ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ ಬದುಕು ಬದಲಿಸಿದ ಆ ಕ್ಷಣ...

ಅಂಗವಿಕಲರಿಗೆ ಆಶಾಕಿರಣ ಕೃತಕ ಬುದ್ಧಿಮತ್ತೆ ಆವಿಷ್ಕಾರ
Last Updated 1 ಮಾರ್ಚ್ 2022, 8:52 IST
ಅಕ್ಷರ ಗಾತ್ರ

ಮಗ ‘ಝೈನ್’ ಅಂಗವೈಕಲ್ಯಕ್ಕೆ ತುತ್ತಾಗಿದ್ದರಿಂದ ಪತ್ನಿ ಆತನ ವಿಶೇಷ ಆರೈಕೆಯಲ್ಲಿ ತೊಡಗಿದರು. ಆಕೆ ತೋರುತ್ತಿದ್ದ ಪ್ರೀತಿ, ಮಗನ ಸ್ಥಿತಿಯನ್ನು ಉತ್ತಮಗೊಳಿಸಲು ಪಡುತ್ತಿದ್ದ ಶ್ರಮ ದಿನಕಳೆದಂತೆ ಆವರಲ್ಲಿ ಇತರರ ಭಾವನೆಗಳನ್ನು ತಿಳಿದು ಸ್ಪಂದಿಸುವ ಗುಣವನ್ನು ಬೆಳೆಸಿತ್ತು. ಹಲವು ರೀತಿಯ ಅಂಗವಿಕಲತೆಯನ್ನು ಎದುರಿಸಿ ಸಾಗುವ ಜನರ ಬದುಕಿನ ಹಾದಿ ಗೋಚರಿಸಿತ್ತು. ಇದು ಜನರೊಂದಿಗಿನ ಸಂಬಂಧ, ವ್ಯಕ್ತಿತ್ವ, ಬಾಂಧವ್ಯ, ಮಾಡಬೇಕಾದ ಕಾರ್ಯ ಎಲ್ಲಕ್ಕೂ ಹೊಸ ದಿಕ್ಕು ತೋರಿತು. ಜಗತ್ತಿನ ವಿಶೇಷ ವ್ಯವಸ್ಥೆಯ ಅಗತ್ಯವಿರುವ ಶತಕೋಟಿ ಅಂಗವಿಕಲರಿಗೆ ಸಹಕಾರಿಯಾಗುವ ತಂತ್ರಜ್ಞಾನ ಅಭಿವೃದ್ಧಿಗೆ ಮುನ್ನುಡಿ ಸಿಕ್ಕಿತು.

ಈಗ ನಾದೆಲ್ಲ ಅವರ ಮಗ ಝೈನ್‌ ಸಾವಿಗೀಡಾಗಿದ್ದಾರೆ. ನಾದೆಲ್ಲ ಅವರ‘ಹಿಟ್ ರಿಫ್ರೆಷ್’ ಪುಸ್ತಕ ಪ್ರಕಟವಾದ ಸಂದರ್ಭದಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾದ ಬರಹ ಇಲ್ಲಿದೆ...

ನಮ್ಮನ್ನು ಅನುಕರಿಸುವ, ನಮಗಿಂತಲೂ ಹೆಚ್ಚು ಬುದ್ಧಿ ಹೊಂದಿರುವ ಅಥವಾ ನಮ್ಮೆಲ್ಲ ಮಾತು-ಮನಸ್ಸು ಗ್ರಹಿಸುವ ‘ಕೃತಕ ಬುದ್ಧಿಮತ್ತೆ’ ಕುರಿತು ಎಂದಿನಿಂದಲೂ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಜಗತ್ತಿನ ಬಹುತೇಕ ಎಲ್ಲ ಚಿತ್ರರಂಗದಲ್ಲಿಯೂ ಇದೇ ವಿಷಯವನ್ನು ಆಧರಿಸಿ ಬಿಡುಗಡೆಯಾಗಿರುವ ಸಿನಿಮಾಗಳು ಉತ್ತಮ ಗಳಿಕೆಯನ್ನೂ ಕಂಡಿವೆ. ಆದರೆ, ವಾಸ್ತವದಲ್ಲಿ ಇದರ ಬಳಕೆ ಹಾಗೂ ಅಳವಡಿಕೆಯತ್ತ ಗಮನ ಹರಿಸಿದರೆ ಕಾಣುವುದು ಬಹುದೂರದ ಸಂಶೋಧನೆ ಹಾದಿ. ಸುದ್ದಿ ಬರೆಯುವ ರೋಬೊ, ಸ್ವಯಂ ಚಾಲಿತ ಕಾರಿನಂತಹ ಆವಿಷ್ಕಾರಗಳು ಬೆರಗು ಹುಟ್ಟಿಸುತ್ತವೆಯಾದರೂ ಅವುಗಳಿನ್ನೂ ಪ್ರಾಯೋಗಿಕ ಹಂತದಲ್ಲಿವೆ. ಜಗತ್ತಿನ ಹಲವು ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆಗಳು ಇದೇ ಕಾರ್ಯದಲ್ಲಿ ತೊಡಗಿದ್ದು, ಇಂಥ ಆವಿಷ್ಕಾರಗಳಿಗಾಗಿಯೇ ಮೈಕ್ರೋಸಾಫ್ಟ್ ಸಹ ಒಲವು ತೋರಿದೆ.

ಮಾಹಿತಿ ತಂತ್ರಜ್ಞಾನ ಜಗತ್ತು ಗೌರವಿಸುವುದು ಹೊಸ ಆವಿಷ್ಕಾರಗಳನ್ನು ಎಂದು ನಂಬಿರುವ ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸತ್ಯ ನಾದೆಲ್ಲ ಮಾರುಕಟ್ಟೆಯಲ್ಲಿ ಇಳಿಮುಖವಾಗಿದ್ದ ಸಂಸ್ಥೆಯ ವ್ಯಾಪಾರ ವೃದ್ಧಿಸುವ ಜತೆಗೆ ಕೃತಕ ಬುದ್ಧಿಮತ್ತೆ ಕುರಿತ ಸಂಶೋಧನೆಯ ಸಂಸ್ಕೃತಿಯನ್ನು ವಿಸ್ತರಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ‘ಹಿಟ್ ರಿಫ್ರೆಷ್’ ಪುಸ್ತಕದಲ್ಲಿ ತಮ್ಮ ಬದುಕು, ಯೋಜನೆ, ಮಹತ್ವಾಕಾಂಕ್ಷೆ ಹಾಗೂ ಸಂಸ್ಥೆಯ ನಡೆ ಸೇರಿ ಹಲವು ವಿಚಾರಗಳನ್ನು ಪ್ರಸ್ತುತಪಡಿಸಿದ್ದಾರೆ. ಅನುಭವದಿಂದ ಪಡೆದ ಮತ್ತೊಬ್ಬರನ್ನು ಅರಿಯುವ ತಿಳಿವಳಿಕೆಯನ್ನು ತಮ್ಮ ಪ್ರತಿ ಹಂತದಲ್ಲಿ ಅಳವಡಿಸಿಕೊಂಡಿರುವುದು, ಕೃತಕ ಬುದ್ಧಿಮತ್ತೆ ಸಂಬಂಧಿಸಿದಂತೆ ಅಭಿವೃದ್ಧಿಪಡಿಸಲಾಗುತ್ತಿರುವ ಆವಿಷ್ಕಾರಗಳ ಕುರಿತು ವೃತ್ತಿಪರರ ಸಂಪರ್ಕ ಮಾಧ್ಯಮ ‘ಲಿಂಕ್ಡ್‍ಇನ್’ ಪುಟದಲ್ಲಿ ಬರೆದುಕೊಂಡಿದ್ದಾರೆ.

ಹೈದರಾಬಾದ್‍ನಲ್ಲಿ ಬೆಳೆದ ಸತ್ಯ ನಾದೆಲ್ಲ ಭಾರತೀಯ ಆಡಳಿತ ಸೇವೆಯಲ್ಲಿದ್ದ ಅವರ ತಂದೆಯ ಆಶಯದಂತೆ ಉನ್ನತ ಶಿಕ್ಷಣಕ್ಕಾಗಿ ಷಿಕಾಗೊಗೆ ಹೊರಟವರು. ಓದು-ಅರೆಕಾಲಿಕ ಉದ್ಯೋಗದ ನಡುವೆ ಪ್ರತಿಷ್ಠಿತ ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿ ಅವಕಾಶ ದೊರೆಯಿತು. ಅದು 1996ರ ಆಗಸ್ಟ್, ಎಂಜಿನಿಯರ್ ಆಗಿ ಮುಂದುವರಿಯುತ್ತಿದ್ದ 29 ವರ್ಷದ ನಾದೆಲ್ಲ ಪುಟ್ಟ ಸಂಸಾರದಲ್ಲಿನ ದೊಡ್ಡ ಕನಸು ಕಾಣುತ್ತಿದ್ದರು. ಗರ್ಭಿಣಿಯಾಗಿದ್ದ ಪತ್ನಿ ಅನು (25) ತುರ್ತು ಆಸ್ಪತ್ರೆಗೆ ದಾಖಲಾಗಬೇಕಾಯಿತು. ಚಲನೆ ನಿಲ್ಲಿಸಿದ್ದ ಮಗುವನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದರು. ಉಸಿರಾಟವಿದ್ದರೂ ಮಗು ಅಳಲಿಲ್ಲ. ಗರ್ಭದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಮಗುವಿನ ಮಿದುಳಿನ ನರಗಳಲ್ಲಿ ರಕ್ತ ಸಂಚಾರ ವ್ಯತ್ಯಯದಿಂದ ದೇಹದ ಚಲನೆ ದುರ್ಬಲಗೊಂಡಿರುವುದನ್ನು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ.

ಆರ್ಕಿಟೆಕ್ಟ್ ಆಗಿದ್ದ ಪತ್ನಿ ಯಾವಾಗ ಕೆಲಸಕ್ಕೆ ಮರಳಬಹುದು, ವಾರಾಂತ್ಯ ಹೇಗಿರಬೇಕು, ಮನೆಯಲ್ಲಿ ಏನು ಬದಲಾವಣೆ ಮಾಡಬೇಕು ಎಂಬ ಯೋಚನೆಯಲ್ಲಿದ್ದ ನಾದೆಲ್ಲ ಯೋಜನೆಗಳೆಲ್ಲ ಬದಲಾದದ್ದು ಇದೇ ಸಮಯದಲ್ಲಿ. ಮಗ ‘ಝೈನ್’ ಅಂಗವೈಕಲ್ಯಕ್ಕೆ ತುತ್ತಾಗಿದ್ದರಿಂದ ಪತ್ನಿ ಆತನ ವಿಶೇಷ ಆರೈಕೆಯಲ್ಲಿ ತೊಡಗಿದರು. ಆಕೆ ತೋರುತ್ತಿದ್ದ ಪ್ರೀತಿ, ಮಗನ ಸ್ಥಿತಿಯನ್ನು ಉತ್ತಮಗೊಳಿಸಲು ಪಡುತ್ತಿದ್ದ ಶ್ರಮ ದಿನಕಳೆದಂತೆ ಆವರಲ್ಲಿ ಇತರರ ಭಾವನೆಗಳನ್ನು ತಿಳಿದು ಸ್ಪಂದಿಸುವ ಗುಣವನ್ನು ಬೆಳೆಸಿತ್ತು.

ಹಲವು ರೀತಿಯ ಅಂಗವಿಕಲತೆಯನ್ನು ಎದುರಿಸಿ ಸಾಗುವ ಜನರ ಬದುಕಿನ ಹಾದಿ ಗೋಚರಿಸಿತ್ತು. ಇದು ಜನರೊಂದಿಗಿನ ಸಂಬಂಧ, ವ್ಯಕ್ತಿತ್ವ, ಬಾಂಧವ್ಯ, ಮಾಡಬೇಕಾದ ಕಾರ್ಯ ಎಲ್ಲಕ್ಕೂ ಹೊಸ ದಿಕ್ಕು ತೋರಿತು. ಜಗತ್ತಿನ ವಿಶೇಷ ವ್ಯವಸ್ಥೆಯ ಅಗತ್ಯವಿರುವ ಶತಕೋಟಿ ಅಂಗವಿಕಲರಿಗೆ ಸಹಕಾರಿಯಾಗುವ ತಂತ್ರಜ್ಞಾನ ಅಭಿವೃದ್ಧಿಗೆ ಮುನ್ನುಡಿ ಸಿಕ್ಕಿತು. ಆಟಿಸಂ ಸೇರಿ ಹಲವು ರೀತಿಯ ಅಂಗವಿಕಲತೆ ಹೊಂದಿರುವ ಸಾಕಷ್ಟು ಜನರಿಗೆ ಉದ್ಯೋಗ ನೀಡಿ ಅವರಿಂದಲೇ ಅಂಗವಿಕಲರ ಹಲವು ಸಮಸ್ಯೆಗಳಿಗೆ ತಂತ್ರಜ್ಞಾನದ ಪರಿಹಾರ ಅಭಿವೃದ್ಧಿ ನಡೆಯುತ್ತಿದೆ.

ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗದ ಎಂಜಿನಿಯರ್ ಶ್ವೇತಾ, ಶ್ರವಣದೋಷ ಇರುವವರಿಗಾಗಿಯೇ ‘ಹಿಯರಿಂಗ್ ಎಐ’ (ಮಾತನ್ನು ಪದಗಳನ್ನಾಗಿಸುವ ಕೃತಕ ಬುದ್ಧಿಮತ್ತೆ) ಆವಿಷ್ಕರಿಸಿದ್ದಾರೆ. ಪ್ರತಿ ಅಂಗವಿಕಲರನ್ನೂ ತಂತ್ರಜ್ಞಾನದ ತಳಹದಿಯ ಮೇಲೆ ಸಬಲರನ್ನಾಗಿ ಮಾಡುವ ಮೈಕ್ರೋಸಾಫ್ಟ್‌ನ ಉದ್ದೇಶಕ್ಕೆ ಇದೊಂದು ಉದಾಹರಣೆ.

‘ತಂತ್ರಜ್ಞಾನ ಮನುಷ್ಯರ ಸಾಧ್ಯತೆ ಹಾಗೂ ಸಾಮರ್ಥ್ಯದ ಹೆಚ್ಚಳದಲ್ಲಿ ಕೊಡುಗೆಯಾಗುತ್ತದೆ. ಅವರ ಸುತ್ತಲಿನ ಜಗತ್ತಿನೊಂದಿಗೆ ಉತ್ತಮ ಸಂಪರ್ಕ ಹೊಂದುವುದು, ಸಾಧ್ಯವೆನ್ನುವ ಆಶಾವಾದ ನನ್ನದು’ ಎನ್ನುತ್ತಾರೆ ಸತ್ಯ ನಾದೆಲ್ಲ.

ಅಂಗವೈಕಲ್ಯದಿಂದಾಗಿ ಜಗತ್ತಿನಿಂದ ದೂರದಲ್ಲಿ ಉಳಿದಿರುವ ಕೋಟ್ಯಂತರ ಜನರ ಬದುಕು ಬದಲಿಸಲು ಕೃತಕ ಬುದ್ಧಿಮತ್ತೆ ತಳಹದಿಯಲ್ಲಿ ವಿಶೇಷ ತಂಡಗಳು ಆವಿಷ್ಕಾರಗಳಲ್ಲಿ ತೊಡಗಿವೆ. ಸ್ವತಃ ಹಲವು ರೀತಿಯ ಅಂಗವಿಕಲತೆ ಹೊಂದಿರುವವರೂ ತಂಡದಲ್ಲಿದ್ದು, ಸಮಸ್ಯೆಗೆ ಕ್ರಿಯಾಶೀಲ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಿದೆ.

ಕಣ್ಣಿಂದಲೇ ಎಲ್ಲವೂ: ದೃಷ್ಟಿ ಹರಿಸುವ ಮೂಲಕ ಮನಸ್ಸಿನಲ್ಲಿ ಇಚ್ಛಿಸಿದ್ದನ್ನು ಮಾಡುವ ‘ಕಣ್ಣು ನಿಯಂತ್ರಣ ಆಯ್ಕೆ’ಯನ್ನು ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್‍ನಲ್ಲಿ ಹೊಸದಾಗಿ ಅಳವಡಿಸಲಾಗುತ್ತಿದೆ. 2014ರಲ್ಲಿ ನರಗಳಿಗೆ ಸಂಬಂಧಿಸಿದ ಎಎಲ್‍ಎಸ್ ಸಮಸ್ಯೆಗೆ ಒಳಗಾದ ಎನ್‍ಎಫ್‍ಎಲ್ ಆಟಗಾರ ಸ್ಟೀವ್ ಗ್ಲೇಸನ್‍ಗಾಗಿ ಮೈಕ್ರೋಸಾಫ್ಟ್ ತಂಡ ಕಣ್ಣಿನಿಂದಲೇ ಸಂದೇಶ ನೀಡಿ ಚಲಿಸಬಹುದಾದ ವೀಲ್ ಚೇರ್ (ಗಾಲಿ ಕುರ್ಚಿ) ಅಭಿವೃದ್ಧಿಪಡಿಸಿದರು.

ನಂತರದ ಮೂರು ವರ್ಷ ಇದೇ ವ್ಯವಸ್ಥೆಯನ್ನು ಸಮರ್ಥಗೊಳಿಸಿ ವಿಂಡೋಸ್ 10ರ ಜತೆಗೆ ಈ ವಿಶೇಷ ಆಯ್ಕೆಯನ್ನು ನೀಡುತ್ತಿದೆ. ಕೈಕಾಲು ವಿಕಲತೆ ಹೊಂದಿರುವವರೂ ಕಂಪ್ಯೂಟರ್ ಬಳಕೆ ಮಾಡುವುದು ಇದರಿಂದ ಸುಲಭವಾಗಲಿದೆ. ಕಣ್ಣಿನ ಸಂದೇಶದ ಮೂಲಕವೇ ಪರದೆಯಲ್ಲಿ ಕೀಬೋರ್ಡ್, ಮೌಸ್ ನಿಯಂತ್ರಿಸಬಹುದು ಹಾಗೂ ಪದಗಳನ್ನು ಧ್ವನಿಯಾಗಿ ಕೇಳುವುದೂ ಸಾಧ್ಯವಾಗಲಿದೆ. ‘ಟೊಬೈ 4ಸಿ’ ಸಾಧನವು ಕಣ್ಣಿನ ಸಂದೇಶವನ್ನು ಗುರುತಿಸಿ ತಂತ್ರಾಂಶಕ್ಕೆ ಸಂದೇಶ ರವಾನಿಸುವ ಕಾರ್ಯ ನಡೆಸುತ್ತದೆ.

ಎಲ್ಲರೂ ಕಾಣಬಹುದು: ಅಂಧರಿಗಾಗಿಯೇ ಸಾಕಿಬ್ ಶೇಖ್, ಅನಿರುದ್ಧ ಕೌಲ್ ಮತ್ತವರ ತಂಡ ಮಾತನಾಡುವ ಅಪ್ಲಿಕೇಷನ್ ರೂಪಿಸಿದ್ದಾರೆ. ಎದುರಿನ ಬೋರ್ಡ್, ಪುಸ್ತಕದಲ್ಲಿನ ಬರಹ, ಪ್ರವೇಶಿಸುತ್ತಿರುವ ಕೊಠಡಿ ಎಲ್ಲವನ್ನೂ ಈ ಆ್ಯಪ್ ಓದಿ ಹೇಳುತ್ತದೆ. ದೃಷ್ಟಿದೋಷವಿರುವ ಇದೇ ಸಂಸ್ಥೆಯ ಉದ್ಯೋಗಿ ಏಂಜೆಲಾ ಮಿಲ್ಸ್ ಇದರ ಸಹಾಯದಿಂದ ನಿತ್ಯದ ಚಟುವಟಿಕೆಗಳನ್ನು ಸುಲಭಗೊಳಿಸಿ ಕೊಂಡಿದ್ದು, ಅಗತ್ಯ ಬದಲಾವಣೆಗೆ ಸಲಹೆಯನ್ನೂ ನೀಡಿದ್ದಾರೆ.

ಕಣ್ಣು ಕಾಣದಿದ್ದರೂ ಏಂಜೆಲಾ ಊಟದ ಹಾಲ್‍ನಲ್ಲಿ ತನ್ನ ಇಷ್ಟದ ಪದಾರ್ಥ ಆಯ್ದು ತಾನೇ ಬಡಿಸಿಕೊಳ್ಳುವುದು, ಮತ್ತೊಬ್ಬರ ಸಹಾಯವಿಲ್ಲದೆ ಕಾನ್ಫರೆನ್ಸ್ ಕೊಠಡಿ
ಪ್ರವೇಶಿಸುವುದು, ಮನೆ ಯಲ್ಲಿ ಸಾಮಗ್ರಿಗಳನ್ನು ಹುಡುಕಿ ಅಡುಗೆ ಮಾಡುವುದಕ್ಕೂ ಮೊಬೈಲ್‍ನಲ್ಲಿರುವ ಈ ವ್ಯವಸ್ಥೆ ಸಹಕಾರಿಯಾಗಿದೆ. ಶೀಘ್ರದಲ್ಲಿಯೇ ಈ ನೂತನ ‘ಲೈಫ್ ಚೇಂಜಿಂಗ್’ ಅಪ್ಲಿಕೇಷನ್ ಮಾರುಕಟ್ಟೆ ಪ್ರವೇಶಿಸಲಿದೆ.

ಕಲಿಕೆಗೊಂದು ಸಾಧನ: ಡಿಸ್ಲೆಕ್ಸಿಯಾ (ಪದಗಳನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗದ ಸ್ಥಿತಿ) ಸಮಸ್ಯೆಗೆ ಒಳಗಾದ ಮಕ್ಕಳ ಓದುವ ಮತ್ತು ಬರೆಯುವ ಕ್ರಿಯೆಯನ್ನು ಉತ್ತಮಗೊಳಿಸುವ ತಂತ್ರಜ್ಞಾನ ರೂಪಿಸಲು ಅಮೆರಿಕ ಹಾಗೂ ಕೆನಡಾದ ಮೈಕ್ರೋಸಾಫ್ಟ್ ಉದ್ಯೋಗಿಗಳು ನಿರಂತರ ಶೈಕ್ಷಣಿಕ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರು. ಈ ಮೂಲಕ ವರ್ಡ್, ಔಟ್‍ಲುಕ್ ಆನ್‍ಲೈನ್ ಹಾಗೂ ಮೈಕ್ರೋಸಾಫ್ಟ್ ಎಡ್ಜ್‌ಗಳಲ್ಲಿ ಡಿಸ್ಲೆಕ್ಸಿಯಾ ಮಕ್ಕಳ ಕಲಿಕೆಗೆ ಅನುಕೂಲವಾಗುವ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು.

ಆನಂತರದಲ್ಲಿ ಮಾತು ಗ್ರಹಿಸುವ ಬಿಂಗ್ ತಂತ್ರಜ್ಞಾನ, ಪದಗಳನ್ನು ಧ್ವನಿ ಮೂಲಕ ಹೊರಹಾಕುವ ವ್ಯವಸ್ಥೆ ಸೇರಿ ಕೃತಕ ಬುದ್ಧಿಮತ್ತೆಯ ಹಲವು ಆಯ್ಕೆಗಳನ್ನು ಒಟ್ಟುಗೂಡಿಸಿ ಪರಿಣಾಮಕಾರಿಯಾದ ಕಲಿಕಾ ತಂತ್ರಜ್ಞಾನ ರೂಪುಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT