ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿಂಗ್ ಆಫ್‌ ನಿಯಮ ಕ್ಲೀನ್‌ಬೌಲ್ಡ್‌?

ಲೋಧಾ ಶಿಫಾರಸುಗಳಿಗೆ ತಿಲಾಂಜಲಿ ಇಡಲು ಎಜಿಎಂ ನಿರ್ಧಾರ * ನಿಯಮಾವಳಿ ಪರಿಷ್ಕರಣೆಗೆ ಸುಪ್ರೀಂ ಮೊರೆ ಹೋಗಲಿರುವ ಬಿಸಿಸಿಐ
Last Updated 1 ಡಿಸೆಂಬರ್ 2019, 18:55 IST
ಅಕ್ಷರ ಗಾತ್ರ

ಮುಂಬೈ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಅಧಿ ಕಾರವಧಿಯು ವಿಸ್ತರಣೆಗೊಳ್ಳಲು ಅತ್ಯಗತ್ಯವಾಗಿರುವ ಕೂಲಿಂಗ್ ಆಫ್ ನಿಯ ಮದ ತಿದ್ದುಪಡಿಗೆ ಮಂಡಳಿಯ 88ನೇ ಸರ್ವಸದಸ್ಯರ ಸಭೆಯಲ್ಲಿ ಒಮ್ಮತದ ಅನುಮೋದನೆ ಲಭಿಸಿತು.

ಭಾರತ ಕ್ರಿಕೆಟ್ ನಿಯಂತ್ರಣ ಮಂಡ ಳಿಯ ಆಡಳಿತ ಸುಧಾರಣೆಗಾಗಿ ಹೊಸ ನಿಯಮಾವಳಿ ರಚಿಸಲು ಕಾರಣವಾದ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಶಿಫಾರಸುಗಳಿಗೆ ತಿಲಾಂಜಲಿ ಇಡಲು ನೂತನ ಆಡಳಿತ ಮಂಡಳಿ ವೇದಿಕೆ ಸಿದ್ಧಗೊಳಿಸಿತು.

ಬಿಸಿಸಿಐ ನಿಯಮಾವಳಿಯ ಪ್ರಮುಖ ನಿಯಮಗಳನ್ನು ತಿದ್ದುಪಡಿಗೆ ಅನುಮತಿ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಭಾನುವಾರ ಇಲ್ಲಿ ನಡೆದ 88ನೇ ಸರ್ವಸದಸ್ಯರ ಸಭೆಯಲ್ಲಿ (ಎ.ಜಿ.ಎಂ) ನಿರ್ಣಯಿಸಲಾಯಿತು.

ಪ್ರಮುಖವಾಗಿ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಪದಾಧಿಕಾರಿಗಳ ಕೂಲಿಂಗ್ ಆಫ್‌ (ಅಧಿಕಾರ ವಿರಾಮ) ನಿಯಮಕ್ಕೆ ತಿದ್ದುಪಡಿ ತರಲು ಪ್ರಾಮುಖ್ಯತೆ ನೀಡಲಾಗುತ್ತಿದೆ. ಇದರಿಂದ ಅವರ ಅಧಿಕಾರಾವಧಿಯು ವಿಸ್ತರಿಸಲು ಸಾಧ್ಯ ವಾಗಲಿದೆ. ಇಲ್ಲದಿದ್ದರೆ ಇನ್ನು ಎಂಟು ತಿಂಗಳ ನಂತರ ಅವರು ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟು ಮುಂದಿನ ಒಂದು ಅವ ಧಿಗೆ ವಿಶ್ರಾಂತಿ ಪಡೆಯಬೇಕು. ಅವರು ಅಕ್ಟೋಬರ್ 23ರಂದು ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.

‘ಸಭೆಯಲ್ಲಿ ಮಂಡಿಸಿದ ತಿದ್ದುಪಡಿ ಪ್ರಸ್ತಾವಗಳನ್ನು ಸದಸ್ಯರು ಅನುಮೋದಿಸಿದ್ದಾರೆ. ಅವುಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುವುದು’ ಎಂದು ಮಂಡಳಿಯ ಉನ್ನತ ಮೂಲಗಳು ತಿಳಿಸಿವೆ. ಗಂಗೂಲಿ ಅಲ್ಲದೇ ಕಾರ್ಯದರ್ಶಿ ಜೈ ಶಾ ಅವ ರಿಗೂ ಅಧಿಕಾರ ವಿಸ್ತರಣೆ ಅವಕಾಶ ಸಿಗುವುದು. ಇಲ್ಲದಿದ್ದರೆ ಅವರು ಕೂಡ ಕೆಲವೇ ತಿಂಗಳುಗಳ ನಂತರ ವಿರಾಮ ಪಡೆಯಬೇಕು.

‘ಡಿಸೆಂಬರ್ ಮೂರರಂದು ನ್ಯಾಯಾಲಯದಲ್ಲಿ ವಿಚಾರಣೆ ಇದೆ. ಅದರ ನಂತರವಷ್ಟೇ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ನೇಮಕ ಕುರಿತು ನಿರ್ಧರಿಸಲಾ ಗುವುದು’ ಎಂದು ಮೂಲಗಳು ತಿಳಿಸಿವೆ.

‘ಈಗಿರುವ ನಿಯಮದಂತೆ ಯಾವುದೇ ತಿದ್ದುಪಡಿ ಅಥವಾ ಪರಿಷ್ಕರಣೆಗೆ ಕೋರ್ಟ್‌ ಅನುಮತಿ ಪಡೆಯಲೇಬೇಕು. ಇದು ಸರಿಯಾದ ನಡೆಯಲ್ಲ. ಈ ರೀತಿಯ ವ್ಯವಸ್ಥೆ ಇರಬಾರದೆಂಬ ಅಭಿಪ್ರಾಯಗಳೂ ಸದಸ್ಯರಿಂದ ವ್ಯಕ್ತವಾಗಿವೆ’ ಎಂದು ಮೂಲಗಳು ತಿಳಿಸಿವೆ.

ಐಸಿಸಿ–ಸಿಎಸಿ ಸಭೆಗೆ ಜೈ: ಬಿಸಿಸಿಐ ಕಾರ್ಯದರ್ಶಿ ಜೈ ಶಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಖ್ಯ ಕಾರ್ಯನಿರ್ವಾಹಕರ ಸಮಿತಿಯ (ಸಿಎಸಿ) ಸಭೆಯಲ್ಲಿ ಪ್ರತಿ ನಿಧಿಸಲು ಆಯ್ಕೆಯಾಗಿದ್ದಾರೆ.

ಇಲ್ಲಿಯವರೆಗೆ ಐಸಿಸಿ–ಸಿಎಸಿ ಸಭೆಗೆ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಹುಲ್ ಜೊಹ್ರಿ ಭಾಗವಹಿಸುತ್ತಿದ್ದರು. 30 ವರ್ಷದ ಜೈ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ.

ಸಭೆಯ ಅಧ್ಯಕ್ಷತೆಯನ್ನು ಸೌರವ್ ಗಂಗೂಲಿ ವಹಿಸಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಸಂತೋಷ್ ಮೆನನ್, ಖಜಾಂಚಿ ವಿನಯ್ ಮೃತ್ಯುಂಜಯ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್ ದ್ರಾವಿಡ್, ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ ಭಾಗವಹಿಸಿದ್ದರು.

ಆಯ್ಕೆ ಸಮಿತಿ: ಪ್ರಸಾದ್ ಅವಧಿ ಅಂತ್ಯ

ರಾಷ್ಟ್ರೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ಮತ್ತು ಉಳಿದ ಸದಸ್ಯರ ಕಾರ್ಯಾವಧಿಯು ಮುಕ್ತಾಯಗೊಂಡಿದೆ.

‘ಪ್ರಸಾದ್ ನೇತೃತ್ವದ ಸಮಿತಿಯು ಇಲ್ಲಿಯವರೆಗೆ ಉತ್ತಮವಾಗಿ ಕೆಲಸ ಮಾಡಿದೆ. ಆದರೆ, ಅವರ ಕಾರ್ಯಾವಧಿಯು ಮುಕ್ತಾಯಗೊಂಡಿದ್ದು ಅವರು ಮುಂದುವರಿಯುವುದು ಆಗುವುದಿಲ್ಲ‘ ಎಂದು ಸಭೆಯ ನಂತರ ಸೌರವ್ ಗಂಗೂಲಿ ತಿಳಿಸಿದರು.

2015ರಲ್ಲಿ ಪ್ರಸಾದ್ ಅಧ್ಯಕ್ಷರಾಗಿ ಮತ್ತು ಗಗನ್ ಖೋಡಾ ಸದಸ್ಯರಾಗಿ ನೇಮಕವಾಗಿದ್ದರು. 2016ರಲ್ಲಿ ಜತಿನ್ ಪರಾಂಜಪೆ, ಶರಣದೀಪ್ ಸಿಂಗ್ ಮತ್ತು ದೇವಾಂಗ್ ಗಾಂಧಿ ಸದಸ್ಯರಾಗಿದ್ದರು. ಆದರೆ ಇದೀಗ ಅವರೆಲ್ಲರ ಅವಧಿಯೂ ಮುಂದಿನ ತಿಂಗಳು ಮುಗಿಯಲಿದೆ.

ನೂತನ ನಿಯಮಾವಳಿಯ ಪ್ರಕಾರ ಗರಿಷ್ಠ ಐದು ವರ್ಷಗಳವರೆಗೆ ಆಯ್ಕೆ ಸಮಿತಿಯ ಸದಸ್ಯರು ಕಾರ್ಯನಿರ್ವಹಿಸಬಹುದು. ಹಳೆಯ ನಿಯಮದಲ್ಲಿ ಇದು ನಾಲ್ಕು ವರ್ಷಗಳಿಗೆ ಸೀಮಿತವಾಗಿತ್ತು.

‘ಹೊಸ ಸಮಿತಿ ಮಾಡುವಾಗ ಹೊಸ ನಿಯಮ ರೂಪಿಸುತ್ತೇವೆ. ಪ್ರತಿವರ್ಷವೂ ಬದಲಾವಣೆ ಮಾಡುವುದು ಸೂಕ್ತವಲ್ಲ’ ಎಂದು ಗಂಗೂಲಿ ಹೇಳಿದರು.

ಹೋದ ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತ ತಂಡವು ಬಳಷ್ಟು ಯಶಸ್ಸನ್ನು ಗಳಿಸಿದೆ. ಆದರೆ, ಆಯ್ಕೆ ಸಮಿತಿಯ ಸದಸ್ಯರ ಮತ್ತು ಅಧ್ಯಕ್ಷರ ಕ್ರಿಕೆಟ್ ಆಟದ ಅನುಭವದ ಬಗ್ಗೆ ಬಹಳಷ್ಟು ಟೀಕೆಗಳು ಕೇಳಿಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT