ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

IPL 2022 CSK vs GT: ಮುಗ್ಗರಿಸಿದ ಚೆನ್ನೈ; ಗುಜರಾತ್‌ಗೆ 7 ವಿಕೆಟ್ ಜಯ

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡವು ಭಾನುವಾರ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ಅಗ್ರಸ್ಥಾನ ಕಾಯ್ದುಕೊಂಡಿರುವ ಹಾರ್ದಿಕ್ ಪಾಂಡ್ಯ ಬಳಗವು, 'ಕ್ವಾಲಿಫೈಯರ್ 1'ರಲ್ಲಿ ಆಡುವುದನ್ನು ಖಚಿತಪಡಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಋತುರಾಜ್ ಗಾಯಕವಾಡ್ ಅರ್ಧಶತಕದ (53) ಹೊರತಾಗಿಯೂ ಐದು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಬಳಿಕ ವೃದ್ಧಿಮಾನ್ ಸಹಾ ಅಜೇಯ ಅರ್ಧಶತಕದ (67*) ಬಲದಿಂದ ಗುಜರಾತ್ 19.1 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಸಹಾ ಹಾಗೂ ಶುಭಮನ್ ಗಿಲ್ (18) ಮೊದಲ ವಿಕೆಟ್‌ಗೆ 59 ರನ್ ಒಟ್ಟು ಸೇರಿಸಿದರು. ಮ್ಯಾಥ್ಯೂ ವೇಡ್ 20 ರನ್‌ಗಳ ಕಾಣಿಕೆ ನೀಡಿದರು.

ಅತ್ತ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಸಹಾ ಅರ್ಧಶತಕ ಸಾಧನೆ ಮಾಡಿದರು. 57 ಎಸೆತಗಳನ್ನು ಎದುರಿಸಿದ ಸಹಾ 67 ರನ್ (8 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು.

ಇನ್ನುಳಿದಂತೆ ನಾಯಕ ಹಾರ್ದಿಕ್ ಪಾಂಡ್ಯ 7 ಹಾಗೂ ಡೇವಿಡ್ ಮಿಲ್ಲರ್ 15* ರನ್ ಗಳಿಸಿದರು.

ಇದರೊಂದಿಗೆ ಗುಜರಾತ್ ಆಡಿರುವ 13 ಪಂದ್ಯಗಳಲ್ಲಿ 10ನೇ ಗೆಲುವಿನೊಂದಿಗೆ ಒಟ್ಟು 20 ಅಂಕ ಸಂಪಾದಿಸಿದ್ದು, ಅಗ್ರಸ್ಥಾನ ಕಾಯ್ದುಕೊಂಡಿದೆ. ಅತ್ತ ಚೆನ್ನೈ 13 ಪಂದ್ಯಗಳಲ್ಲಿ ಎಂಟು ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲೇ ಉಳಿದುಕೊಂಡಿದೆ.

ಗಾಯಕವಾಡ್ ಹೋರಾಟ ವ್ಯರ್ಥ...

ಈ ಮೊದಲುಗಾಯಕವಾಡ್ ಸಮಯೋಚಿತ ಅರ್ಧಶತಕದ ನೆರವಿನಿಂದ ಚೆನ್ನೈಐದು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತು.

ಚೆನ್ನೈಗೆ ಆರಂಭದಲ್ಲಿ ಡೆವೊನ್ ಕಾನ್ವೆ (5) ವಿಕೆಟ್ ನಷ್ಟವಾಯಿತು. ಬಳಿಕ ಋತುರಾಜ್ ಗಾಯಕವಾಡ್ ಹಾಗೂ ಮೊಯಿನ್ ಅಲಿ (21) ಮಹತ್ವದ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.

ಕಲಾತ್ಮಕ ಇನ್ನಿಂಗ್ಸ್ ಕಟ್ಟಿದ ಋತುರಾಜ್ ಅರ್ಧಶತಕ ಗಳಿಸಿದರು. ಆದರೆ ಫಿಫ್ಟಿ ಬೆನ್ನಲ್ಲೇ ಔಟ್ ಆದರು. 49 ಎಸೆತಗಳನ್ನು ಎದುರಿಸಿದ ಗಾಯಕವಾಡ್ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 53 ರನ್ ಗಳಿಸಿದರು.

ಈ ನಡುವೆ ಶಿವಂ ದುಬೆ ಖಾತೆ ತೆರೆಯುವಲ್ಲಿ ವಿಫಲರಾದರು. ಕೊನೆಯಲ್ಲಿ ಎನ್. ಜಗದೀಶನ್ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.

ನಿಧಾನಗತಿಯ ಬ್ಯಾಟಿಂಗ್ ಮಾಡಿರುವುದು ಚೆನ್ನೈ ಹಿನ್ನಡೆಗೆ ಕಾರಣವಾಯಿತು. ಅಂತಿಮವಾಗಿ ಐದು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ನಾಯಕ ಮಹೇಂದ್ರ ಸಿಂಗ್ ಧೋನಿ (7) ಪರಿಣಾಮಕಾರಿ ಎನಿಸಿಕೊಳ್ಳಲಿಲ್ಲ. 33 ಎಸೆತಗಳನ್ನು ಎದುರಿಸಿದ ಜಗದೀಶನ್ 39 ರನ್ ಗಳಿಸಿ ಔಟಾಗದೆ ಉಳಿದರು. ಗುಜರಾತ್ ಪರ ಮೊಹಮ್ಮದ್ ಶಮಿ ಎರಡು ವಿಕೆಟ್ ಗಳಿಸಿದರು.

ಟಾಸ್ ಗೆದ್ದ ಚೆನ್ನೈ ಬ್ಯಾಟಿಂಗ್...

ಈ ಮೊದಲು ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

ಗುಜರಾತ್ ತಂಡವು ಈಗಗಾಲೇ ಪ್ಲೇ-ಆಫ್ ಪ್ರವೇಶಿಸಿದೆ. ಅತ್ತ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ನಿರ್ಗಮಿಸಿದೆ. ಹಾಗಾಗಿ ಈ ಪಂದ್ಯವು ಪ್ರತಿಷ್ಠೆಗಷ್ಟೇ ಸೀಮಿತಗೊಂಡಿದೆ.

ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಸ್ಪರ್ಧಿಸುತ್ತಿರುವ ಹಾರ್ದಿಕ್ ಪಾಂಡ್ಯ ಬಳಗವು, 12 ಪಂದ್ಯಗಳಲ್ಲಿ ಒಂಬತ್ತು ಗೆಲುವಿನೊಂದಿಗೆ ಒಟ್ಟು 18 ಅಂಕ ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಅತ್ತ 12 ಪಂದ್ಯಗಳಲ್ಲಿ ನಾಲ್ಕು ಗೆಲುವು ಮಾತ್ರ ಗಳಿಸಿರುವ ಮಹೇಂದ್ರ ಸಿಂಗ್ ಧೋನಿ ಪಡೆಯು ಎಂಟು ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ.

ಹನ್ನೊಂದರ ಬಳಗ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT