ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SL: ಬೆಂಗಳೂರಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ

ರೋಹಿತ್‌ ಬಳಗದ ಮಡಿಲಿಗೆ ಸರಣಿ: ದಿಮುತ ಕರುಣರತ್ನೆ ಶತಕ; ಬೂಮ್ರಾ, ಅಶ್ವಿನ್ ದಾಳಿಗೆ ಕುಸಿದ ಶ್ರೀಲಂಕಾ
Last Updated 14 ಮಾರ್ಚ್ 2022, 17:21 IST
ಅಕ್ಷರ ಗಾತ್ರ

ಬೆಂಗಳೂರು: ಸೋಮವಾರ ಸಂಜೆ ಬಿಸಿಲಿನ ಕಿರಣಗಳು ಚಿನ್ನಸ್ವಾಮಿ ಕ್ರೀಡಾಂಗಣದಿಂದ ಪೂರ್ಣವಾಗಿ ಮರೆಯಾಗುವ ಮುನ್ನವೇ ಭಾರತ ತಂಡವು ಶ್ರೀಲಂಕಾ ಎದುರಿನ ಸರಣಿ ಜಯದ ಸಂಭ್ರಮ ಆಚರಿಸಿತು. ಇದೇ ಮೊದಲ ಬಾರಿ ಟೆಸ್ಟ್ ತಂಡದ ನಾಯಕತ್ವ ವಹಿಸಿದ್ದ ರೋಹಿತ್ ಶರ್ಮಾ, ಮಿರಿಮಿರಿ ಹೊಳೆಯುವ ಟ್ರೋಫಿಗೆ ಮುತ್ತಿಕ್ಕಿದರು.

ಉದ್ಯಾನನಗರಿಯಲ್ಲಿ ಆಯೋಜನೆಗೊಂಡ ಪ್ರಥಮ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಭಾರತ ತಂಡವು ನಿರೀಕ್ಷೆಯಂತೆಯೇ ಮೂರನೇ ದಿನದ ಊಟದ ವಿರಾಮಕ್ಕೂ ಮುಂಚೆಯೇ ಶ್ರೀಲಂಕಾ ಎದುರು 238 ರನ್‌ಗಳಿಂದ ಜಯಿಸಿತು. ಸರಣಿಯನ್ನು 2–0ಯಿಂದ ಗೆದ್ದಿತು. ತವರಿನಲ್ಲಿ ಸತತ 15ನೇ ಸರಣಿ ಜಯದ ಸಾಧನೆಯನ್ನೂ ಮಾಡಿತು.

ಲಂಕಾ ತಂಡದ ನಾಯಕ ದಿಮುತ ಕರುಣರತ್ನೆ (107; 174ಎ, 4X15)ಅವರ ದಿಟ್ಟ ಶತಕ ಕ್ರಿಕೆಟ್‌ಪ್ರೇಮಿಗಳ ನೆನಪಿನಲ್ಲಿ ಉಳಿಯಿತು. 447 ರನ್‌ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಪ್ರವಾಸಿ ಬಳಗವು 59.3 ಓವರ್‌ಗಳಲ್ಲಿ 208 ರನ್‌ ಗಳಿಸಲಷ್ಟೇ ಶಕ್ತವಾಯಿತು. ಭಾರತದಲ್ಲಿ ನಡೆದ ಮೂರು ಪಿಂಕ್‌ ಬಾಲ್ ಟೆಸ್ಟ್‌ಗಳಲ್ಲಿಯೂ ಗೆದ್ದ ಸಾಧನೆಯನ್ನು ಭಾರತ ಮಾಡಿತು.

ದೀರ್ಘ ಅವಧಿ ನಡೆದ ಪಂದ್ಯ!: ಭಾರತದಲ್ಲಿ ಆಯೋಜನೆಗೊಂಡ ಪಿಂಕ್‌ ಬಾಲ್ ಟೆಸ್ಟ್‌ಗಳಲ್ಲಿ ಹೆಚ್ಚು ಅವಧಿ ಆಟ ನಡೆದ ಪಂದ್ಯವಾಗಿ ಭಾರತ –ಶ್ರೀಲಂಕಾ ಹಣಾಹಣಿಯು ದಾಖಲಾಯಿತು.

2019ರಲ್ಲಿ ಕೋಲ್ಕತ್ತದಲ್ಲಿ ಬಾಂಗ್ಲಾ ಎದುರು ನಡೆದಿದ್ದ ಟೆಸ್ಟ್‌ ಮೂರನೇ ದಿನದಾಟದ ಮೊದಲ ಅವಧಿಯಲ್ಲಿಯೇ ಮುಕ್ತಾಯವಾಗಿತ್ತು. ಅಹಮದಾಬಾದಿನಲ್ಲಿ ಇಂಗ್ಲೆಂಡ್ ವಿರುದ್ಧ 2021ರಲ್ಲಿ ನಡೆದಿದ್ದ ಪಂದ್ಯವು ಎರಡನೇ ದಿನದಾಟದಲ್ಲಿಯೇ ಮುಗಿದಿತ್ತು. ಆದರೆ, ಬೆಂಗಳೂರು ಪಂದ್ಯವು ಊಟದ ವಿರಾಮಕ್ಕೂ 35 ನಿಮಿಷಗಳ ಮುನ್ನ ಅಂತ್ಯವಾಯಿತು.

ಪಂದ್ಯದ ಮೊದಲ ದಿನ ಒಟ್ಟು 16 ವಿಕೆಟ್‌ಗಳು ಪತನಗೊಂಡಾಗ ಪಿಚ್‌ ಬಗ್ಗೆ ಬಹಳಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡವು 252 ರನ್‌ಗಳಿಗೆ ಆಲೌಟ್ ಆಗಿತ್ತು. ಅದಕ್ಕುತ್ತರವಾಗಿ ಶ್ರೀಲಂಕಾ ತಂಡವು 109 ರನ್‌ ಗಳಿಸಿತ್ತು. 143 ರನ್‌ಗಳ ಹಿನ್ನಡೆ ಅನುಭವಿಸಿತ್ತು.

ಆದರೆ, ಎರಡನೇ ದಿನದಾಟದಲ್ಲಿ ಒಟ್ಟು 14 ವಿಕೆಟ್‌ಗಳು ಪತನಗೊಂಡರೂ ಬ್ಯಾಟಿಂಗ್‌ಗೂ ಪಿಚ್‌ ನೆರವಾಗಿತ್ತು. ರಿಷಭ್ ಮಿಂಚಿನ ಅರ್ಧಶತಕ ಮತ್ತು ಶ್ರೇಯಸ್ ಚೆಂದದ ಬ್ಯಾಟಿಂಗ್ ಗಮನ ಸೆಳೆದಿತ್ತು. ಎರಡನೇ ಇನಿಂಗ್ಸ್‌ನಲ್ಲಿ 9 ವಿಕೆಟ್‌ಗಳಿಗೆ 303 ರನ್‌ ಗಳಿಸಿದ್ದ ಆತಿಥೇಯ ಬಳಗವು ಡಿಕ್ಲೇರ್ ಮಾಡಿತ್ತು. ಭಾನುವಾರದ ಆಟದ ಅಂತ್ಯಕ್ಕೆ 7 ಓವರ್‌ಗಳಲ್ಲಿ 1 ವಿಕೆಟ್‌ಗೆ 28 ರನ್‌ ಗಳಿಸಿದ್ದ ಶ್ರೀಲಂಕಾ ತಂಡದ ದಿಮುತ ಮತ್ತು ಕುಶಾಲ ಮೆಂಡಿಸ್ ಮೂರನೇ ದಿನದಾಟದಲ್ಲಿ ಉತ್ತಮ ಬ್ಯಾಟಿಂಗ್‌ ಕೌಶಲ ಮೆರೆದರು.

ಮೊದಲ ಒಂದು ಗಂಟೆಯಲ್ಲಿ ಭಾರತದ ಬೌಲರ್‌ಗಳಿಗೆ ದಿಟ್ಟ ಸವಾಲೊಡ್ಡಿದರು. ಮೆಂಡಿಸ್ 57 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಮೆಂಡಿಸ್ ಮತ್ತು ದಿಮುತ 97 ರನ್‌ ಸೇರಿಸಿದರು.

ಈ ಹಂತದಲ್ಲಿ ಆತಿಥೇಯ ನಾಯಕ ರೋಹಿತ್, ಫೀಲ್ಡಿಂಗ್ ಮತ್ತು ಬೌಲಿಂಗ್ ನಲ್ಲಿ ಪದೇ ಪದೇ ಮಾಡಿದ ಬದಲಾವಣೆಯನ್ನು ಇಬ್ಬರೂ ಬ್ಯಾಟರ್‌ಗಳು ಸಮರ್ಥವಾಗಿ ನಿಭಾಯಿಸಿದರು.

20ನೇ ಒವರ್‌ನಲ್ಲಿ ಅಶ್ವಿನ್ ಎಸೆತವನ್ನು ಹೊಡೆಯಲು ಮುಂದೆ ನುಗ್ಗಿ ಬಂದ ಮೆಂಡಿಸ್‌ ಹಿಂದೆ ತಿರುಗಿ ನೋಡುವಷ್ಟರಲ್ಲಿ ವಿಕೆಟ್‌ಕೀಪರ್ ರಿಷಭ್ ಸ್ಟಂಪಿಂಗ್ ಮಾಡಿದರು. ಇದರೊಂದಿಗೆ ಜೊತೆಯಾಟ ಮುರಿದುಬಿತ್ತು. ನಂತರದ ಆಟದಲ್ಲಿ ದಿಮುತ ಶತಕ ಪೂರೈಸಿದ್ದೊಂದೇ ಲಂಕಾ ಪಾಲಿಗೆ ಸಮಾಧಾನ ತಂದ ಸಂಗತಿ.

ದಿಟ್ಟ ದಿಮುತಗೆ ಎರಡನೇ ಶತಕ
ಎರಡನೇ ದಿನ ರಾತ್ರಿ 10 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದಿದ್ದ ದಿಮುತಗೆ ಅದೃಷ್ಟ ಜೊತೆ ನೀಡಿತು. ಸೋಮವಾರದ ಮೊದಲ ಓವರ್‌ನಲ್ಲಿಯೇ ಎಡಗೈ ಬ್ಯಾಟರ್ ದಿಮುತ ಕ್ಯಾಚ್‌ ಪಡೆಯುವಲ್ಲಿ ವಿರಾಟ್ ಕೊಹ್ಲಿ ವಿಫಲರಾದರು. 51ನೇ ಓವರ್‌ನಲ್ಲಿ ರೋಹಿತ್ ಕೂಡ ದಿಮುತ ಕ್ಯಾಚ್‌ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಎರಡೂ ಸಲ ಜಡೇಜ ಬೌಲಿಂಗ್‌ ಮಾಡಿದ್ದರು.

ಈ ಜೀವದಾನಗಳ ಪ್ರಯೋಜನ ಪಡೆದ ದಿಮುತ ಹೊನಲು ಬೆಳಕಿನ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ಶತಕ ಗಳಿಸಿದವರ ಸಾಲಿಗೆ ಸೇರಿದರು. 2017ರಲ್ಲಿ ದುಬೈನಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್‌ನಲ್ಲಿ ದಿಮುತ 196 ರನ್ ಗಳಿಸಿದ್ದರು. ಹಗಲು–ರಾತ್ರಿ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಮಾರ್ನಸ್ ಲಾಬುಷೇನ್ ಮೂರು ಮತ್ತು ಪಾಕಿಸ್ತಾನದ ಅಸದ್ ಶಫೀಕ್ ಎರಡು ಶತಕ ಗಳಿಸಿದ್ದಾರೆ. 33 ವರ್ಷದ ದಿಮುತಗೆ ಇದು 76ನೇ ಟೆಸ್ಟ್ ಪಂದ್ಯ ಮತ್ತು 14ನೇ ಶತಕ. 57ನೇ ಓವರ್‌ನಲ್ಲಿ ಬೂಮ್ರಾ ಎಸೆತದಲ್ಲಿ ದಿಮುತ ಕ್ಲೀನ್‌ಬೌಲ್ಡ್‌ ಆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT