ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs HK | ಕೊಹ್ಲಿ, ಸೂರ್ಯಕುಮಾರ್‌ ಅಬ್ಬರ: 'ಸೂಪರ್ 4' ಹಂತಕ್ಕೆ ಭಾರತ ಲಗ್ಗೆ

Last Updated 1 ಸೆಪ್ಟೆಂಬರ್ 2022, 2:06 IST
ಅಕ್ಷರ ಗಾತ್ರ

ದುಬೈ: ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಹಾಂಗ್‌ಕಾಂಗ್ ವಿರುದ್ಧ 40 ರನ್ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, 'ಸೂಪರ್ ಫೋರ್' ಹಂತಕ್ಕೆ ಲಗ್ಗೆಯಿಟ್ಟಿದೆ.

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಿರುಸಿನ ಅರ್ಧಶತಕ ಗಳಿಸಿರುವ ಸೂರ್ಯಕುಮಾರ್ ಯಾದವ್ ಹಾಗೂ ವಿರಾಟ್ ಕೊಹ್ಲಿ ಭಾರತದ ಗೆಲುವಿನ ರೂವಾರಿ ಎನಿಸಿದ್ದಾರೆ.

ಭಾರತ ಒಡ್ಡಿದ 193 ರನ್ ಗುರಿ ಬೆನ್ನಟ್ಟಿದ್ದ ಹಾಂಗ್‌ಕಾಂಗ್ ಐದು ವಿಕೆಟ್ ನಷ್ಟಕ್ಕೆ 152 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಭಾರತದ ಪರ ಸೂರ್ಯಕುಮಾರ್ ಔಟಾಗದೆ 68 ಹಾಗೂ ಕೊಹ್ಲಿ ಅಜೇಯ 59 ರನ್ ಗಳಿಸಿದರು.

ಟಾಸ್ ಗೆದ್ದ ಹಾಂಗ್‌ಕಾಂಗ್ ಮೊದಲು ಫೀಲ್ಡಿಂಗ್ ಆಯ್ಕೆಮಾಡಿಕೊಂಡಿತು. ನಾಯಕ ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್ ಮೊದಲ ವಿಕೆಟ್‌ಗೆ 38 ರನ್ ಪೇರಿಸಿದರು.

ರೋಹಿತ್ 21 ಹಾಗೂ ರಾಹುಲ್ 36 ರನ್ ಗಳಿಸಿ ಔಟಾದರು. ಈ ನಡುವೆ ಮೂರನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ವಿರಾಟ್ ಕೊಹ್ಲಿ ಹಾಗೂ ರಾಹುಲ್ ಎರಡನೇ ವಿಕೆಟ್‌ಗೆ 56 ರನ್‌ಗಳ ಮಹತ್ವದ ಜೊತೆಯಾಟ ಕಟ್ಟಿದರು.

ಬಳಿಕ ಸೂರ್ಯಕುಮಾರ್ ಯಾದವ್ ಅವರೊಂದಿಗೂ ಇನ್ನಿಂಗ್ಸ್ ಬೆಳೆಸಿದರು. ಕೊಹ್ಲಿ ಹಾಗೂ ಸೂರ್ಯ ಮುರಿಯದ ಮೂರನೇ ವಿಕೆಟ್‌ಗೆ 98 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

44 ಎಸೆತಗಳನ್ನು ಎದುರಿಸಿದ ವಿರಾಟ್ ಒಂದು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 59 ರನ್ ಗಳಿಸಿ ಔಟಾಗದೆ ಉಳಿದರು.

ಕೊನೆಯ ಹಂತದಲ್ಲಿ ಬಿರುಸಿನ ಆಟವಾಡಿದ ಸೂರ್ಯಕುಮಾರ್ ಯಾದವ್ ಕೇವಲ 26 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿ ಅಬ್ಬರಿಸಿದರು. ಸೂರ್ಯ ಇನ್ನಿಂಗ್ಸ್‌ನಲ್ಲಿ ತಲಾ ಆರು ಬೌಂಡರಿ ಹಾಗೂ ಸಿಕ್ಸರ್‌ಗಳು ಸೇರಿದ್ದವು.

ಹಾಂಗ್‌ಕಾಂಗ್ ಪರ ಬಾಬರ್ ಹಯಾತ್ ಗರಿಷ್ಠ 41 ರನ್ ಗಳಿಸಿದರು. ಕಿಂಚಿತ್ ಶಾ 30 ಹಾಗೂ ಜೀಶನ್ ಅಲಿ ಅಜೇಯ 26 ರನ್ ಗಳಿಸಿದರು.

ಭಾರತದ ಪರ ಭುವನೇಶ್ವರ್ ಕುಮಾರ್, ಅರ್ಶದೀಪ್ ಸಿಂಗ್, ರವೀಂದ್ರ ಜಡೇಜ ಹಾಗೂ ಆವೇಶ್ ಖಾನ್ ತಲಾ ಒಂದು ವಿಕೆಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT