ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Valmiki Jayanti | ವಾಲ್ಮೀಕಿ: ರಸಕವಿ ಋಷಿಕವಿ

Published 27 ಅಕ್ಟೋಬರ್ 2023, 23:34 IST
Last Updated 27 ಅಕ್ಟೋಬರ್ 2023, 23:34 IST
ಅಕ್ಷರ ಗಾತ್ರ

ವಾಲ್ಮೀಕಿ ಮಹರ್ಷಿಗಳ ಜಯಂತಿ ಎಂದರೆ ಅದು ರಾಮನ ಮಹಾಗುಣಗಳ ಸಂಕೀರ್ತನೆಯೇ ಹೌದು; ರಾಮಾಯಣದ ಪಾರಾಯಣವೇ ಹೌದು.

ಈ ಸೃಷ್ಟಿ ಇರುವ ತನಕವೂ ರಾಮಾಯಣ ಎಂಬ ಮಹಾಕಾವ್ಯವು ಲೋಕದಲ್ಲಿ ಪ್ರಸಿದ್ಧವಾಗಿರುತ್ತದೆ – ಎಂಬ ಪ್ರಶಸ್ತಿಯ ಮಾತೊಂದು ಇದೆ, ಪರಂಪರೆಯಲ್ಲಿ. ಇದು ಏಕಕಾಲದಲ್ಲಿ ವಾಲ್ಮೀಕಿಯನ್ನೂ ರಾಮಾಯಣವನ್ನೂ ರಾಮನನ್ನೂ ನಿತ್ಯಸತ್ಯವನ್ನಾಗಿಸಿದೆ. ರಾಮಾಯಣ ಎಂದರೇನೇ ಅದು ಮಾತಿನ ಮಹಿಮೆ. ರಾಮಾಯಣದ ಹುಟ್ಟಿನಿಂದ ಹಿಡಿದು, ಅದರ ನಾಯಕನ ಹಿರಿಮೆಯವರೆಗೂ, ಅಷ್ಟೇಕೆ, ರಾಮಾಯಣದುದ್ದಕ್ಕೂ, ಮಾತಿನ ಶಕ್ತಿಯನ್ನೇ ಕಾಣುತ್ತೇವೆ. ಇಂಥದೊಂದು ಅಪೂರ್ವ ಕಾವ್ಯವನ್ನು ಸೃಷ್ಟಿಸಿದ ಋಷಿಕವಿ ವಾಲ್ಮೀಕಿ.

ನಮಗೆ ವಾಲ್ಮೀಕಿ ಮಹರ್ಷಿಗಳ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಆದರೆ ರಾಮಾಯಣವನ್ನು ಓದುತ್ತಿದ್ದರೆ, ಅದರ ಒಂದೊಂದು ಮಾತಿನಲ್ಲೂ ವಾಲ್ಮೀಕಿಗಳ ವ್ಯಕ್ತಿತ್ವವೇ ಎದ್ದುಕಾಣುತ್ತದೆ. ವಾಲ್ಮೀಕಿಗಳ ವ್ಯಕ್ತಿತ್ವದಲ್ಲಿ ಮಹತ್ತರ ಬದಲಾವಣೆ ಆದದ್ದು ಅವರು ರಾಮನ ಬಗ್ಗೆ ನಾರದರು ಹೇಳಿದ ಮಾತುಗಳನ್ನು ಕೇಳಿದ ಮೇಲೆಯೇ. ಮೊದಲಿಗೆ ಅವರು ತಮ್ಮ ಮೋಕ್ಷವನ್ನು ಬಯಸಿ ಸಾಧನೆಯಲ್ಲಿ ನಿರತ ತಪಸ್ವಿಗಳಷ್ಟೇ ಆಗಿದ್ದರು; ಆದರೆ ರಾಮನ ಕಥೆಯನ್ನು ಕೇಳಿ ಅವರು ಜಗತ್ತಿನ ಸಂಕಟಕ್ಕೆ ಸ್ಪಂದಿಸಬಲ್ಲ ಋಷಿಕವಿಗಳೇ ಆದರು. ಒಂದು ಹಕ್ಕಿಯ ಆಕ್ರಂದನದಲ್ಲಿ ಅವರು ಇಡಿಯ ಜಗತ್ತಿನ ಅಳುವನ್ನೇ ಕಂಡರು. ಈ ವಿಶ್ವಾತ್ಮಭಾವದ ಕಾರಣದಿಂದಾಗಿಯೇ ಅವರ ಶೋಕವೇ ಶ್ಲೋಕವಾಯಿತು; ಈ ಸಹೃದಯತೆಯ ರಸಾಭಿವ್ಯಕ್ತಿಯಲ್ಲಿ ರಾಮ–ಸೀತೆಯರ ಕಥೆ ‘ರಾಮಾಯಣ’ವಾಯಿತು.

ಇಂದು ಜಗತ್ತು ಕಿರಿದಾಗಿ, ಸಂಪರ್ಕಜಾಲದ ದೆಸೆಯಿಂದಾಗಿ, ಭೌತಿಕವಾಗಿ ಒಂದು ಪುಟ್ಟ ಗ್ರಾಮದಂತಾಗಿದೆ, ದಿಟ. ಹೀಗಿದ್ದರೂ, ಭಾವ–ಬುದ್ಧಿಗಳ ಪಾತಳಿಯಲ್ಲಿ ಎಲ್ಲರಲ್ಲೂ ಪ್ರತ್ಯೇಕತೆಯ ಭಾವವೇ ತೀವ್ರವಾಗುತ್ತಿದೆ. ಆದರೆ ಸಂಪರ್ಕಸಾಧನಗಳ ಆರ್ಭಟ ಇಲ್ಲದ ಕಾಲದಲ್ಲಿ ಇಡಿಯ ಭಾರತವನ್ನು ಒಗ್ಗೂಡಿಸಿದ್ದವರು ವಾಲ್ಮೀಕಿಗಳೇ ಹೌದು. ಅವರು ಕಂಡರಿಸಿದ ‘ರಾಮತತ್ತ್ವ’ ಎಂಬ ಧರ್ಮಸೇತು ನಮ್ಮ ದೇಶದ ಸಂಸ್ಕೃತಿಯನ್ನು ರೂಪಿಸಿತು; ಧರ್ಮದ ಸ್ವರೂಪವನ್ನು ಹಿಗ್ಗಿಸಿತು; ಮನುಷ್ಯಜೀವನದ ಆದರ್ಶಗಳನ್ನು ಬೆಳೆಯಿಸಿತು; ಜಾತಿ ಮತ ಭಾಷೆ ಪ್ರಾಂತಗಳ ಎಲ್ಲೆಯನ್ನು ಮೀರಿ ಎಲ್ಲರನ್ನೂ ರಾಮಭಾವದಲ್ಲಿ ಕೂಡಿಸಿತು.

ಶ್ರೀರಾಮನನ್ನು ಧರ್ಮದ ವಿಗ್ರಹರೂಪ ಎಂದು ವಾಲ್ಮೀಕಿಗಳು ಒಕ್ಕಣಿಸಿದ್ದಾರೆ. ಈ ಒಂದು ಮಾತಿನಲ್ಲಿ ರಾಮನ ವ್ಯಕ್ತಿತ್ವವೂ ವಾಲ್ಮೀಕಿಗಳ ವ್ಯಕ್ತಿತ್ವವೂ ಸ್ಫುಟವಾಗುತ್ತವೆ. ವಾಲ್ಮೀಕಿಗಳು ರಾಮಾಯಣವನ್ನು ಏಕಾಗಿ ಬರೆದರು ಎಂಬುದು ಈ ಮಾತಿನಿಂದ ಸ್ಪಷ್ಟವಾಗುತ್ತದೆ. ಧರ್ಮದ ಸ್ವರೂಪ ಹೇಗಿರುತ್ತದೆ – ಎಂಬುದೇ ಅವರ ಹುಡುಕಾಟವಾಗಿತ್ತು. ಆಗ ಅವರಿಗೆ ಒದಗಿದ ಕಾಣ್ಕೆಯೇ ‘ರಾಮ’. ರಾಮ ಎಂಬ ಧರ್ಮದ ನಡೆದಾಡುವ ರೂಪವನ್ನು ಅವರು ಜಗತ್ತಿಗೆ ಕರುಣಿಸಿದರು, ಕಾಣಿಸಿದರು. 

ನಾವಿಂದು ಧಾರ್ಮಿಕತೆಯನ್ನು ಅನುಕೂಲಸಿಂಧುವನ್ನಾಗಿಸಿಕೊಳ್ಳುತ್ತಿದ್ದೇವೆ. ಆದರೆ ದಿಟವಾದ ಧರ್ಮಶ್ರದ್ಧೆಯ ಆಕಾರವನ್ನು ಕಾಣಿಸಿದವರು ವಾಲ್ಮೀಕಿಗಳು. ಧರ್ಮ ಎನ್ನುವುದು ಸನಾತನವಾದುದು; ಅದು ನಮ್ಮ ಸ್ವಾರ್ಥ, ಬುದ್ಧಿ, ಅನುಕೂಲ, ದೇಶ, ಕಾಲಗಳನ್ನು ಮೀರಿದ ಶಾಶ್ವತ ತತ್ತ್ವ ಎಂಬುದರ ಮೀಮಾಂಸೆಯನ್ನು ರಾಮಾಯಣದ ಆರಂಭದಿಂದ ಕೊನೆಯ ತನಕ ಅವರು ನಿರೂಪಿಸಿದ್ದಾರೆ. ದಿಟವಾದ ಧಾರ್ಮಿಕ ಹೇಗಿರುತ್ತಾನೆ ಎಂಬುದಕ್ಕೆ ಒಂದು ಉದಾಹರಣೆಯನ್ನು ನೋಡಬಹುದು.

ರಾಮನು ಪಟ್ಟಾಭಿಷೇಕಕ್ಕೆ ಸಿದ್ಧನಾಗುತ್ತಿದ್ದಾನೆ. ಆದರೆ ಮುಂದೆ ಸ್ವಲ್ಪವೇ ಸಮಯದ ಅಂತರದಲ್ಲಿ ಕಾಡಿಗೆ ಹೋಗಲು ಅವನು ಸಿದ್ಧನಾಗಬೇಕಾಗುತ್ತದೆ. ಆಗ ರಾಮನ ಮುಖ ಹೇಗಿತ್ತು ಎಂಬುದನ್ನು ವಾಲ್ಮೀಕಿಗಳು ವರ್ಣಿಸುತ್ತಾರೆ: ‘ಅವನು ಪಟ್ಟಾಭಿಷೇಕಕ್ಕೆ ಸಿದ್ಧವಾಗುತ್ತಿದ್ದಾಗ ಅವನ ಮುಖ ಹೇಗಿದ್ದಿತೋ, ಈಗ ಕಾಡಿಗೆ ಹೋಗಲು ಸಿದ್ಧವಾಗಬೇಕಾದರೂ ಹಾಗೆಯೇ ಇದ್ದಿತು; ಸ್ವಲ್ಪವೂ ವ್ಯತ್ಯಾಸ ಇರಲಿಲ್ಲ.’

ಧರ್ಮದಲ್ಲಿ ನಿರತನಾದವನಿಗೆ ನಾಡಾದರೂ ಒಂದೇ, ಕಾಡಾದರೂ ಒಂದೇ; ಅವನಿಗೆ ಧರ್ಮಮಾರ್ಗ ಮುಖ್ಯವೇ ಹೊರತು ಸಿಂಹಾಸನ–ವನವಾಸಗಳು ಅಲ್ಲ – ಎಂಬುದನ್ನು ತುಂಬ ಅದ್ಭುತವಾಗಿ ವಾಲ್ಮೀಕಿಗಳು ಸೂಚಿಸಿದ್ದಾರೆ. ‘ಯಾವುದೇ ಕಾರಣಕ್ಕೂ ಅಧರ್ಮಮಾರ್ಗದಿಂದ ನಾನು ರಾಜ್ಯವನ್ನು ದಕ್ಕಿಸಿಕೊಳ್ಳಲಾರೆ’ ಎಂದು ರಾಮ ನೇರವಾಗಿಯೇ ಘೋಷಿಸುತ್ತಾನೆ ಕೂಡ. ನಮಗಿಂದು ರಾಮಾಯಣ ಮತ್ತು ವಾಲ್ಮೀಕಿ ಮಹರ್ಷಿ ಪ್ರಸ್ತುತ ಎನಿಸುವುದೇ ಇಂಥ ಕಾಣ್ಕೆಗಾಗಿ.

‘ಪ್ರಿಯವಾದ ಮಾತುಗಳನ್ನು ಆಡುವವರು ಯಾವಾಗಲೂ ದೊರೆಯುತ್ತಾರೆ. ಆದರೆ ಅಪ್ರಿಯವಾದರೂ ಹಿತವಾದ ಮಾತುಗಳನ್ನು ಹೇಳುವವವರೂ ಕೇಳುವವರೂ ಸಿಗುವುದು ಕಷ್ಟ.’ ಇದು ರಾಮಾಯಣದ್ದೇ ಮಾತು. ಆದರೆ ವಾಲ್ಮೀಕಿಗಳು ನಮಗೆ ಹಿತವಾದ ಮಾತುಗಳನ್ನು ಪ್ರಿಯವಾದ ಮಾತುಗಳ ಮೂಲಕವೇ ಹೇಳಿ ನಮ್ಮ ಪಾಲಿಗೆ ರಸಕವಿಯೂ ಋಷಿಕವಿಯೂ ಆಗಿದ್ದಾರೆ. ಅವರ ಮಾತುಗಳನ್ನು ನಾವು ಕೇಳಬೇಕಷ್ಟೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT