ಪ್ರಕೃತಿಯಲ್ಲಿ ಅಡಗಿರುವ ಪ್ರತಿ ಕಣವೂ ಕಲಾತ್ಮಕತೆಯ ಚೌಕಟ್ಟಿನಲ್ಲಿಯೇ ವಿಕಸನಗೊಳ್ಳುತ್ತಿರುತ್ತದೆ. ಆದರೆ, ಅದನ್ನು ನೋಡುವ ದೃಷ್ಟಿಕೋನವೊಂದು ಸುಲಲಿತವಾಗಿ ದಕ್ಕಬೇಕಷ್ಟೆ. ಹಾಗೊಮ್ಮೆ ನೋಡಲು ಸಾಧ್ಯವಾದರೆ ಪ್ರತಿ ಜೀವಿಯ ವಿನ್ಯಾಸ, ರಚನೆ, ಆಕಾರ, ಲಯ, ಬಣ್ಣಗಳೆಲ್ಲವೂ ಕೇವಲ ಅವುಗಳನ್ನಷ್ಟೆ ಪ್ರತಿನಿಧಿಸದೇ, ಹಲವು ಭಾವಗಳನ್ನು ಏಕಕಾಲಕ್ಕೆ ಸ್ಫುರಿಸಬಲ್ಲ, ಕಲಾಲೋಕವನ್ನು ಸೃಷ್ಟಿಸಬಲ್ಲ ಧಾತುಗಳಾಗುತ್ತವೆ.

ಇಂಥ ಹೊಳಹುಗಳನ್ನು ‘ಅಣಬೆ’ ಕಲಾಕೃತಿಗಳ ಮೂಲಕ ತೆರೆದಿಡುತ್ತಾ ಹೋಗಿದ್ದಾರೆ ಕಲಾವಿದ ಗಣಪತಿ ಅಗ್ನಿಹೋತ್ರಿ. ಈ ಕಲಾಕೃತಿಗಳ ಪ್ರದರ್ಶನ ಬೆಂಗಳೂರಿನ ವೆಂಕಟಪ್ಪ ಕಲಾಗ್ಯಾಲರಿಯಲ್ಲಿ ಈಚೆಗೆ ನಡೆಯಿತು.

ಪಶ್ಚಿಮಘಟ್ಟದಲ್ಲಿ ಹೇರಳವಾಗಿ ಲಭ್ಯವಿರುವ ದುರ್ಗಂಧದ ಅಣಬೆಯನ್ನು ( ಸ್ಟಿಂಕ್ಹಾರ್ನ್) ಕೇಂದ್ರವಾಗಿಟ್ಟುಕೊಂಡು ಗಣಪತಿ ಅಗ್ನಿಹೋತ್ರಿ ಅನೂಹ್ಯ ಎನಿಸುವ ಕಲಾಕೃತಿಗಳನ್ನು ರಚಿಸಿದ್ದಾರೆ. ಸತ್ತ ಸಾವಯವ ವಸ್ತುಗಳ ಮೇಲೂ ಸುಲಭವಾಗಿ ಈ ಅಣಬೆ ಬೆಳೆಯುತ್ತದೆ. ಮಣ್ಣಿನ ಫಲವತ್ತತೆಯನ್ನು ಸುಧಾರಿಸುವ ಪೋಷಕಾಂಶಗಳಾಗಿ ಸಸ್ಯದ ಅವಶೇಷಗಳನ್ನು ಪರಿವರ್ತಿಸುವಲ್ಲಿ ಈ ಅಣಬೆಯು ಪ್ರಮುಖ ಪಾತ್ರ ವಹಿಸುತ್ತದೆ. ವಿಷಕಾರಿ ಎನಿಸಿರುವ ಈ ಅಣಬೆಯ ಭಿನ್ನ ಭಿನ್ನ ಭಂಗಿಯನ್ನು ಈ ಕಲಾಕೃತಿಗಳಲ್ಲಿ ನೋಡಬಹುದು.

ಬಾಗಿಯೂ ಸ್ಥಿರವಾಗಿ ನಿಂತಂತೆ ಕಾಣುವ ಅಣಬೆ ಸಮೂಹಗಳು ಮುಖವಾಡ ತೊಟ್ಟ ಮನುಷ್ಯ ಲೋಕದ ಹಲವು ತಲ್ಲಣಗಳ ರೂಪಕದಂತೆ ಕಾಣುತ್ತವೆ. ಕೇವಲ ಎಂಟರಿಂದ ಹತ್ತು ದಿನಗಳ ಆಯುಷ್ಯ ಹೊಂದಿರುವ ಈ ದುರ್ಗಂಧದ ಅಣಬೆಯು ಪ್ರತಿ ದಿನವೂ ಹೊಸ ಬಣ್ಣ, ಆಕಾರಗಳ ಮೂಲಕ ಹೊಸ ಹೊಳಹುಗಳ ಸಾಧ್ಯತೆಯನ್ನು ವಿಸ್ತರಿಸುತ್ತಲೇ ಹೋಗುತ್ತದೆ.

ಕಾಡಿದ ಹಳೆಯ ಸಂಗತಿಗಳಿಗೆ ಸಮಕಾಲೀನತೆಯ ಚೌಕಟ್ಟು ಹಾಕಬೇಕು ಎನ್ನುವುದು ಮೊದಲಿನಿಂದಲೂ ಅಗ್ನಿಹೋತ್ರಿಯವರು ಕಂಡುಕೊಂಡ ಕಲಾಸತ್ಯ. ಈ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟದ ತಪ್ಪಲಿನಲ್ಲಿ ಬೆಳೆದ ಅಗ್ನಿಹೋತ್ರಿ ಅವರಿಗೆ ಬಾಲ್ಯದಲ್ಲಿ ಕಂಡ ಅಣಬೆಗಳು ಮತ್ತು ಮನೆಯಲ್ಲಿ ಅಣಬೆಗಳನ್ನು ತಿನ್ನುವುದಕ್ಕೆ ನಿಷೇಧವಿದ್ದರಿಂದ ಅದರ ಬಗ್ಗೆ ವಿಪರೀತ ಎನ್ನುವಷ್ಟು ಕುತೂಹಲವಿತ್ತು. ಆ ಕುತೂಹಲವನ್ನೇ ಇಲ್ಲಿ ಕಲಾಕೃತಿಗಳನ್ನಾಗಿಸಿದ್ದಾರೆ.

ದುರ್ಗಂಧದ ಅಣಬೆಗಳ ಬಗ್ಗೆ ನಿರಂತರ ಆರು ತಿಂಗಳು ಅಧ್ಯಯನ ನಡೆಸಿದ್ದಾರೆ. ಹತ್ತು ದಿನಗಳ ಅದರ ಜೀವಿತಾವಧಿಯ ಪ್ರತಿ ದಿನವನ್ನೂ ಸೂಕ್ಷ್ಮವಾಗಿ ಗ್ರಹಿಸಿ, ಅದರ ವಿಕಾಸದಲ್ಲಿ ಅಡಗಿರುವ ಸೌಂದರ್ಯವನ್ನು ಕಲಾರಸಿಕರಿಗೆ ಉಣಬಡಿಸಿದ್ದಾರೆ. ಅಣಬೆಗಳ ಆಂಗಿಕ ಅಭಿವ್ಯಕ್ತಿಯನ್ನು ಸೃಷ್ಟಿಕ್ರಿಯೆಗೆ ಹೋಲಿಸಿರುವುದು ಕಲಾವಿದರ ಕೈಚಳಕವೇ ಸರಿ.

ಈ ಬಗ್ಗೆ ಅಗ್ನಿಹೋತ್ರಿ ಹೇಳುವುದಿಷ್ಟು: ಈ ಮುಂಚೆ ಬಾಲ್ಯದ ಬಗ್ಗೆ ಕಲಾಸರಣಿ ಮಾಡಿದಾಗ ಅಣಬೆಗಳನ್ನು ಅಲ್ಲಲ್ಲಿ ತಂದಿದ್ದೆ. ಆದರೆ, ಸಮಗ್ರವಾಗಿ ಅಣಬೆ ಸುತ್ತವೇ ಕಲಾಕೃತಿಗಳನ್ನು ರಚಿಸಿರುವುದು ಇದೇ ಮೊದಲು. ಮನೆಯಲ್ಲಿದ್ದ ನಿಷೇಧದ ನಡುವೆಯೂ ಚಿಕ್ಕವನಿದ್ದಾಗ ಅಣಬೆಗಳನ್ನು ಕದ್ದು ತಿಂದಿದ್ದೇನೆ. ಅಣಬೆ ಎನ್ನುವುದು ಲೋಕದ ಕಣ್ಣಿಗೆ ಒಂದು ಯಕಃಶ್ಚಿತ್ ಜೀವಿ ಅನಿಸಬಹುದು. ಆದರೆ, ನನ್ನ ಪಾಲಿಗೆ ನಿಷೇಧವನ್ನು ಮುರಿಯುವುದಕ್ಕೆ, ಅನಿಸಿದ್ದನ್ನು ಮಾಡುವುದಕ್ಕೆ, ಸೌಂದರ್ಯವನ್ನು ಸೂಕ್ಷ್ಮವಾಗಿ ಗ್ರಹಿಸುವುದಕ್ಕೆ ಒದಗಿಬಂದ ಕಲಾವಸ್ತು.

ಮರ, ಲೋಹ, ದಾರ ಹಾಗೂ ಮಣ್ಣಿನ ಮಾಧ್ಯಮಗಳ ಮೂಲಕ ದೊಡ್ಡ ಗಾತ್ರದಲ್ಲಿ ಅಣಬೆಗಳ ಕಲಾಕೃತಿಗಳನ್ನು ರಚಿಸುವ ಇರಾದೆಯಿದ್ದು, ಇದಕ್ಕಾಗಿ ಕೆಲಸ ಪ್ರಗತಿಯಲ್ಲಿದೆ ಎನ್ನುವ ಖುಷಿಯನ್ನು ಹಂಚಿಕೊಂಡರು.

ಅಧ್ಯಾತ್ಮದ ಅನುಭೂತಿ

ಅಗ್ನಿಹೋತ್ರಿ ಅವರ ಕಲಾಕೃತಿಗಳ ಪ್ರದರ್ಶನ ಪ್ರಕೃತಿಯ ವಿಸ್ಮಯವನ್ನು ಹೇಳುತ್ತಾ ಹೋದರೆ ಇದೇ ಸಂದರ್ಭದಲ್ಲಿ ಪ್ರದರ್ಶನಕ್ಕೆ ಇಡಲಾದ ಮತ್ತೊಬ್ಬ ಕಲಾವಿದ ಗಣೇಶ್ ಧಾರೇಶ್ವರ್ ಅವರ ಕಲಾಕೃತಿಗಳು ಅಧ್ಯಾತ್ಮದ ಅನುಭೂತಿಯನ್ನು ನೋಡುಗರ ಎದೆಯೊಳಗೆ ಇಳಿಸುತ್ತಾ ಹೋಯಿತು.

ಭಗವದ್ಗೀತೆಯ ಹಲವು ಪ್ರಸಿದ್ಧ ಶ್ಲೋಕಗಳನ್ನು ಏಕಾಂತದಲ್ಲಿ ಹೇಳಿಕೊಳ್ಳುತ್ತಾ ಕಲಾವಿದನೊಬ್ಬನ ಮನಸ್ಸಿನಲ್ಲಿ ಮೂಡಿದ ಕಲಾಕೃತಿಗಳೆಲ್ಲವೂ ಕ್ಯಾನ್ವಾಸ್ಗೆ ರೂಪಾಂತರಗೊಂಡು ಲೋಕಾಂತಕ್ಕೆ ಬಹಳ ನಾಜೂಕಾಗಿ ದಾಟಿಸುವಂತೆ ಈ ಕಲಾಕೃತಿಗಳು ಕಂಡವು.

‘ಎಲ್ಲರೊಳಗೂ ನಾನಿದ್ದೇನೆ’ ಎನ್ನುವ ಶ್ರೀಕೃಷ್ಣನ ಮಾತನ್ನು ಅಮೂರ್ತವಾಗಿ ತೋರಿಸಿದ್ದಾರೆ. ಬಹುತೇಕ ಕಲಾಕೃತಿಗಳಲ್ಲಿ ಬಾನಿನ ನೀಲಿ ಬಣ್ಣವನ್ನು ಬಳಸಲಾಗಿದೆ. ಈ ನೀಲಿ ಬಣ್ಣವು ಜ್ಞಾನದ ಸಂಕೇತ. ಅಂದರೆ ಭಗವಂತ ಜ್ಞಾನಸ್ವರೂಪಿಯಾಗಿ ಎಲ್ಲರೊಳಗೂ ಒಂದಾಗಿದ್ದಾನೆ ಎಂಬುದನ್ನು ಬಣ್ಣದ ಮೂಲಕವೇ ಬಹಳ ಸೂಕ್ಷ್ಮವಾಗಿ ಹೇಳಿದ್ದಾರೆ ಧಾರೇಶ್ವರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.