ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 50 ಸಾವಿರ ಕೋಟಿ ಬ್ರ್ಯಾಂಡ್‌ ಮೌಲ್ಯದ ಐಪಿಎಲ್‌ಗೂ ಕೋವಿಡ್–19 ಭೀತಿ

ವೈರಸ್ ಕೊಟ್ಟ ಪೆಟ್ಟಿಗೆ ತಲ್ಲಣಿಸಿದ ಕ್ರಿಕೆಟ್ ಲೋಕ
Last Updated 30 ಮಾರ್ಚ್ 2020, 3:07 IST
ಅಕ್ಷರ ಗಾತ್ರ
ADVERTISEMENT
""

ತಾವು ಅಧ್ಯಕ್ಷರಾದ ನಂತರ ಮೊದಲ ಸಲ ಐಪಿಎಲ್ ನಡೆಸಲು ಸಜ್ಜಾಗಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈಗ ತೀವ್ರ ಒತ್ತಡದಲ್ಲಿದ್ದಾರೆ. ಟೂರ್ನಿ ರದ್ದಾದರೆ ದೊಡ್ಡ ನಷ್ಟ ಅನುಭವಿಸುವ ಚಿಂತೆಯಲ್ಲಿ ಮಂಡಳಿ ಇದೆ.

50 ಸಾವಿರ ಕೋಟಿ ರೂಪಾಯಿ..ಇದು 2019ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಬ್ರ್ಯಾಂಡ್‌ ಮೌಲ್ಯ. ಅಮೆರಿಕದ ಡಫ್ ಅ್ಯಂಡ್ ಪೆಲ್ಪ್ಸ್‌ ಸಂಸ್ಥೆಯು ಸಮೀಕ್ಷೆ ನಡೆಸಿ ನೀಡಿದ್ದ ಫಲಿತಾಂಶ ಇದು. ಅದರ ಹಿಂದಿನ ಟೂರ್ನಿ (2018) ಗಿಂತ ಆರು ಸಾವಿರ ಕೋಟಿ ರೂಪಾಯಿ ಹೆಚ್ಚು ಮೌಲ್ಯವರ್ಧನೆಯಾಗಿತ್ತು. ಈ ಬಾರಿಯ ಟೂರ್ನಿಯಲ್ಲಿ ಇದನ್ನು 60 ಸಾವಿರ ಕೋಟಿಗೆ ಮುಟ್ಟಿಸುವ ಛಲದಲ್ಲಿ ಸೌರವ್ ಗಂಗೂಲಿ ಅಧ್ಯಕ್ಷತೆಯ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಇತ್ತು.

ಆದರೆ ಇದೀಗ ಕೊರೊನಾ ವೈರಸ್‌ ಉಪಟಳದಿಂದ ಇಡೀ ಟೂರ್ನಿಯೇ ರದ್ದಾಗುವ ಸಾಧ್ಯತೆ ಹೆಚ್ಚಿದೆ. ಇದರಿಂದಾಗಿ ದೊಡ್ಡ ಮೊತ್ತದ ನಷ್ಟದ ಭೀತಿಯನ್ನು ಬಿಸಿಸಿಐ ಮತ್ತು ಆಟಗಾರರು ಎದುರಿಸುತ್ತಿದ್ದಾರೆ. ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಇಡೀ ವಿಶ್ವವೇ ಹೋರಾಟ ಮಾಡುತ್ತಿದೆ.‌ ಭಾರತದಲ್ಲಿ ಏಪ್ರಿಲ್ 14ರವರೆಗೆ ಲಾಕ್‌ಡೌನ್ ಘೋಷಣೆ ಮಾಡಿರುವುದರಿಂದ ಮೇ ತಿಂಗಳಲ್ಲಿಯೂ ಟೂರ್ನಿ ನಡೆಸುವುದು ಕಷ್ಟವಾಗಲಿದೆ.

ಮಾರ್ಚ್ 29ರಂದು ಆರಂಭವಾಗಬೇಕಿದ್ದ ಟೂರ್ನಿಯನ್ನು ಬಿಸಿಸಿಐ ಏಪ್ರಿಲ್ 15ಕ್ಕೆ ಮುಂದೂಡಿತ್ತು. ಆದರೆ, ಜಗತ್ತಿನ ಬಹುತೇಕ ಎಲ್ಲ ದೇಶಗಳಲ್ಲಿಯೂ ವೈರಸ್‌ ಮರಣಮೃದಂಗ ಬಾರಿಸುತ್ತಿದೆ. ವಿಶ್ವದ ಶ್ರೀಮಂತ, ಬಡ ರಾಷ್ಟ್ರಗಳೆಲ್ಲವೂ ಲಾಕ್‌ಡೌನ್ ಆಗಿವೆ. ಇಂತಹ ಸಂದರ್ಭದಲ್ಲಿ ಟೂರ್ನಿಯನ್ನು ರದ್ದು ಮಾಡುವುದೇ ಸೂಕ್ತ ಎಂಬ ಸಲಹೆಗಳು ಬಿಸಿಸಿಐಗೆ ಬಂದಿವೆ. ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೇ ಪಂದ್ಯವನ್ನು ನಡೆಸಿ ನಷ್ಟ ಕಮ್ಮಿ ಮಾಡಿಕೊಳ್ಳುವ ಯೋಜನೆಯೂ ಫಲ ಕೊಡುವುದಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಆದ್ದರಿಂದ ಕೆಲವು ಫ್ರ್ಯಾಂಚೈಸ್‌ಗಳೂ ಟೂರ್ನಿಯನ್ನು ಮುಂದಿನ ವರ್ಷದವರೆಗೆ ಮುಂದೂಡುವ ಕುರಿತು ಸಲಹೆ ನೀಡಿವೆ. ಇನ್ನೇನು ಗಂಗೂಲಿ ತೀರ್ಮಾನ ಘೋಷಿಸುವುದನ್ನು ಎಲ್ಲರೂ ಕಾಯುತ್ತಿದ್ದಾರೆ.

ಈ ಟೂರ್ನಿಯು ರದ್ದಾದರೆ ಬಿಸಿಸಿಐಗೆ ಸುಮಾರು ₹ 10 ಸಾವಿರ ಕೋಟಿ ಆದಾಯ ಕೈಬಿಟ್ಟು ಹೋಗಲಿದೆ. ಅಧಿಕೃತ ಪ್ರಸಾರಕ ಸಂಸ್ಥೆ ಸ್ಟಾರ್ ಸ್ಫೋರ್ಟ್ಸ್‌ ಕೂಡ ದೊಡ್ಡ ಮೊತ್ತದ ನಷ್ಟ ಎದುರಿಸಲಿದೆ. ದೊಡ್ಡ ಉದ್ಯಮವೇ ಆಗಿರುವ ಈ ಟೂರ್ನಿಯ ಮೇಲೆ ಅವಲಂಬಿತವಾಗಿರುವ ಕೆಲವು ಉದ್ಯಮಗಳು, ಜಾಹೀರಾತು ಸಂಸ್ಥೆಗಳು ಅಪಾರ ನಷ್ಟವನ್ನು ಅನಿವಾರ್ಯವಾಗಿ ಅನುಭವಿಸಲೇಬೇಕಿದೆ.

ಅಕ್ಟೋಬರ್‌ನಲ್ಲಿ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡದ ಆಟಗಾರರನ್ನು ಆಯ್ಕೆ ಮಾಡಲು ಐಪಿಎಲ್ ಕೂಡ ಒಂದು ವೇದಿಕೆ ಎಂದು ಹೇಳಲಾಗಿತ್ತು. ವಿದೇಶಿ ಆಟಗಾರರೂ ಕೂಡ ವಿಶ್ವಕಪ್ ಪೂರ್ವ ಅಭ್ಯಾಸಕ್ಕಾಗಿ ಈ ಟೂರ್ನಿಯನ್ನು ನೆಚ್ಚಿಕೊಂಡಿದ್ದರು. ಆದರೆ ಈಗ ಎಲ್ಲವೂ ಕೈಕೊಟ್ಟಿದೆ. ‘ಆಟಕ್ಕಿಂತ ಜೀವ ಮುಖ್ಯ’ ಅಲ್ಲವೇ? ಆದ್ದರಿಂದ ಅನಿವಾರ್ಯವಾಗಿ ಇದನ್ನು ಸಹಿಸಿಕೊಳ್ಳಲೇಬೇಕಿದೆ.

2009ರಲ್ಲಿ ಭಾರತದಲ್ಲಿ ಚುನಾವಣೆಯ ಕಾರಣ ಐಪಿಎಲ್ ಟೂರ್ನಿಯನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಲಾಗಿತ್ತು. ಆ ದೇಶವು ಆರ್ಥಿಕ ಲಾಭ ಪಡೆಯಿತು. ಬಿಸಿಸಿಐಗೆ ಕಡಿಮೆ ಆದಾಯ ಸಿಕ್ಕರೂ ಅಷ್ಟೋಂದು ನಷ್ಟವಾಗಿರಲಿಲ್ಲ. ಈಗ ಕೊರೊನಾ ವೈರಸ್‌ ಪಿಡುಗಿಗೆ ಟೂರ್ನಿ ಬಲಿಯಾದರೆ ವಿಮೆ ಅನ್ವಯವಾಗುವ ಕುರಿತು ಖಚಿತವಿಲ್ಲ. ಬಿಸಿಸಿಐ ಅಧ್ಯಕ್ಷರು ಮತ್ತು ಫ್ರ್ಯಾಂಚೈಸ್‌ಗಳು ಈ ಬಗ್ಗೆ ಈಗ ವಿಮಾ ಕಂಪೆನಿಯೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಈ ಮೊದಲಿನ ನಿಯಮದ ಪ್ರಕಾರ ಮಳೆಯಿಂದಾಗಿ ಪಂದ್ಯ ಸಂಪೂರ್ಣ ರದ್ದಾದರೆ ಮಾತ್ರ ಪರಿಹಾರ ಸಿಗುತ್ತಿತ್ತು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳುತ್ತಾರೆ.

ಕೆಎಸ್‌ಸಿಎಗೆ ನಷ್ಟ?

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯೇ ಸುಮಾರು ₹ 25 ಕೋಟಿಯನ್ನು ಕಳೆದುಕೊಳ್ಳಲಿದೆ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರ್ಯಾಂಚೈಸ್ ಕೂಡ ಟಿಕೆಟ್‌ ಮಾರಾಟದಿಂದ ಆದಾಯ ಮತ್ತು ಸ್ಥಳೀಯ ಪ್ರಾಯೋಜಕತ್ವ ಆದಾಯದ ₹ 20 ಕೋಟಿಗೂ ಹೆಚ್ಚು ಮೊತ್ತದ ನಷ್ಟ ಅನುಭವಿಸಬಹುದು.

‘ಇಲ್ಲಿ ನಡೆಯುವ ಪ್ರತಿಯೊಂದು ಪಂದ್ಯಕ್ಕೂ ನಮಗೆ ಒಂದು ಕೋಟಿ ರೂಪಾಯಿ ಅನುದಾನ ಸಿಗುತ್ತದೆ. ಅಂದರೆ ಏಳು ಪಂದ್ಯಗಳಿಗೆ ಏಳು ಕೋಟಿ ರೂಪಾಯಿ ಮತ್ತು ಐಪಿಎಲ್‌ನ ಒಟ್ಟು ಲಾಭದಲ್ಲಿ ಪಾಲು ಸಿಗುತ್ತದೆ. ಎಲ್ಲ ಸೇರಿ 20–25 ಕೋಟಿ ರೂಪಾಯಿ ಲಭಿಸುತ್ತಿತ್ತು. ಇದೀಗ ವಿಮೆಯ ಪರಿಹಾರವೂ ಸಿಗುವುದಿಲ್ಲವೆಂದು ಹೇಳಲಾಗುತ್ತಿದೆ. ಬಿಸಿಸಿಐ ಏನು ನಿರ್ಧಾರ ಕೈಗೊಳ್ಳಲಿದೆ ಕಾದು ನೋಡಬೇಕು’ ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ‘ಪ್ರಜಾವಾಣಿಗೆ ತಿಳಿಸಿದರು.

15ದಿನಗಳ ಹಿಂದೆ ನಡೆದ ಸಭೆಯ ನಂತರ ಟೂರ್ನಿಯನ್ನು ಮುಂದೂಡಿದ್ದನ್ನು ಪ್ರಕಟಿಸಲಾಗಿತ್ತು. ಆದರೆ ಅಲ್ಲಿಂದ ಇಲ್ಲಿಯವರೆಗೆ ಪರಿಸ್ಥಿತಿಯಲ್ಲಿ ಏನೂ ಸುಧಾರಣೆ ಕಂಡಿಲ್ಲವಾದ್ದರಿಂದ ಬಿಸಿಸಿಐ ಮೇಲೂ ಒತ್ತಡ ಹೆಚ್ಚಿದೆ.

ಟೆಸ್ಟ್ ಸರಣಿಗಳಿಗೆ ಆತಂಕ

ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಭಾರತ ಸೇರಿದಂತೆ ಬಹುತೇಕ ಎಲ್ಲ ಕ್ರಿಕೆಟ್ ರಾಷ್ಟ್ರಗಳಲ್ಲಿಯೂ ಕೊರೊನಾ ತಾಂಡವವಾಡುತ್ತಿದೆ. ಇದರಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ಗೂ ಕಂಟಕ ಎದುರಾಗಿದೆ. ಟೂರ್ನಿಯ ವೇಳಾಪಟ್ಟಿಯನ್ನು ಮರುಹೊಂದಾಣಿಕೆ ಮಾಡುವ ಒತ್ತಡದಲ್ಲಿ ಐಸಿಸಿ ಇದೆ. ಆದರೆ ಅದೆಲ್ಲದಕ್ಕೂ ಕೊರೊನಾ ಪಿಡುಗು ಸಂಪೂರ್ಣ ಹತೋಟಿಗೆ ಬರಬೇಕು. ಜನಜೀವನ ಸಹಜಸ್ಥಿತಿಗೆ ಮರಳಬೇಕು. ಒಂದೊಮ್ಮೆ ಈಗ ನಡೆಸಲು ಸಾಧ್ಯವಾಗದ ಟೂರ್ನಿಗಳನ್ನು ಮುಂದೂಡಿದರೆ, ಫೈನಲ್ ಪಂದ್ಯವನ್ನು 2021ರ ಬದಲಿಗೆ 2022ರಲ್ಲಿ ಆಡಿಸಬೇಕಾಗಬಹುದು. ಬಹುತೇಕ ಆಗಸ್ಟ್‌ವರೆಗಿನ ಸರಣಿಗಳನ್ನು ರದ್ದು ಅಥವಾ ಮರುಹೊಂದಾಣಿಕೆ ಮಾಡುವ ಯೋಚನೆ ಐಸಿಸಿಗೆ ಇದೆ. ಪರಿಸ್ಥಿತಿ ಇನ್ನಷ್ಟು ತಿಂಗಳುಗಳ ಕಾಲ ಹೀಗೆ ಮುಂದುವರಿದರೆ ಅಕ್ಟೋಬರ್‌ನಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್‌ ಕೂಡ ಅತಂತ್ರವಾಗಬಹುದು ಎಂದು ಹೇಳಲಾಗುತ್ತಿದೆ.

ಇವರಿಗೆ ಅವಕಾಶ ಕೈತಪ್ಪುವ ಚಿಂತೆ?

ಆರ್ಥಿಕ ನಷ್ಟ ಒಂದೆಡೆಯಾದರೆ, ಕೆಲವು ಆಟಗಾರರಿಗೆ ಕೊನೆಯ ಬಾರಿಗೆ ತಮ್ಮ ತೋಳ್ಬಲ ತೋರಿಸುವ ಅವಕಾಶ ಕೈತಪ್ಪು ವ ಚಿಂತೆ ಕಾಡುತ್ತಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ನಿವೃತ್ತಿ ಘೋಷಿಸುವ ಹಂತದಲ್ಲಿರುವ ಮಹೇಂದ್ರ ಸಿಂಗ್ ಧೋನಿ ಇದೊಂದು ಬಾರಿ ತಮ್ಮ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಪ್ರಶಸ್ತಿ ಜಯಿಸಿಕೊಡುವ ಛಲದಲ್ಲಿದ್ದರು. ಮುಂದಿನ ವರ್ಷದಿಂದ ಓಪನ್‌ ಬಿಡ್ಡಿಂಗ್‌ಗೆ ಲಭ್ಯರಾಗುವುದಾಗಿಯೂ ತಿಳಿಸಿದ್ದರು. ಅದರಿಂದಾಗಿ ಅವರು ತಮ್ಮನ್ನು ಖರೀದಿಸುವ ಬೇರೆ ತಂಡಕ್ಕೆ ಹೋಗುವ ಕುರಿತು ಸೂಚನೆ ನೀಡಿದ್ದರು. ಈ ಸಲ ಅವರು ಹೋದ ಜುಲೈನಿಂದ ಕ್ರಿಕೆಟ್‌ ಅಂಗಳದಿಂದ ದೂರ ಉಳಿದಿದ್ದರು. ಹೋದ ತಿಂಗಳು ಸಿಎಸ್‌ಕೆ ನೆಟ್ಸ್‌ಗೆ ಮರಳಿದ್ದರು. ಈ ಟೂರ್ನಿಯ ನಂತರ ಅವರು ಟಿ20 ವಿಶ್ವಕಪ್ ಆಡಲು ಸಜ್ಜಾಗುವ ಮಾತುಗಳೂ ಕೇಳಿ ಬಂದಿದ್ದವು. ಈಗ ಕಾದು ನೋಡುವುದಷ್ಟೇ ಬಾಕಿ!

ಈ ಬಾರಿ ಆ್ಯರನ್ ಫಿಂಚ್ ಅವರಂತಹ ಶ್ರೇಷ್ಠ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿರುವ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿತ್ತು. ಇದೀಗ ಅದೂ ಕೈತಪ್ಪುವ ಸಾಧ್ಯತೆಗಳು ದಟ್ಟವಾಗಿವೆ.

ಕನ್ನಡಿಗರೇ ತುಂಬಿರುವ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಸಾರಥ್ಯ ಈ ಸಲ ಕರ್ನಾಟಕದ ಕೆ.ಎಲ್. ರಾಹುಲ್ ಅವರಿಗೆ ಲಭಿಸಿತ್ತು. ಅವರ ನಾಯಕತ್ವವನ್ನು ನೋಡುವ ಅವಕಾಶ ಸಿಗುತ್ತದೆಯೇ ಎಂದು ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT