ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ವಿಶ್ವಕಪ್ ಟೂರ್ನಿ: ಬಾಂಗ್ಲಾ ಮಣಿಸಿದ ಆಸ್ಟ್ರೇಲಿಯಾಗೆ ಅಗ್ರಸ್ಥಾನ

ಬೇತ್ ಮೂನಿ ಅಜೇಯ ಅರ್ಧಶತಕ
Last Updated 25 ಮಾರ್ಚ್ 2022, 16:27 IST
ಅಕ್ಷರ ಗಾತ್ರ

ವೆಲಿಂಗ್ಟನ್: ಕೆಲವು ಆತಂಕದ ಕ್ಷಣಗಳನ್ನು ಎದುರಿಸಿದರೂ ಛಲದಿಂದ ಮುಂದುವರಿದ ಆಸ್ಟ್ರೇಲಿಯಾ ತಂಡ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಬೇಸಿನ್ ರಸರ್ವ್‌ ಅಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಐದು ವಿಕೆಟ್‌ಗಳಿಂದ ಬಾಂಗ್ಲಾದೇಶವನ್ನು ಮಣಿಸಿತು. ಬಾಂಗ್ಲಾದೇಶ ಈ ಮೂಲಕ ಏಕೈಕ ಪಂದ್ಯ ಗೆದ್ದು ಲೀಗ್ ಹಂತವನ್ನು ಮುಗಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾದ ಆ್ಯಶ್ಲಿ ಗಾರ್ಡನರ್ ಮತ್ತು ಜೆಸ್ ಜೊನಾಥನ್ ಅವರ ಪರಿಣಾಮಕಾರಿ ದಾಳಿಯ ನೆರವಿನಿಂದ 43 ಓವರ್‌ಗಳಲ್ಲಿ ಎದುರಾಳಿಗಳನ್ನು 135 ರನ್‌ಗಳಿಗೆ ಕೆಡವಿತು. ಗುರಿ ಸುಲಭವಾಗಿತ್ತಾದರೂ ಅರಂಭದಲ್ಲಿ ಎರಡು ವಿಕೆಟ್‌ ಕಳೆದುಕೊಂಡ ಆಸ್ಟ್ರೇಲಿಯಾ ಆತಂಕಕ್ಕೆ ಸಿಲುಕಿತ್ತು. ಆದರೆ ಬೇತ್ ಮೂನಿ ಅವರ ಅಜೇಯ ಅರ್ಧಶತಕ ತಂಡದ ಕೈ ಹಿಡಿಯಿತು.

ತಂಡದ ಮೊತ್ತ 22 ರನ್ ಆಗಿದ್ದಾಗ ಅಲಿಸಾ ಹೀಲಿ ಅವರನ್ನು ಸಲ್ಮಾ ಖಾತುನ್ ಔಟ್ ಮಾಡಿದರು. ನಾಯಕಿ ಮೆಗ್ ಲ್ಯಾನಿಂಗ್ ಖಾತೆ ತೆರೆಯದೇ ವಾಪಸಾದರು. ಆರಂಭಿಕ ಬ್ಯಾಟರ್ ರಾಚೆಲ್ ಹೇನ್ಸ್ ಕೂಡ ಔಟಾದಾಗ ತಂಡದ ಮೊತ್ತ ಕೇವಲ 26 ಆಗಿತ್ತು. ಬೇತ್ ಮೂನಿ ಜೊತೆಗೂಡಿದ ತಹಿಲಾ ಮೆಗ್ರಾ 15 ರನ್ ಸೇರಿಸುವಷ್ಟರಲ್ಲಿ ವಿಕೆಟ್ ಕಳೆದುಕೊಂಡರು.

ಒಂದು ತುದಿಯಲ್ಲಿ ವಿಕೆಟ್‌ಗಳು ಉರುಳುತ್ತಿದ್ದರೂ ಗಟ್ಟಿಯಾಗಿ ನೆಲೆಯೂರಿದ ಬೇತ್ ಮೂನಿ (66; 75 ಎಸೆತ, 5 ಬೌಂಡರಿ) ಆ್ಯಶ್ಲಿ ಗಾರ್ಡನರ್ ಮತ್ತು ಅನಾಬೆಲ್ ಸುಥರ್ಲೆಂಡ್ ಜೊತೆಗೂಡಿ ತಂಡವನ್ನು ದಡ ಸೇರಿಸಿದರು. 32.1 ಓವರ್‌ಗಳಲ್ಲಿ ತಂಡ ಜಯದ ನಗೆ ಸೂಸಿತು.

ಸ್ಪಿನ್‌ ದಾಳಿಗೆ ಬೆದರಿದ ಬಾಂಗ್ಲಾ
ಬಾಂಗ್ಲಾದೇಶದ ಬ್ಯಾಟರ್‌ಗಳು ಆರಂಭದಲ್ಲಿ ನಿಧಾನಕ್ಕೆ ರನ್ ಗಳಿಸುತ್ತ ಸಾಗಿದರು. ಆದರೆ ಸ್ಪಿನ್ನರ್‌ಗಳಾದ ಆ್ಯಶ್ಲಿ ಗಾರ್ಡನರ್ ಮತ್ತು ಜೆಸ್ ಜೊನಾಸೆನ್ ದಾಳಿಗಿಳಿದ ನಂತರ ವಿಕೆಟ್‌ಗಳನ್ನು ಕಳೆದುಕೊಂಡಿತು. ಒಂದು ಹಂತದಲ್ಲಿ ತಂಡ 58 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಂತರವೂ ಇನಿಂಗ್ಸ್‌ಗೆ ಬಲ ತುಂಬಲು ಯಾರಿಗೂ ಸಾಧ್ಯವಾಗಲಿಲ್ಲ. ಆರನೇ ಕ್ರಮಾಂಕದ ಲತಾ ಮೊಂಡಲ್ ಸ್ವಲ್ಪ ಪ್ರತಿರೋಧ ಒಡ್ಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT