ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL ಪ್ರಾಯೋಜಕತ್ವ: ಹಿಂದೆ ಸರಿದ ಚೀನಾ ಕಂಪನಿ ವಿವೊ?

Last Updated 4 ಆಗಸ್ಟ್ 2020, 22:49 IST
ಅಕ್ಷರ ಗಾತ್ರ

ನವದೆಹಲಿ: ಚೀನಾ ಮೂಲದ ವಿವೊ ಮೊಬೈಲ್ ಕಂಪನಿಯು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯ ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ಯೋಚಿಸುತ್ತಿದೆ.

ಯುಎಇಯಲ್ಲಿ ಐಪಿಎಲ್‌ನ 13ನೇ ಆವೃತ್ತಿಯ ಟೂರ್ನಿಯನ್ನು ನಡೆಸಲು ಬಿಸಿಸಿಐ ಸಿದ್ಧತೆ ಮಾಡಿಕೊಳ್ಳುತ್ತಿದೆ. ಚೀನಾ ಮತ್ತು ಭಾರತದ ಸೈನಿಕರ ನಡುವೆ ಈಚೆಗೆ ನಡೆದ ಸಂಘರ್ಷದ ನಂತರ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಅಭಿಯಾನಗಳು ನಡೆಯುತ್ತಿವೆ. ಚೀನಾದ ಆ್ಯಪ್‌ಗಳನ್ನೂ ಕೇಂದ್ರ ಸರ್ಕಾರವು ನಿಷೇಧಿಸಿದೆ. ಇದ ರಿಂದಾಗಿ ಐಪಿಎಲ್ ಪ್ರಾಯೋಜಕತ್ವವನ್ನು ಬಿಸಿಸಿಐ ಕೈಬಿಡಬೇಕು ಎಂಬ ಆಗ್ರಹಗಳು ಹೆಚ್ಚಿದ್ದವು. ಆದರೆ ಈಚೆಗೆ ನಡೆದಿದ್ದ ಐಪಿಎಲ್ ಆಡಳಿತ ಸಮಿತಿ ಸಭೆಯಲ್ಲಿ ವಿವೊ ಕಂಪನಿಯ ಪ್ರಾಯೋಜಕತ್ವ ಮುಂದುವರಿಸಲು ನಿರ್ಧರಿಸಲಾಗಿತ್ತು. ಅದಕ್ಕಾಗಿ ಬಹಳಷ್ಟು ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಇದರಿಂದಾಗಿ ವಿವೊ ಕಂಪನಿಯೇ ‘ಪರಸ್ಪರ ಸಮ್ಮತಿ’ಯೊಂದಿಗೆ ಒಪ್ಪಂದವನ್ನು ಕೈಬಿಡಲು ಯೋಚಿಸಿದೆ.

‘ಬಿಸಿಸಿಐ ಪದಾಧಿಕಾರಿಗಳು (ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ) ಮತ್ತು ಕಂಪೆನಿಯ ಪ್ರತಿನಿಧಿಗಳ ಚರ್ಚೆ ನಡೆಯುತ್ತಿದೆ. ಒಂದು ವರ್ಷದ ಮಟ್ಟಿಗೆ ವಿವೊ ಕಂಪೆನಿಯು ಟೈಟಲ್‌ ಪ್ರಾಯೋಜಕತ್ವ ನೀಡದಿರುವ ಸಾಧ್ಯತೆ ದಟ್ಟವಾಗಿದೆ‘ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿವೊ ಕಂಪನಿಯೊಂದಿಗೆ ಐದು ವರ್ಷಗಳ ಒಪ್ಪಂದ ಇದೆ. 2022ರಲ್ಲಿ ಅದು ಮುಕ್ತಾಯವಾಗಲಿದೆ. ಪ್ರತಿ ವರ್ಷವೂ ₹440 ಕೋಟಿಯನ್ನು ಬಿಸಿಸಿಐಗೆ ಕಂಪೆನಿಯು ನೀಡುತ್ತಿದೆ.

‘ಈ ಹಿಂದೆ ಕೆಲವು ಫ್ರ್ಯಾಂಚೈಸ್‌ಗಳು ಒಪ್ಪಂದ ನಿಯಮ ಉಲ್ಲಂಘಿಸಿದ್ದಾಗ ಬ್ಯಾಂಕ್ ಗ್ಯಾರಂಟಿಯನ್ನು ನಗದೀಕರಣ ಮಾಡಿಕೊಳ್ಳಲಾಗಿತ್ತು. ಆದರೆ ವಿವೊ ಪ್ರಕರಣದಲ್ಲಿ ಆ ರೀತಿಯಾಗುವುದಿಲ್ಲ. ಪರಸ್ಪರ ಹೊಂದಾಣಿಕೆಯೊಂದಿಗೆ ಬೇರ್ಪಡಲು ನೋಡುತ್ತಿದ್ದೇವೆ‘ ಎಂದು ಮೂಲಗಳು ತಿಳಿಸಿವೆ.

‘ಈ ಸಂದರ್ಭದಲ್ಲಿ ಒಂದೆ ರಡು ಭಾರತೀಯ ಮೂಲದ ಕಂಪನಿಗಳೊಂದಿಗೆ ಪ್ರಾಯೋಜಕತ್ವದ ಮಾತುಕತೆ ನಡೆಯುತ್ತಿದೆ. ಆದರೆ ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ₹440 ಕೋಟಿಗೆ ಸಮನಾದ ಮೊತ್ತ ವನ್ನು ಪಡೆಯುವುದು ಸಾಧ್ಯವಾಗಲಿಕ್ಕಿಲ್ಲ. ಪ್ರಯತ್ನ ಜಾರಿಯಲ್ಲಿದೆ. ಒಂದೊಮ್ಮೆ ವಿವೊ ಹಿಂದೆ ಸರಿಯುವುದು ಖಚಿತವಾದರೆ ಮುಂದಿನ ಹೆಜ್ಜೆ ಇಡುತ್ತೇವೆ’ ಎಂದು ಪದಾಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT