ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG; ಭಾರತಕ್ಕೆ 10 ವಿಕೆಟ್ ಅಂತರದ ಭರ್ಜರಿ ಗೆಲುವು; 2-1ರ ಮುನ್ನಡೆ

Last Updated 25 ಫೆಬ್ರುವರಿ 2021, 14:41 IST
ಅಕ್ಷರ ಗಾತ್ರ

ಅಹಮದಾಬಾದ್: ಸ್ಪಿನ್ನರ್‌ಗಳು ಮೇಲುಗೈ ಸಾಧಿಸಿದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ಪ್ರವಾಸಿ ಇಂಗ್ಲೆಂಡ್ ವಿರುದ್ದ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಅಂತರದ ಮಹತ್ವದ ಮುನ್ನಡೆ ದಾಖಲಿಸಿದೆ. ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ 227 ರನ್ ಅಂತರದ ಸೋಲನುಭವಿಸಿದ ಭಾರತ ತಂಡವು ಅದೇ ಮೈದಾನದಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ 317 ರನ್ ಅಂತರದ ಬೃಹತ್ ಗೆಲುವು ದಾಖಲಿಸಿತ್ತು.

ಅಲ್ಲದೆ ಈ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸುವ ಭಾರತದ ಆಸೆ ಜೀವಂತವಾಗಿದೆ. ಇನ್ನೊಂದೆಡೆ ಇಂಗ್ಲೆಂಡ್ ಕನಸು ನುಚ್ಚು ನೂರಾಗಿದೆ.

ಅಹಮದಾಬಾದ್‌ನ ಮೊಟೆರಾದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವು ಹೆಚ್ಚಿನ ಮಹತ್ವ ಗಿಟ್ಟಿಸಿಕೊಂಡಿತ್ತು.

ಆದರೆ ಪಂದ್ಯವು ಕೇವಲ ಎರಡೇ ದಿನಗಳಲ್ಲಿ ಅಂತ್ಯಗೊಂಡರೂ ಇತ್ತಂಡಗಳ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಿರುವುದು ವಿಶೇಷವೆನಿಸಿತ್ತು.

ಇಂಗ್ಲೆಂಡ್‌ನ 112 ರನ್‌ಗಳಿಗೆ ಉತ್ತರವಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 145 ರನ್‌ಗಳಿಗೆ ಆಲೌಟಾಗಿತ್ತು. ಆದರೂ 33 ರನ್‌ಗಳ ಅಮೂಲ್ಯ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಬಳಿಕ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು 81 ರನ್‌ಗಳಿಗೆ ಕಟ್ಟಿ ಹಾಕಿದ ಭಾರತವು 7.4 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ನೋಲಾಸ್ ಗೆಲುವು ದಾಖಲಿಸಿತು. ರೋಹಿತ್ ಶರ್ಮಾ ಅಜೇಯ 25 ಹಾಗೂ ಶುಭಮನ್ ಗಿಲ್ ಔಟಾಗದೆ 15 ರನ್ ಗಳಿಸಿದರು.

ಅಕ್ಷರ್, ಅಶ್ವಿನ್ ಮೋಡಿ, ಆಂಗ್ಲರ ಪರದಾಟ...
ಅಕ್ಷರ್ ಪಟೇಲ್ (32ಕ್ಕೆ 5 ವಿಕೆಟ್) ಹಾಗೂ ರವಿಚಂದ್ರನ್ ಅಶ್ವಿನ್ ಸ್ಪಿನ್ (48ಕ್ಕೆ 4 ವಿಕೆಟ್) ದಾಳಿಗೆ ತತ್ತರಿಸಿರುವ ಪ್ರವಾಸಿ ಇಂಗ್ಲೆಂಡ್ ತಂಡವು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 81 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇದರೊಂದಿಗೆ ಭಾರತ ಗೆಲುವಿಗೆ 49 ರನ್‌‌ಗಳ ಸುಲಭ ಗುರಿ ಪಡೆಯಿತು.

ಇದು ಇಂಗ್ಲೆಂಡ್ ತಂಡದಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಭಾರತ ವಿರುದ್ಧ ದಾಖಲಾದ ಅತಿ ಕನಿಷ್ಠ ಮೊತ್ತವಾಗಿದೆ.

ದ್ವಿತೀಯ ದಿನದಾಟದ ಆರಂಭದಲ್ಲೇ ಜೋ ರೂಟ್ (8 ರನ್ನಿಗೆ ಐದು ವಿಕೆಟ್) ದಾಳಿಗೆ ಕುಸಿದ ಭಾರತ ಕೇವಲ 145 ರನ್ನಿಗೆ ಸರ್ವಪತನಗೊಂಡಾಗ ಆಂತಕ ಮಡುಗಟ್ಟಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಅಕ್ಷರ್ ಹಾಗೂ ಅಶ್ವಿನ್ ಮಾರಕ ದಾಳಿ ಸಂಘಟಿಸುವ ಮೂಲಕ ಎದುರಾಳಿಗಳನ್ನು ಕಟ್ಟಿ ಹಾಕಿದರು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೊದಲ ಓವರ್‌ನಲ್ಲೇ ಎರಡು ವಿಕೆಟ್ ಕಬಳಿಸಿದ ಅಕ್ಷರ್ ಪಟೇಲ್ ಪ್ರವಾಸಿಗರಿಗೆ ಆಘಾತ ನೀಡಿದರು. ಇಲ್ಲಿಂದ ಬಳಿಕ ಆಂಗ್ಲರು ಚೇತರಿಸಿಕೊಳ್ಳಲೇ ಇಲ್ಲ.

ಮೂವರು ಬ್ಯಾಟ್ಸ್‌ಮನ್‌ಗಳು ಎರಡಂಕಿಯನ್ನು ತಲುಪಿರುವುದನ್ನು ಬಿಟ್ಟರೆ ಇತರೆ ಯಾವ ಬ್ಯಾಟ್ಸ್‌ಮನ್ ಹೋರಾಟದ ಮನೋಭಾವ ತೋರಲಿಲ್ಲ. ಜ್ಯಾಕ್ ಕ್ರಾಲಿ (0), ಡಾಮಿನಿಕ್ ಸಿಬ್ಲಿ (7), ಜಾನಿ ಬೈರ್‌ಸ್ಟೋ (0), ನಾಯಕ ಜೋ ರೂಟ್ (19), ಬೆನ್ ಸ್ಟೋಕ್ಸ್ (25), ಒಲ್ಲಿ ಪಾಪ್ (12), ವಿಕೆಟ್ ಕೀಪರ್ ಬೆನ್ ಫೋಕ್ಸ್ (8), ಜೋಫ್ರಾ ಆರ್ಚರ್ (0), ಜ್ಯಾಕ್ ಲೀಚ್ (9), ಸ್ಟುವರ್ಟ್ ಬ್ರಾಡ್ (1*) ಹಾಗೂ ಜೇಮ್ಸ್ ಆಂಡ್ರೆಸನ್ (0) ನಿರಾಸೆ ಮೂಡಿಸಿದರು.

ಪರಿಣಾಮ 30.4 ಓವರ್‌ಗಳಲ್ಲೇ 81 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತದ ಪರ ಕೈಚಳಕ ತೋರಿದ ಸ್ಥಳೀಯ ಹೀರೊ ಅಕ್ಷರ್ ಪಟೇಲ್ 32 ರನ್ ತೆತ್ತು ಐದು ವಿಕೆಟ್ ಕಬಳಿಸಿ ಮಿಂಚಿದರು. ಈ ಮೂಲಕ ಎರಡೂ ಇನ್ನಿಂಗ್ಸ್‌ಗಳಲ್ಲೂ ಐದು ವಿಕೆಟ್ ಜೊತೆಗೆ ಪಂದ್ಯದಲ್ಲಿ ಒಟ್ಟು 11 ವಿಕೆಟ್ ಸಾಧನೆ ಮಾಡಿದರು. ಅಕ್ಷರ್ ಚೆನ್ನೈನಲ್ಲಿ ನಡೆದ ಪದಾರ್ಪಣಾ ಟೆಸ್ಟ್ ಪಂದ್ಯದಲ್ಲೂ ಐದು ವಿಕೆಟ್ ಪಡೆದಿದ್ದರು.

ಇನ್ನೊಂದೆಡೆ ಅಕ್ಷರ್‌ಗೆ ತಕ್ಕ ಸಾಥ್ ನೀಡಿದ ಅಶ್ವಿನ್ 48 ರನ್ ತೆತ್ತು ನಾಲ್ಕು ವಿಕೆಟ್ ಪಡೆದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 400 ವಿಕೆಟ್ ಕ್ಲಬ್ ಸೇರ್ಪಡೆಯಾದರು. ಅಲ್ಲದೆ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು. ಮಗದೊಂದು ವಿಕೆಟ್ ವಾಷಿಂಗ್ಟನ್ ಸುಂದರ್ ಪಾಲಾಯಿತು.

8 ರನ್ನಿಗೆ 5 ವಿಕೆಟ್ ಪಡೆದ ರೂಟ್; ಭಾರತ 145ಕ್ಕೆ ಆಲೌಟ್...
ಈ ಮೊದಲು ರೂಟ್ ದಾಳಿಗೆ ತತ್ತರಿಸಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 145 ರನ್‌ಗಳಿಗೆ ಆಲೌಟಾಗಿತ್ತು. ಹಾಗಿದ್ದರೂ 33 ರನ್‌ಗಳ ಅಮೂಲ್ಯ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಅರೆಕಾಲಿಕ ಬೌಲರ್ ಆಗಿರುವ ಹೊರತಾಗಿಯೂ ಅದ್ಭುತ ದಾಳಿ ಸಂಘಟಿಸಿದ ರೂಟ್ ಕೇವಲ 8 ರನ್ ತೆತ್ತು ಐದು ವಿಕೆಟ್ ಪಡೆದು ಭಾರತ ನೆಲದಲ್ಲಿ ಅವಿಸ್ಮರಣೀಯ ಸಾಧನೆ ಮಾಡಿದರು.

ಮೂರು ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಭಾರತೀಯ ತಂಡದ ದಾಂಡಿಗರು ಎರಡನೇ ದಿನದಾಟದಲ್ಲಿ ಪೆವಿಲಿಯನ್ ಪೆರೇಡ್ ನಡೆಸಿದರು. ಉಪನಾಯಕ ಅಜಿಂಕ್ಯ ರಹಾನೆ (7) ನಿರಾಸೆ ಮೂಡಿಸಿದರು. ಅರ್ಧಶತಕ ಗಳಿಸಿದ್ದ ರೋಹಿತ್ ಶರ್ಮಾ (66) ಸಂಪೂರ್ಣ ಪ್ರಯೋಜನ ಪಡೆಯುವಲ್ಲಿಸಫಲರಾಗಲಿಲ್ಲ. ಇವರಿಬ್ಬರು ಎಡಗೈ ಸ್ಪಿನ್ನರ್ ಜ್ಯಾಕ್ ಲೀಚ್ ದಾಳಿಯಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ವಿಕೆಟ್ ಕೀಪರ್ ರಿಷಭ್ ಪಂತ್ (1), ವಾಷಿಂಗ್ಟನ್ ಸುಂದರ್ (0) ಹಾಗೂ ಅಕ್ಷರ್ ಪಟೇಲ್ (0) ಅವರನ್ನು ಇಂಗ್ಲೆಂಡ್ ನಾಯಕ ಜೋ ರೂಟ್ ಹೊರದಬ್ಬಿದರು.

ರವಿಚಂದ್ರನ್ ಅಶ್ವಿನ್ (17) ಸ್ವಲ್ಪ ಹೊತ್ತು ಹೋರಾಟ ನೀಡಿದರೂ ಅವರು ಕೂಡಾ ರೂಟ್‌ ದಾಳಿಯಲ್ಲಿ ಔಟಾದರು. ಅಂತಿಮವಾಗಿ ಜಸ್‌ಪ್ರೀತ್ ಬೂಮ್ರಾರನ್ನು (1) ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸುವುದರೊಂದಿಗೆ ಜೋ ರೂಟ್ ಟೆಸ್ಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದರು.

ಪರಿಣಾಮ ಭಾರತ 53.2 ಓವರ್‌ಗಳಲ್ಲೇ 145 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. 6.2 ಓವರ್‌ಗಳನ್ನು ಎಸೆದಿರುವ ರೂಟ್ ದಾಳಿಯಲ್ಲಿ ಮೂರು ಮೇಡನ್ ಓವರ್‌ಗಳು ಸೇರಿದ್ದವು.

ಅತ್ತ ಜ್ಯಾಕ್ ಲೀಚ್ 54 ರನ್ನಿಗೆ ನಾಲ್ಕು ವಿಕೆಟ್ ಕಿತ್ತು ಮಿಂಚಿದರು. ಭಾರತವು ಕೊನೆಯ ಏಳು ವಿಕೆಟ್‌ಗಳನ್ನು ಕೇವಲ 31 ರನ್ ಅಂತರದಲ್ಲಿ ಕಳೆದುಕೊಂಡಿತ್ತು.

ಈ ಮೊದಲು ಮೊದಲ ದಿನದಾಟದಲ್ಲಿ ಅಕ್ಷರ್ ಪಟೇಲ್ (38ಕ್ಕೆ 6 ವಿಕೆಟ್) ದಾಳಿಗೆ ಕುಸಿದಿದ್ದ ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್‌ನಲ್ಲಿ 112 ರನ್‌ಗಳಿಗೆ ಆಲೌಟ್ ಆಗಿತ್ತು.

ಸರಣಿಯ ಅಂತಿಮ ಪಂದ್ಯವು ಮೊಟೆರಾದಲ್ಲಿ ಮಾರ್ಚ್ 4 ಗುರುವಾರದಂದು ಆರಂಭವಾಗಲಿದೆ. ಈ ಪಂದ್ಯದಲ್ಲಿ ಕನಿಷ್ಠ ಡ್ರಾ ಫಲಿತಾಂಶ ಕಂಡರೆ ಭಾರತ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆಯನ್ನು ಪಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT