ಶನಿವಾರ, ಮಾರ್ಚ್ 6, 2021
28 °C
ಸರ್ಕಾರ ಪತನ

ಉತ್ತರ–ದಕ್ಷಿಣ ಧ್ರುವ ಸಂಗಮಕ್ಕೆ ಗ್ರಹಣ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಜೆಪಿ ಮತ್ತು ಪಿಡಿಪಿ 2015ರಲ್ಲಿ ಒಟ್ಟಾದಾಗ, ಆಗ ಪಿಡಿಪಿಯ ಮುಖ್ಯಸ್ಥರಾಗಿದ್ದ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರು ಈ ಮೈತ್ರಿಯನ್ನು ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವದ ಸಂಗಮ ಎಂದು ಬಣ್ಣಿಸಿದ್ದರು. ಆದರೆ, ವರ್ಷಗಳ ಬಳಿಕ ಮೈತ್ರಿ ಮುರಿದು ಬಿದ್ದಾಗ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಇದೊಂದು ಅವಕಾಶವಾದಿ ರಾಜಕಾರಣ ಎಂದು ವಿರೋಧ ಪಕ್ಷಗಳು ಆಪಾದಿಸಿವೆ.

ಸರ್ಕಾರದಿಂದ ಹೊರನಡೆಯುವ ಬಿಜೆಪಿಯ ನಿರ್ಧಾರ ಪಿಡಿಪಿಯನ್ನು ಅಚ್ಚರಿಯಲ್ಲಿ ಕೆಡವಿದೆ. ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪರಿಸ್ಥಿತಿಯನ್ನು ಸುಧಾರಿಸಲು ಪಿಡಿಪಿ ಸಮರ್ಥವಾಗಿಲ್ಲ ಎಂಬ ಕಾರಣವನ್ನು ಮೈತ್ರಿ ಮುರಿತಕ್ಕೆ ಬಿಜೆಪಿ ನೀಡಿದೆ. 

ರಾಜ್ಯದ ಆಡಳಿತ ಚುಕ್ಕಾಣಿಯನ್ನು ರಾಜ್ಯಪಾಲರ ಕೈಗೆ ನೀಡಲು ಕಾಲ ಸನ್ನಿಹಿತವಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್‌ ಹೇಳಿದ್ದಾರೆ. 

ಆದರೆ, ‘ತೋಲ್ಬಳದ ಭದ್ರತಾ ನೀತಿ’ ರಾಜ್ಯದಲ್ಲಿ ಕೆಲಸ ಮಾಡುವುದಿಲ್ಲ, ಮಾತುಕತೆ ಮೂಲಕ ಮಾತ್ರ ಪರಿಸ್ಥಿತಿಯ ಸುಧಾರಣೆ ಸಾಧ್ಯ ಎಂದು ಮೆಹಬೂಬಾ ಮುಫ್ತಿ ಅಭಿಪ್ರಾಯಪಟ್ಟಿದ್ದಾರೆ. 

‘ಕೆಲವು ಮಂದಿ ಭಾವಿಸಿರುವಂತೆ ಜಮ್ಮು ಮತ್ತು ಕಾಶ್ಮೀರ ಶತ್ರು ಪ್ರದೇಶ ಅಲ್ಲ. ಪಿಡಿಪಿಯ ಉಪಶಮನಕಾರಿ ಕಾರ್ಯಸೂಚಿಗೆ ಯಾವುದೇ ಪರ್ಯಾಯ ಇಲ್ಲ ಎಂಬುದೇ ನಮ್ಮ ಭಾವನೆ. ಪಾಕಿಸ್ತಾನ, ಜಮ್ಮು ಮತ್ತು ಕಾಶ್ಮೀರದ ಜನರ ಜತೆಗೆ ಮಾತುಕತೆ ನಡೆಯಬೇಕು’ ಎಂದು ಹೇಳಿದ್ದಾರೆ. 

ಪಿಡಿಪಿ ಜತೆಗೆ ಸೇರಿ ಸರ್ಕಾರ ರಚಿಸುವ ಮೂಲಕ ಬಿಜೆಪಿ ಬಹುದೊಡ್ಡ ಪ್ರಮಾದ ಎಸಗಿದೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿ, ಪಿಡಿಪಿ ಜತೆ ಸೇರಬಾರದಿತ್ತು. ಪ್ರಾದೇಶಿಕ ಪಕ್ಷಗಳೇ ಜತೆಯಾಗಿ ಸರ್ಕಾರ ರಚಿಸಲು ಅವಕಾಶ ಕೊಡಬೇಕಿತ್ತು ಎಂದು ಕಾಂಗ್ರೆಸ್‌ ಮುಖಂಡ ಗುಲಾಂ ನಬಿ ಆಜಾದ್‌ ಅಭಿಪ್ರಾಯಪಟ್ಟಿದ್ದಾರೆ. 

ಈ ಮೈತ್ರಿಕೂಟವು ರಾಜ್ಯವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ನಾಶ ಮಾಡಿದೆ. ಜಮ್ಮು ಮತ್ತು ಕಾಶ್ಮೀರ ಈಗ ಕೊಂಪೆಯಾಗಿದೆ ಎಂದು ಅವರು ಟೀಕಿಸಿದ್ದಾರೆ. 

‘ಈ ಎರಡು ಪಕ್ಷಗಳಲ್ಲಿ ಯಾವ ಸಾಮ್ಯವೂ ಇಲ್ಲ. ಅಧಿಕಾರಕ್ಕಾಗಿ ಮಾಡಿಕೊಂಡ ಮೈತ್ರಿ ಅವಕಾಶವಾದಿತನ ಮಾತ್ರ’ ಎಂದು ಸಿಪಿಎಂ ಮುಖ್ಯಸ್ಥ ಸೀತಾರಾಮ್‌ ಯೆಚೂರಿ ಹೇಳಿದ್ದಾರೆ. 

ಆದರೆ, ಸಾಕಷ್ಟು ಚಿಂತನೆಯ ಬಳಿಕವೇ ಮೈತ್ರಿ ಮುರಿಯುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ವಕ್ತಾರ ಸುನಿಲ್‌ ಸೇಥಿ ಹೇಳಿದ್ದಾರೆ. ಈಗಿನ ಸನ್ನಿವೇಶದಲ್ಲಿ ಮೈತ್ರಿಯಿಂದ ಹೊರಬಾರದಿದ್ದರೆ ಅದು ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುತ್ತಿತ್ತು ಎಂದಿದ್ದಾರೆ.

ಸ್ನೇಹ ಮತ್ತು ದ್ವೇಷದ ಹಾದಿ

2014 ಡಿಸೆಂಬರ್‌ 23: ವಿಧಾನಸಭೆಗೆ ಚುನಾವಣೆ; ಜಮ್ಮುವಿನಲ್ಲಿ ಭಾರಿ ಮುನ್ನಡೆ ಗಳಿಸಿದ ಬಿಜೆಪಿ; 37 ವಿಧಾನಸಭಾ ಕ್ಷೇತ್ರಗಳ ಪೈಕಿ 25ರಲ್ಲಿ ಗೆಲುವು; ಎರಡನೇ ಅತ್ಯಂತ ದೊಡ್ಡ ಪಕ್ಷ ಎಂಬ ಹೆಗ್ಗಳಿಕೆ

2015 ಫೆಬ್ರುವರಿ 24: ಏಳು ವಾರಗಳಷ್ಟು ದೀರ್ಘ ಕಾಲ ನಡೆದ ಮಾತುಕತೆ ಬಳಿಕ ಪಿಡಿಪಿ–ಬಿಜೆಪಿ ಮೈತ್ರಿ

2015 ಮಾರ್ಚ್‌: ಮುಖ್ಯಮಂತ್ರಿಯಾಗಿ ಮುಫ್ತಿ ಮೊಹಮ್ಮದ್‌ ಸಯೀದ್‌ ಪ್ರಮಾಣ

ಪ್ರತ್ಯೇಕತಾವಾದಿ ನಾಯಕ ಮಸ್ರತ್‌ ಆಲಂನನ್ನು ಬಿಡುಗಡೆ ಮಾಡಿದ ರಾಜ್ಯ ಸರ್ಕಾರ; ಮೈತ್ರಿಯಲ್ಲಿ ಮೊದಲ ಬಿರುಕು ಗೋಚರ, ಸರ್ಕಾರದ ಏಕಪಕ್ಷೀಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ

2016 ಜನವರಿ: ಮುಫ್ತಿ ಮೊಹಮ್ಮದ್‌ ಸಯೀದ್‌ ಸಾವು, ಪಿಡಿಪಿ ಮುಖ್ಯಸ್ಥೆಯಾದ ಮೆಹಬೂಬಾ ಮುಫ್ತಿ

2016 ಫೆಬ್ರುವರಿ: ಬಿಜೆಪಿ ಜತೆಗಿನ ಮೈತ್ರಿ ‘ಜನಪ್ರಿಯ ಅಲ್ಲ’ ಎಂದ ಪಿಡಿಪಿ, ರಾಜ್ಯಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹ

2016 ಏಪ್ರಿಲ್‌ 4: ಮುಖ್ಯಮಂತ್ರಿಯಾಗಿ ಮೆಹಬೂಬಾ ಪ್ರಮಾಣ

2016 ಜೂನ್‌: ಪ್ರತ್ಯೇಕತಾವಾದಿಗಳ ಬಗ್ಗೆ ಪಿಡಿಪಿ ಮೃದುಧೋರಣೆ ತಾಳಿದೆ ಎಂದು ಬಿಜೆಪಿ ಅರೋಪ, ಮೈತ್ರಿ ಪಕ್ಷಗಳ ನಡುವೆ ಹೆಚ್ಚುತ್ತಲೇ ಹೋದ ಬಿರುಕು

2016 ಸೆಪ್ಟೆಂಬರ್‌: ಕಾಶ್ಮೀರದ ಸರ್ಕಾರವು ನಾಜಿ ಆಳ್ವಿಕೆಗಿಂತಲೂ ಕೆಟ್ಟದಾಗಿದೆ ಎಂದು ಆರೋಪಿಸಿದ ಪಿಡಿಪಿ ಸಂಸದ ತಾರೀಖ್‌ ಕರ್ರಾ ರಾಜೀನಾಮೆ

2017 ಮೇ: ಕಾಶ್ಮೀರಿ ವ್ಯಕ್ತಿಯನ್ನು ಸೇನಾ ಜೀಪಿನ ಮುಂದಕ್ಕೆ ಕಟ್ಟಿದ ಮೇಜರ್‌ ಗೊಗೊಯ್‌ ಕೃತ್ಯದ ವಿರುದ್ಧ ಬಿಜೆಪಿ–‍ಪಿಡಿಪಿ ವಾಕ್ಸಮರ: ಗೊಗೊಯ್‌ಗೆ ಬಿಜೆಪಿ ಶ್ಲಾಘನೆ, ಮಾನವ ಹಕ್ಕು ಉಲ್ಲಂಘನೆ ಎಂದ ಪಿಡಿಪಿ

2018–ಜನವರಿ–ಏಪ್ರಿಲ್‌: ಕಠುವಾ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ; ಆರೋಪಿಗಳ ಪರ ಪ್ರತಿಭಟನೆಯಲ್ಲಿ ಬಿಜೆಪಿಯ ಸಚಿವರು ಭಾಗವಹಿಸಿದ್ದಕ್ಕೆ ಮೆಹಬೂಬಾ ಟೀಕೆ

2018 ಜೂನ್‌: ಉಗ್ರರ ವಿರುದ್ಧದ ಕಾರ್ಯಾಚರಣೆ ಸ್ಥಗಿತವನ್ನು ರಮ್ಜಾನ್‌ ನಂತರ ವಿಸ್ತರಿಸದ ಕೇಂದ್ರದ ನಿರ್ಧಾರದ ಬಗ್ಗೆ ಪಿಡಿಪಿಗೆ ಭಿನ್ನಾಭಿಪ್ರಾಯ

2018 ಜೂನ್‌ 18: ಜಮ್ಮು ಮತ್ತು ಕಾಶ್ಮೀರದ ಪಕ್ಷದ ಮುಖಂಡರನ್ನು ದೆಹಲಿಗೆ ಕರೆಸಿಕೊಂಡ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಚರ್ಚೆ

2018 ಜೂನ್‌ 19: ಪ್ರಧಾನಿ ನರೇಂದ್ರ ಮೋದಿ ಜತೆಗೆ ಶಾ ಸಮಾಲೋಚನೆ, ಮೈತ್ರಿಯಿಂದ ಹೊರಗೆ ಬರಲು ನಿರ್ಧಾರ

‘ಬಿಜೆಪಿ ಸರ್ಕಾರದಿಂದ ಹೊರಗೆ ಹೋಗುವುದನ್ನು ನಾನು ನಿರೀಕ್ಷಿಸಿದ್ದೆ. ಈ ವರ್ಷದ ಕೊನೆಯ ಹೊತ್ತಿಗೆ ಇದು ನಡೆಯಬಹುದು ಎಂದು ಅಂದಾಜಿಸಿದ್ದೆ. ಆದರೆ, ಅದು ಬಹಳ ಬೇಗನೆ ನಡೆಯಿತು’ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಒಮರ್‌ ಅಬ್ದುಲ್ಲಾ ಹೇಳಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು