ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡಿ ಉಣ್ಣುವ ಸುಖವೆಲ್ಲಿ?

ಒಡಲಾಳ
Last Updated 6 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಈ  ತಿನ್ನಿಸುವ ಕ್ರಿಯೆ ಒಂಥರಾ ಖುಷಿ ಕೊಡುವಂಥದ್ದು. ನಾನೇ ತಯಾರಿಸಿ ಬಡಿಸುವುದು, ಅವರು ಹೊಟ್ಟೆ ಬಿರಿಯೆ ಉಣ್ಣುವುದು ನಂತರ ಅದರ ಸಾರ್ಥಕ ಭಾವ ಮೂರ್ನಾಲ್ಕು ದಿನದವರೆಗೆ ಮುಂದುವರಿಯುವುದು ಎಲ್ಲಾ ನನಗಷ್ಟೇ ಸೀಮಿತ ಯಾಕೆ? ಮಕ್ಕಳಿಗೂ ಅದರ ಪರಿಚಯವಾಗಲಿ ಎನ್ನುವ ಉದ್ದೇಶ ನನಗಿತ್ತು. ಆ ಉಣಿಸುವ ಕ್ರಿಯೆಯಿಂದ ಸಿಗುವ ಆನಂದದ ಅನುಭೂತಿ ಸವಿದವನೇ ಬಲ್ಲ ಅಂದ್ಕೊಂಡೆ....

ಮಾವಿನ ಸುಗ್ಗಿ ಮುಗಿಯುವುದರೊಳಗೆ ಎಲ್ಲ ಗೆಳೆಯರಿಗೂ ಊಟಕ್ಕೆ ಹೇಳು... ಹೋಳಿಗೆ ಸೀಕರಣೆ ಮಾಡಿಸಿದರಾಯಿತು ಎಂದು ಮಗನತ್ತ ತಿರುಗಿ ಹೇಳಿದೆ. ಹೇಗೂ ಸಿಇಟಿ ಮುಗಿದು ಎಲ್ಲರೂ ಖಾಲಿ ಇದ್ದೀರಿ, ಹೇಳೋ ಮಗನೇ ಎಂದು ದುಂಬಾಲೇ ಬಿದ್ದೆನೆನ್ನಿ!... ‘ನಮ್ಮ ಕ್ರಿಕೆಟ್‌ ಟೀಮ್‌ಗೆ ಹೇಳ್ತೀನಿ ನೋಡು. ಹದಿನಾರು ಜನರಿದ್ದೀವಿ ನಾವು’ ಮಗ ಧಮಕಿ ದನಿಯಲ್ಲಿ ಹೇಳಿದ. ‘ಹದಿನಾರು ಯಾಕೋ ಇಪ್ಪತ್ತಾಗಲಿ ಹೇಳು ಎಲ್ಲರಿಗೂ ಹೇಳು’ ಉತ್ಸಾಹದಿಂದ ಹೇಳಿದೆ.

ಒಂದನೇ ಕ್ಲಾಸಿನಿಂದ ಪಿಯುಸಿವರೆಗೂ ಬರೀ ಶಾಲೆ, ಓದು, ಪರೀಕ್ಷೆ ಇದರಲ್ಲೇ ಕಳೆದ ಆ ಮಕ್ಕಳು ನಮ್ಮ ಮನೆಗೆ ಬರಲಿ, ಊಟ ಮಾಡಲಿ ಎನ್ನುವ ಆಸೆಯಿತ್ತು.‌ ಈತ ಯಾಕೋ ಹೇಳ್ತಾನೇ ಇಲ್ಲ. ‘ನೋಡು ಮಗಾ ಯಾವಾಗ ಹೇಳ್ತೀ’ ಅಂದಾಗಲೆಲ್ಲ ‘ಅವರನ್ನ ಕೇಳಿಯೇ ಇಲ್ಲ’ ‘ಅದರಾಗ ನಾಲ್ಕು ಜನ ಊರಿಗೆ ಹೋಗ್ಯಾರ’ ‘ಇವತ್ತ ಸಿನಿಮಾಕ್ಕೆ ಹೋಗ್ಯಾರ’ ‘ಮತ್ತೆಲ್ಲೋ ಸ್ವಿಮ್ಮಿಂಗ್‌ ಫೂಲ್‌ಗೆ ಹೋಗ್ಯಾರ’ ‘ಇವತ್ತ ನಾನ ಹೊರಗೆ ಹೋಗಲಿಲ್ಲ’ ಬರೀ ಇವೇ ಕಾರಣಗಳೇ....

‘ನೋಡು ಬೇಟಾ ಇಪ್ಪತ್ತು ಜನರ ಅಡಿಗೆ ಎಂದರೆ ಅಡಿಗೆ ಸೀತಾಗೆ ಹೇಳಬೇಕೊ ತಯಾರಿ ಭಾಳ ಮಾಡಬೇಕು, ನನಗೆ ನಾಲ್ಕು ದಿನ ಮೊದಲೇ ಹೇಳು...’ ಅಪರಿಮಿತ ಉತ್ಸಾಹದಲ್ಲಿದ್ದೆ ನಾನು. ಅವರೆಲ್ಲ ಕುಳಿತು ಉಣ್ಣುವ ಊಟದ ಪರಿಯನ್ನು ಧೇನಿಸಿಕೊಳ್ಳುತ್ತಿದ್ದೆ. ಊಹೂಂ, ಅವರ್‍ಯಾರೂ ಮನೆ ಕಡೆ ಹಾಯ್ತಾನೇ ಇಲ್ಲ. ‘ಯಾಕೋ ಏನಾಯ್ತು ಎಂದಾಗಲೆಲ್ಲ ‘ಹೇಳ್ತೀನಿ ಇರೇ’ ರೇಗಲು ಶುರುಮಾಡಿದ ಮಗರಾಯ!

‘ನೋಡು ಕಾರ ಹುಣ್ಣಿಮೆ ಬರ್ತಾ ಇದೆ ಹುಣ್ಣಿಮೆಯೊಳಗಾಗಿ ಹಣ್ಣು ತಿನ್ನುವುದು ಮುಗಿಯಬೇಕು. ಇವತ್ತು ಹೇಳದ್ಯಾ? ನಾಳೆ ಹೇಳಿದ್ಯಾ? ದಿನವೂ ಕೇಳುವುದೇ ನಡೆಯಿತೇ ವಿನಾ ಈತ ಹೇಳಲೊಲ್ಲ. ಯಾಕೋ ಕೊನೆ ಕೊನೆಗೆ ‘ಏ ಅವರೆಲ್ಲ ಒಲ್ಲೆ ಅಂತಾರ’ ಅಂದ. ‘ನಾ ಕೇಳಲಾ ಹಂಗಂದ್ರ’ ಎಂದೆನಾದರೂ ಯಾಕೆ ಅವರೊಳಗೆ ಹೋಗಲಿ ಎಂದು ಸುಮ್ಮನಾದೆ. ಕಾರಹುಣ್ಣಿಮೆಯೂ ಮುಗಿದು, ಆಷಾಢವೂ ಶುರುವಾಗಿ, ಶ್ರಾವಣ ಕಾಲಿಟ್ಟರೂ ಇನ್ನೂ ಆ ಆಸೆ ಹೋಗಲಿಲ್ಲ. ಯಾಕೆ ಹೇಳ್ತಾ ಇಲ್ಲ, ಜಗಳಾಡಿದರಾ... ಇಲ್ಲವೇ ಇಲ್ಲ. ಗೇಟ್‌ ಹೊರಗೇ ಮಾತು, ರೋಡಲ್ಲೆ ನೀರು ಒಯ್ದು ಕೊಡುವುದು. ಎಲ್ಲ ಹೊರಗಿಂದ ಹೊರಗೇ ಏನು ಸಂಬಂಧಗಳೋ... ಏನು ಗೆಳೆಯರೋ... ಬರೀ ಅಪರಿಚಿತ ಭಾವ...

ನಾನು ಹಳ್ಳಿಯವಳಾದ್ದರಿಂದಲೋ ಏನೋ ಎಲ್ಲರನ್ನು ಕೌಟುಂಬಿಕ ವಲಯಕ್ಕೆ ಸೇರಿಸಿಬಿಡ್ತೀನಿ. ಯಾವ ಮಕ್ಕಳೂ ಬೇರೆ ಅನಿಸೋದೇ ಇಲ್ಲ. ಆದರೆ ಈ ಮಕ್ಕಳು ಹೀಗೇಕೆ? ಗುಬ್ಬಿ ಎಂಜಲಾ ಮಾಡಿ ತಿಂದ ಎಷ್ಟೋ ಗಳಿಗೆಗಳು ಕಣ್ಮುಂದೆ ಜೀವಂತ ಇವೆ. ಸ್ಕೂಲಿಗೆ ಹೋದಾಗ ಪಲ್ಯ ಖಾಲಿಯಾದಾಗ ಪಕ್ಕದವಳ ಡಬ್ಬೀಲಿ ಕೈ ಹಾಕಿ ತಿಂದ ನೆನಪು. ಯಾವುದೋ ಕಾರಣಕ್ಕೇ ಗೆಳತಿ ಲಲಿತಾಳ ಜತೆ ಮಾತೇ ಬಿಟ್ಟಿದ್ದೆ. ಒಳ್ಳೊಳ್ಳೆ ಒಗ್ಗರಣೆ ಚುರುಮರಿ ತಂದ ಲಲಿತಾ ‘ಬಾರಿಕೇವಾ ನಿನಗ ಜೀವ ಅಂತ ತಂದೀನಿ ತಿಂದು ಮತ್ತೆ ಮಾತ ಬಿಡೀಯಂತ’ ಅಂದಿದ್ಲು. ಮಾತು ಬಿಡೋದಕ್ಕೂ, ತಿನಿಸುವುದಕ್ಕೂ ಸಂಬಂಧವೇ ಇರದ ಅಂತಃಕರಣದ ದಿನಗಳವು.

‘ನಿನ್ನ ಬಿಟ್ಟು ತಿನ್ನಾಕ ಆಗಂಗಿಲ್ಲ ಬಾರಲೇ’ ಎಂದ ಲಲಿತಾಳ ಮಾತಿಗೆ ಕರಗಿ ಹೋಗಿ ಚುರುಮರಿ ಖಾಲಿಯಾಗುವುದರೊಳಗೆ ಮಾತು ಬಿಟ್ಟಿದ್ದೂ ಮರೆತು ಹೋಗಿತ್ತು. ಆ ರುಚಿ, ಆ ಪ್ರೀತಿ ಈವರೆಗೂ ಮರೆತಿಲ್ಲ. ಕೃಷ್ಣ  ಸುಧಾಮರ ಅವಲಕ್ಕಿ ಪ್ರೀತಿ, ಸ್ನೇಹ ನೆನಪಾಗಿ ಕಣ್ಣು ನೀರೂರಿತು. ನೆನಪು ತರದ ವಸ್ತುಗಳಿಲ್ಲ, ವ್ಯಕ್ತಿಗಳಿಲ್ಲ, ಗಿಡ ಮರಗಿಳಿಲ್ಲ, ನೆಲವಿಲ್ಲ. ಅಂಥ ಘಟನೆಗಳು ನೆನಪಾದರೆ ಸಾಕು ಮಾತು ಕಡಿಮೆಯಾಗಿ ಮೌನಕ್ಕೆ ಜಾರುತ್ತೇನೆ. ಮಾನದೊಳಗೆ ಮುಚ್ಚಿ ತುಳುಕುವ ನೆನಪು.... ಬರೀ ನೆನಪು ಅದರದೇ ಔತಣ ಎದೆಯೊಳಗೆ! ನಿರಂತರ ಮೆರವಣಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT