ಶನಿವಾರ, ಮೇ 28, 2022
21 °C
ಕಟ್ಟಡ ಕುಸಿತ, ಬೆಂಕಿ ಅವಘಡಗಳಿಗೆ ಸಾಕ್ಷಿಯಾದ 2021 l ರಾಜಕಾರಣದಲ್ಲಿ ಸದ್ದು ಮಾಡಿದ ಸಿ.ಡಿ ಪ್ರಕರಣ

ಗತ ವರ್ಷ 2021| ಡ್ರಗ್ಸ್‌ ಮಾಫಿಯಾ, ಬಿಟ್‌ ಕಾಯಿನ್‌ ಸದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಾದಕ ದ್ರವ್ಯ ಮಾರಾಟ ಜಾಲದಲ್ಲಿ ಸಿನಿಮಾ ತಾರೆಯ ಕೈವಾಡ, ಅಂತರರಾಷ್ಟ್ರಿಯ ಮಟ್ಟದ ಹ್ಯಾಕಿಂಗ್‌ ಜಾಲದ ಪತ್ತೆ, ಬಿಟ್‌ ಕಾಯಿನ್‌ ಹಗರಣ... ಹೀಗೆ ಹತ್ತು ಹಲವು ಮಹತ್ತರ ಬೆಳವಣಿಗೆಗಳ ಮೂಲಕ ರಾಜ್ಯದ ರಾಜಧಾನಿಯ ‘ಅಪರಾಧ ಜಗತ್ತು’ 2021ರ ಉದ್ದಕ್ಕೂ ಸದಾ ಸುದ್ದಿಯಲ್ಲಿತ್ತು.

ಈ ವರ್ಷದಲ್ಲಿ ನಗರದಲ್ಲಿ ನಡೆದ ಪ್ರಮುಖ ಅಪರಾಧ ಚಟುವಟಿಕೆಗಳು, ದುರಂತಗಳ ಹಿನ್ನೋಟ ಇಲ್ಲಿದೆ.

ಜನವರಿ

lವಸಂತನಗರದಲ್ಲಿರುವ ಐಪಿಎಸ್ ಅಧಿಕಾರಿಗಳ ವಸತಿಸಮುಚ್ಚಯದಲ್ಲಿ ಜನವರಿ ತಿಂಗಳಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿತ್ತು.

lನೂರಾರು ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಆರೋಪಿ ಯುವರಾಜ್‌ನಿಂದ ಹಣ ಪಡೆದ ಆರೋಪದಡಿ ಸಿಸಿಬಿ ಪೊಲೀಸರಿಂದ ನಟಿ ರಾಧಿಕಾ ಕುಮಾರಸ್ವಾಮಿ ಅವರ ವಿಚಾರಣೆ.  

l‘ಹ್ಯಾಕಿಂಗ್ ಮೂಲಕ ದತ್ತಾಂಶ ಕದ್ದು ಅಕ್ರಮಕ್ಕೆ ಬಳಸಿಕೊಂಡಿದ್ದ ಹಾಗೂ ಕೆಲವರನ್ನು ಬ್ಲ್ಯಾಕ್‌ಮೇಲ್ ಮಾಡಿ ಗಳಿಸಿದ್ದ ₹ 9 ಕೋಟಿ ಮೌಲ್ಯದ 31 ಬಿಟ್‌ ಕಾಯಿನ್‌ಗಳನ್ನು ಆರೋಪಿ ಶ್ರೀಕೃಷ್ಣನಿಂದ ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದರು.

lಅಂತರರಾಷ್ಟ್ರೀಯ ಡ್ರಗ್ಸ್ ಪ್ರಕರಣದಡಿ ಬಂಧಿಸಲಾಗಿದ್ದ ರಾಜಕಾರಣಿಯೊಬ್ಬರ ಪುತ್ರ ಆದಿತ್ಯ ಆಳ್ವ ಕಸ್ಟಡಿಗೆ ಅವಧಿ ಮುಗಿದಿದ್ದರಿಂದ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

lರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳದ (ಎನ್‌ಸಿಬಿ) ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ₹ 20 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ ಮಾಡಿದ್ದರು.

lಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಮುಖಂಡರ ಹೆಸರು ಹೇಳಿಕೊಂಡು ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದ ಪ್ರಕರಣದ ಆರೋಪಿ ಆರ್. ಯುವರಾಜ್‌ಗೆ ಸೇರಿದ್ದ ಸುಮಾರು ₹ 70 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯ ಮಧ್ಯಂತರ ಆದೇಶ.

ಫೆಬ್ರುವರಿ

lದೇವರ ಜೀವನಹಳ್ಳಿ (ಡಿ.ಜೆ.ಹಳ್ಳಿ) ಹಾಗೂ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಠಾಣೆಗಳ ವ್ಯಾಪ್ತಿಗಳಲ್ಲಿ ನಡೆದಿದ್ದ ಗಲಭೆ ಪ್ರಕರಣದ ತನಿಖೆ ನಡೆಸುತ್ತಿದ್ದ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳಿಂದ 247 ಆರೋಪಿಗಳ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ.

lಡ್ರಗ್ಸ್ ಅಕ್ರಮ ಸಾಗಣೆ ಹಾಗೂ ಮಾರಾಟ ಪ್ರಕರಣದ ತನಿಖೆ ನಡೆಸಿದ ಮಾದಕ ವಸ್ತು ನಿಗ್ರಹ ಘಟಕದ (ಎನ್‌ಸಿಬಿ) ಅಧಿಕಾರಿಗಳಿಂದ ಕನ್ನಡದ ‘ಬಿಗ್‌ಬಾಸ್’ ರಿಯಾಲಿಟಿ ಶೋ ಸ್ಪರ್ಧಿ ಆಡಂ ಪಾಷಾ ಸೇರಿದಂತೆ 10 ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ.

ಮಾರ್ಚ್‌

l ಅಂತರರಾಷ್ಟ್ರೀಯ ಡ್ರಗ್ಸ್ ಜಾಲ ಪ್ರಕರಣ ಸಂಬಂಧ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಸೇರಿದಂತೆ 25 ಮಂದಿ ವಿರುದ್ಧ ಸಿಸಿಬಿ ಪೊಲೀಸರಿಂದ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ.

lಡ್ರಗ್ಸ್ ಸಾಗಣೆ ಹಾಗೂ ಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ್ದ ಪೂರ್ವ ವಿಭಾಗದ ಪೊಲೀಸರು, ₹4 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದರು. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ‘ಬಿಗ್‌ಬಾಸ್’ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಮಸ್ತಾನ್ ಚಂದ್ರ ಮನೆ ಮೇಲೆ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದರು.

lಸಿ.ಡಿ ಪ್ರಕರಣ ಸಂಬಂಧ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ದೂರು. ಸದಾಶಿವನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ಜವಾಬ್ದಾರಿ ವಿಶೇಷ ತನಿಖಾ ತಂಡಕ್ಕೆ ವರ್ಗಾವಣೆ.

l ‘ಕೆಲಸದ ಆಮಿಷವೊಡ್ಡಿ ಯುವತಿ ಮೇಲೆ ಅತ್ಯಾಚಾರ ಎಸಗಿದ’ ಆರೋಪದಡಿ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಎಫ್‌ಐಆರ್ ದಾಖಲು. 

ಮೇ

l₹ 360 ಕೋಟಿ ಸಾಲ ಆಮಿಷ; ‘ಚಿನ್ನದ ಮನುಷ್ಯ’ ಎ. ಹರಿ ನಾಡರ್ ಅಲಿಯಾಸ್ ಹರಿ ಗೋಪಾಲಕೃಷ್ಣ ನಾಡರ್ ಬಂಧನ.
ಜೂನ್‌

lಮಾಜಿ ಕಾರ್ಪೋರೇಟರ್ ಬಿಜೆಪಿಯ ಆರ್. ರೇಖಾ ಕದಿರೇಶ್ (43) ಹತ್ಯೆ.

ಜುಲೈ

lಯೆಸ್ ಬ್ಯಾಂಕ್‌ನಿಂದ ₹ 712 ಕೋಟಿ ಸಾಲ ಪಡೆದು ವಂಚಿಸಿರುವ ಆರೋಪದಡಿ ನಗರದ ನಿತೇಶ್ ಸಮೂಹ ಸಂಸ್ಥೆಗಳ ವಿರುದ್ಧ ಕಬ್ಬನ್‌ ಪಾರ್ಕ್ ಠಾಣೆಯಲ್ಲಿ ಎಫ್‌ಐಆರ್.

ಆಗಸ್ಟ್‌

lನಿವೇಶನ ಮಾರಾಟ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಯಾಗಿದ್ದ ‘ಬೃಂದಾವನ ಪ್ರಾಪರ್ಟಿಸ್’ ಕಂಪನಿ ನಿರ್ದೇಶಕ ದಿನೇಶ್ ಎಸ್. ಗೌಡ ಬಂಧನ.

lಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ. ಸತೀಶ್ ರೆಡ್ಡಿ ಅವರ ಮನೆ ಅಂಗಳಕ್ಕೆ ನುಗ್ಗಿದ್ದ ದುಷ್ಕರ್ಮಿಗಳು. ಎರಡು ಕಾರುಗಳಿಗೆ ಬೆಂಕಿ ಹಚ್ಚಿ ಪರಾರಿ.

lಅಂತರರಾಷ್ಟ್ರೀಯ ಡ್ರಗ್ಸ್ ಜಾಲ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಹಾಗೂ ಇತರರು ಮಾದಕ ವಸ್ತು ಸೇವಿಸಿದ್ದ ಸಂಗತಿ ‘ಕೂದಲು ಮಾದರಿ’ ಪರೀಕ್ಷೆಯಿಂದ ದೃಢ.

lಮಾಗಡಿ ರಸ್ತೆಯ ಗೋಪಾಲಪುರ ಬಳಿಯ ’ಎಂ.ಎಂ. ಫುಡ್ಸ್ ಪ್ರೊಡಕ್ಟ್’ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟದಿಂದ ನಾಲ್ವರು ಕಾರ್ಮಿಕರ ಸಾವು.

ಸೆಪ್ಟೆಂಬರ್‌

l ಕೋರಮಂಗಲದಲ್ಲಿ ನಡೆದಿದ್ದ ಅಪಘಾತದಲ್ಲಿ ಹೊಸೂರು ಕ್ಷೇತ್ರದ ಡಿಎಂಕೆ ಶಾಸಕ ವೈ.ಪ್ರಕಾಶ್ ಅವರ ಮಗ ಸೇರಿ ಏಳು ಮಂದಿ ಸ್ಥಳದಲ್ಲೇ ದುರ್ಮರಣ. 

lಬ್ಯಾಡರಹಳ್ಳಿ ಬಳಿಯ ತಿಗಳರಪಾಳ್ಯದ ಮನೆಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು. ಅದೇ ಮನೆಯಲ್ಲೇ ಒಂಬತ್ತು ತಿಂಗಳ ಕೂಸಿನ ಮೃತದೇಹ ಪತ್ತೆ.

lಬೊಮ್ಮನಹಳ್ಳಿಯ ದೇವರಚಿಕ್ಕನಹಳ್ಳಿ ಆಶ್ರಿತ್ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ತಾಯಿ–ಮಗಳ ಸಾವು.

lಚಾಮರಾಜಪೇಟೆ ಸೀತಾಪತಿ ಅಗ್ರಹಾರದ 4ನೇ ಅಡ್ಡರಸ್ತೆಯಲ್ಲಿರುವ ಗೋದಾಮಿನಲ್ಲಿ ಭಾರಿ ಸ್ಫೋಟ. ಇಬ್ಬರ ದಾರುಣ ಸಾವು.

ಅಕ್ಟೋಬರ್‌

lಕಸ್ತೂರಿನಗರದ ಡಾಕ್ಟರ್ಸ್ ಬಡಾವಣೆಯಲ್ಲಿ ನಿರ್ಮಿಸಿದ್ದ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ.

lಮಳೆಯ ಅಬ್ಬರದಿಂದಾಗಿ ಕಮರ್ಷಿಯಲ್ ಸ್ಟ್ರೀಟ್‌ ಮುಖ್ಯರಸ್ತೆಯಲ್ಲಿದ್ದ 100 ವರ್ಷ ಹಳೇ ಕಟ್ಟಡ  ಕುಸಿತ

ನವೆಂಬರ್‌

lಹೋಟೆಲೊಂದರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26) ಬಂಧನ.

lನಟಿ ಶ್ರುತಿ ಹರಿಹರನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ನಟ ಅರ್ಜುನ್ ಸರ್ಜಾ ವಿರುದ್ಧ ದಾಖಲಾಗಿದ್ದ ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸರಿಂದ ನ್ಯಾಯಾಲಯಕ್ಕೆ ‘ಬಿ–ರಿಪೋರ್ಟ್’ ಸಲ್ಲಿಕೆ.

ಡಿಸೆಂಬರ್‌

lಅಪಹರಣ ಪ್ರಕರಣದ ವಿಚಾರಣೆ ನೆಪದಲ್ಲಿ ತೌಸಿಫ್ ಎಂಬುವರನ್ನು ಠಾಣೆಗೆ ಕರೆತಂದು ಥಳಿಸಿ, ಗಡ್ಡ ಕತ್ತರಿಸಿದ್ದ ಆರೋಪ: ಬ್ಯಾಟರಾಯನಪುರ ಪಿಎಸ್‌ಐ ಅಮಾನತು.

l*ಸ್ಯಾಂಕಿ ರಸ್ತೆಯ ಭಾಷ್ಯಂ ವೃತ್ತದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಸಿ ಬಳಿದಿದ್ದ ಕಿಡಿಗೇಡಿಗಳ ಬಂಧನ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು