಂಭಿಸಿದ್ದಾನೆ. ಪ್ರಜಾವಾಣಿ ಜೊತೆ ಅವಿನಾಭಾವ ಸಂಬಂಧ ನನ್ನದು. ಶತ ಶತಮಾನಗಳು ಕನ್ನಡಿಗರ ಪ್ರೀತಿಯ ಪತ್ರಿಕೆಯಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ.
–ಅ.ನಾ.ಪ್ರಹ್ಲಾದರಾವ್, ಪದಬಂಧ ರಚನೆಕಾರ, ಲೇಖಕ

*

ಹಳೆಯ ನಂಟು....

ಅಕ್ಟೋಬರ 15 ಪ್ರಜಾವಾಣಿಯ ಹುಟ್ಟುಹಬ್ಬ. ಅಮೃತಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಪ್ರಜಾವಾಣಿಯೊಂದಿಗಿನ ನಂಟು ಹೈಸ್ಕೂಲು ಶಾಲಾದಿನಗಳಿಂದಲೇ ಉಂಟು. ಅಲ್ಲಿಂದಲೆ ಓದು ಮತ್ತು ಬರೆಯಬೇಕು ಎನ್ನುವ ಆಸೆ ಚಿಗುರಿದ್ದು. ಎಂಟನೆಯ ತರಗತಿಯಲ್ಲಿದ್ದಾಗ ಪ್ರಜಾವಾಣಿ ಕಥಾ ಸ್ಪರ್ಧೆಗೆ ಮನೆ ಹತ್ತಿರ ಇದ್ದ ಅಜ್ಜಿ ಹೇಳಿದ ಕತೆಯನ್ನು ಬರೆದು ಕಳಿಸಿದ್ದೆ. ಆದರೆ ಅದು ಸ್ವೀಕೃತ ಆಗದೆ ಅಂಚೆ ಪೇದೆ 50 ಪೈಸೆ ದಂಡ ಹಾಕಿದ್ದು, ಅದರಿಂದ ಒಂದು ರೀತಿಯಲ್ಲಿ ಎಲ್ಲರೆದುರು ಮುಜುಗರ ಅನುಭವಿಸಿದ್ದು ಮರೆಯಲು ಸಾಧ್ಯವಿಲ್ಲ. ಸುದ್ದಿಗಳಿಗಷ್ಟೇ ಅಲ್ಲದೆ ಎಲ್ಲ ವಿಷಯಗಳ ಮೇಲೆ ಬೆಳಕು ಚೆಲ್ಲುವ ಪತ್ರಿಕೆ ಮನೆಯಲ್ಲಿ ಮೂರು ತಲೆಮಾರಿನವರಿಗೂ ಅಚ್ಚುಮೆಚ್ಚು. ಇಂದಿಗೂ ಬೆಳಗಾಗುವುದು ಪ್ರಜಾವಾಣಿ ಮೂಲಕ ಎಂಬುದು ಅತಿಶಯದ ಉಕ್ತಿಯಲ್ಲ.

ಪ್ರಜಾವಾಣಿ ಜನವಾಣಿಯ ಪ್ರತಿಬಿಂಬ. ಇದರಲ್ಲಿ ಎರಡು ಮಾತಿಲ್ಲ. ಪತ್ರಿಕೆಯ ಬದ್ಧತೆ ಕನ್ನಡ,ಕನ್ನಡಿಗ ಮತ್ತು ಕರ್ನಾಟಕಕ್ಕೆ ಎಂದೆನಿಸಿದರೂ ಅಪ್ಪಟ ಭಾರತ ಮಾತೆಯ ಕೂಸು ಎಂಬುದು ನಿಸ್ಸಂಶಯ. ಸದಾ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತ, ಪತ್ರಿಕೆಯ ಸತ್ಯದ ಪರ ನಿಲುವು ಯಾವಾಗಲೂ ಅಭಿನಂದನೀಯ.

1948ರಲ್ಲಿ ಪತ್ರಿಕೆ ಆರಂಭ ಆದಾಗ ಹಾಕಿಕೊಂಡ ಗುರಿ ತಲುಪಿದ್ದರೂ ಬದಲಾಗುತ್ತಿರುವ ಸನ್ನಿವೇಶಗಳಿಗೆ ಹೊಸ ಗುರಿ ನಿರ್ಧರಿಸಿಕೊಳ್ಳುತ್ತ ಶತಮಾನೋತ್ಸವ ಆಚರಣೆಯತ್ತ ದಾಪುಗಾಲು ಹಾಕಲೆಂದು, ಎತ್ತರೆತ್ತರ ಬೆಳೆಯಲೆಂದು ಹೃತ್ಪೂರ್ವಕವಾಗಿ ಹಾರೈಸುವೆ.
– ಬಿ ಆರ್ ಅಣ್ಣಾಸಾಗರ, ಮನೆ ಸಂಖ್ಯೆ: 42-ಹೆಚ್, ಬಾಲ ನಿಲಯ , ಸರ್ಕಾರಿ ಡಿಗ್ರಿ ಕಾಲೇಜಿನ ಹತ್ತಿರ
ವಿದ್ಯಾನಗರ, ಸೇಡಂ, ಕಲಬುರಗಿ ಜಿಲ್ಲೆ.

*

ಅಭಿಮಾನ...
ಸುಮಾರು 55 ವರ್ಷಗಳಿಂದ ಪ್ರಜಾವಾಣಿ ಓದುತ್ತಿರುವ ನನಗೆ ತುಂಬಾ ಅಭಿಮಾನ, ಆನಂದ. ಸಾಪ್ತಾಹಿಕ ಪುರವಣಿ ನೋಡದಿದ್ದರೆ ಸಮಾಧಾನವಿಲ್ಲ. 1965ರಲ್ಲಿ ಶಾಲೆಯ ಮಧ್ಯಂತರ ಅಲ್ಪ ವಿರಾಮದಲ್ಲಿ ಹೋಟೆಲಿಗೆ ಹೋಗುತ್ತಿದ್ದೆವು. ಮುಖ್ಯ ಉದ್ದೇಶ ಪ್ರಜಾವಾಣಿಯ ಓದು. ಇಂದಿಗೂ ಪ್ರಜಾವಾಣಿಯನ್ನು ಓದದಿದ್ದರೆ ಸಮಾಧಾನವಿಲ್ಲ. ಮುಂಜಾನೆ ವಾಕಿಂಗ್ ಮುಗಿದ ತಕ್ಷಣ ಪ್ರಜಾವಾಣಿ ಬೇಕು.

ಈ ಪ್ರಜಾವಾಣಿ ಅನೇಕ ಪ್ರತಿಭಾವಂತರನ್ನು, ಸಾಹಿತಿಗಳನ್ನು ಬೆಳೆಸಿದೆ, ಗಳಿಸಿದೆ. ಗಟ್ಟಿಗೊಳಿಸಿದೆ. ಅನೇಕರಿಗೆ ಜೀವನ ಕೊಟ್ಟಿದೆ, ಆಶ್ರಯ ಕೊಟ್ಟಿದೆ. ಕೆ.ಎನ್‌.ಗುರುಸ್ವಾಮಿ ಮತ್ತು ನೆಟ್ಟಕಲ್ಲಪ್ಪನವರು ಅಭಿನಂದನಾರ್ಹರು. ನನಗೆ ಗೊತ್ತಿದ್ದಂತೆ ಅಂದು ಈ ಪತ್ರಿಕೆ ದಕ್ಷಿಣಾ ಕರ್ನಾಟಕದಲ್ಲಿ ಪ್ರಾರಂಭವಾದದ್ದು ಹಿಂದುಳಿದವರ ಧ್ವನಿಯಾಗಿ ಪ್ರಕಟವಾಗುತ್ತಿತ್ತು. ಅದರೀಗ ಎಲ್ಲರ ಧ್ವನಿಯಾಗಿದೆ. 

ನನ್ನ ಅನೇಕ ಲೇಖನಗಳು, ಕೃತಿ ಪರಿಚಯಗಳು, ಪ್ರಕಟವಾಗಿವೆ.
–ಡಾ.ಕೆ.ಬಿ ಬ್ಯಾಳಿ, ಹಿರಿಯ ಸಾಹಿತಿ, ಕುಕನೂರ

*

ಮೌಲ್ಯಯುತ...
ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಪತ್ರಿಕೆಗೆ ಅಭಿನಂದನೆಗಳು. ಪತ್ರಿಕೆ ಅಂದರೆ ಅದು ತನ್ನದೇ ಆದ ಮೌಲ್ಯಗಳನ್ನು ಹೊಂದಿದೆ. ಅದಕ್ಕೆ ಅದೇ ಸಾಟಿ ಅಂದರೆ ತಪ್ಪಾಗಲಾರದು. ಮೂವತ್ತು ವರ್ಷಗಳ ಹಿಂದೆ ಇದೇ ಪತ್ರಿಕೆಯಲ್ಲಿ ಬಂದ ಒಂದು ಜಾಹೀರಾತು ನೋಡಿ ನಾನು ಅದನ್ನೇ ಆರಿಸಿಕೊಂಡು ಇಂದು ಅದೇ ಕ್ಷೇತ್ರದಲ್ಲಿ ಮುಂದುವರಿಯುತಿದ್ದೇನೆ ಎಂದರೆ ಅದಕ್ಕೆ ಈ ಪ್ರಜಾವಾಣಿ ಪತ್ರಿಕೆ ಕಾರಣ. ಇಂದಿಗೂ ಕೂಡ ನಾನು ಯಾವುದಾದರೂ ಪುಸ್ತಕ ಅಂಗಡಿಗೆ ಹೋದಾಗ ಮೊದಲಿಗೆ ಕೇಳುವದು ಪ್ರಜಾವಾಣಿ ಪತ್ರಿಕೆ ಕೊಡಿ ಎಂದೇ. ಪತ್ರಿಕೆ ನೂರರ ಸಂಭ್ರಮ ಆಚರಿಸಿಕೊಳ್ಳಲಿ ಎಂಬುದು ನನ್ನ ಆಶಯ..
– ವಿನಾಯಕ. ಆರ್.54, ಜಾಲಹಳ್ಳಿ. ತಾಲೂಕ್. ದೇವದುರ್ಗ, ರಾಯಚೂರು ಜಿ.

*

ಕೊಡುಗೆ ಅಪಾರ...
ಬೆಳಿಗ್ಗೆ ಎದ್ದು ಪ್ರಜಾವಾಣಿ ಓದುವುದೇ ಒಂದು ಸಂಭ್ರಮ!
ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ 'ಪ್ರಜಾವಾಣಿ'ಯ ಕೊಡುಗೆ ಅಪಾರ. ಹಲವಾರು ಕಥೆಗಾರರು, ಬರಹಗಾರರು ಪ್ರಜಾವಾಣಿ ಪತ್ರಿಕೆಯಿಂದಲೇ ರೂಪುಗೊಂಡಿದ್ದಾರೆ ಎಂದರೆ ತಪ್ಪಲ್ಲ. ಅಷ್ಟರ ಮಟ್ಟಿಗೆ ಪತ್ರಿಕೆಯ ಪ್ರಭಾವ ಕನ್ನಡನಾಡಿನಲ್ಲಿದೆ.  ಪತ್ರಿಕೆಯ ಬೆಳವಣಿಗೆ ಮತ್ತಷ್ಟು ಎತ್ತರಕ್ಕೆ ಏರಲಿ ಎಂದು ಹಾರೈಸುತ್ತೇನೆ.
– ರಾಜಶೇಖರ ಮೂರ್ತಿ, ಅತಿಥಿ ಉಪನ್ಯಾಸಕ, ಬೆಳಗನಹಳ್ಳಿ, ಹೆಚ್ ಡಿ ಕೋಟೆ ತಾ., ಮೈಸೂರು ಜಿಲ್ಲೆ.

*

ವಾಚಕರ ಅಸ್ಮಿತೆ ಪ್ರಜಾವಾಣಿ
ನಾಡಿನ ಮನೆ ಮನೆಗಳ ಬಹು ಜನಮನದ ಅತ್ಯಂತ ವಿಶ್ವಾಸಾಹ೯ ಹಾಗೂ ನೆಚ್ಚಿನ ಪತ್ರಿಕೆಯಾಗಿರುವ ಪ್ರಜಾವಾಣಿ ಅಮೃತ ಮಹೋತ್ಸವದ ಸಂಭ್ರಮಾಚರಣೆಯ ಸನಿಹದಲ್ಲಿರುವುದು ಸಕಲ ವಾಚಕರಿಗೆ ಅಪರಿಮಿತವಾದ ಆನಂದದ ಗಳಿಗೆ. ಸದಾ ನಾಡಿನ ನೆಲ, ಜಲ, ಭಾಷೆ, ನುಡಿ, ಸಾಹಿತ್ಯ ಪ್ರವಧ೯ನೆಗೆ ತನ್ನದೇ ಆದ ಅಮೋಘ ಸೇವೆ ನೀಡುತ್ತಿರುವ ಪ್ರಜಾವಾಣಿ ಪತ್ರಿಕೆಗೆ ಹಾಗೂ ಪ್ರಜಾವಾಣಿ ಬಳಗಕ್ಕೆ ಅಭಿನಂದನೆಗಳು.

ಪ್ರಜಾವಾಣಿ ಮತ್ತು ನನಗೆ ಸುಮಾರು 25 ವಷ೯ಗಳ ಅವಿನಾಭಾವ ಸಂಬಂಧ. ಬಾಲ್ಯದಲ್ಲಿಯೇ ನನ್ನಣ್ಣ ಎಸ್.ರೇಣುಕಪ್ಪನವರು ನನಗೆ ಪ್ರಜಾವಾಣಿ ಪತ್ರಿಕೆ ಪರಿಚಯಿಸಿ ಅದರ ಜ್ಞಾನದ ಹೂರಣವ ಉಣಬಡಿಸಿದವರು. ಅಂದಿನಿಂದ ಪ್ರಜಾವಾಣಿಯ ಕಾಯಂ ವಾಚಕನಾಗಿ ಇಂದಿಗೆ 25 ವಷ೯ಗಳು ಸಂದಿವೆ. ಉದಯಕಾಲದಿ ಅನೇಕ ಮಾಹಿತಿಗಳ ಸಾರದೊಂದಿಗೆ ಉತ್ತೇಜನ ಒದಗಿಸುವ ಪ್ರಜಾವಾಣಿ ಪತ್ರಿಕೆ ನನ್ನ ಜೀವನದ ಪೂರಕ ಜ್ಞಾನದ ಚಿಲುಮೆ. ದೇಶ ಹಾಗೂ ಪ್ರಚಲಿತ ಘಟನೆಗಳ ಕುರಿತು ಪ್ರಜಾವಾಣಿಯಲ್ಲಿ ಬಿತ್ತರವಾಗುವ ಸಂಪಾದಕೀಯ, ಸಂಗತ ಅಂಕಣಗಳು ಹಾಗೂ ಸಾಹಿತ್ಯದ ಲಾಲಿತ್ಯವನ್ನು ಪ್ರತಿಬಿಂಬಿಸುವ ವೇದಿಕೆಯಾದ ಸಾಪ್ತಾಹಿಕ ಪುರವಣಿಯ ಉಪಯುಕ್ತ ಲೇಖನಗಳು ನನ್ನ ಸಾಹಿತ್ಯಿಕ ವಾಂಛೆ, ಹಳವಂಡಗಳ ವೈಚಾರಿಕತೆಯ ದ್ವಿಗುಣಗೊಳ್ಳುವಿಕೆಗೆ ಪೂರಕ ವಾತಾವರಣ ಒದಗಿಸುತ್ತಿವೆ. ಅದೇ ಪ್ರಜಾವಾಣಿಯಲ್ಲಿ ನನ್ನ ಬರಹಗಳು ಮೂಡಿ ಬಂದಾಗ ನನಗಾದ ಸಂಭ್ರಮಕ್ಕೆ ಪಾರವೇ ಇಲ್ಲ. ಒಟ್ಟಾರೆಠ ಪ್ರಜಾವಾಣಿಯು ಕನ್ನಡಿಗರ ಸಾಮಾಜಿಕ, ಸಾಹಿತ್ಯ, ಶೈಕ್ಷಣಿಕ ಲೋಕದ ಸಾವ೯ಭೌಮ...
– ಎಸ್.ಎಚ್.ಸೋಮಶೇಖರ ಮಾಗಳ,ವಿಜಯನಗರ.

*

ನಮ್ಮ ಹೆಮ್ಮೆ....
ಯಾವ ಟಿವಿ ಮಾಧ್ಯಮಗಳಿಗಿಂತಲೂ ನಮ್ಮ 'ವಾಣಿ ' ನಿರಂತರ 'ಪ್ರಜೆ' ಯಾಗಿದೆ. ಅದು ನಮ್ಮ ಹೆಮ್ಮೆಯ ಪ್ರಜಾವಾಣಿ. ನಮ್ಮ ತಂದೆಯವರ ಸವಿ ನೆನಪಿನ ಕಾಣಿಕೆಯೇ ಈ ಪತ್ರಿಕೆ ಓದುವ ಬಾಲ್ಯದ ಹವ್ಯಾಸ. ದಿ.ಎನ್.ಎಸ್.ಕೃಷ್ಣ ಅಯ್ಯಂಗಾರ್ ಅವರು ಸೇವೆ ಸಲ್ಲಿಸಿದ ಈ ಪತ್ರಿಕೋದ್ಯಮ ನಮ್ಮ ಸಂಸಾರದ ಒಂದು ನಂಟು ಕೂಡ. ಇಂದಿಗೂ ನಮ್ಮ ಪರಿವಾರದ ಏಕೈಕ ಕಣ್ಮಣಿ ಈ ಪತ್ರಿಕೆಯೇ. ನಿತ್ಯ ನಾನು ಬಿಡಿಸುವ ಪದಬಂಧ, ಸುಡೊಕು ಒಂದು ಆಹ್ಲಾದಕರ ಪ್ರಕ್ರಿಯೆ.
ಎಲ್ಲಾ ದೃಷ್ಟಿ ಕೋನಗಳಿಂದಲೂ ಆಯ್ಕೆಪಟ್ಟ ಏಕೈಕ ಪತ್ರಿಕೆ ನಮ್ಮ ಪ್ರಜಾವಾಣಿಯ ಅಮೃತ ಮಹೋತ್ಸವಕ್ಕೆ ಜೈ
– ಎನ್. ಕೆ. ರಾಜಲಕ್ಷ್ಮಿ, ಪ್ರಜಾವಾಣಿಯ ಬಾಲ್ಯ ಸಂಗಾತಿ

*

ಶತಾಯುಷಿಯಾಗಲಿ!
ನನಗೆ ಬುದ್ದಿ ಬಂದಾಗಿನಿಂದಲೂ ನೋಡಿದ, ಓದಿದ ಪ್ರಜಾವಾಣಿಯು ನನ್ನ ಸಹೋದರನಂತೆ ಒಟ್ಟೊಟ್ಟಿಗೆ ಬೆಳೆದಿದ್ದೇವೆ. ನನ್ನಣ್ಣನ ಈಗ ಎಪ್ಪತೈದರ ಸಂಭ್ರಮದಲ್ಲಿ ನಾನೂ ಸಂತೋಷದಿಂದ ಉಬ್ಬುತ್ತಿದ್ದೇನೆ. ಇದರ ಸೋದರಿ, ಸೋದರರಾದ ಸುಧಾ, ಮಯೂರವನ್ನು ಅಷ್ಟೇ ಇಷ್ಟಪಡುತ್ತೇವೆ. ಈ ಮೂವರು ನನ್ನನ್ನು ಆಧರಿಸಿ ಅನೇಕ ನನ್ನ ಕವನಗಳನ್ನು, ಹಾಸ್ಯ ಲೇಖನವನ್ನು, ಮಕ್ಕಳ ಕತೆಗಳನ್ನು ಪ್ರಕಟಿಸಿ, ಅವರಲ್ಲಿ ಒಬ್ಬನನ್ನಾಗಿ ಮಾಡಿಕೊಂಡಿದ್ದಾರೆ ಅನ್ನೋದು ನನಗೂ ಹೆಮ್ಮೆಯ ವಿಷಯ. ಮೂವರೂ ಶತಾಯುಷಿಗಳಾಗಲಿ ಎನ್ನುವುದು ನಮ್ಮೆಲ್ಲರ ಹಾರೈಕೆ ಮತ್ತು ಅಭಿಲಾಷೆ.
–ವಿ.ವಿಜಯೇಂದ್ರ ರಾವ್, ಬೆಂಗಳೂರು

*

ಬೆಳವಣಿಗೆಗೆ ಮಾರ್ಗದರ್ಶಕ....
ಪ್ರಜಾವಾಣಿ ಓದುಗನಾಗಿ ನನಗೆ ಒಂದು ತರ ಪುಳಕ ಕಾರಣ ಈ ಸಂಭ್ರಮ ಆಚರಣೆ. ಎಲ್ಲೋ ನಮ್ಮ ಮನೆಯ ನಮ್ಮ ಆತ್ಮೀಯರಿಗೆ ನಡೆಯುತ್ತಿದೆ. ನಾವು ಅದರಲ್ಲಿ ಭಾಗಿಯಾಗಿದ್ದೇವೆ ಎಂದು ಮನಮಿಡಿಯುತ್ತಿದೆ. ನನಗೆ ಮತ್ತು ಪ್ರಜಾವಾಣಿ ಒಂದು ತರಹ ಗುರು ಶಿಷ್ಯರ ಅನುಬಂಧ. ಈ ಪತ್ರಿಕೆ ನನಗೆ ಅಮೂಲ್ಯ ಜ್ಞಾನ ನೀಡಿದೆ. ನನ್ನ ಬೆಳವಣಿಗೆಗೆ ಮಾರ್ಗದರ್ಶನವಾಗಿದೆ. ಈ ಪತ್ರಿಕೆಯ ಬದ್ಧತೆ ಮತ್ತು ವಿಚಾರಧಾರೆ ಬಗ್ಗೆ ನನಗೆ ಹೆಚ್ಚಿನ ವಿಶ್ವಾಸವಿದೆ. ಈ 75ರ ಸಂಭ್ರಮದ ವೇಳೆ ದೇಶದ ಮಾಧ್ಯಮ ವ್ಯವಸ್ಥೆ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಆದರೆ ನಮ್ಮಂತಹ ಎಷ್ಟೋ ಜನರಿಗೆ ಪ್ರಜಾವಾಣಿ ಆಶಾಕಿರಣ ಎಂದರೆ ಸುಳ್ಳಲ್ಲ. ಎಷ್ಟೊ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಮಿತ್ರರಿಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿಯಲು ಕನ್ನಡದಲ್ಲಿರುವ ಏಕೈಕ ಜ್ಞಾನ ಭಂಡಾರ ಈ ಪ್ರಜಾವಾಣಿ ಎಂಬ ಹೆಮ್ಮೆಯ ಮಾತಿನೊಂದಿಗೆ, ನನ್ನ ನೆಚ್ಚಿನ ಪತ್ರಿಕೆಗೆ ಹೃದಯತುಂಬಿ ಶುಭಕಾಮನೆಗಳು....
– ಮಹೇಶ ಪಿ., ಪುಟ್ಟೇಗೌಡನಹುಂಡಿ

*

ಅಚ್ಚುಕಟ್ಟುತನ...
1970 ರಿಂದ ಇಂದಿನ ವರೆಗೆ ದಿನ ತಪ್ಪದೆ ಪ್ರ.ವಾ. ಓದುತ್ತಿದ್ದೇನೆ. ಇದಕ್ಕೆ ಮುಖ್ಯ ಕಾರಣವೆಂದರೆ ಸುದ್ದಿಯ ಆಯ್ಕೆ, ಶೀರ್ಷಿಕೆ, ಮಂಡನೆ, ವಿನ್ಯಾಸ ಮತ್ತು ವಿಶ್ಲೇಷಣೆಯಲ್ಲಿ ಪತ್ತಿಕಾ ಸಂಪಾದಕರೂ ಒಳಗೊಂಡಂತೆ ಸಂಬಂಧಿಸಿದ ಎಲ್ಲರೂ ತೋರಿಸುವ ಪ್ರಬುದ್ದತೆ, ಅಚ್ಚುಕಟ್ಟುತನ.

ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂದಿಸಿದ ವರದಿ ಮತ್ತು ಲೇಖನಗಳಷ್ಟೇ ಅಲ್ಲದೆ ಆಧುನಿಕ ವಿಜ್ಙಾನ ಮತ್ತು ತಂತ್ರಜ್ಙಾನಕ್ಕೆ ಸಂಭಂದಿಸಿದ ಹಾಗೆಯೂ ಸಂಗ್ರಹ ಯೋಗ್ಯವಾದ ಹಲವಾರು ಉತ್ತಮ ವರದಿಗಳು, ಲೇಖನಗಳು, ವಿಶ್ಲೇಷಣೆಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ.

ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಪ್ರಜಾವಾಣಿಗೆ ಹಾರ್ದಿಕ ಅಭಿನಂದನೆಗಳು.

–ಡಾ.ಎಂ.ರವೀಂದ್ರ, ಹಿರಿಯ ವಿಜ್ಞಾನಿ, ಇಸ್ರೋ, (ನಿವೃತ್ತ), ಬೆಂಗಳೂರು

*

ಅಮೃತವಾಣಿ...
ಪ್ರಜಾವಾಣಿ ಓದುಗರ ಪಾಲಿನ ಅಮೃತವಾಣಿ. ಪ್ರತಿದಿನವೂ ಓದುಗರಿಗೆ ಸುದ್ದಿಯ ರಸದೌತಣ ಉಣಬಡಿಸುತ್ತದೆ. ಇಂದಿನ ವಿದ್ಯಾರ್ಥಿ -ಯುವಜನರಿಗೆ ಮುಂದಿನ ಪ್ರಜಾಪ್ರಭುತ್ವದ ಪರಿಕಲ್ಪನೆಯ ಭದ್ರಬುನಾದಿಯ ಪಾಠವನ್ನು ಕಲಿಸುತ್ತದೆ. ಅನ್ಯಾಯದ ವಿರುದ್ಧ ವರದಿ ಮಾಡುತ್ತಾ, ಜನಸಾಮಾನ್ಯರ ದ್ವನಿಯಾಗಿದೆ.
–ವಿರೂಪಾಕ್ಷ ಎಂ.

*

ಗುಣಮಟ್ಟ ಕಾಯ್ದುಕೊಂಡ ಪತ್ರಿಕೆ
ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಪತ್ರಿಕೆ ತನ್ನ ನಿರಂತರತೆ ಕಾಯ್ದುಕೊಂಡು ಬಂದಿರುವುದು ಶ್ಲಾಘನೀಯ.ಆಡಂಬರದ ಶೃಂಗಾರತೆಗೆ ವಾಲದೆ ತಾನು ಕಂಡುಕೊಂಡ ಆರಂಭಿಕ ಗುಣಮಟ್ಟದ ಸತ್ಯವನ್ನೇ ವಿಜೃಂಭಿಸಿ ಜನಸಾಮಾನ್ಯ ಓದುಗರ ಮೇಲೆ ಇಂದಿಗೂ ಸೃಜನಾತ್ಮಕ ಪ್ರಭಾವ ಬೀರುತ್ತಿರುವುದು ಪತ್ರಿಕಾ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಒಂದು ಸುದ್ದಿಯನ್ನು ಕೇವಲ ಸುದ್ದಿಯಾಗುವಷ್ಟರ ಮಟ್ಟಿಗೆ ಮಾತ್ರ ಪ್ರಕಟಿಸದೆ ಅದಕ್ಕೊಂದು ಲೇಖನದ ಸ್ವರೂಪ ಕಲ್ಪಿಸುವುದು ಬರಹಗಾರರಿಗೆ ಪ್ರೇರಣಾದಾಯಕ ವಾಗಿದೆ. ಪ್ರತಿದಿನ ಪ್ರಕಟವಾಗುವ ವಿವಿಧ ಪುರವಣಿಗಳು ಅಬಾಲವೃದ್ಧ ರಿಂದ ಎಲ್ಲ ಬಗೆಯ ಓದುಗರನ್ನು ಬಿಡದಂತೆ ಓದಿಸಿಕೊಳ್ಳುವುದು ಪತ್ರಿಕಾ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ. ಶತಶತಮಾನ ಗಳತ್ತ ಪತ್ರಿಕೆ ತನ್ನ ಸಾಧನೆ ವಿಜೃಂಭಿಸುವಂತಾಗಲಿ ಎಂಬುದು ನಮ್ಮೆಲ್ಲರ ಕಳಕಳಿ.
–ಗುರುನಾಥ ಸುತಾರ ಹುಲ್ಯಾಳ. ಲೇಖಕರು ಹವ್ಯಾಸಿ ಬರಹಗಾರರು

*

ವಸ್ತುನಿಷ್ಠ ವಿಶ್ಲೇಷಣೆ...
ವಿಶ್ವಾಸಾರ್ಹ ಸುದ್ದಿಗಳ ವರದಿಗೆ ಪಾತ್ರವಾದ ರಾಜ್ಯದ ಅತ್ಯಂತ ಹೆಮ್ಮೆಯ ದಿನ ಪತ್ರಿಕೆಯಾದ ಪ್ರಜಾವಾಣಿ ಅಮೃತ ಮಹೋತ್ಸವ ಆಚರಿಸುತ್ತಿರುವುದು ಸಂಭ್ರಮದ ಸಂಗತಿಯಾಗಿದೆ. ಪ್ರತಿಯೊಬ್ಬ ಸ್ಪರ್ಧಾರ್ಥಿಗೆ ಬೇಕಾದ ಪ್ರಚಲಿತ ವಿದ್ಯಮಾನಗಳನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಿ ಸ್ಪರ್ಧಾರ್ಥಿಯ ಗುರಿಯನ್ನು ತಲುಪಿಸುವ ವಿಶ್ವಾಸಾರ್ಹ ದಿನಪತ್ರಿಕೆಯಾಗಿದೆ.
– ಆಂಜನೇಯ.ಎನ್., ಮಧುಗಿರಿ

*

ವಂದನೆಗಳು....
ಪ್ರಜಾವಾಣಿಯು ಅಮೃತ ಮಹೋತ್ಸವ ಆಚರಿಸುತ್ತಿರುವುದು ಸಂತಸದ ಸಂಗತಿ. ನಾನು ಸುಮಾರು ಎರಡು ದಶಕಗಳಿಂದ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗುವ ಅಂಕಣಗಳು, ಲೇಖನಗಳು ಹಾಗೂ ಪ್ರಸ್ತುತ ವಿದ್ಯಮಾನದ ಸರಣಿ ವರದಿಗಳನ್ನು ಓದುತ್ತಿರುವೆ. ನನಗೂ ಬರೆಯಲು ಪ್ರೋತ್ಸಾಹಿಸಿದೆ. 2013ರ ಫೆ. 6ರಂದು ನನ್ನ ಪ್ರಥಮ ಲೇಖನ ವಾಣಿಜ್ಯ ಪುರವಣಿಯಲ್ಲಿ ಪ್ರಕಟವಾಗಿದ್ದು ನೋಡಿದಾಗ ನನ್ನ ಆನಂದಕ್ಕೆ ಪಾರವೇ ಇಲ್ಲ. ಅಂದಿನಿಂದ ನಾನು ಬರೆದ ಸುಮಾರು 35ಕ್ಕೂ ಹೆಚ್ಚು ಲೇಖನಗಳು ವಾಣಿಜ್ಯ ಪುರವಣಿಯಲ್ಲಿ ಪ್ರಕಟವಾಗಿವೆ. ಅವುಗಳಲ್ಲಿ ವಾರದ ಪ್ರಧಾನ ಲೇಖನಗಳಾಗಿ ಪ್ರಕಟವಾಗಿವೆ. ಕರ್ನಾಟಕ ದರ್ಶನ, ಶಿಕ್ಷಣ ಹಾಗೂ ಭಾನುವಾರದ ಪುರವಣಿಗಳಲ್ಲೂ ಸಾಮಾಜಿಕ ಹಾಗೂ ಸಾಂಸ್ಕೃತಿಕ ಲೇಖನಗಳೂ ಪ್ರಕಟವಾಗಿವೆ.  ಹೀಗೆ ನಾನು ಪ್ರಜಾವಾಣಿ ಪತ್ರಿಕೆಯನ್ನು ಓದುತ್ತಾ ಹವ್ಯಾಸಿ ಅಂಕಣಕಾರನಾಗಿ ಬೆಳೆದಿದ್ದೇನೆ. ಪ್ರಜಾವಾಣಿ ಬಳಗಕ್ಕೆ ನನ್ನ ವಂದನೆಗಳು.
–ಜೆ.ಸಿ.ಜಾಧವ. 'ಶ್ರೀ ಕೇದಾರ್' ಸೆಕ್ಟರ್-63ಎ ಬೃಂದಾವನ, ನವನಗರ, ಬಾಗಲಕೋಟೆ

*

ನಿತ್ಯ ನೂತನ..
ನಾನು ಸರಿಸುಮಾರು 35 ವರ್ಷಗಳಿಂದ ಪ್ರಜಾವಾಣಿ ಪತ್ರಿಕೆಯನ್ನು ಓದುತ್ತಿದ್ದೇನೆ. ಅಂದಿನಿಂದ ಇಂದಿನವರೆಗೂ ಪ್ರಜಾವಾಣಿಯ ಬಗೆಗಿನ ನನ್ನ ಚಿಂತನೆ, ಸಾಹಿತ್ಯ ಶಕ್ತಿ, ಲೋಕಾನುಭವ ಅದರೊಂದಿಗಿನ ನಂಟು ಇವತ್ತಿಗೂ ಉತ್ತಮವಾಗಿದೆ. ಪತ್ರಿಕಾ ಧರ್ಮದ ಬದ್ಧತೆ ಪ್ರಜಾವಾಣಿಯಲ್ಲಿ ಎದ್ದು ಕಾಣುತ್ತದೆ.

ವಾಚಕರವಾಣಿಯಲ್ಲಿ ನನ್ನ ಪತ್ರಗಳು ಸಾಕಷ್ಟು ಪ್ರಕಟವಾಗಿವೆ. ಆಗುತ್ತಿವೆ. ನನ್ನನ್ನು ಕವಿಯಾಗಿ, ಹವ್ಯಾಸಿ ಬರಹಗಾರನಾಗಿ ಗುರುತಿಸಿಕೊಳ್ಳಲು ಪ್ರಜಾವಾಣಿ ನನಗೆ ನೆರವಾಗಿದೆ. ಕನ್ನಡ ಸಾರಸ್ವತ ಲೋಕದಲ್ಲಿ ಪತ್ರಿಕೆಯೊಂದು ಯಶಸ್ವಿಯಾಗಿ 75 ವರ್ಷಕ್ಕೆ ಕಾಲಿಟ್ಟು ತನ್ನ ಪತ್ರಿಕಾ ಛಾಪನ್ನು ಹಚ್ಚಹಸುರಾಗಿಟ್ಟುಕೊಂಡು ಓದುಗರನ್ನು ನಿತ್ಯ ನೂತನವಾಗಿ ಸೆಳೆಯುತ್ತಿರುವ ನನ್ನ ನೆಚ್ಚಿನ ಪ್ರಜಾವಾಣಿಗೆ ಶುಭವಾಗಲಿ.
–ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

*

ಅವಿನಾಭಾವ ಸಂಬಂಧ
ಪ್ರಜಾವಾಣಿ ನನ್ನ ನೆಚ್ಚಿನ ಸಂಗಾತಿ. ಸುಮಾರು ಐದು ದಶಕಗಳಿಗಿಂತಲೂ ಹೆಚ್ಚು ಇದರ ಜೊತೆ ನನ್ನ ಸಂಬಂಧ, ಬರೀ ಸಂಬಂಧವಲ್ಲ. ಅವಿನಾವ ಭಾವ ಸಂಬಂಧ. ಈ ಪತ್ರಿಕೆ ಮೇಲಿಂದಲೇ ನನ್ನ ಸ್ಥಾನಮಾನ ಹೆಚ್ಚಾಗಿದೆ. ವಾಚಕರವಾಣಿ, ಅಭಿಮತ ಪುಟ ಅರ್ಥಪೂರ್ಣವಾಗಿವೆ. ಕೆಲವು ವರ್ಷಗಳ ಹಿಂದೆ ಸ್ಥಿರ ಶೀರ್ಷಿಕೆಗಳು ಪ್ರಕಟವಾಗುವ ಕಾಯಂ ಸ್ಥಳವನ್ನು ಅದಲುಬದಲು ಮಾಡಿದ್ದುಂಟು. ಆದರೆ ಇದಕ್ಕೆ ಓದುಗರ ಸ್ಪಂದನೆ ಸಿಗದ ಕಾರಣ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಬರಲಾಗಿದೆ.
ಕೊರೊನಾ ಹಾವಳಿಯಿಂದ ದಿನನಿತ್ಯ ಹೊರತರುತ್ತಿದ್ದ ಪ್ರತ್ಯೇಕ ಪುರವಣಿಗಳನ್ನು ನಿಲ್ಲಿಸಿ ಮುಖ್ಯ ಪುಟಗಳಲ್ಲಿಯೇ ಅವುಗಳನ್ನು ಹೊಂದಿಸಿ ಪ್ರಕಟಗೊಳಿಸುತ್ತಿರುವುದು ಅಷ್ಟಾಗಿ ಸರಿ ಕಾಣುತ್ತಿಲ್ಲ. ಎಂದಿನಂತೆಯೇ ಮೇಲ್ಕಂಡ ಪುರವಣಿಗಳನ್ನು ಪ್ರತ್ಯೇಕ ಪುಟಗಳಲ್ಲಿ ತರಲು ಓದುಗರ ಅಪೇಕ್ಷೆಯಾಗಿದೆ. ಇತ್ತೀಚೆಗೆ ಭಾನುವಾರದ ಪುರವಣಿಯನ್ನು ಪ್ರತ್ಯೇಕವಾಗಿ ಹೊರತರುತ್ತಿರುವುದು ಸಂತಸ ತಂದಿದೆ. ಈ ಪುರವಣಿಯ ಪುಟಗಳನ್ನು ಇನ್ನಷ್ಟು ಹೆಚ್ಚಿಸುವುದು ಸೂಕ್ತ.
–ಅ.ಸಿ. ಸಿದ್ದೇಗೌಡ ಅರಳಕುಪ್ಪೆ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ

*

ಅಭಿಮಾನ ಪಡುವೆ!
ಅಮೃತಮಹೋತ್ಸವ ಸಂಭ್ರಮದಲ್ಲಿರುವ ‘ಪ್ರಜಾವಾಣಿ’ ನನ್ನ ಬಾಲ್ಯ, ಯೌವ್ವನ, ವೃದ್ಯಾಪ್ಯದ ಸಂಗಾತಿಯಾಗಿ ಕೈ ಹಿಡಿದು ನಡೆಸಿದೆ. ನಾನು ಪ್ರಜಾವಾಣಿ ಓದುಗನೆಂದು ಹೇಳಿಕೊಳ್ಳಲು ಯಾವತ್ತಿಗೂ ಅಭಿಮಾನ ಪಡುವೆ.

ಬೇರೆ ಯಾವುದೇ ಪತ್ರಿಕೆ ಮನೆ ಬಾಗಿಲಲ್ಲಿದ್ದರೂ ಮೊದಲ ನೋಟದಲ್ಲಿ ಮಗುಚಿ ಹಾಕುವುದು ಹಾಗೂ ಎರಡನೆಯ ಓದಿಗೂ ಇಟ್ಟುಕೊಳ್ಳುವುದೆಂದರೆ ಅದು ಅವ್ಯಕ್ತ ಪ್ರೀತಿ ತುಂಬಿಸುವ, ಪ್ರಾಜ್ಞತೆ ಬಿಂಬಿಸುವ ನಿರಾಭರಣ ಸುಂದರ ಏಕೈಕ ಪತ್ರಿಕೆ ಪ್ರಜಾವಾಣಿಯೇ ಆಗಿದೆ.
–ಎನ್.ಆರ್.ಗಜು, ಕುಮಟಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.