ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬರಗಾಲದ ಸಂದರ್ಭದಲ್ಲಿನ ಬಹುರೂಪಿ ದಸರಾ

Published 15 ಅಕ್ಟೋಬರ್ 2023, 0:30 IST
Last Updated 15 ಅಕ್ಟೋಬರ್ 2023, 0:30 IST
ಅಕ್ಷರ ಗಾತ್ರ

‘ಬರಗಾಲ ಬಂದಿರುವುದರಿಂದ, ಈ ಬಾರಿ ಸರಳವೂ ಅಲ್ಲದ, ಅದ್ದೂರಿಯೂ ಅಲ್ಲದ, ಸಾಂಪ್ರದಾಯಿಕ ದಸರೆಯನ್ನು ಆಚರಿಸಲಾಗುವುದು’ ಎಂದು ಸರ್ಕಾರ ಹೇಳಿದಾಗ, ‘ಅದು ಹೇಗಿರಬಹುದು’ ಎಂಬ ಪ್ರಶ್ನೆ ಬಹುತೇಕರಲ್ಲಿ ಮೂಡಿದ್ದು ಸಹಜ.

ಏಕೆಂದರೆ, ‘ಅರಮನೆ ಒಳಗಿನ ಸರಳ, ಸಾಂಪ್ರದಾಯಿಕ ದಸರೆ’ ಮತ್ತು ಅದರಾಚೆಗೆ ಹೊಳೆಯುವ ‘ಅದ್ದೂರಿ ದಸರೆ’ಯನ್ನು ಜನ ನೋಡಿದ್ದಾರೆ. ಆದರೆ, ಈ ಎರಡೂ ಅಲ್ಲದ, ‘ಸಾಂಪ್ರದಾಯಿಕ ದಸರೆ’ ಹೇಗಿರುತ್ತದೆ ಎಂಬುದಕ್ಕೆ, ಉದ್ಘಾಟನೆಯ ಹೊತ್ತಿನಲ್ಲೂ ಸ್ಪಷ್ಟ ಚಿತ್ರವಂತೂ ಇಲ್ಲ.

‘ಸರ್ಕಾರವೇ ಉತ್ಸವದ ಹೊಣೆಗಾರಿಕೆಯನ್ನು ಹೊರಲಾರಂಭಿಸಿದ 1970ರ ದಶಕಕ್ಕೂ ಮುಂಚೆ ಇದ್ದದ್ದು ಸಾಂಪ್ರದಾಯಿಕ ದಸರೆ’ ಎಂಬುದು ಹಿರಿಯರ ಮಾತು. ಇದು ಕೂಡ ಚರ್ಚಾರ್ಹ ವಿಷಯ.

ಕಳೆದ ವರ್ಷದ ಜಂಬೂಸವಾರಿಯ ದೃಶ್ಯ. ಜನಸಾಗರದ ನಡುವೆ ಸಾಗಿದ್ದ ಮೆರವಣಿಗೆ

ಕಳೆದ ವರ್ಷದ ಜಂಬೂಸವಾರಿಯ ದೃಶ್ಯ. ಜನಸಾಗರದ ನಡುವೆ ಸಾಗಿದ್ದ ಮೆರವಣಿಗೆ

ಪ್ರಜಾವಾಣಿ ಚಿತ್ರ: ಅನೂಪ್‌ ಟಿ.ರಾಘ

ಈ ಬಾರಿಯ ಉತ್ಸವದ ರೂಪರೇಷೆಗಳನ್ನು ಗಮನಿಸಿದ ಯಾರಿಗೇ ಆದರೂ ‘ಇದು ಸರಳವಂತೂ ಅಲ್ಲ’ ಎಂಬುದು ಸ್ಪಷ್ಟವಾಗಿದೆ. ಆದರೆ ‘ಅದ್ದೂರಿ ಅಲ್ಲ’ ಎಂದು ಹೇಳಲು ಯಾರಿಗೂ ಬಾಯಿ ಇಲ್ಲ. ಸ್ವತಃ ಸರ್ಕಾರಕ್ಕೂ. ಏಕೆಂದರೆ ಬರಗಾಲ ಘೋಷಣೆಗೂ ಮುನ್ನ ಉತ್ಸವದ ಅಂದಾಜು ವೆಚ್ಚ ₹ 30 ಕೋಟಿ ಇತ್ತು. ಈಗ ಅದಕ್ಕಿಂತ ಹೆಚ್ಚು ಖರ್ಚಾಗುವ ಸಾಧ್ಯತೆಯೇ ಹೆಚ್ಚಿದೆ.

‘‘ಸರಳ’, ‘ಅದ್ದೂರಿ’ ಎಂಬುದನ್ನು ಉತ್ಸವಕ್ಕೆ ಖರ್ಚು ಮಾಡುವ ಹಣದಲ್ಲಿ ಅಳೆಯಬಾರದು. ಅದರಿಂದ ಎಷ್ಟು ಮಂದಿಗೆ ಪ್ರಯೋಜನವಾಗುತ್ತದೆ ಎಂಬುದೇ ಮುಖ್ಯ’ ಎಂಬ ಮೈಸೂರು ಜಿಲ್ಲಾಡಳಿತದ ವಾದವನ್ನು ಆಲಿಸುತ್ತಾ ನೋಡಿದರೆ, ರಾಜ್ಯದ 200ಕ್ಕೂ ಹೆಚ್ಚು ತಾಲ್ಲೂಕುಗಳು ಬರಗಾಲದ ಬವಣೆಯಲ್ಲಿ ಬೇಯುತ್ತಿರುವಾಗ, ವಿದ್ಯುತ್‌ ಪೂರೈಕೆ ಇಲ್ಲದೆ ಕೃಷಿಕರು ಪರದಾಡುತ್ತಿರುವಾಗ, ಮೈಸೂರು ನಗರದ ನೂರಾರು ಕಿ.ಮೀ. ರಸ್ತೆ, ವೃತ್ತಗಳು ವಿದ್ಯುತ್‌ ದೀಪಾಲಂಕಾರದಲ್ಲಿ ಝಗಮಗಿಸುತ್ತಿರುವುದು ಕಾಣುತ್ತದೆ.

ವಿಜಯನಗರ ಅರಸರ ಪತನದ ನಂತರ, ರಾಜ ಒಡೆಯರಿಂದ 1610ರಲ್ಲಿ ಆರಂಭವಾಗಿ ಹಲವು ಏಳುಬೀಳುಗಳ ನಡುವೆ, ಶತಮಾನಗಳನ್ನು ದಾಟಿ, ರಾಜಪ್ರಭುತ್ವ, ಪ್ರಜಾಪ್ರಭುತ್ವದ ಮೂಲಕವೇ ಜನರ ನಡುವೆ ಉಳಿದಿರುವ ದಸರೆಗೆ ಎಂಥ ಕಾಲವೂ ಅಡ್ಡಿಪಡಿಸಲಾರದು ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.

ಗಜಪಡೆಯ ಜಂಬೂಸವಾರಿ ತಾಲೀಮು

ಗಜಪಡೆಯ ಜಂಬೂಸವಾರಿ ತಾಲೀಮು

ಪ್ರಜಾವಾಣಿ ಚಿತ್ರ: ಅನೂಪ್‌ ಟಿ.ರಾಘ

ಈಗ ಉತ್ಸವದ ಕೇಂದ್ರವಾಗಿರುವ ಅಂಬಾವಿಲಾಸ ಅರಮನೆಯಲ್ಲಿ ದಸರಾ ಉತ್ಸವ ಶುರುವಾಗಿದ್ದು 1910ರಲ್ಲಿ. ಅಂದರೆ ಈ ಅರಮನೆಯಲ್ಲಿ ಈ ವರ್ಷ ನಡೆಯಲಿರುವುದು 113ನೇ ಉತ್ಸವ. ಈ ಅರಮನೆ ನಿರ್ಮಾಣ ಹಂತದಲ್ಲಿದ್ದಾಗ, ಉತ್ಸವ ಜಗನ್ಮೋಹನ ಅರಮನೆಯಲ್ಲಿ ನಡೆದಿತ್ತು. ದಸರೆ ಕವಿಗೋಷ್ಠಿಗೇ ಹೆಸರಾಗಿದ್ದ ಈ ಅರಮನೆಯು ಈಗ ಶಿಥಿಲಗೊಂಡಿದೆ. ಶಿಥಿಲವಾಗಿರುವುದನ್ನು ಬಿಟ್ಟು, ಹೊಸ ರಚನೆಗಳತ್ತ ಸಾಗಿರುವ ದಸರೆ ಸದಾಕಾಲ ಬಹುರೂಪಿ.

ಅರಸೊತ್ತಿಗೆಯ ಅತಂತ್ರ ಸಂದರ್ಭಗಳನ್ನು ಹೊರತುಪಡಿಸಿದರೆ, ದಸರೆ ಎಂಬ ಉತ್ಸವದ ಸಂಭ್ರಮಕ್ಕೆ ಮೈಸೂರಿನಲ್ಲಿ ಬರವಿಲ್ಲ. ಈ ಕಾರಣಕ್ಕೇ, ‘ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ಕವಿಸಾಲನ್ನು ಕೊಂಚ ಬದಲಿಸುವುದಾದರೆ, ‘ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ಹೇಗಾದರೂ ನೀ ದಸರೆ ಆಚರಿಸುತ್ತಿರು’ ಎಂದು ಹೇಳಬಹುದು. ಇಷ್ಟಕ್ಕೂ ಮೈಸೂರಿನ ಅರ್ಥ ವ್ಯವಸ್ಥೆ ಕೂಡ ಈ ಉತ್ಸವವನ್ನು ದೊಡ್ಡ ಮಟ್ಟದಲ್ಲಿ ಅವಲಂಬಿಸಿರುವುದೂ ದಿಟ.

ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ 1969ರವರೆಗೂ ದಸರಾ ನಡೆದಿತ್ತು. 1970ರಲ್ಲಿ ರಾಜಪ್ರಭುತ್ವವನ್ನು ಕೊನೆಗಾಣಿಸಿ ಹೊರಟ ಆದೇಶದ ನಂತರ, ‘ಸರ್ಕಾರವೇ ದಸರಾ ಉತ್ಸವವನ್ನು ಆಚರಿಸಬೇಕು’ ಎಂಬ ಹಕ್ಕೊತ್ತಾಯ ಮೂಡಿತ್ತು. ಆದರೆ, ಆ ವರ್ಷ ದಸರಾ ನಡೆಯಲಿಲ್ಲ. 1971ರಲ್ಲಿ ಮಹಾರಾಜರ ಬದಲು ‘ಭಾರತಮಾತೆ’ಯ ಮೆರವಣಿಗೆ ನಡೆದಿತ್ತು. ನಾಡಹಬ್ಬ ಸಮಿತಿಯು ಮಹಾರಾಜ ಮತ್ತು ಚಾಮುಂಡೇಶ್ವರಿ ಭಾವಚಿತ್ರದ ಮೆರವಣಿಗೆಯನ್ನೂ ನಡೆಸಿತ್ತು. ಇದು ರಾಜಪ್ರಭುತ್ವ ಮತ್ತು ಪ್ರಜಾಪ್ರಭುತ್ವದ ಪರವಾಗಿದ್ದವರ ನಡುವಿನ ಸಂಘರ್ಷದಂತೆಯೂ ಕಾಣುತ್ತದೆ. ಹೀಗಿದ್ದೂ 1972ರಲ್ಲಿ ಬರಗಾಲದ ಕಾರಣಕ್ಕೇ ಮೆರವಣಿಗೆ ನಡೆಯಲಿಲ್ಲ ಎಂಬುದನ್ನು ಗಮನಿಸಬೇಕು. 1973ರಲ್ಲೂ ಬರಗಾಲವಿತ್ತು, 1974ರಲ್ಲಿ ಜಯಚಾಮರಾಜ ಒಡೆಯರ್‌ ನಿಧನರಾದರು. ಈ ಎರಡೂ ವರ್ಷ ಸರಳ ಮೆರವಣಿಗೆಯಷ್ಟೇ ನಡೆದಿತ್ತು.

1975ರಿಂದ ಸರ್ಕಾರವೇ ಉತ್ಸವವನ್ನು ಆಚರಿಸಲು ಆರಂಭಿಸಿದ ಬಳಿಕ ಇಲ್ಲಿವರೆಗೆ ಉತ್ಸವವು ಕೆಲವೊಮ್ಮೆ ಸರಳವಾಗಿಯೂ, ಹಲವು ಬಾರಿ ಅದ್ದೂರಿಯಾಗಿಯೂ, ಪ್ರತಿ ಬಾರಿ ಸಂಪ್ರದಾಯವನ್ನು ಬಿಡದೆಯೂ ನಡೆಯುತ್ತಲೇ ಬಂದಿದೆ. ಇನ್ನೆರಡು ವರ್ಷ ಕಳೆದರೆ, ಈ ಚರಿತ್ರೆಗೆ ಐದು ದಶಕವಾಗುತ್ತದೆ.

ಈ ಅವಧಿಯಲ್ಲಿ ಕೆಲವು ಸಲ ಬರಗಾಲಗಳೂ ಬಂದು ಉತ್ಸವವನ್ನು ಸರಳಗೊಳಿಸಿವೆ. 2000ದಲ್ಲಿ ರಾಜ್‌ಕುಮಾರ್ ಅಪಹರಣ ಘಟನೆಯು ಆ ವರ್ಷದ ಉತ್ಸವದ ಮೇಲೆ ಪರಿಣಾಮ ಬೀರಿತ್ತು. 2001ರಲ್ಲಿ ಗುಜರಾತ್‌ ಭೂಕಂಪ, 2002ರಲ್ಲಿ ಮತ್ತೆ ಬಂದ ಬರಗಾಲದಿಂದ ಉತ್ಸವ ಸರಳವಾಗಿತ್ತು. ಅದಾಗಿ ಸರಿಯಾಗಿ ಒಂದು ದಶಕದ ಬಳಿಕವೂ ಎರಡು ವರ್ಷ (2011–2012) ಸತತ ಬರಗಾಲ ಬಾಧಿಸಿತ್ತು. 2015, 2016ರಲ್ಲೂ ಅದೇ ಪರಿಸ್ಥಿತಿ. ಜೊತೆಗೆ ರೈತರ ಆತ್ಮಹತ್ಯೆಗಳೂ ಹೆಚ್ಚಾಗಿದ್ದ ಕಾಲಘಟ್ಟ ಅದು.

ದಸರೆಯ ಜಂಬೂಸವಾರಿ ಮೆರವಣಿಗೆ ಕಳೆದ ವರ್ಷ ವಿದ್ಯುತ್‌ ದೀಪಾಲಂಕಾರದಲ್ಲಿ ಹೊರಟ ಬಗೆ.

ದಸರೆಯ ಜಂಬೂಸವಾರಿ ಮೆರವಣಿಗೆ ಕಳೆದ ವರ್ಷ ವಿದ್ಯುತ್‌ ದೀಪಾಲಂಕಾರದಲ್ಲಿ ಹೊರಟ ಬಗೆ.

ಪ್ರಜಾವಾಣಿ ಚಿತ್ರ: ಅನೂಪ್‌ ಟಿ.ರಾಘ

ಕೋವಿಡ್‌ ಸಾಂಕ್ರಾಮಿಕ: 2017ರ ಬಳಿಕ ದಸರಾ ಮತ್ತದೇ ಅದ್ದೂರಿತನಕ್ಕೆ ವಾಪಸಾದರೂ, 2020ರ ಕೋವಿಡ್‌ ಸಾಂಕ್ರಾಮಿಕವು ಅರಮನೆ ಆವರಣಕ್ಕಷ್ಟೇ ಉತ್ಸವ ಸೀಮಿತಗೊಳ್ಳಲು ಕಾರಣವಾಗಿತ್ತು. ಅಂದರೆ ಅದು ಸರಳ, ಸಾಂಪ್ರದಾಯಿಕ ದಸರಾ. ಹೆಚ್ಚಿನ ಜನರಿಗೆ ಪ್ರವೇಶವಿರಲಿಲ್ಲ. ಅಧಿಕಾರಿಗಳು ಮತ್ತು ರಾಜಮನೆತನಕ್ಕಷ್ಟೇ ಸೀಮಿತವಾಗಿತ್ತು.

ಈ ವರ್ಷದ ಬರಗಾಲದ ಸಂದರ್ಭದಲ್ಲೂ, ಸರ್ಕಾರವು ಖಾಸಗಿ ಪ್ರಾಯೋಜಕತ್ವಕ್ಕಾಗಿ ಎದುರು ನೋಡುತ್ತಿದೆಯಾದರೂ ಆಶಾದಾಯಕ ಸನ್ನಿವೇಶಗಳಿಲ್ಲ. ಈ ಪ್ರಾಯೋಜಕತ್ವದ ಪ್ರಯತ್ನ ಶುರುವಾಗಿ ಸರಿಯಾಗಿ ಎರಡು ದಶಕಗಳೇ ಆಗಿವೆ. ಈ ಬರಗಾಲದಲ್ಲಿ ಪ್ರಾಯೋಜಕರನ್ನು ಹುಡುಕಿ ಉತ್ಸವವನ್ನು ಅದ್ದೂರಿಯಾಗಿ ಮಾಡಬೇಕಾದ ಅನಿವಾರ್ಯವಾದರೂ ಏನು ಎಂಬ ಪ್ರಶ್ನೆಯೂ ಕೆಲವರಲ್ಲಿ ಇದೆ.

ಉತ್ಸವ ಸರಳ, ಸಾಂಪ್ರದಾಯಿಕ ಸ್ವರೂಪವನ್ನು ಬಿಟ್ಟುಕೊಟ್ಟ ಬಳಿಕವೇ ಪ್ರಾಯೋಜಕತ್ವದ ಪ್ರಯತ್ನಗಳು ಶುರುವಾದವು ಎಂದು ಹೇಳಬೇಕು. ರಾಷ್ಟ್ರೀಯ ಸಂಗೀತ, ನೃತ್ಯ ತಾರೆಗಳ ಸಂಗಮವಾದ ‘ಯುವ ದಸರಾ’ಗೂ ಈಗ ಎರಡು ದಶಕಗಳ ಸಂಭ್ರಮ. ಅದರ ಟಿಸಿಲಾದ, ಕಾಲೇಜು ವಿದ್ಯಾರ್ಥಿಗಳಿಗಾಗಿಯೇ ರೂಪಿಸಿದ ’ಯುವ ಸಂಭ್ರಮ’ ಶುರುವಾಗಿ ದಶಕ ದಾಟಿದೆ.

ಉತ್ಸವ ರೂಪರೂಪಗಳನ್ನು ದಾಟುತ್ತಲೇ ಇದೆ. 2007ರಲ್ಲಿ ‘ರೈತ ದಸರಾ’, 2008ರಲ್ಲಿ ‘ಗ್ರಾಮೀಣ ದಸರಾ’, ‘ಮಹಿಳಾ ದಸರಾ’, ‘ಮಕ್ಕಳ ದಸರಾ’, ‘ಯೋಗ ದಸರಾ’, ‘ಜನಪದೋತ್ಸವ’ ಬಂದವು. ಬಸ್‌ನಲ್ಲಿ ಕುಳಿತು ನಗರ–ಪ್ರವಾಸಿ ಸ್ಥಳಗಳನ್ನು ವೀಕ್ಷಿಸುವ ‘ದಸರಾ ದರ್ಶನ’ವೂ ಆರಂಭವಾಯಿತು. ಆಹಾರ ಮಳಿಗೆದಾರರ ಸಂಕಟಕ್ಕೆ ಕಾರಣವಾಗಿರುವ ‘ಆಹಾರ ಮೇಳ’ವೂ ಮುಂದಿನ ವರ್ಷ ಎರಡು ದಶಕ ಪೂರೈಸುತ್ತದೆ. ಉತ್ಸವವನ್ನು ಸರ್ಕಾರ ‘ನಾಡಹಬ್ಬ’ ಎಂದು ಘೋಷಿಸಿ ಒಂದೂವರೆ ದಶಕವಾಗಿದೆ.

ಇವೆಲ್ಲವೂ ದಸರಾ ಉತ್ಸವದ ರಾಜಕೇಂದ್ರಿತ, ಸಾಂಪ್ರದಾಯಿಕ ನೆಲೆಯನ್ನು ವಿಸ್ತರಿಸಿ ಕ್ರಮೇಣ ಜನಕೇಂದ್ರಿತ ನೆಲೆಗೆ ಕರೆತಂದವು ಎಂಬುದನ್ನು ಮರೆಯುವಂತಿಲ್ಲ. ಇವೆಲ್ಲವೂ ಜನರ ದಸರೆಯ ಭಾಗವೇ. 2007ರವರೆಗೂ ಒಂದು ದಿನವಷ್ಟೇ ನಡೆಯುತ್ತಿದ್ದ ಕವಿಗೋಷ್ಠಿ ಈಗ ಚಿಗುರು, ಚುಟುಕು, ಪ್ರಧಾನ, ಬಹುಭಾಷಾ ಕವಿಗೋಷ್ಠಿಯಾಗಿ ಹರಡಿಕೊಂಡಿದೆ. 19 ವರ್ಷದ ಹಿಂದೆ ನಡೆದ ‘ಏರ್‌ ಶೋ’ ಆಗೊಮ್ಮೆ, ಈಗೊಮ್ಮೆ ಇಣುಕು ಹಾಕಿ, ಈಗ ಮತ್ತೆ ಬಂದಿದೆ.

ಉತ್ಸವದ ಪ್ರಮುಖ ಆಕರ್ಷಣೆಯನ್ನು ಹೆಚ್ಚಿಸುವ ಗಜಪಡೆಯ ‘ಗಜಪಯಣ’ ಕಾರ್ಯಕ್ರಮಕ್ಕೂ ಎರಡು ದಶಕ. ಆರಂಭದ ವರ್ಷಗಳಲ್ಲಿ ಹುಣಸೂರಿನ ವೀರನ ಹೊಸಳ್ಳಿ ಅರಣ್ಯ ಪ್ರದೇಶದಿಂದ ಮೈಸೂರಿನವರೆಗೂ ಆನೆಗಳನ್ನು ನಡೆಸಿಕೊಂಡೇ ಕರೆತರಲಾಗಿತ್ತು. ನಂತರ ಅವುಗಳನ್ನು ಲಾರಿಗಳಲ್ಲಿ ಕರೆತರಲಾಗುತ್ತಿದೆ. ಉತ್ಸವಕ್ಕೆಂದು ಬರುವ ಆನೆಗಳಿಗೆ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ‘ಗಾರ್ಡ್‌ ಆಫ್‌ ಆನರ್‌’ (ಗೌರವ ವಂದನೆ) ನೀಡುವುದು ಈ ಉತ್ಸವದ ಅನನ್ಯ ಭಾಗ.

ಪೂಜೆ, ಸಂಗೀತ, ನೃತ್ಯ, ನಾಟಕ, ಕುಸ್ತಿ, ಕ್ರೀಡೆ, ಸಾಹಸ, ವಸ್ತುಪ್ರದರ್ಶನವಿಲ್ಲದೆ ದಸರಾ ಇಲ್ಲ. 1880ರಲ್ಲಿ ಚಾಮರಾಜ ಒಡೆಯರ್‌ ದಸರಾ ವಸ್ತುಪ್ರದರ್ಶನವನ್ನು ಮೊದಲ ಬಾರಿಗೆ ಉದ್ಘಾಟಿಸಿದ್ದರು. ಅದಾದ ನೂರು ವರ್ಷಗಳ ಬಳಿಕ ದಸರಾ ವಸ್ತುಪ್ರದರ್ಶನ ಪ್ರಾಧಿಕಾರವನ್ನು ರಚಿಸಲಾಯಿತು. ನಂತರ ಅದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರಕ್ಕೆ ಸೇರಿತು.

ಸರ್ಕಾರ ನೇತೃತ್ವ ವಹಿಸಿಕೊಂಡ ಮೊದಲ ದಸರೆಯಲ್ಲಿ ಸ್ಥಳೀಯ ಅಧಿಕಾರಿಗಳ ಸಮಿತಿ ರಚನೆಯಾಗಿತ್ತು. ಈಗ ಮುಖ್ಯಮಂತ್ರಿ ಅಧ್ಯಕ್ಷತೆಯ ಉನ್ನತಮಟ್ಟದ ಸಮಿತಿಯದ್ದೇ ನೇತೃತ್ವ. ಆದರೆ, ಇನ್ನೊಂದು ಪ್ರಾಧಿಕಾರದ ಕನಸು ಹಲವು ವರ್ಷಗಳಿಂದ ಹಾಗೇ ಉಳಿದಿದೆ; ಅದು ದಸರಾ ಪ್ರಾಧಿಕಾರ. ಜೊತೆಗಿನ್ನೊಂದು ಬೇಡಿಕೆಯೂ ಉಂಟು; ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ.

ಮೈಸೂರು ಒಡೆಯರ ಮನೆದೇವತೆಯಾದ ಚಾಮುಂಡಿಗೆ ಪೂಜೆ ಸಲ್ಲಿಸುವ ಮೂಲಕವೇ ಉತ್ಸವದ ಸಂಭ್ರಮ ಗರಿಗೆದರುತ್ತದೆ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಿ ಉದ್ಘಾಟಿಸುವ ಸಂಪ್ರದಾಯ ಮುಂದುವರಿದಿದೆ. ಗಜಪಯಣದ ಮುನ್ನುಡಿ ಹಾಗೂ ಚಾಮುಂಡಿಗೆ ಪೂಜೆಯಿಂದ ಶುರುವಾಗುವ ನವರಾತ್ರಿ ಉತ್ಸವ ಎಲ್ಲ ದಿಕ್ಕುಗಳಲ್ಲೂ ಮೈಸೂರನ್ನು ಹಗಲಿರುಳೂ ಝಗಮಗಿಸುವಂತೆ ಮಾಡುತ್ತದೆ. ಭೂತಕಾಲ–ವರ್ತಮಾನ ಮತ್ತು ಭವಿಷ್ಯತ್‌ ಕಾಲ ಒಂದರೊಳಗೊಂದು ಸೇರಿಕೊಳ್ಳುತ್ತವೆ. ಕಷ್ಟವಿರಲಿ, ಸುಖವಿರಲಿ, ದಸರಾ ಉತ್ಸವವಿರಲಿ ಎಂಬ ಭಾವದಲ್ಲಿ...

ಇಂಥ ದಸರೆಯು ಸರಳವೋ, ಅದ್ದೂರಿಯೋ, ಸಾಂಪ್ರದಾಯಿಕವೋ ಎಂಬ ಪ್ರಶ್ನೆಯೇ ಅಪ್ರಸ್ತುತ ಎನ್ನಿಸುವಂತೆ ಮೈಸೂರು ಕಾಣುತ್ತಿದೆ.

ಹೀಗೆನ್ನುವಾಗ ಮಹಿಷನ ಭಕ್ತರನ್ನು ಮರೆಯುವಂತಿಲ್ಲ. ಏಕೆಂದರೆ ಈಗ, ಪರ–ವಿರೋಧಗಳ ನಡುವೆ, ಒಂದೆಡೆ ‘ಚಾಮುಂಡಿ ದಸರೆ’ ನಡೆದರೆ, ಮತ್ತೊಂದೆಡೆ ‘ಮಹಿಷ ದಸರೆ’ಯೂ ನಡೆಯುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT