ಮಂಗಳವಾರ, ಫೆಬ್ರವರಿ 18, 2020
26 °C
ಆಂಧ್ರ ತಂಡಕ್ಕೆ ನಾಗೇಶ್ ಟ್ರೋಫಿ

ಅಂಧರ ಕ್ರಿಕೆಟ್‌: ಚಿನ್ನಸ್ವಾಮಿ ಅಂಗಳದಲ್ಲಿ ‘ಕಿಣಿ..ಕಿಣಿ..’ ಕಲರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ’ಕಿಣಿ..ಕಿಣಿ..ಕಿಣಿ..’ ಸದ್ದಿನ ಸರಣಿ ಅನುರಣಿಸುತ್ತಿತ್ತು. ಮೂರು ದಿನಗಳ ಹಿಂದಷ್ಟೇ ಇದೇ ಅಂಗಳದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಅಬ್ಬರ ನೋಡಿದ್ದವರಿಗೆ ‘ಕಿಣಿ..ಕಿಣಿ..’ ಸದ್ದು ಮುದ ನೀಡುತ್ತಿತ್ತು.

ಅಂಧರ ರಾಷ್ಟ್ರೀಯ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಎಲ್ಲರ ಚಿತ್ತ ಸೆಳೆದ ಚೆಂಡಿನ ಸಪ್ಪಳ ಅದು. ಬೌಲರ್‌ ಕೈಯಿಂದ ಬಿಡುಗಡೆಯಾಗುತ್ತಿದ್ದ ಚೆಂಡಿನ ಸದ್ದನ್ನು ಆಲಿಸಿ ಬ್ಯಾಟ್‌ ಬೀಸುತ್ತಿದ್ದ ಬ್ಯಾಟ್ಸ್‌ಮನ್‌ಗಳು, ಬೌಂಡರಿಯತ್ತ ನುಗ್ಗುತ್ತಿದ್ದ ಅದೇ ಚೆಂಡಿನ ನಾದವನ್ನು ಬೆನ್ನಟ್ಟುತ್ತಿದ್ದ ಫೀಲ್ಡರ್‌ಗಳು.

ಕೈಗೆ ಸಿಕ್ಕಾಗ ಬೌಲರ್ ಅಥವಾ ವಿಕೆಟ್‌ಕೀಪರ್‌ನತ್ತ ಎಸೆಯುವ ಆ ಫೀಲ್ಡರ್‌ಗಳ ಕೌಶಲ. ಇವೆಲ್ಲವನ್ನೂ ನೋಡಿ ಪುಳಕಗೊಳ್ಳುತ್ತಿದ್ದ ಗ್ಯಾಲರಿಯಲ್ಲಿದ್ದ ಮೂರು ಸಾವಿರಕ್ಕೂಹೆಚ್ಚು ಪ್ರೇಕ್ಷಕರು. ಅವರ ಕರತಾಡನ, ಕೇಕೆ. ಶಹಬ್ಭಾಸಗಿರಿಗಳ ನಡುವೆಯೂ ಮೈದಾನದೊಳಗಿನ ಆಟಗಾರರೆಲ್ಲ ಕಿವಿಗಳೂ ಚೆಂಡಿನ ಕಿಣಿಗಟ್ಟುವ ಮೇಲೆಯೇ ಇರುತ್ತಿದ್ದದ್ದು ಸೋಜಿಗ. ದೃಷ್ಟಿಯಲ್ಲಿ ದೋಷ ಕೊಟ್ಟ ವಿಧಿಗೆ ತಮ್ಮ ಶ್ರವಣಶಕ್ತಿಯ ಮೂಲಕ ತಿರುಗೇಟು ಕೊಟ್ಟ ಅಂಧ ಕ್ರಿಕೆಟಿಗರ ಆಟಕ್ಕೆ ಅಲ್ಲಿದ್ದವರು ಮನಸೋತರು.

ಈ ಫೈನಲ್‌ ಪಂದ್ಯದಲ್ಲಿ ಆಂಧ್ರ ಎಂಟು ವಿಕೆಟ್‌ಗಳಿಂದ ಜಯಿಸಿ, ಇಂಡಸ್‌ಇಂಡ್ ಬ್ಯಾಂಕ್ ನಾಗೇಶ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ  ಆತಿಥೇಯ ತಂಡದ ಲೋಕೇಶ್ (ಔಟಾಗದೆ 68; 59ಎಸೆತ) ಮತ್ತು ನಾಯಕ  ಆರ್. ಸುನಿಲ್ (44; 22ಎ) ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಚೆಂಡಿನ ಕಿಣಿಗುಟ್ಟುವ ಸದ್ದು ನಿರಂತರವಾಗಿತ್ತು. ಕರ್ನಾಟಕವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 197 ರನ್ ಗಳಿಸಿತು. ಆಂಧ್ರದ ಆರಂಭಿಕ ಬ್ಯಾಟ್ಸ್‌ಮನ್ ಡಿ. ತಾಂಡವಕೃಷ್ಣ (62ರನ್) ಮತ್ತು ಡಿ. ವೆಂಕಟೇಶ್ವರರಾವ್ (49 ರನ್) ಅವರು ಕೂಡ ಬ್ಯಾಟ್ ಬೀಸಿದರು. ತಮ್ಮ ತಂಡದ ಗೆಲುವನ್ನು ಸುಲಭಗೊಳಿಸಿದರು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರೋಜರ್ ಬಿನ್ನಿ ಅವರು ವಿಜೇತರಿಗೆ ಪ್ರಶಸ್ತಿ ವಿತರಿಸಿದರು.

ಸಂಕ್ಷಿಪ್ತ ಸ್ಕೋರು: ಕರ್ನಾಟಕ: 20 ಓವರ್‌ಗಳಲ್ಲಿ 6ಕ್ಕೆ 197 (ಪ್ರಕಾಶ್ ಜಯರಾಮಯ್ಯ 36, ಲೋಕೇಶ್ 68, ಆರ್. ಸುನಿಲ್ 44, ಟಿ. ದುರ್ಗಾರಾವ್ 45ಕ್ಕೆ1, ಎ. ವೆಂಕಟೇಶ್ವರರಾವ್ 30ಕ್ಕೆ2), ಆಂಧ್ರ: 17.1 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 198 (ಡಿ. ತಾಂಡವಕೃಷ್ಣ 62, ಡಿ. ವೆಂಕಟೇಶ್ವರರಾವ್ 49, ಅಜಯಕುಮಾರ್ ರೆಡ್ಡಿ 47, ಬಸಪ್ಪ 40ಕ್ಕೆ1) ಫಲಿತಾಂಶ: ಆಂಧ್ರ ತಂಡಕ್ಕೆ 8 ವಿಕೆಟ್‌ಗಳ ಜಯ. 

*
ಕಂಗಳ ದೃಷ್ಟಿ ಚೆನ್ನಾಗಿರುವವರಿಗಿಂತಲೂ ಈ ಹುಡುಗರು (ಅಂಧ ಆಟಗಾರರು) ಅದ್ಭುತವಾಗಿ ಆಡಿದ್ದಾರೆ. ಈ ಮಾದರಿಯ ಕ್ರಿಕೆಟ್‌ಗೆ ನಿಜಕ್ಕೂ ಉತ್ತಮ ಭವಿಷ್ಯವಿದೆ.
–ರೋಜರ್ ಬಿನ್ನಿ, ಕೆಎಸ್‌ಸಿಎ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು