ಸಾಂಪ್ರದಾಯಿಕವಾಗಿ ಭಾರತೀಯರು ಆಚರಿಸಿಕೊಂಡು ಬಂದಿರುವ ಹಬ್ಬಗಳು ಪ್ರಕೃತಿಯ ನಾನಾ ಸಂಗತಿಗಳೊಡನೆ ನಾವು ಬೆಳೆಸಿಕೊಂಡ ಪರಂಪರಾಗತ ಸಂವಾದವೆಂದೇ ಹೇಳಬಹುದು. ಮಳೆ, ಚಳಿ, ಬೇಸಿಗೆ – ಹೀಗೆ ಪ್ರಕೃತಿಯ ಎಲ್ಲ ಅವಸ್ಥಾಂತರದ ಹೊತ್ತಿಗೂ ಒಂದಿಲ್ಲೊಂದು ಹಬ್ಬಗಳು ನಮ್ಮಲ್ಲಿ ಆಚರಣೆಗೊಳ್ಳುತ್ತವೆ. ಮಳೆಗಾಲದ ಹಬ್ಬಗಳ ಸಂತೆಗೆ ನಾಂದಿಯಂತೆ ಬರುವ ಹಬ್ಬವೇ ಶ್ರಾವಣಮಾಸದ ಶುಕ್ಲ ಪಂಚಮಿಯಂದು ಆಚರಣೆಯಾಗುವ ನಾಗರಹಬ್ಬ. ಜೀವಲೋಕದ ಇನ್ನೊಂದು ಅಂಚಿನಲ್ಲಿರುವ ನಾಗಕುಲದ ಜೊತೆಗೆ ನಮ್ಮ ನಾಗರಿಕತೆಯು ಬೆಳೆಸಿಕೊಂಡು ಬಂದ ಸಂವಹನಗಳಿಗೆ ಸಾಕ್ಷಿಯಂತೆ ಇವತ್ತಿಗೂ ಆಚರಣೆಗೊಳ್ಳುತ್ತಿರುವ ಹಬ್ಬವಿದು. ವೇದಸಂಹಿತೆಯಲ್ಲಿ ಸಹ ನಾಗನನ್ನು ಸ್ತುತಿಸಿ, ಅವನ ವಾಸಸ್ಥಾನವನ್ನು ನೆನೆದು ನಮಸ್ಕಾರಗಳನ್ನು ಅರ್ಪಿಸುವ ಮಂತ್ರಗಳನ್ನು ಕಾಣಬಹುದು. ಪುರಾಣಪ್ರಸಿದ್ಧರಾದ ನಮ್ಮ ದೇವತೆಗಳಂತೂ ನಾಗನ ಜೊತೆ ಅತ್ಯಂತ ಸೌಹಾರ್ದಭಾವದಲ್ಲಿ ಇರುವವರು. ಅಂದರೆ ನಮ್ಮ ನಾಗರಿಕತೆಯ ಅತಿ ಪ್ರಾಚೀನ ದಾಖಲೆಗಳಲ್ಲಿಯೂ ನಾಗಾರಾಧನೆಯ ಸೆಲೆ ಇದೆ ಎಂದಂತಾಯಿತು.
ನಮ್ಮ ನಾಗರಿಕತೆ ಮಾತ್ರವೇ ಅಲ್ಲದೆ, ಜಗತ್ತಿನ ಬೇರೆ ಭಾಗದ ನಾಗರಿಕತೆಗಳಲ್ಲಿಯೂ ನಾಗನ ಪೂಜೆಯ ಪದ್ಧತಿ ಇದ್ದಂತೆ ತಿಳಿಯುತ್ತದೆ. ಈಜಿಪ್ಟ್‌ನವರು, ಗ್ರೀಕರು, ಆಫ್ರಿಕಾ ಮತ್ತು ಅಮೆರಿಕದ ಮೂಲನಿವಾಸಿಗಳು ಸಹ ನಾಗನನ್ನು (ಹಾವನ್ನು) ನಾನಾ ರೀತಿಯಲ್ಲಿ ತಮ್ಮ ಶ್ರದ್ಧಾಸ್ಥಾನಗಳಲ್ಲಿ ನೆಲೆಯಾಗಿಸಿಕೊಂಡಿದ್ದು ಇತ್ತು. ಆದರೆ ಜಗತ್ತಿನ ಬೇರೆ ಭಾಗದ ಈ ಎಲ್ಲ ಬಹುದೇವತಾರಾಧಕ ನಾಗರಿಕತೆಗಳು ಮತ್ತು ಸ್ಥಳೀಯ ಸಂಸ್ಕೃತಿಗಳು ಏಕದೇವೋಪಾಸನೆಯ ಯುಗದಲ್ಲಿ ಮುಗಿದೇ ಹೋಗಿವೆ. ಇವತ್ತಿಗೂ ಇಷ್ಟು ವ್ಯಾಪಕವಾಗಿ ಉಳಿದುಕೊಂಡು ಬಂದಿರುವ ಒಂದೇ ಒಂದು ಸರ್ಪಾರಾಧನೆಯ ಸಂಸ್ಕೃತಿ ನಮ್ಮದು. ಸಂತಾನ, ರಕ್ಷೆ, ಅಭಯ, ನಿರ್ವಿಷೀಕರಣ - ಹೀಗೆ ನಾಗನ ಸುತ್ತ ಭಾರತದಲ್ಲಿ ಹಬ್ಬಿಕೊಂಡಿರುವ ಶ್ರದ್ಧೆಯ ಜಾಲ ಜಟಿಲವಾದದ್ದು. ಈ ಹಬ್ಬಕ್ಕೆ ಸ್ಕಂದಪುರಾಣದ ಕಥೆಯೊಂದರ ಆಲಂಬನವೂ ಇದೆ. ಮುಂದುವರಿದು, ಜನಮೇಜಯನ ಸರ್ಪಯಾಗವು ಕೊನೆಯಾಗಿ ನಾಗಗಳಿಗೆ ಅಭಯ ದೊರಕಿದ ದಿನವೂ, ಕೃಷ್ಣಾವತಾರದಲ್ಲಿ ವಿಷ್ಣುವು ಕಾಲಿಯಮರ್ದನಗೈದ ದಿನವೂ ಇದಂತೆ.
ನಾಗರ ಪಂಚಮಿ ಅಂಗವಾಗಿ ಕೊಪ್ಪಳ ಸಮೀಪದ ಭಾಗ್ಯನಗರದಲ್ಲಿ ಗುರುವಾರ ಜೋಕಾಲಿ ಜೀಕಿ ಸಂಭ್ರಮಿಸಿದ ಬಾಲಕಿಯರು–ಪ್ರಜಾವಾಣಿ ಚಿತ್ರ/ಭರತ್ ಕಂದಕೂರ
ಭಾರತೀಯ ಹಬ್ಬಗಳು ಒಳಗಿನ ತಾತ್ತ್ವಿಕ ತಿರುಳಿನಲ್ಲಿ ಶಾಂತವಾದ ಅಂತಃಪ್ರವಾಹವಾಗಿಯೂ, ಬಾಹ್ಯದಲ್ಲಿ ಉತ್ಸಾಹ, ಆವೇಗ ಮತ್ತು ಗಮ್ಮತ್ತಿನ ಸಂತೆಯೂ ಆಗಿ ತೋರುವುದು ಸಹಜವೇ. ದೀಪಾವಳಿ, ನವರಾತ್ರಿ, ಗಣೇಶೋತ್ಸವಗಳನ್ನು ಲಕ್ಷಿಸಿದಾಗ ಈ ಮಾತು ಇನ್ನಷ್ಟು ದಿಟವಾಗುತ್ತದೆ. ಆದರೆ ನಾಗರಪಂಚಮಿಯಂಥ ಹಬ್ಬಗಳು ಇವತ್ತಿಗೂ ತಮ್ಮ ಅಂತರ್ಮುಖಿತ್ವ ಹಾಗೂ ನಿರುದ್ವೇಗವನ್ನು ಕಳೆದುಕೊಂಡಿಲ್ಲ, ಬಾಹ್ಯದ ಆಡಂಬರವನ್ನು ಹೆಚ್ಚಾಗಿ ಆತುಕೊಂಡಿಲ್ಲ. ಹಳ್ಳಿಗಳಲ್ಲಿ ಆಚರಣೆಯಾಗುವ ನಾಗರಪಂಚಮಿ ಹಬ್ಬವು ಇವತ್ತಿಗೂ ಹೊರಗಿನ ಆಡಂಬರಕ್ಕಿಂತ ಆಂತರಿಕ ಶುದ್ಧಿ ಮತ್ತು ನಿರುಮ್ಮಳತೆಯನ್ನೇ ಕೇಂದ್ರವಾಗಿ ಇಟ್ಟುಕೊಂಡಿದೆ. ಅದರಲ್ಲಿಯೂ ಕರ್ನಾಟಕದ ದಕ್ಷಿಣೋತ್ತರ ಜಿಲ್ಲೆಗಳಲ್ಲಿ, ಉಕ್ಕುವ ನದಿ ಝರಿ ಸಾಗರಗಳ ಹಿನ್ನೆಲೆಯಲ್ಲಿ, ಜಡಿಮಳೆಯ ಕುಳಿರಿನಲ್ಲಿ, ಕಾಡಿನ ಕಪ್ಪಿನಲ್ಲೆಲ್ಲೋ ಸುಪ್ತನಾಗಿರುವ ನಾಗನ ಪ್ರತಿಮೆಯನ್ನು ಹುಡುಕಿ ಹೋಗಿ ತನಿಯೆರೆದು ಬರುವ ಅನೂಚಾನ ಆಚಾರ, ಎಚ್ಚರ ತಪ್ಪದ ಶುದ್ಧಿ, ಇವತ್ತಿಗೂ ಜೀವಂತ. ಕೆಲವು ಸಮುದಾಯ ಮತ್ತು ಸಂಪ್ರದಾಯಗಳಲ್ಲಿ ಇದು ಸ್ತ್ರೀಪ್ರಧಾನ ಹಬ್ಬವಾಗಿದ್ದರೆ, ಇನ್ನು ಕೆಲವು ಸಮುದಾಯಗಳಲ್ಲಿ ಪುರುಷರೇ ನೆರವೇರಿಸುವ ಹಬ್ಬ.
ಅಣ್ಣ–ತಂಗಿಯರ ಸಹೋದರತೆಯ ಭಾವಬಂಧವೂ ಈ ಹಬ್ಬಕ್ಕಿದೆ. ಹಲವೆಡೆ ಹೆಣ್ಣುಮಕ್ಕಳು ಈ ದಿನ ಕಡ್ಡಾಯವಾಗಿ ಉಯ್ಯಾಲೆಯಾಡುವರು. ಹುತ್ತಕ್ಕೆ, ನಾಗರಕಲ್ಲಿಗೆ, ಕೊನೆಗೆ ಸಾಕ್ಷಾತ್ ಜೀವಂತ ನಾಗನಿಗೆ ಹಾಲೆರೆಯುವ ವಿಶಿಷ್ಟ ಆಚರಣೆಯ ದಿನವಿದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.