ಮಂಗಳವಾರ, ಸೆಪ್ಟೆಂಬರ್ 22, 2020
25 °C

ಊಟಿ ದಾರಿಯ ಬ್ಯೂಟಿ

ವಿ.ಎ. ಲಕ್ಷ್ಮಣ Updated:

ಅಕ್ಷರ ಗಾತ್ರ : | |

Prajavani

ಅರಮನೆ ನಗರಿ ಮೈಸೂರು ಬಿಟ್ಟಾಗ ಚುಮು ಚುಮು ಬೆಳಗು. ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ ಹಿತವಾದ ಚಳಿ. ನಾವು ಹೊರಟಿದ್ದು ಊಟಿಯೆಂಬ ಮಧುಚಂದ್ರ ತಾಣಕ್ಕೆ. ಆದರೆ ಊಟಿಯ ಹಾದಿಯಲ್ಲಿ ಸಾಗುತ್ತಿದ್ದಾಗ, ಕಂಡ ಬ್ಯೂಟಿಯನ್ನೂ ಮಾತ್ರ ಮರೆಯುವ ಹಾಗಿಲ್ಲ.

ಮೈಸೂರಿನಿಂದ ಬೆಳಿಗ್ಗೆ 8ಗಂಟೆ ಸುಮಾರಿಗೆ ಊಟಿಯ ಹಾದಿಯಲ್ಲಿ ಹೊರಟೆವು. ಈ ದಾರಿಯಲ್ಲಿ ಸಿಗುವ ಮೊದಲ ತಾಣ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ. ಕಪಿಲಾ ನದಿಯ ತಟದಲ್ಲಿರುವ ಕರ್ನಾಟಕದ ಅತಿದೊಡ್ಡ ದೇವಾಲಯ. ಇತ್ತೀಚಿನ ಕುಂಭದ್ರೋಣದ ಮಳೆಯ ನೆರೆಯಲ್ಲಿ ಮುಳುಗಿ ಈಗಷ್ಟೇ ಕಣ್ಣು ಬಿಡುತ್ತಿರುವ ಕಪಿಲೆ ಇಲ್ಲಿ ಏನೇನೂ ನಡೆದೇ ಇಲ್ಲ ಎನ್ನುವ ಹಾಗೆ ತಣ್ಣಗೆ ಹರಿಯುತ್ತಿದ್ದಳು. ಈ ಸಲದ ನೆರೆ ತಂದ ನಷ್ಟ ಅಷ್ಟಿಷ್ಟಲ್ಲ. ನದಿಯ ಇಕ್ಕೆಲದ ಮರಗಳು ಈಗಷ್ಟೇ ಮಣ್ಣಿನಲ್ಲಿ ಆಡಿದ ಮಕ್ಕಳಂತೆ ಕಾಣುತ್ತಿದ್ದವು.

ಅಂದ ಹಾಗೆ ಕಪಿಲೆ ಇದೇ ಮೊದಲಬಾರಿ ನಂಜನಗೂಡಿನ ದೇವಾಲಯ ಹೊಕ್ಕು ನಂಜುಂಡೇಶ್ವರನ ಪಾದ ಮುಟ್ಟಿದ ಮೇಲೆಯೇ ಶಾಂತಳಾದಳೆಂದು ಇಲ್ಲಿಯ ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ. 

ಹಿಮವದ್ ಗೋಪಾಲಸ್ವಾಮಿ

ನಂಜನಗೂಡಿನಿಂದ ಗುಂಡ್ಲುಪೇಟೆಯ ದಾರಿಯಲ್ಲಿ ಬಲಕ್ಕೆ ತಿರುಗಿ ಹದಿನೈದು ಕಿ.ಮೀ ಪಶ್ಚಿಮಕ್ಕೆ ಹೊರಳಿದಾಗ ಸಮಯ 10.30. ಆಗ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಬುಡದಲ್ಲಿದ್ದೆವು. ಅಲ್ಲಿಂದ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ. ಸರ್ಕಾರಿ ಬಸ್ಸಿನಲ್ಲಿ ₹50 ಟಿಕೆಟ್‌ ತಗೊಂಡು ಬೆಟ್ಟ ಏರಿದೆವು. ಗೋಪಾಲಸ್ವಾಮಿಯ ದರ್ಶನ ಭಾಗ್ಯ ಸಿಕ್ಕಿತು.

ಇದು ಬಂಡೀಪುರ ಅಭಯಾರಣ್ಯದ ಅತೀ ಎತ್ತರದ ಬೆಟ್ಟ. ಇಲ್ಲಿ ವರ್ಷದ ಹನ್ನೆರಡೂ ತಿಂಗಳು ಹಿಮಾಚ್ಛಾದಿತವಾಗಿರುತ್ತದೆ. ಅದಕ್ಕೇ ಈ ಹೆಸರಿನಲ್ಲೇ ಜನಪ್ರಿಯವಾಗಿದೆ. ರಕ್ಷಿತಾರಣ್ಯದ ಸೂಕ್ಷ್ಮ ವಲಯದಲ್ಲಿ ಬರುವ ಈ ದೇವಾಲಯದ ಪ್ರಾಂಗಣದ ಹೊರಗೆ ಪ್ರವೇಶವಿರಲಿಲ್ಲ. ಆನೆ, ಜಿಂಕೆ, ಹುಲಿ, ಸಾರಂಗಗಳ ಸಹಜ ಓಡಾಟದ ತಾಣವಾಗಿರುವುದರಿಂದ ಇಲ್ಲಿ ಪ್ರತಿ ಕ್ಷಣವೂ ಮೈಯೆಲ್ಲಾ ಕಣ್ಣಾಗಿರಬೇಕು.

ಸಮುದ್ರಮಟ್ಟದಿಂದ ಒಂದೂವರೆ ಸಾವಿರ ಮೀಟರ್‌ ಎತ್ತರದ ಈ ಬೆಟ್ಟದ ತುದಿ, ಬಿಸಿಲಿನಲ್ಲಿ ಬೆವರಿ ಬಂದ ನಮ್ಮ ಮೈ ಮನಗಳಿಗೆ ಹೊಸ ಉತ್ಸಾಹ ತುಂಬಿತು. ಸುಮ್ಮನೇ ದೇವಾಲಯದ ಪ್ರಾಂಗಣದ ಕಾಂಪೌಂಡಿನ ಮೇಲೆ ಕುಳಿತು ಇನ್ನೇನು ಇಳಿಯುವ ಸೂರ್ಯನನ್ನು, ಕ್ಷಣ ಮಾತ್ರದಲ್ಲಿ ಮರೆಯಾಗುವ ಮಂಜನ್ನು ಮತ್ತು ಆ ಮಂಜಿನ ಮರೆಯಲ್ಲಿ ಇದೂವರೆಗೆ ಅಡುಗಿ ಕುಳಿತಿರುವ ಭೀಭತ್ಸ ಪ್ರಪಾತವನ್ನು ಕಣ್ಣು ತುಂಬಿ ಕೊಳ್ಳುವಾಗ ಒಂದು ದೈವಿಕತೆಯ ಅನುಭವ ನಮ್ಮನ್ನು ಸ್ಪರ್ಶಿಸುತ್ತದೆ. ಈ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಸುವಂತಿಲ್ಲ. ಟ್ರೆಕ್ಕಿಂಗ್, ಪಿಕ್‌ನಿಕ್‌ನಂತಹ ಚಟುವಟಿಕೆಗಳನ್ನು ನಿಷೇಧಿಸಿದ್ದಾರೆ. ಹಾಗಾಗಿ ಇದು ವಿಶೇಷ ಆಧ್ಯಾತ್ಮಿಕ ತಾಣವಾಗಿ ಭಾಸವಾಗುತ್ತದೆ.

ಬಂಡೀಪುರದ ಹಾದಿಯಲ್ಲಿ..

ಗೋಪಾಲಸ್ವಾಮಿ ಬೆಟ್ಟದಿಂದ ಇಳಿದಾಗ ಸಂಜೆ 5.30. ಇಳಿ ಸಂಜೆಗೆ ಬೆಟ್ಟ ಇಳಿದು ಊಟಿಯ ದಾರಿಯಲ್ಲಿ ಸಾಗುತ್ತಿದ್ದೆವು. ಬಂಡೀಪುರ ಅರಣ್ಯ ಪ್ರವೇಶಿಸಿದೆವು. ಎರಡೂವರೆ ಗಂಟೆ ನಾಗರಹೊಳೆ - ಮಧುಮಲೈ ಅರಣ್ಯದಲ್ಲೇ ಪ್ರಯಾಣ. ಅಕ್ಕಪಕ್ಕದಲ್ಲಿ ಇತ್ತೀಚಿಗೆ ಕಾಳ್ಗಿಚ್ಚಿಗೆ ಬಲಿಯಾದ ಅರಣ್ಯ ಮಳೆಗೆ ಚಿಗುರುತ್ತಿರುವುದನ್ನು ನೋಡಿ ಒಂದು ಕ್ಷಣ ಖುಷಿಯಾಯಿತು. ಆದರೂ ಆ ಕಾಳ್ಗಿಚ್ಚಿನ ರುದ್ರತೆಯನ್ನು ನೆನೆದು ಭಯವೂ ಆಯಿತು.

ಇಂತಹ ಕಾಡಿನ ದಾರಿಯ ನಡುವೆ ನಮ್ಮ ಕಾರು ಅತಿ ನಿಧಾನವಾಗಿ ಚಲಿಸುತ್ತಿತ್ತು. ಸಂಜೆಯ ಕಾರಣಕ್ಕೋ ಏನೋ, ರಸ್ತೆಯ ಅಕ್ಕಪಕ್ಕ ನಿರಾತಂಕವಾಗಿ ಜಿಂಕೆಗಳು ಹುಲ್ಲು ಮೇಯುತ್ತಿದ್ದವು. ನವಿಲು
ಗಳು ಯಾರಾದರೂ ಆಹಾರ ಕೊಟ್ಟಾರೆಂಬ ಆಸೆಯಲ್ಲಿ ರಸ್ತೆಯ ಪಕ್ಕದಲ್ಲೇ ನಿಂತು ಓಡಾಡುವ ವಾಹನಗಳ ಕಿಟಕಿಯತ್ತ ಕಣ್ಣಿಟ್ಟಿದ್ದವು. ಗಜಪಡೆ, ನಮ್ಮಂಥವರ ಮಾತುಗಳಿಗೆ ಸೊಪ್ಪು ಹಾಕದೇ ತಮ್ಮ ಪಾಡಿಗೆ ತಾವು ಚಿಗುರಿದ ಲಂಟಾಣಮೆಳೆಯಲ್ಲಿ ಸೊಪ್ಪು ತಿನ್ನುತ್ತಿದ್ದವು.

ವಾಹನ ಸಂಚಾರ– ಎಚ್ಚರ

ಈ ರಸ್ತೆಯಲ್ಲಿ ಪ್ರಾಣಿಗಳ ಸಂಚಾರ ಇದ್ದೇ ಇರುತ್ತದೆ. ಹಾಗಾಗಿ ಈ ಜಾಗಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ. ಅಯ್ಯೋ ಪಾಪ ಎನ್ನಿಸಿ ಹಸಿದ ನವಿಲುಗಳಿಗೆ ನೀವು ಆಹಾರ ಕೊಡುವಂತಿಲ್ಲ. ಮುಖ್ಯವಾಗಿ ನೀವು ವಾಹನವನ್ನು ವೇಗವಾಗಿ ಚಲಿಸುವಂತಿಲ್ಲ. ಯಾವ ಕ್ಷಣದಲ್ಲಿ ಬೇಕಾದರೂ ಈ ದಾರಿಯಲ್ಲಿ ಆನೆ ಗುಂಪು ಎದುರಾಗಬಹುದು. ಹುಲಿ ಸಿಗಬಹುದು. ವೇಗ ಮಿತಿ ತಗ್ಗಿಸಲು ಅಲ್ಲಲ್ಲಿ ರಸ್ತೆ ಉಬ್ಬುಗಳಿವೆ. ಈ ರಕ್ಷಿತ ಅರಣ್ಯದಲ್ಲಿ ಅಳಿವಿನಂಚಿನಲ್ಲಿರುವ ವಿಶೇಷ ಪ್ರಾಣಿ ಪಕ್ಷಿಗಳ ರಕ್ಷಣೆಗೆ ವಿಶೇಷ ಮುತುವರ್ಜಿ ವಹಿಸಲಾಗುತ್ತದೆ.

ಈ ಅರಣ್ಯದಲ್ಲಿದ್ದು, ಪ್ರಾಣಿಗಳನ್ನು ನೋಡಬೇಕೆಂದರೆ, ಅದಕ್ಕೆ ಪ್ರತ್ಯೇಕ ಸಫಾರಿ ವ್ಯವಸ್ಥೆ ಇದೆ. ಬೆಳಿಗ್ಗೆ ಮತ್ತು ಸಂಜೆ ಪ್ರವಾಸಿಗರು ಸಫಾರಿ ಮಾಡಬಹುದು. ಜಂಗಲ್ ಲಾಡ್ಜ್‌ ಗೆಸ್ಟ್‌ಹೌಸ್‌ನಲ್ಲಿ ರಾತ್ರಿ ಕಳೆಯಬಹುದು.

ಆದರೆ ರಾತ್ರಿ ಒಂಬತ್ತು ಗಂಟೆಯಿಂದ ಬೆಳಿಗ್ಗೆ ಆರುಗಂಟೆಯ ತನಕ ಈ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಹಾಗಾಗಿ ಮೈಸೂರಿನಿಂದ ಹೊರಡುವಾಗ ಪ್ಲಾನ್‌ ಮಾಡಿಕೊಂಡು ಹೊರಡಬೇಕು.

ಸಂಜೆ 6.30ರ ನಂತರ ಕರ್ನಾಟಕದ ಗಡಿ ದಾಟಿ, ತಮಿಳುನಾಡಿನ ಚೆಕ್ ಪೋಸ್ಟ್‌ನಲ್ಲಿ ತಪಾಸಣೆಯ ನಂತರ ಮಧುಮಲೈ ಅರಣ್ಯ ಪ್ರವೇಶಿಸಿದೆವು. ಅಲ್ಲೂ ಇದೇ ಸೌಂದರ್ಯವಿದೆ. ಅಲ್ಲಿಂದ ಗುಡಾಲೂರು ದಾಟಿದ ಕೂಡಲೇ, ಸುಂದರ ತಾಣ ಊಟಿಯ ಬೆಟ್ಟದ ತಿರುವುಗಳು ಶುರುವಾದವು.

ಆ ಬೆಟ್ಟದಲ್ಲಿ ಮುಂಗಾರು ಮಳೆಗೆ ಆಗಷ್ಟೇ ಹುಟ್ಟಿಕೊಂಡ ಪುಟ್ಟ ಪುಟ್ಟ ಜಲಪಾತಗಳು ಕಂಡವು. ಸಂಜೆಯ ಮಸುಕಿನಲ್ಲೂ ಭಯ ಹುಟ್ಟಿಸುವ ತಿರುವುಗಳು ಮತ್ತು ಬಲಕ್ಕೆ ಬೆಚ್ಚಿ ಬೀಳಿಸುವ ಪ್ರಪಾತಗಳನ್ನು ಕಂಡವು. ಸೌಂದರ್ಯ ಸವಿಯುತ್ತಾ, ಭಯದಿಂದ ಬೆಚ್ಚುತ್ತಾ ಸಾಗುತ್ತಿರುವಾಗಲೇ ಊಟಿ ಬಂದೇ ಬಿಟ್ಟಿತು. ಗಡಿಯಾರದಲ್ಲಿ ರಾತ್ರಿ 9 ಆಗಿತ್ತು.

ಬೆಳಿಗ್ಗೆ ಊಟಿಯಲ್ಲಿ ನೋಡಬೇಕಾದ ಬೊಟಾನಿಕಲ್ ಗಾರ್ಡನ್‌, ಬೋಟಿಂಗ್‌, ದೊಡ್ಡ ಬೆಟ್ಟ, ಕೂನೂರು.. ತಾಣಗಳನ್ನು ಪಟ್ಟಿ, ಪ್ಲಾನ್‌ ಮಾಡಿ ಕಾಯ್ದಿರಿಸಿದ ಕೊಠಡಿಯಲ್ಲಿ ನಿದ್ರೆಗೆ ಜಾರಿದೆವು.

ನೀವು ಊಟಿ ಹಾದಿಯ ಈ ಸೌಂದರ್ಯ ಸವಿಯಬೇಕೆಂದರೆ, ಈಗಲೇ ಪ್ಲಾನ್ ಮಾಡಿ, ಹೊರಡಿ...!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು