ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಷಸ್‌ ಎರಡನೇ ಟೆಸ್ಟ್‌: ಇಂಗ್ಲೆಂಡ್‌ ವಿರುದ್ಧ ಆಸ್ಟ್ರೇಲಿಯಾ ಜಯಭೇರಿ

ಕ್ರಿಕೆಟ್‌: ಸೋಲಿನಲ್ಲೂ ಮಿಂಚಿದ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌
Published 2 ಜುಲೈ 2023, 23:45 IST
Last Updated 2 ಜುಲೈ 2023, 23:45 IST
ಅಕ್ಷರ ಗಾತ್ರ

ಲಂಡನ್‌: ಬೆನ್‌ ಸ್ಟೋಕ್ಸ್‌ ಅವರು ಭರ್ಜರಿ ಶತಕದ ಮೂಲಕ ಒಡ್ಡಿದ ಸವಾಲನ್ನು ಸಮರ್ಥವಾಗಿ ಬದಿಗೊತ್ತಿದ ಆಸ್ಟ್ರೇಲಿಯಾ ತಂಡ, ಆ್ಯಷಸ್‌ ಕ್ರಿಕೆಟ್‌ ಟೆಸ್ಟ್‌ ಸರಣಿಯ ಎರಡನೇ ಪಂದ್ಯವನ್ನು 43 ರನ್‌ಗಳಿಂದ ಗೆದ್ದುಕೊಂಡಿತು.

ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 371 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌, ಅಂತಿಮ ದಿನವಾದ ಭಾನುವಾರ 327 ರನ್‌ಗಳಿಗೆ ಅಲೌಟಾಯಿತು. ಐದು ಪಂದ್ಯಗಳ ಸರಣಿಯಲ್ಲಿ ಪ್ಯಾಟ್‌ ಕಮಿನ್ಸ್‌ ಬಳಗ 2–0 ಯಿಂದ ಮುನ್ನಡೆ ಗಳಿಸಿದೆ.

ನಾಯಕ ಬೆನ್‌ ಸ್ಟೋಕ್ಸ್‌ (155) ಸೊಗಸಾದ ಶತಕದ ಮೂಲಕ ಇಂಗ್ಲೆಂಡ್‌ಗೆ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ ಅವರು ಔಟಾಗುವುದರೊಂದಿಗೆ ಆತಿಥೇಯ ತಂಡದ ಗೆಲುವಿನ ಆಸೆಯೂ ಕಮರಿತು. 214 ಎಸೆತಗಳನ್ನು ಎದುರಿಸಿದ ಸ್ಟೋಕ್ಸ್‌, ತಲಾ 9 ಬೌಂಡರಿ ಹಾಗೂ ಸಿಕ್ಸರ್‌ ಹೊಡೆದರು.

ಇಂಗ್ಲೆಂಡ್‌ ತಂಡ 4 ವಿಕೆಟ್‌ಗಳಿಗೆ 114 ರನ್‌ಗಳಿಂದ ಅಂತಿಮ ದಿನದಾಟ ಮುಂದುವರಿಸಿತ್ತು. 29 ರನ್‌ಗಳಿಂದ ಇನಿಂಗ್ಸ್‌ ಮುಂದುವರಿಸಿದ್ದ ಸ್ಟೋಕ್ಸ್‌ ಅವರು ಬೆನ್‌ ಡಕೆಟ್‌ (83) ಅವರೊಂದಿಗೆ ಐದನೇ ವಿಕೆಟ್‌ಗೆ 132 ರನ್ ಸೇರಿಸಿದರು.

ಡಕೆಟ್‌ ಔಟಾದ ಬಳಿಕ ಬೆನ್ನುಬೆನ್ನಿಗೆ ವಿಕೆಟ್‌ಗಳು ಬಿದ್ದವು. ಆದರೆ ಸ್ಟೋಕ್ಸ್‌ ಅಬ್ಬರದ ಆಟವಾಡಿ, ಎದುರಾಳಿ ಪಾಳೆಯದಲ್ಲಿ ಆತಂಕ ಮೂಡಿಸಿದರು. ಕ್ಯಾಮೆರಾನ್‌ ಗ್ರೀನ್‌ ಓವರ್‌ನಲ್ಲಿ ಹ್ಯಾಟ್ರಿಕ್‌ ಸಿಕ್ಸರ್‌ ಹೊಡೆದು ಶತಕ ಪೂರೈಸಿದರು. ಸ್ಟುವರ್ಟ್‌ ಬ್ರಾಡ್‌ (11) ಜತೆ ಏಳನೇ ವಿಕೆಟ್‌ಗೆ 108 ರನ್‌ ಕಲೆಹಾಕಿದರು.

ಗೆಲುವಿಗೆ 70 ರನ್‌ಗಳು ಅಗತ್ಯವಿದ್ದಾಗ ಸ್ಟೋಕ್ಸ್‌ ಔಟಾದರು. ಕೊನೆಯ ಬ್ಯಾಟರ್‌ಗಳನ್ನು ಬೇಗನೇ ಔಟ್ ಮಾಡಿದ ಆಸ್ಟ್ರೇಲಿಯಾ, ಜಯ ಸಾಧಿಸಿತು.

ಬೆಸ್ಟೋ ಸ್ಟಂಪಿಂಗ್ ವಿವಾದ: ಇಂಗ್ಲೆಂಡ್‌ನ ಜಾನಿ ಬೆಸ್ಟೋ ಅವರನ್ನು ಆಸ್ಟ್ರೇಲಿಯಾದ ವಿಕೆಟ್‌ ಕೀಪರ್‌ ಅಲೆಕ್ಸ್‌ ಕ್ಯಾರಿ ಸ್ಟಂಪ್‌ ಔಟ್‌ ಮಾಡಿದ ರೀತಿ ವಿವಾದಕ್ಕೆ ಕಾರಣವಾಯಿತು. ಕ್ಯಾಮೆರಾನ್ ಗ್ರೀನ್‌ ಬೌಲ್‌ ಮಾಡಿದ 52ನೇ ಓವರ್‌ನ ಕೊನೆಯ ಎಸೆತದಲ್ಲಿ ಬೌನ್ಸರ್‌ಅನ್ನು ಬೆಸ್ಟೋ, ಕೆಳಕ್ಕೆ ಬಾಗಿ ತಪ್ಪಿಸಿದಾಗ ಚೆಂಡು ಕ್ಯಾರಿ ಕೈಸೇರಿತು. ಓವರ್‌ ಮುಗಿದ ಕಾರಣ ಬೆಸ್ಟೋ ಕ್ರೀಸ್‌ ಬಿಟ್ಟು ಮುಂದೆ ನಡೆದರು. ಆದರೆ ಕ್ಯಾರಿ, ತಕ್ಷಣ ಸ್ಟಂಪ್‌ಗೆ ಚೆಂಡು ಎಸೆದು ಔಟ್‌ಗಾಗಿ ಮನವಿ ಮಾಡಿದರು.

ಮೈದಾನದ ಅಂಪೈರ್‌ಗಳು ಟಿ.ವಿ. ಅಂಪೈರ್‌ ಮೊರೆ ಹೋದರು. ರೀಪ್ಲೆ ವೀಕ್ಷಿಸಿದ ಟಿ.ವಿ ಅಂಪೈರ್‌ ಮರಾಯಸ್‌ ಎರಸ್ಮಸ್, ಔಟ್‌ ಎಂದು ತೀರ್ಪು ನೀಡಿದರು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಆಸ್ಟ್ರೇಲಿಯಾ: 416, ಇಂಗ್ಲೆಂಡ್‌: 325; ಎರಡನೇ ಇನಿಂಗ್ಸ್‌: ಆಸ್ಟ್ರೇಲಿಯಾ: 279. ಇಂಗ್ಲೆಂಡ್‌: 81.3 ಓವರ್‌ಗಳಲ್ಲಿ 327 (ಬೆನ್‌ ಡಕೆಟ್‌ 83, ಬೆನ್‌ ಸ್ಟೋಕ್ಸ್‌ 155, ಜೋಶ್‌ ಟಂಗ್‌ 19, ಮಿಚೆಲ್ ಸ್ಟಾರ್ಕ್‌ 79ಕ್ಕೆ 3, ಪ್ಯಾಟ್‌ ಕಮಿನ್ಸ್‌ 69ಕ್ಕೆ 3, ಜೋಶ್ ಹ್ಯಾಜೆಲ್‌ವುಡ್‌ 80ಕ್ಕೆ 3) ಫಲಿತಾಂಶ: ಆಸ್ಟ್ರೇಲಿಯಾಕ್ಕೆ 43 ರನ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT