ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರದ ವಿಕ್ರಮಾದಿತ್ಯನ ಅಂಗಳದಲ್ಲಿ

Last Updated 1 ಜನವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""

‘ಡಿಸೆಂಬರ್ 22ರಂದು ಐಎನ್ಎಸ್‌ ವಿಕ್ರಮಾದಿತ್ಯ ಯುದ್ಧ ನೌಕೆಯ ವೀಕ್ಷಣೆಗೆ ಮುಕ್ತ ಪ್ರವೇಶ...’ – ಹೀಗೆ ಸುದ್ದಿ ಗೊತ್ತಾಗುತ್ತಲೇ ಈ ಬಾರಿ ಮಿಸ್‌ ಮಾಡ್ಕೊಬಾರದು ಎಂದು ನಿರ್ಧರಿಸಿದ್ದೆ. ಕಚೇರಿಯಲ್ಲಿ ರಜೆಯೂ ಜೊತೆಯಾಯಿತು. ಹುಬ್ಬಳ್ಳಿಯಿಂದ ಬೆಳಿಗ್ಗೆ 7ಕ್ಕೆ ಆರಂಭಗೊಂಡ ನಮ್ಮ ಪಯಣ ಕಾರವಾರದತ್ತ ಸಾಗಿತ್ತು. ಅಂಕೋಲಾ–ಕಾರವಾರ ಹೆದ್ದಾರಿಯಲ್ಲಿ ಕಾರವಾರ ನಗರಕ್ಕೆ 10 ಕಿ.ಮೀ. ಮೊದಲೇ ಅರಗಾದಲ್ಲಿರುವ ಕದಂಬ ನೌಕಾನೆಲೆಯಲ್ಲೇ ಐಎನ್‌ಎಸ್ ವಿಕ್ರಮಾದಿತ್ಯನ ವಾಸ್ತವ್ಯ. ಅಲ್ಲಿಗೆ ಬಂದು ತಲುಪಿದಾಗ 11.30 ಆಗಿತ್ತು. ಅರಗಾ ಸ್ಟಾಪ್‌ ಬರಲು ಎರಡೂವರೆ ಕಿ.ಮೀ ಇರುವಾಗಲೇ ರಸ್ತೆ ಪಕ್ಕದಲ್ಲಿ ಜನರ ಸಾಲು ನೋಡಿ ಆ ಕ್ಷಣ ಆಸೆಗೆ ತಣ್ಣೀರೆರೆಚಿದಂತಾಯಿತು. ನೆತ್ತಿ ನೇರಕ್ಕೆ ಬಂದ ಬಿಸಿಲಲ್ಲಿ ನಿಂತು ಐಎನ್‌ಎಸ್ ವಿಕ್ರಮಾದಿತ್ಯನ ಅಂಗಳಕ್ಕೆ ಹೋಗಲು ಸಾಧ್ಯವೆ? ಎಂಬ ನಿರಾಸೆ ಕಾಡಲು ಶುರುವಾಯಿತು.

ಕೇಳಿದರೆ ಅರಗಾ ನೌಕಾನೆಲೆ ಮುಖ್ಯ ದ್ವಾರದ ಎದುರು ಸಾವಿರಾರು ಜನರು ಬೆಳಿಗ್ಗೆ 7ಕ್ಕೆ ಬಂದು ಸಾಲು ಹಚ್ಚಿದ್ದರು. ಅದಾಗಲೇ ತಮ್ಮ ಗುರುತಿನ ಕಾರ್ಡ್‌ ತೋರಿಸಿಕೊಂಡು, ಪಾಸ್‌ ಪಡೆದು ಒಳಪ್ರವೇಶಿಸುವ ಧಾವಂತದಲ್ಲಿದ್ದರು. ಒಂದಷ್ಟು ಜನರು ಒಳಗೆ ಹೋಗಿ ಹೊರಬರುತ್ತಿದ್ದರು. ನಾನು ಸಪ್ಪೆ ಮೊರೆ ಹಾಕಿಕೊಂಡು ಅವರನ್ನೆಲ್ಲ ನೋಡುತ್ತ ನಿಲ್ಲುವಂತಾಯಿತು. ಪ್ರಯತ್ನಕ್ಕೆ ಫಲ ಇದ್ದೇ ಇದೆ ಎಂಬಂತೆ ಕಾರವಾರ ಪತ್ರಕರ್ತ ಮಿತ್ರರ ಜೊತೆ ಸೇರಿ, ವಿಕ್ರಮಾದಿತ್ಯನ ಅಂಗಳದತ್ತ ಸಾಗುವ ಅವಕಾಶ ಸಿಕ್ಕಿತು. ಖುಷಿಗೆ ಪಾರವೇ ಇರಲಿಲ್ಲ. ಅಲ್ಲಿ ನೌಕಾನೆಲೆಯ ಪಿಆರ್‌ಒದಿಂದ ಆದೇಶ ಬಂತು. ‘ಎಲ್ಲರೂ ನಿಮ್ಮ ಐಡಿ ಕಾರ್ಡ್‌ ತೋರಿಸಿ, ಯಾರೂ ಕ್ಯಾಮೆರಾ ಒಯ್ಯುವಂತಿಲ್ಲ. ನಿಮ್ಮ ನಿಮ್ಮ ಮೊಬೈಲ್‌ಗಳನ್ನು ಸ್ವಿಚ್‌ ಆಫ್‌ ಮಾಡಿಕೊಳ್ಳಿ. ಒಳಗೆ ಮೊಬೈಲ್‌ ಬಳಸುವಂತಿಲ್ಲ....’ ಎಂದರು. ‘ಅಯ್ಯೋ; ಇಲ್ಲಿವರೆಗೆ ಬಂದು ಐಎನ್ಎಸ್‌ ವಿಕ್ರಮಾದಿತ್ಯನ ಅಂಗಳದಲ್ಲಿ ಒಂದು ಫೋಟೊ ಕ್ಲಿಕ್ಕಿಸಿಕೊಳ್ಳುವ ಭಾಗ್ಯವೂ ಇಲ್ಲದಾಯಿತೆ’ ಎಂದು ಮನಸ್ಸು ಒದ್ದಾಡಿತು. ಕಣ್ಣಾರೆ ನೋಡಲಿಕ್ಕಾದರೂ ಸಿಕ್ಕಿತಲ್ಲ ಎಂದು ಆ ಕ್ಷಣಕ್ಕೆ ಮನಸ್ಸು ಖುಷಿ ಪಟ್ಟಿತು. ಎಲ್ಲರೂ ಮೊಬೈಲ್‌ ಸದ್ದಡಗಿಸಿಕೊಂಡು ಪ್ರವೇಶ ದ್ವಾರದ ಮೂಲಕ ಒಳಸೇರಿ, ಅವರ ನೌಕಾನೆಲೆಯ ಬಸ್‌ಗಾಗಿ ಕಾಯ್ದೆವು. ನೌಕಾನೆಲೆಗೆ ಸೇರಿದ ಬಸ್‌ ಬರುತ್ತಲೇ ಅದನ್ನೇರಿ ಅಲ್ಲಿಂದ ಎರಡು ಕಿ.ಮೀ. ಸಾಗಿದ ಮೇಲೆ ಒಂದು ಪಾಯಿಂಟ್‌ನಲ್ಲಿ ನಮ್ಮನ್ನು ಇಳಿಸಿ ಬಸ್‌ ಹೊರಟು ಹೋಯಿತು.

ಮುಖ್ಯ ದ್ವಾರದಿಂದ ಯುದ್ಧ ನೌಕೆ ವಾಹಕದೊಳಗೆ ಸಾಗುವವರೆಗೆ ಕನಿಷ್ಠ ಹತ್ತು ಬಾರಿ ನಮ್ಮ ಗುಂಪಿನಲ್ಲಿದ್ದವರನ್ನು ಅಲ್ಲಿದ್ದ ನೌಕಾನೆಲೆ ಅಧಿಕಾರಿ, ಸಿಬ್ಬಂದಿ ಲೆಕ್ಕ ಹಾಕಿದರು. ಆಗಲೇ ಸರದಿ ಸಾಲು ಜೋರಾಗಿತ್ತು. ‘ವಿಕ್ರಮಾದಿತ್ಯ’ನ ಜಾಗಕ್ಕೆ ಹತ್ತಿರವಾಗುತ್ತಿದ್ದಂತೆ ಕುತೂಹಲವೂ ಹೆಚ್ಚಿತು. ‘ಅಬ್ಬಾ; ನೀರಿನ ಮೇಲೆ ಅಲುಗಾಡದಂತೆ ನಿಂತ ಅದರ ಮೇಲೆ ನಾವು ಹೋಗಿ ಓಡಾಡುತ್ತೇವಲ್ಲ’ ಎಂದು ಮನ ಪುಳಕಗೊಂಡಿತು. ದಂಡೆಯಿಂದ ನೌಕಾ ಹಡಗಿಗೆ ಪ್ರವೇಶಿಸಲು ಕಟ್ಟಿದ್ದ ಅಟ್ಟಣಿಗೆ ಮೂಲಕ ಒಬ್ಬೊಬ್ಬರಾಗಿ ಸಾಗಿ, ನೌಕೆಯ ಒಳಗೆ ಬಂದಮೇಲೆ ಅಲ್ಲಿ ಕಂಡಿದ್ದು ಬಾಗಿಲು ಭದ್ರಪಡಿಸಿದ ಚಿಕ್ಕಚಿಕ್ಕ ಕೊಠಡಿಗಳು. ಅಲ್ಲಿಂದ ನೌಕೆಯ ಅಂಗಳಕ್ಕೆ ಬರಲು ಮೂರು ಮಹಡಿಗಳನ್ನು ಏರಬೇಕು. ಕಿರಿದಾದ, ತುಸು ಒರಗಿದ ಮೆಟ್ಟಿಲನ್ನು ಒಬ್ಬೊಬ್ಬರಾಗಿ ಹತ್ತಬೇಕು. ಒಳಗೆಲ್ಲ ಕೂಲ್‌ಕೂಲ್‌.

ಮೂರು ಮಹಡಿಗಳನ್ನು ಏರಿ ಹೊರಬಿದ್ದಿದ್ದು ವಿಕ್ರಮಾದಿತ್ಯನ ಅಂಗಳದಲ್ಲಿ. ಕಣ್ಣೆದುರಿಗೆ ವಿಶಾಲ ಮರದ ಅಂಗಳ. ನೌಕಾ ಹಡಗನ್ನು ಕತ್ತೆತ್ತಿಯೇ ನೋಡಬೇಕು. ಅಂದರೆ ಅಂಗಳದಿಂದ ಮೇಲೆ 8 ಮಹಡಿಗಳಿವೆ. 36 ಯುದ್ಧ ವಿಮಾನಗಳು ಏಕಕಾಲಕ್ಕೆ ನಿಲ್ಲುವಷ್ಟು ವಿಶಾಲ ಅಂಗಳದ ಒಂದು ತುದಿಯಲ್ಲಿ ನಮ್ಮ ದೇಶದ ತ್ರಿವರ್ಣ ಧ್ವಜ ಹಾರಾಡುತ್ತಿತ್ತು. ಅದು ರನ್‌ವೇ ಕೊನೆ. ಅಂಗಳದ ಸುತ್ತಲೂ ನೌಕೆಯ ಸಿಬ್ಬಂದಿ ರಕ್ಷಣೆಗೆ ನಿಂತಿದ್ದರು. ಅದನ್ನು ನೋಡುತ್ತಲೇ ಮನಸ್ಸಿನಲ್ಲಿ ರಾಷ್ಟ್ರಪ್ರೇಮ ಒಮ್ಮೆಲೆ ಜಾಗೃತಗೊಂಡಿತು. ಮೂರು ಕಡೆಗಳಲ್ಲಿ ಆವೃತವಾಗಿರುವ ಜಲಧಿಯ ನಡುವೆ ಅಲ್ಲಲ್ಲಿ ಹಡಗುಗಳು, ನೌಕಾನೆಲೆಗೆ ಸೇರಿದ ಸ್ಪೀಡ್‌ ಬೋಟ್‌ಗಳು ನೀರನ್ನು ಸೀಳಿ ಮುನ್ನುಗ್ಗುವುದನ್ನು ನೋಡುವುದೇ ಸೊಗಸು. ಅಷ್ಟಕ್ಕೂ ಅಂಗಳದಲ್ಲಿದ್ದವರು ಎಲ್ಲರೂ ಮೊಬೈಲ್‌ನಲ್ಲಿ ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದದ್ದು ನೋಡಿ ಮತ್ತೆ ಖುಷಿಯಾಯಿತು. ಸ್ವಿಚ್‌ ಆಫ್‌ ಆಗಿ ಬ್ಯಾಗ್‌ ಸೇರಿದ್ದ ಎಲ್ಲರ ಮೊಬೈಲ್‌ಗಳು ಕ್ಷಣದಲ್ಲಿ ಹೊರಬಿದ್ದವು. ಸ್ವಿಚ್‌ ಆನ್‌ ಆಗುವುದೇ ತಡ; ಫೋಟೊ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು.

ಅದೇ ಜಾಗದಲ್ಲಿ ಮೂರು ಕಡೆಗಳಲ್ಲಿ ಬೃಹತ್‌ ಟಿವಿ ಪರದೆ ಮೇಲೆ ಯುದ್ಧ ನೌಕೆ ವಾಹಕದ ವೈಶಿಷ್ಟ್ಯಗಳ ವಿಡಿಯೊಗಳ ಪ್ರಸಾರ ಕಲ್ಪಿಸಲಾಗಿತ್ತು. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ನೌಕಾಸೇನೆ ವಹಿಸುತ್ತಿರುವ ಮಹತ್ವದ ಪಾತ್ರಗಳ ಬಗ್ಗೆ ಹಾಗೂ ಸೇನೆಯು ತನ್ನ ಸಾಮರ್ಥ್ಯ‌ ಹೆಚ್ಚಿಸಿಕೊಳ್ಳಲು ಯಾವೆಲ್ಲ ಯುದ್ಧೋಪಕರಣಗಳನ್ನು ಬಳಸುತ್ತಿದೆ, ಅಲ್ಲದೇ ರಾಕೆಟ್‌ ಲಾಂಚರ್‌ ಬೃಹತ್‌ ಗನ್‌, ಮಲ್ಟಿ ಪಾಯಿಂಟರ್‌ ಗನ್‌, ನೀರಿನಾಳದಲ್ಲಿ ನುಗ್ಗಿ ಶತ್ರುಗಳ ಹಡಗನ್ನು ಯಾವ ರೀತಿ ನಾಶ ಮಾಡಲಾಗುತ್ತದೆ ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಇಷ್ಟೆಲ್ಲ ನೋಡುವಷ್ಟರಲ್ಲಿ ನಮ್ಮನ್ನು ಬಿಸಿಲು ಸ್ವಲ್ಪ ಹೈರಾಣಾಗಿಸಿತು. ಬೆವರು ಅದರ ಪಾಡಿಗೆ ಮುಖದ ಮೇಲಿನಿಂದ ತೊಟ್ಟಿಕ್ಕುತ್ತಿತ್ತು. ಅಂಗಳದ ಇನ್ನೊಂದು ತುದಿಯಲ್ಲಿ ಅಳವಡಿಸಿದ್ದ ಚಿಕ್ಕ ಮೆಟ್ಟಿಲ ಮೂಲಕ ಇಳಿದು ಅಲ್ಲಿಂದ ಹೊರಬಿದ್ದೆವು.

ಭಾರತದ ಈ ಏಕಮೇವ ಯುದ್ಧವಿಮಾನ ವಾಹಕ ಹಡಗು ಸಾರ್ವಜನಿಕರಿಗೆ ಮುಕ್ತ ಪ್ರವೇಶ ಸಿಗುವುದು ವರ್ಷಕ್ಕೊಮ್ಮೆ ಮಾತ್ರ. ಕಳೆದ ವರ್ಷವೂ ಡಿ.22ರಂದು ಸಾರ್ವಜನಿಕರಿಗೆ ತೆರೆದುಕೊಂಡಿತ್ತು. ಈ ಬಾರಿ ನಿರೀಕ್ಷೆಗೂ ಮೀರಿ ಜನರು ಬಂದಿದ್ದರಿಂದ ಅರ್ಧದಷ್ಟು ಜನರು ವಿಕ್ರಮಾದಿತ್ಯನನ್ನು ನೋಡಲಾಗಲಿಲ್ಲ. ಕೆಲವರು ಜಗಳವಾಡಿದರು. ಈ ವರ್ಷದ ಜನದಟ್ಟಣೆ ಕಂಡ ನೌಕಾದಳದ ಅಧಿಕಾರಿಗಳು, ಮುಂದಿನ ವರ್ಷದಿಂದ ಎರಡು ದಿನ ಸಾರ್ವಜನಿಕರಿಗೆ ಮುಕ್ತ ಪ್ರವೇಶ ನೀಡುವುದಾಗಿ ತಿಳಿಸಿದ್ದಾರೆ.

ವಿಕ್ರಮಾದಿತ್ಯ ವಿಶೇಷತೆ

1987ರಲ್ಲಿ ಬಾಕು ಎಂಬ ಹೆಸರಿನೊಂದಿಗೆ ಜನ್ಮತಾಳಿದ ವಿಮಾನವಾಹಕ ಹಡಗು, ಮೊದಲು ಸೋವಿಯತ್ ಒಕ್ಕೂಟ, ನಂತರ, ರಷ್ಯಾದ ನೌಕಾಪಡೆಯಲ್ಲಿ(ಅಡ್ಮಿರಲ್ ಗೋರ್ಷ್‌ ಕೋವ್ ಎಂಬ ಹೆಸರಲ್ಲಿ) ಕಾರ್ಯನಿರ್ವಹಿಸುತ್ತಿತ್ತು. ಇದರ ನಿರ್ವಹಣಾ ವೆಚ್ಚ ದುಬಾರಿ ಎನಿಸಿದ್ದರಿಂದ, ರಷ್ಯಾ ಇದರ ಬಳಕೆಯನ್ನು ನಿಲ್ಲಿಸಿತು. ಹಲವಾರು ವರ್ಷದ ಮಾತುಕತೆಯ ನಂತರ, 2004ರಲ್ಲಿ ಭಾರತ ₹12,500 ಕೋಟಿ ಕೊಟ್ಟು ಈ ಹಡಗು ಖರೀದಿಸಿತು. ಜೂ.14, 2014ರಂದು ಐಎನ್‌ಎಸ್ ವಿಕ್ರಮಾದಿತ್ಯ ಹೆಸರಲ್ಲಿ ಈ ಹಡಗು ನೌಕಾಪಡೆಯ ಭಾಗವಾಯಿತು. ಕಾರವಾರದ ಕದಂಬ ನೌಕಾನೆಲೆಯಲ್ಲಿರುವ ಈ ಹಡಗಿನಲ್ಲಿ ಎರಡು ಎಕರೆ ಉದ್ದದ ರನ್‌ವೇ ಹೊಂದಿದೆ. 284 ಮೀ. ಉದ್ದ (9930 ಅಡಿ) ಹಾಗೂ 60 ಮೀ. ಅಗಲ, 40 ಸಾವಿರ ಟನ್‌ ಭಾರವಿದೆ. ಮಿಗ್‌ 29 ಕೆ, ಕಾರ್ನೋವ್‌ 31, 28 ಸೇರಿ ಒಟ್ಟು 36 ಯುದ್ಧ ವಿಮಾನ ಗಳನ್ನು ಸಾಗಿಸುವ ಸಾಮರ್ಥ್ಯ ವಿಕ್ರಮಾದಿತ್ಯದ್ದು. ಭಾರತ ನೌಕಾಪಡೆಯ ಅತಿ ದೊಡ್ಡ ಮತ್ತು ಹೆಚ್ಚು ಭಾರದ ಹಡಗು ಇದು.ಏಕಕಾಲಕ್ಕೆ 700 ಸೈನಿಕರು ವಾಸ್ತವ್ಯ ಹೂಡ ಬಹುದಾದ ಸಾಮರ್ಥ್ಯ‌ವಿದೆ. ಹಡಗಿನ ನವೀಕರಣಕ್ಕೆ ₹700 ಕೋಟಿ ಖರ್ಚು ಮಾಡಲಾಗಿದೆ. ಪ್ರತಿ 2-3 ವರ್ಷಗಳಿಗೊಮ್ಮೆ ನಿರ್ವಹಣೆ ಮಾಡಬೇಕಿದೆ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT