ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಘಾಲಯದ ಬ್ಯಾಂಬೂ ಟ್ರಯಲ್

Last Updated 21 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಮೋಡಗಳ ನಾಡಿನ, ವಾಹ್ಖೆನ್‌ ಹಳ್ಳಿಯ ಮಹಾಬಂಡೆ -ಮೌರಿಂಗ್ ಖಾಂಗ್, ಜಗದೇಕ ಬಂಡೆಸುಂದರಿಯನ್ನು ಪ್ರೇಮಿಸಿದ. ಆದರೆ, ಬಂಡೆಖಳನೊಬ್ಬ ಸುಂದರಿಯನ್ನು ತನ್ನ ವಶ ಮಾಡಿಕೊಂಡ. ಪರಮಸಾಹಸಿಯಾದ ಮೌರಿಂಗ್ ವೀರಪಂಥವನ್ನೇ ಆಯ್ದುಕೊಂಡ. ಸಂಭವಿಸಿದ ಭೀಕರ ಸಂಗ್ರಾಮದಲ್ಲಿ ಮೌರಿಂಗ್ ಎಡಗೈ ಕಳೆದುಕೊಂಡರೂ ಖಳನ ರುಂಡ ಹಾರಿಸಿ, ಪ್ರಿಯತಮೆಯನ್ನು ವರಿಸಿದ.

ಅಂದಿನಿಂದ ಇಂದಿನವರೆಗೂ ಅಬ್ಬರದ ಆನಂದಘೋಷವಿಕ್ಕುವ ಉಮ್ರ್ಯೂ ನದಿಯ ತಟದಲ್ಲಿ ನಿಂತು, ಪರ್ವತ ಮಾಂಡಲಿಕರ ಸಭೆಗೊಟ್ಟು, ಬಂಡೆಗಳ ಮಹಾರಾಜನಾಗಿ ಮೌರಿಂಗ್ ಖಾಂಗ್ ಮೆರೆದಿದ್ದಾನೆ. ಆತನನ್ನು ತಾಗಿದಂತೆ ನಿಂತ ವಿಜಯವಧು ಬಂಡೆ ಸುಂದರಿ, ಅನತಿದೂರದಲ್ಲಿ ರುಂಡ ಕಳಚಿದ ಬಂಡೆಖಳನ ಕಳೇವರ, ಇಂದಿಗೂ ಪ್ರೀತಿಯ ಅಮರತ್ವವನ್ನೂ, ಶೌರ್ಯಗಾಥೆಯನ್ನೂ ಸಾರುತ್ತಲೇ ಇದ್ದಾರೆ.

ಇಂದಿನ ಮೇಘಾಲಯದ ವಾಹ್ಖೆನ್ನಿನ ಹುಲು ಮಾನವರು, ತಲೆತಲಾಂತರದಿಂದ ಹೊಳೆ, ಬಂಡೆ, ಗಿರಿ, ಕಾನು ಎಂದು ಜಾಡು ಮೂಡಿಸುತ್ತ ನಡೆದೇ ಈ ಬಂಡೆರಾಜನಿಗೆ ಗೌರವ ಸಲ್ಲಿಸುತ್ತ ಬಂದಿದ್ದಾರೆ. ಕಾಲದ ಮಹಿಮೆಯಲ್ಲಿ ವಿಶ್ವ ಪ್ರಸರಣಗೊಂಡ ಕಥೆ, ಎಲ್ಲೆಲ್ಲಿಂದಲೋ ಚಾರಣಿಗರ ಸಾಹಸಗಳೂ ಇವಕ್ಕೆ ಕಾಣಿಕೆಯನ್ನು ಸಲ್ಲಿಸುವುದಿತ್ತು. ಆದರೆ, ಕಳೆದೊಂದೆರಡು ವರ್ಷಗಳ ಹಿಂದೆ, ಸ್ಥಳೀಯರು (ಹಳ್ಳಿಜನ) ತಮಗೆ ಪರಂಪರೆಯಲ್ಲಿ ಸಿದ್ಧಿಸಿದ ಸೇತುಬಂಧನ ವಿದ್ಯಾ ಬಲದಲ್ಲಿ, ಬಂಡೆ ರಾಜನ ಸಂದರ್ಶನಕ್ಕೆ ಕಲ್ಪಿಸಿದ ನೂತನ ವೈಶಿಷ್ಟ್ಯವೇ -ಬಿದಿರ ಸೇತುವೆ ಸರಣಿ ಅಥವಾ ಇಂಗ್ಲಿಷಿನಲ್ಲಿ ಹೇಳುವಂತೆ ಬ್ಯಾಂಬೂ ಟ್ರಯಲ್!

ಶಿಲ್ಲಾಂಗ್‌ನಿಂದ ಸುಮಾರು ಮೂವತ್ತು ಕಿ.ಮೀ. ದೂರದ ಪುಟ್ಟ ಹಳ್ಳಿ ವಾಹ್ಖೆನ್. ಮೂಲತಃ ಊರ ಸುಮಾರು ಇಪ್ಪತ್ತೇ ಉತ್ಸಾಹಿಗಳು ಕತ್ತಿ, ಮೊಳೆ, ಸುತ್ತಿಗೆ, ಹಗ್ಗ, ಗುದ್ದಲಿ, ಪಿಕ್ಕಾಸುಗಳಿಂದಷ್ಟೇ ಸಜ್ಜಾಗಿ ಸೇತುಬಂಧಕ್ಕಿಳಿದಿದ್ದರಂತೆ. ಉತ್ಸಾಹ ಸಾಂಕ್ರಾಮಿಕವಾಗಿ, ಸೇತು ಸರಣಿ ಪೂರ್ಣಗೊಳ್ಳುವಾಗ ಎಂಬತ್ತರವರೆಗೂ ಜನ ಕೈ ಸೇರಿಸಿದ್ದರಂತೆ. ಟಿಕೆಟ್ ಅಡ್ಡ, ಚಾ ದುಕಾನು, ಮನೆ ಮುಪ್ಪುರಿಕೊಂಡ ಮರದ ಪುಟ್ಟ ಅಟ್ಟಳಿಗೆಯಲ್ಲಿ ತಲಾ ₹ 50 ಮೊತ್ತದ ಟಿಕೆಟ್ ಖರೀದಿಸಿ ಹೊರಟೆವು. ಮಿಳ್ಳೆ ಕಣ್ಣಿನ ಹಿರಿಯನೊಬ್ಬ ನಮಗೆ ದಾರಿ ತೋರಿಸುವಂತೆ ಮುಂದಿದ್ದ.

ಎರಡೂ ಪಕ್ಕದಲ್ಲಿ ಹಿಡಿಸೂಡೀ ಹುಲ್ಲಿನ ಹಸಿರು, ಆಚೆ ಅಡಿಕೆ, ಕಿತ್ತಳೆ, ಬಾಳೆಯಾದಿ ಅನ್ಯ ಕೃಷಿ ನಡೆದಿದ್ದ ಗುಡ್ಡೆ. ಕಾಲ್ದಾರಿ ಸಣ್ಣದಾಗಿ ವಾಲಾಡಿದರೂ ನೇರ ಇಳಿದದ್ದು ಗುಂಡು ಕಲ್ಲುಗಳ ಹರಗಣದ ನಡುವೆ, ಇಂದು ದುರ್ಬಲವಾಗಿ ಹರಿವ, ಸಾಕಷ್ಟು ಅಗಲ ಪಾತ್ರೆಯುಳ್ಳ ತೋಡಿಗೆ. ಅಲ್ಲೇ ಸೇತುವೆ ರಚನಾ ಕೌಶಲದ ಪ್ರಥಮ ಮತ್ತು ಸ್ಪಷ್ಟ ಚಿತ್ರ ನಮಗೊದಗಿತ್ತು. ಸಹಜವಾಗಿ ಎದುರಾದ ಬಂಡೆ, ಮೇಲೆ ಚಾಚಿದ್ದ ಜೀವಂತ ಮರದ ಕೊಂಬೆ, ಏನೂ ಇಲ್ಲದಲ್ಲಿ ಕತ್ತರಿಗಾಲು ಹಾಕಿ, ಬೇಕಾದ ಎತ್ತರಕ್ಕಷ್ಟೇ ಸಮಸ್ಥಿತಿ ಕಾದುಕೊಟ್ಟ ಎರಡೋ ನಾಲ್ಕೋ ಬಿದಿರು ಕಂಬಗಳು. ಇವುಗಳ ಮೇಲೆ ಬಿದಿರು ಕೋಲುಗಳನ್ನು, ಬಲ ಬರುವಷ್ಟೂ ಸಂಖ್ಯೆಗಳಲ್ಲಿ, ಅಗತ್ಯದ ಬಾಗು ತಿರುಚುಗಳೊಡನೇ ಹಾಸಿಬಿಟ್ಟಿದ್ದರು.

ಅಗತ್ಯ ಆಯಕಟ್ಟಿನ ಜಾಗಗಳನ್ನು ನೋಡುತ್ತ ಬಹುತೇಕ ಹಗ್ಗದ ಕಟ್ಟುಗಳಲ್ಲಿ, ಆಣಿ ಬಡಿದಾದರೂ ಬಿಗಿ ಮಾಡಿದ್ದರು. ತುಂಡು ಅಡ್ಡ ಬಿದಿರುಗಳು, ಅವಶ್ಯವಿದ್ದಲ್ಲಿ ಸೇತುವಿನುದ್ದಕ್ಕೆ ಇತರ ಕಾಡು ಕಂಬಗಳನ್ನೂ ಬಳಸಿದ್ದುಂಟು. ಇವು ಆ ದಂಡೆ ಈ ದಂಡೆ ಮಾಡುವಷ್ಟೇ ಉಪಯೋಗಿಗಳಲ್ಲ. ಹಗುರ ಏರು ಅಥವಾ ಇಳಿಜಾರು, ನೇರ ಏಣಿಯಂತೆ, ಓರೆ, ತಿರುವುಮುರುವುಗಳನ್ನೆಲ್ಲ ರಕ್ಷಣೆ ಸಹಿತ ಸುಲಭ ಚಾರಣಕ್ಕೆ ಮಾಡಿಕೊಡುವುದೇ ಬಿದಿರು ಸೇತು ಸರಣಿಯ ಸಾಧನೆ. ಇಲ್ಲಿ ನಾಲ್ಕು ಹೆಜ್ಜೆಯದೂ ಇದೆ, ನೂರಡಿಯದೂ ಇದೆ. ಬಂಡೆ ಬಳಸಿ, ಕೊರಕಲು ಹಾಯ್ದು, ಸಂದಿನಲ್ಲಿ ನುಸುಳಿ ಸಾಗುವ ಸರಣಿಗಳೂ ವಿರಳವಲ್ಲ. ಇಷ್ಟಾಗಿಯೂ ಇವು ಎಲ್ಲೂ ಅಲಂಕಾರಕ್ಕಾಗಿಯೋ ಸೇತುವೆ ಕೊಡಬೇಕು ಎಂಬ ಹಟಕ್ಕಾಗಿಯೋ ಬಂದದ್ದಿಲ್ಲ. ಸರಣಿಯಲ್ಲಿ ಸಹಜವಾಗಿ ಒದಗುವ ನೆಲವಿದ್ದಲ್ಲೆಲ್ಲ ಬೆಟ್ಟದ ಮೈಯ ಸವಕಲು ಜಾಡುಗಳನ್ನೇ ಬಲಪಡಿಸಿದ್ದಾರೆ.

ಈ ಸರಣಿಯನ್ನು ಎಲ್ಲಾ ಋತುಮಾನಗಳಲ್ಲೂ ಏಕರೀತಿಯ ಬಳಕೆಗೊಗ್ಗುವಂತೆ ರೂಪಿಸಲಾಗಿದೆ. ಬಿದಿರು ಇಲ್ಲಿನ ಪ್ರಧಾನ ಪಾತ್ರಿ ಮಾತ್ರ. ಸಣ್ಣ ಒಲೆತದ ಲಯ ಹಿಡಿದು ಹೆಜ್ಜೆ ಹೆಜ್ಜೆಯನ್ನೂ ತೂಗಿ ಇಡುತ್ತ, ಬಿದಿರು ಪಂಜರದ ಎಡೆಗಳಲ್ಲಿ ಇಣುಕುವ ಪಾತಾಳ ದೃಶ್ಯದ ಭಯ ಮೀರುತ್ತ, ಸುಮಾರು ಎರಡು ಕಿ.ಮೀ. ಉದ್ದದ ಚಾರಣ ಪೂರೈಸುವ ಸಂಕಲ್ಪ ಗಟ್ಟಿಯಿದ್ದ ಯಾರಿಗೂ ನಿರಪಾಯವಾಗಿ, ಬಿದಿರು ಸೇತು ಸರಣಿ ರೋಮಾಂಚಕ ಚಾರಣಾನುಭವ ಕೊಡುವುದರಲ್ಲಿ ಸಂದೇಹವೇ ಇಲ್ಲ.

ಹಳ್ಳಿಯಿಂದಿಳಿದಂತೆ ಸಿಗುವ ಸಣ್ಣ ತೋಡಿನ ಎದುರು ದಂಡೆಯ ಬೆಟ್ಟದ ಓರೆಯಲ್ಲಿ, ಶುದ್ಧ ವನ್ಯ ಪರಿಸರದಲ್ಲಿ ಈ ಸೇತು ಸರಣಿ ತೊಡಗುತ್ತದೆ. ಅದು ಕ್ರಮವಾಗಿ ಏರುದಿಕ್ಕಿನಲ್ಲಿ ಶ್ರೇಣಿಯ ನೆತ್ತಿಯತ್ತ ಸಾಗಿಸುತ್ತದೆ. ಜೊತೆಗೆ ಸಹಜವಾಗಿ ಕಾಲಡಿಯ ಕಣಿವೆಯ ಆಳ, ಅಲ್ಲಿನ ಕಾಡು, ಬಂಡೆ, ಝರಿಗಳ ನೋಟ ಬದಲಾಗುತ್ತ, ದಿಗಂತ ವಿಸ್ತರಿಸುತ್ತಾ ಹೋಗುತ್ತದೆ. ‘ಭಯದ ಮೀಟರ್’ ಎಂದೊಂದಿದ್ದರೆ, ಈ ಚಾರಣದಲ್ಲಿ ಮಾಪಕ ಮುಳ್ಳು ಅಪಾಯದ ಕೆಂಬಣ್ಣದಲ್ಲೇ ಸದಾ ನರಳಾಡುತ್ತದೆ!

ನಾವು ಸುಮಾರು ಒಂದೂ ಕಾಲು ಗಂಟೆಯ ಚಾರಣ ಮುಗಿಸಿ, ಒಂದು ಬಾರೀ ಮುಂಚಾಚಿಕೆ ಬಂಡೆಯ ನೆತ್ತಿ ತಲುಪಿದ್ದೆವು. ಅಲ್ಲಿ ಬಲ ಹೊರಳಿದಾಗ ಒಮ್ಮೆಗೆ ನಮ್ಮ ಅಂತಿಮ ಲಕ್ಷ್ಯ -ಬಂಡೆ ಮಹಾರಾಜನ ಮೊದಲ ದರ್ಶನವಾಯ್ತು. ಅದು ನಮ್ಮ ಶ್ರೇಣಿಯಿಂದ ಕಳಚಿಕೊಂಡ ಭಾರೀ ಕೋಡುಗಲ್ಲು. ಅದರ ತಳ ಪಾತಾಳ; ಅಬ್ಬರಿಸುವ ಉಮ್ರ್ಯೂ ನದಿಯ ಪಾತ್ರೆ. ಅದನ್ನು ನಮ್ಮ ಸೇತು ಪ್ರವೀಣರು, ಬಹಳ ಎಚ್ಚರದ ಬಳಸು ಸೇತು ಸರಣಿಗಳನ್ನು ಹೊಸೆದು ಕೊನೆಯಲ್ಲಿ ಆಕಾಶಕ್ಕೇ ಲಗ್ಗೆ ಇಟ್ಟಂತೆ ದೀರ್ಘ ಏಣಿಯನ್ನೇ ಕೊಟ್ಟಿದ್ದಾರೆ. ಭಯ, ಸಂಭ್ರಮಗಳ ಸಮಮಿಶ್ರಣದಲ್ಲಿ, ಎಲ್ಲವನ್ನು ನಾವು ಕ್ರಮವಾಗಿ ದಾಟಿ ಬಂಡೆ ನೆತ್ತಿ ಸೇರಿದೆವು. ನಮ್ಮದು ಸುಮಾರು ಒಂದೂವರೆ ಗಂಟೆಯ ಸಾಧನೆ.

ಆ ದೃಶ್ಯ ವೈಭವಕ್ಕೆ ನನ್ನ ಮಾತಿನ ಮಿತಿ ಹೇರುವುದಿಲ್ಲ. ಚಿತ್ರ, ಅನುಕೂಲವಿರುವವರು ಜಾಲತಾಣದಲ್ಲಿ (www.athreebook.com) ವಿಡಿಯೊ ತುಣುಕುಗಳನ್ನು ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT