ಬಣ್ಣ ಬಣ್ಣದ ಚಿತ್ತಾರದ ಬಲೂನುಗಳ ಗೊಂಚಲು. ಗಾಳಿಯಲ್ಲಿ ಹಗುರವಾಗಿ ತೇಲುವುದು ನಿರಾಳತೆಗೊಂದು ರೂಪಕ. ಈ ಬಣ್ಣದ ಬಲೂನುಗಳ ಬೀದಿಯಲ್ಲಿ ಮಾರಿ ಬದುಕುವ ಮಂದಿಯ ಬದುಕು ಇಷ್ಟು ನಿರಾಳವೆಲ್ಲಿ? ಬಲೂನುಗಳಿಗೆ ಗಾಳಿ ತುಂಬಿ, ಉದ್ದದೊಂದು ಕೋಲಿಗೆ ಕಟ್ಟಿ, ದೇವಸ್ಥಾನ, ಜಾತ್ರೆ, ಸಮಾವೇಶ ನಡೆಯುವ ಸ್ಥಳಗಳಲ್ಲಿ ಮಾರಾಟ ಮಾಡಿ ಬಂದ ಹಣದಿಂದ ಇವರ ಬದುಕಿನ ಬಂಡಿ ಸಾಗಬೇಕು. ಬೀದಿಯಲ್ಲೇ ಅಡುಗೆ. ಶುಚಿತ್ವವಿಲ್ಲದ ಜಾಗಗಳಲ್ಲಿ ಪುಟ್ಟ ಮಕ್ಕಳ ಜೊತೆ ವಿರಮಿಸುವ ತಾಯಂದಿರ ಸಂಕಟ ಗಾಳಿ ಹೋದ ಬಲೂನಿನಂತೆ.

ಮಾಗಡಿ ರಸ್ತೆಯ ಟೋಲ್‌ಗೇಟ್ ಬಳಿಯ ಮೆಟ್ರೊ ಸೇತುವೆಯ ಕೆಳಗೆ ರಾಜಸ್ಥಾನದಿಂದ ಬಂದ ಹತ್ತಾರು ಕುಟುಂಬಗಳು ಮೂರು ವರ್ಷಗಳಿಂದ ಬಲೂನು ಮಾರುತ್ತ ಸೇತುವೆಯ ಕೆಳಗೇ ಬದುಕುತ್ತಿವೆ. ಟೋಲ್‌ಗೇಟ್‌ನಿಂದ ಹೊಸಹಳ್ಳಿ ಮೆಟ್ರೊ ನಿಲ್ದಾಣಕ್ಕೆ ಸಾಗುವ ತಿರುವು ಇದು. ಸ್ವಲ್ಪ ವಿಶಾಲವಾದ ಖಾಲಿ ಜಾಗ. ಪಕ್ಕದಲ್ಲೇ ಇರುವ ‘ಡಿ ಮಾರ್ಟ್’ ಮಳಿಗೆಗೆ ಬರುವ ಗ್ರಾಹಕರು, ಆಂಜನೇಯಸ್ವಾಮಿ ದೇವಾಲಯಕ್ಕೆ ಬರುವ ಭಕ್ತ ಇಲ್ಲೇವಾಹನ ನಿಲುಗಡೆ ಮಾಡಬೇಕು. ಈ ಜಾಗದಲ್ಲಿಯೇ ಐದಾರು ಕುಟುಂಬಗಳು ಬದುಕುತ್ತಿವೆ. ಇವರಲ್ಲಿ ಮಹಿಳೆಯರು ಮತ್ತು ಪುಟ್ಟ ಮಕ್ಕಳೇ ಹೆಚ್ಚು. ಮಳೆ, ಚಳಿ ಎನ್ನದೇ ಬಯಲಲ್ಲೇ ಬದುಕುತ್ತಿದ್ದಾರೆ.

ಮಳೆ ಬರುವ ದಿನಗಳಲ್ಲಿ ಹೊಸಹಳ್ಳಿ ಮೆಟ್ರೊ ನಿಲ್ದಾಣದ ಸೇತುವೆಯ ಕೆಳಗೆ ಟೆಂಟ್ ಹಾಕಿ ಮಲಗುತ್ತಾರೆ. ದಿಢೀರಂತ ಮಳೆ ಬಂದರೆ ರಾತ್ರಿಯೆಲ್ಲ ಜಾಗರಣೆ. ಇವರನ್ನು ಅಲ್ಲಿಂದ ಏಳಿಸುವ ಪ್ರಯತ್ನ ಒಂದೆರಡು ಬಾರಿ ನಡೆದಿದೆ. ಆದರೆ, ಮತ್ತೆ ಅದೇ ಜಾಗದಲ್ಲಿ ಆಶ್ರಯ ಪಡೆಯುತ್ತಾರೆ. ಇದಕ್ಕೆ ಕಾರಣವೂ ಇದೆ. ಇವರಿರುವ ಜಾಗದ ಸ್ವಲ್ಪ ದೂರದಲ್ಲಿಯೇ ಸಾರ್ವಜನಿಕ ಶೌಚಾಲಯ ಇದೆ. ಪೈಪ್‌ಲೈನ್ ರಸ್ತೆಯ ಕೊನೆಯಲ್ಲಿ ಇಂದಿರಾ ಕ್ಯಾಂಟಿನ್ ಇದೆ. ಈ ಕಡೆ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲೂ ಇಂದಿರಾ ಕ್ಯಾಂಟಿನ್ ಇದೆ. ಎದುರುಗಡೆಯೇ ಇರುವ ದೇವಾಲಯದಲ್ಲಿ ಶನಿವಾರ ಬೆಳಿಗ್ಗೆಯಿಂದ ರಾತ್ರಿಯವರೆಗೂ ಇವರ ಹಸಿವು ನೀಗಿಸುವಷ್ಟು ಪ್ರಸಾದ ಸಿಗುತ್ತದೆ.

ಈ ಕುಟುಂಬಗಳು ಅಲ್ಲಿಯೇ ಶೌಚ, ಸ್ನಾನ ಮಾಡುವುದು, ಅಡುಗೆ ತಯಾರಿ, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದರಿಂದ ನಗರದ ಶುಚಿತ್ವಕ್ಕೆ ಇವರೆಲ್ಲ ತೊಂದರೆಯೇ ಸರಿ. ಹಾಗೆಂದು ಈ ಬದುಕು ನಿರಾಕರಿಸುವುದಾದರೂ ಹೇಗೆ? ನಗರ ಎನ್ನುವುದು ಉಳ್ಳವರ ಶಿವಾಲಯವೇನಲ್ಲವಲ್ಲ. ಅದು ಎಲ್ಲರಿಗೂ ಸೇರಿದ್ದು. ಹಾಗಂತ ಬೀದಿಯಲ್ಲೇ ಬದುಕಲಿ ಬಿಡಿ ಎಂದರೆ ಹೇಗೆ? ಕೊಳಕು ನೆಲದಲ್ಲಿ ಪುಟ್ಟ ಪುಟ್ಟ ಮಕ್ಕಳು ಆಡುತ್ತಾ ಇರುವ ದೃಶ್ಯ ಮನಸಿಗೆ ಘಾಸಿ ಮಾಡುತ್ತದೆ. ಶಾಲೆ, ಮನೆಯ ಹೊಸಿಲು ತುಳಿಯುವ ಭಾಗ್ಯವಿಲ್ಲದ ಈ ಮಕ್ಕಳಿಗೆ ಕನಿಷ್ಠ ನಾಗರಿಕ ಬದುಕು ಕಲ್ಪಿಸುವುದು ಸಮಾಜದ ಹೊಣೆ.

ಸರ್ಕಾರಗಳ ಯಾವ ಸಮೀಕ್ಷೆಗಳಿಗೆ ಈ ಕುಟುಂಬಗಳು ಸೇರುತ್ತವೆಯೋ! ಸರ್ಕಾರದ ಸಂಚಾರಿ ಶಾಲೆಗಳು, ನಿರಾಶ್ರಿತರ ಶೆಲ್ಟರ್ ವ್ಯವಸ್ಥೆಗಳು ಯಾವುದೂ ಇವರನ್ನು ತಲುಪಿಲ್ಲ. ಶಾಲೆಯಿಂದ ಹೊರಗುಳಿವ ಮಕ್ಕಳ ಸಮೀಕ್ಷೆಗೂ ಈ ಮಕ್ಕಳು ಒಳಗಾಗಿರುವುದಿಲ್ಲ. ಯಾವುದೋ ಊರಿಂದ ಬೇರುಗಳನ್ನೇ ಕಿತ್ತು ಬೆಂಗಳೂರಿಗೆ ಬರುತ್ತಿರುವ ಸಾವಿರಾರು ಜನರ ಬದುಕು ಹೀಗೆ ನಮ್ಮನ್ನು ಎದುರುಗೊಳ್ಳುತ್ತಲೇ ಇರುತ್ತದೆ. ವ್ಯವಸ್ಥೆಯ ಅಸಡ್ಡೆ ಮೆಟ್ರೊ ರೈಲಿನಂತೆ ಸುಮ್ಮನೆ ಸಾಗುವುದಷ್ಟೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.