ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ನಾರಾಯಣ ಗುರು: ಅನುಷ್ಠಾನ ವೇದಾಂತದ ಆಚಾರ್ಯ
ನಾರಾಯಣ ಗುರು: ಅನುಷ್ಠಾನ ವೇದಾಂತದ ಆಚಾರ್ಯ
Published 30 ಆಗಸ್ಟ್ 2023, 23:58 IST
Last Updated 30 ಆಗಸ್ಟ್ 2023, 23:58 IST
ಅಕ್ಷರ ಗಾತ್ರ

ಭಾರತೀಯ ಆಧ್ಯಾತ್ಮಿಕ ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿರುವುದು ನಮಗೆ ತಿಳಿದೇ ಇದೆ. ಅಧ್ಯಾತ್ಮದ ಉದ್ದೇಶವೇ ಅಂತರಂಗದ ಯಾನ. ಮನುಷ್ಯನ ದಿಟವಾದ ನೆಲೆ–ಬೆಲೆಗಳನ್ನು ಕುರಿತ ಆಳವಾದ ಚಿಂತನೆಯೇ ಅಧ್ಯಾತ್ಮದ ವಿಷಯ. ಮನುಷ್ಯನ ಅರಿವು, ಇರವು, ನಲವುಗಳ ಜಿಜ್ಞಾಸೆ ನಮ್ಮ ದೇಶದಲ್ಲಿ ನಿರಂತರವಾಗಿ ನಡೆಯುತ್ತಲೇ ಬಂದಿದೆ. ನಮ್ಮ ಕಾಲದಲ್ಲೂ ಇದು ಮುಂದುವರೆದಿದೆಯೆನ್ನಿ! ಹೀಗೆ ನಮ್ಮ ಕಾಲದಲ್ಲಿ ಅಧ್ಯಾತ್ಮದ ಬೆಳಕನ್ನು ಕಾಣಿಸಿದ ಪ್ರಮುಖರಲ್ಲಿ ನಾರಾಯಣ ಗುರುಗಳೂ (1854–1928) ಒಬ್ಬರು. ಆಧ್ಯಾತ್ಮಿಕತೆಗೆ ಸಮಾಜ ಸುಧಾರಣೆಯ ಹೃದಯ ಅಥವಾ ಸಮಾಜ ಸುಧಾರಣೆಗೆ ಆಧ್ಯಾತ್ಮಿಕತೆಯ ಪ್ರಜ್ಞೆ ಸೇರಿಕೊಂಡು ಮೂಡಿದ ವಿಗ್ರಹರೂಪ ಅವರು. ಉಪನಿಷತ್ತುಗಳು ಪ್ರತಿಪಾದಿಸಿದ ಬ್ರಹ್ಮತತ್ತ್ವವನ್ನು ಎತ್ತಿಹಿಡಿದವರು ಶಂಕರಾಚಾರ್ಯರು. ಅವರು ಪ್ರತಿಪಾದಿಸಿದ ಸಿದ್ಧಾಂತವೇ ‘ಅದ್ವೈತ’ ಎಂಬ ಹೆಸರನ್ನು ಪಡೆಯಿತು. ಈ ಅದ್ವೈತದ ಬೆಳಕಿನಲ್ಲಿಯೇ ನಾರಾಯಣ ಗುರುಗಳು ಕೂಡ ತಮ್ಮ ದಾರ್ಶನಿಕತೆಯನ್ನು ಪ್ರತಿಪಾದಿಸಿದರು.

ಬ್ರಹ್ಮತತ್ತ್ವದ ಪ್ರತಿಪಾದನೆಯನ್ನು ಹೆಚ್ಚು ಸ್ಫುಟವಾಗಿ ಕಾಣುವುದು ಉಪನಿಷತ್ತುಗಳಲ್ಲಿ. ಅಲ್ಲಿಂದ ಮೊದಲಾಗಿ ಹಲವರು ದಾರ್ಶನಿಕರು ತಮ್ಮ ಸಿದ್ಧಾಂತವನ್ನು ಬ್ರಹ್ಮತತ್ತ್ವದ ಬೆಳಕಿನಲ್ಲಿಯೇ ಕಾಣಿಸಿದ್ದಾರೆ. ಈ ಎಲ್ಲ ಆಚಾರ್ಯರ ಕಾಣ್ಕೆಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿರುವುದೂ ಸ್ಪಷ್ಟ. ಈ ಬ್ರಹ್ಮತತ್ತ್ವವಾದರೂ ಅನುಭವದ ನೆಲೆಯಲ್ಲಿ ತೋರಿಕೊಳ್ಳುವಂಥ ತಾತ್ವಿಕತೆಯೇ ಹೌದು. ಈ ದೃಷ್ಟಿಯಿಂದ ನೋಡಿದಾಗ ನಾರಾಯಣ ಗುರುಗಳ ಕಾಣ್ಕೆಗೆ ಅನುಭವದ ವಿಶೇಷ ಹೊಳಪು ಇರುವುದನ್ನು ಗಮನಿಸಬಹುದು.

ಇರುವುದೇ ಒಂದೇ ವಸ್ತು; ಅದುವೇ ಬ್ರಹ್ಮ. ಇದುವೇ ಬ್ರಹ್ಮತತ್ತ್ವವಾದ ತಿರುಳು; ಅದ್ವೈತದ ಸಂದೇಶ. ಆದರೆ ಇದು ಕೇವಲ ಒಂದು ಬೌದ್ಧಿಕ ಘೋಷಣೆಯಾದರೆ ಪ್ರಯೋಜವಿರದು; ಇದು ಅಂತರಂಗದ ಸಾಕ್ಷಾತ್ಕಾರದಿಂದ ಸಿದ್ಧವಾಗಬೇಕಾದ ಅರಿವು ಎಂಬುದು ನಾರಾಯಣ ಗುರುಗಳ ನಿಲವು. ಎಲ್ಲೆಲ್ಲೂ ಎಲ್ಲರಲ್ಲೂ ಒಂದೇ ವಸ್ತುವನ್ನು ಕಾಣುವಂಥ ಅನುಭವ ದಕ್ಕಿದಾಗ ಜಗತ್ತಿನಲ್ಲಿ ಭೇದಭಾವಕ್ಕೆ ಅವಕಾಶವಾದರೂ ಎಲ್ಲಿರುತ್ತದೆ – ಎಂಬುದು ಅವರ ಪ್ರಶ್ನೆ. ಹೀಗೆ ಅವರು ಸಮಾಜದಲ್ಲಿ ಸಾಧಿಸಿದ, ಶಾಶ್ವತವಾಗಿ ಉಳಿಯಬೇಕೆಂದು ಬಯಸಿದ ಸಮಾನತೆಗೆ ಮೂಲವಾಗಿರುವುದೇ ಬ್ರಹ್ಮತತ್ತ್ವ. ಬ್ರಹ್ಮಾನುಭವವು ನಮ್ಮ ನಿತ್ಯದ ಅನುಭವಕ್ಕೂ ಎಟಕುವಂತಿರಬೇಕು ಎಂದು ಆಶಿಸಿದವರು, ಅದರಂತೆ ಬಾಳಿದವರು; ಇತರರನ್ನೂ ಅದಕ್ಕೆ ತಕ್ಕಂತೆ ರೂಪಿಸಲು ಉಪಕ್ರಮಿಸಿದವರು ಅವರು. ಹೀಗಾಗಿ ನಾರಾಯಣ ಗುರುಗಳನ್ನು ‘ಅನುಷ್ಠಾನ ವೇದಾಂತಿ’ ಎಂದು ಕರೆಯಬಹುದು. ಸಮಾಜದಲ್ಲಿಯ ಹಲವು ಅನಿಷ್ಟಗಳಿಗೆ ಧರ್ಮವೇ ಕಾರಣವಾಗಿರುವಾಗ, ಅದೇ ಧರ್ಮ ಅವುಗಳಿಗೆ ಪರಿಹಾರವನ್ನೂ ನೀಡಬಲ್ಲದು – ಎಂಬ ಅಪೂರ್ವ ಕಾಣ್ಕೆಯಿಂದ ಸಮಾಜದ ಕೊಳೆಯನ್ನು ಕಳೆಯಲು ತೊಡಗಿದ ಮಹಾಪುರುಷ ಅವರು.

ಬಾದಾರಾಯಣರು ವೇದಾಂತಸೂತ್ರಗಳನ್ನು ರಚಿಸಿದ್ದಾರೆ. ಈ ಸೂತ್ರಗಳಿಗೆ ಶಂಕರಾಚಾರ್ಯರೂ ರಾಮಾನುಜಾಚಾರ್ಯರೂ ಮಧ್ವಾಚಾರ್ಯರೂ ಭಾಷ್ಯಗಳನ್ನು ಬರೆದು ತಮ್ಮ ಸಿದ್ಧಾಂತಗಳನ್ನು ನಿರೂಪಿಸಿದ್ದಾರೆ. ನಾರಾಯಣ ಗುರುಗಳು ಸ್ವತಃ ತಾವೇ ‘ವೇದಾಂತಸೂತ್ರ’ಗಳನ್ನು ರಚಿಸಿದರು. ‘ಬ್ರಹ್ಮವೇ ನಾನು’ ಎಂಬ ಮಾತಿನಿಂದ ಆರಂಭವಾಗುವ ಈ ಸೂತ್ರಗಳು, ಬ್ರಹ್ಮದ ಲಕ್ಷಣವನ್ನೂ ವ್ಯಾಪ್ತಿಯನ್ನೂ ಕುರಿತು ಸೂತ್ರೀಕರಿಸುತ್ತವೆ. ಬ್ರಹ್ಮದ ಲಕ್ಷಣವನ್ನು ಅವರು ‘ಜ್ಯೋತಿ’, ಎಂದರೆ ಬೆಳಕು ಎಂದು ನಿರೂಪಿಸಿದ್ದಾರೆ. ಬೆಳಕಿನ ಕೆಲಸ ಎಂದರೆ ಕತ್ತಲೆಯನ್ನು ಓಡಿಸುವುದು. ಕತ್ತಲೆ ಎಂದರೆ ಅವಿದ್ಯೆಯಲ್ಲದೆ ಮತ್ತೊಂದಲ್ಲ. ಅವಿದ್ಯೆಯ ದೆಸೆಯಿಂದಲೇ ಸಮಾಜದಲ್ಲಿಯೂ ವ್ಯಕ್ತಿಯಲ್ಲೂ ಎಲ್ಲ ವಿಧದ ಉದ್ವೇಗಗಳು ಕಾಣಿಸಿಕೊಳ್ಳುತ್ತವೆ. ಒಮ್ಮೆ ವಿದ್ಯೆ ಎಂಬ ಬೆಳಕು ನಮಗೆ ದಕ್ಕಿದರೆ ಆಗ ಎಲ್ಲ ಆತಂಕಗಳಿಂದ ಮುಕ್ತವಾಗಿ, ನಮ್ಮ ಜೀವನ‍ಪ್ರಯಾಣ ಸುಗಮವಾಗುತ್ತದೆ, ಸುಂದರವೂ ಆಗುತ್ತದೆ. ‘ಇರುವುದು ಒಂದೇ ತತ್ತ್ವ; ಅದುವೇ ಆತ್ಮ’ – ಎಂಬ ಸೂತ್ರದಿಂದ ಗುರುಗಳ ಸೂತ್ರಗುಚ್ಛ ಮುಕ್ತಾಯವಾಗುತ್ತದೆ. ಹಾಗಾದರೆ ಒಂದೇ ತತ್ತ್ವ ಇದ್ದಾಗ ನಮ್ಮ ರಾಗ–ದ್ವೇಷಕ್ಕೆ ಕಾರಣವಾದರೂ ಏನು? ನಾವಿಂದು ಮನನ ಮಾಡಬೇಕಾದ ಸಂಗತಿ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT