ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಎದ್ದು ಕಾಣುತ್ತಿದೆ ಖಾಲಿ ಗ್ಯಾಲರಿ....

ಕ್ರಿಕೆಟ್‌ ಪಂದ್ಯಗಳಿಗೆ ಪ್ರೇಕ್ಷಕರೇ ಕಳೆ
Last Updated 25 ಸೆಪ್ಟೆಂಬರ್ 2020, 9:32 IST
ಅಕ್ಷರ ಗಾತ್ರ

ಜಗಮಗಿಸುವ ಬೆಳಕು, ಗ್ಯಾಲರಿಯಿಂದ ಕಿವಿಗಡಚಿಕ್ಕುವ ಗದ್ದಲ.. ಚುಟುಕು ಕ್ರಿಕೆಟ್‌ ಕಳೆಯೇರುವುದೇ ಪ್ರೇಕ್ಷಕರಿಂದ. ಅಭಿಮಾನಿಗಳಿಂದ ಕಿಕ್ಕಿರಿಯುವ ಕ್ರೀಡಾಂಗಣ ಆಕರ್ಷಣೆಯ ಕೇಂದ್ರ. ಒಂದು– ಒಂದೂವರೆ ಗಂಟೆ ಮೊದಲೇ ಕ್ರೀಡಾಂಗಣದತ್ತ ಧಾವಿಸಿ ಪಂದ್ಯಕ್ಕೆ ಮುನ್ನವೇ ಉತ್ಸಾಹದಿಂದ ಭಾಗಿಯಾಗುವುದು ಐಪಿಎಲ್‌ ಅಂಥ ಕ್ರಿಕೆಟ್‌ ಪಂದ್ಯಗಳ ವರದಿ ವೇಳೆ ಕಾಣುವ ಮಾಮೂಲು ದೃಶ್ಯ.

ಭರ್ಜರಿ ಹೊಡೆತಗಳಿಗೆ ಹರ್ಷೋದ್ಗಾರ ಮಾಡುವ ಅಭಿಮಾನಿಗಳು, ಮೆಚ್ಚಿನ ಆಟಗಾರ ಅಲ್ಪಮೊತ್ತಕ್ಕೆ ನಿರ್ಗಮಿಸಿದಾಗ ಮುಖದಲ್ಲಿ ಕಾಣುವ ನಿರಾಶೆಯ ಭಾವ, ಗಮನ ಸೆಳೆಯಲೆಂದೇ ಬರುವ ಚಿತ್ರ–ವಿಚಿತ್ರ ಅವತಾರಗಳು, ಅರ್ಥಗರ್ಭಿತ ಬರಹಗಳ ಪ್ಲೆಕಾರ್ಡ್‌ಗಳನ್ನು ತಂದು ಪ್ರದರ್ಶಿಸುವ ಪ್ರೇಕ್ಷಕರು, ಅಗೊಮ್ಮೆ ಈಗೊಮ್ಮೆ ಏಳುವ ಮೆಕ್ಸಿಕೊ ವೇವ್‌, ಸಿಕ್ಸರ್‌, ಬೌಂಡರಿಗಳಿಗೆ ಹೆಜ್ಜೆಹಾಕುವ ಚಿಯರ್‌ ಗರ್ಲ್ಸ್‌, ಡಿಜೆ ಕರೆಗೆ ಪ್ರತಿಕ್ರಿಯಿಸುವ ರೀತಿ, ಸೆಲ್ಫಿ ಸಂಭ್ರಮ..... ಹೀಗೆ ಚುಟುಕು ಕ್ರಿಕೆಟ್‌ ಪ್ರೇಕ್ಷಕರ ಪಾಲಿಗೆ ಬರೇ ಪಂದ್ಯವಲ್ಲ. ಭಾರತದಲ್ಲಿ ಇದು ಜಾತ್ರೆ. ಆದರೆ ಕೋವಿಡ್‌ ಪಿಡುಗು ಈ ಬಾರಿ ಅಂಥ ಸಂಭ್ರಮವನ್ನು ಕಸಿದುಕೊಂಡಿದೆ.

ಹಲವು ಕಟ್ಟುನಿಟ್ಟಿನ ಹೊರತಾಗಿಯೂ ಪ್ರೇಕ್ಷಕರು ಪಂದ್ಯಗಳಿಗೆ ಮುಗಿಬೀಳುತ್ತಾರೆ. ಪಂದ್ಯ ನೋಡಲು ಕ್ರೀಡಾಂಗಣಕ್ಕೆ ಹೋಗುವ ಜನಸಾಮಾನ್ಯರಿಗೆ ನಿರ್ಬಂಧಗಳು ಹಲವು. ನಾಣ್ಯ, ಕೈಚೀಲ, ನೀರಿನ ಬಾಟಲು, ಪೆನ್‌ ಮೊದಲಾದ ಯಾವುದೇ ವಸ್ತುಗಳನ್ನು ಒಯ್ಯುವಂತಿಲ್ಲ. ಮೊಬೈಲ್‌ಗಷ್ಟೇ ಅವಕಾಶ.

ಇನ್ನು ಸ್ನೇಹಿತರ ಜೊತೆ ಕೆಲವು ಪ್ರೇಕ್ಷಕರು ಮಾಡುವ ಆಟದ ವಿಶ್ಲೇಷಣೆ ತಜ್ಞ ಕ್ರಿಕೆಟ್‌ ಬರಹಗಾರರಿಗಿಂತ ಕಡಿಮೆಯೇನೂ ಇರುವುದಿಲ್ಲ. ಕೆಲವೊಮ್ಮೆ, ಕ್ಯಾಚ್‌ ಬಿಟ್ಟಾಗ, ದುರ್ವರ್ತನೆ ತೋರಿದಾಗ ಪ್ರೇಕ್ಷಕರು ಆಟಗಾರರ ವಿರುದ್ಧ ಘೋಷಣೆ ಕೂಗುವುದೂ ಇದೆ. ಒಟ್ಟಾರೆ ಸಭ್ಯ ಪ್ರೇಕ್ಷಕರ ಅಸ್ತಿತ್ವ ಕ್ರಿಕೆಟ್‌ ಕ್ರೀಡಾಂಗಣಗಳಿಗೆ ಮೆರುಗು.

ಹೀಗಾಗಿಯೇ ಯುಎಇಯಲ್ಲಿ ಈ ಬಾರಿ ಆರಂಭವಾಗಿರುವ ಡ್ರೀಮ್‌ ಇಲೆವನ್‌ ಐಪಿಎಲ್‌ ಹಣಾಹಣಿ ಕೊರತೆಯೊಂದನ್ನು ಎದುರಿಸಿದಂತೆ ಸ್ಪಷ್ಟವಾಗಿ ಕಾಣುತ್ತಿದೆ. ಬಣಗುಟ್ಟುವ ಗ್ಯಾಲರಿಗಳನ್ನು ಕಾಣಬೇಕಾಗಿದೆ. ಈ ಕೊರತೆ ತುಂಬಲೊ ಎಂಬಂತೆ ವಿವಿಧ ನಗರಗಳಲ್ಲಿ ಪಂದ್ಯ ನೋಡಿ ಅಭಿಮಾನಿಗಳು ಸಂಭ್ರಮಿಸುವ ರೆಕಾರ್ಡೆಡ್‌ ತುಣುಕುಗಳನ್ನು ನೇರ ಪ್ರಸಾರದ ವೇಳೆ ತೋರಿಸಲಾಗುತ್ತಿದೆ. ಹರ್ಷೋದ್ಗಾರಗಳ ಸದ್ದನ್ನೂ ಕೇಳಿಸಲಾಗುತ್ತದೆ. ಆದರೆ ಇದು ಪ್ರೇಕ್ಷಕರ ಅನುಪಸ್ಥಿತಿಯನ್ನು ಸರಿಹೊಂದಿಸುವ ಪ್ರಯತ್ನಗಳಷ್ಟೇ.

ಆಟಗಾರರಿಗೂ ಬೇಕು ಪ್ರೇಕ್ಷಕರು:ಎಲ್ಲಕ್ಕಿಂತ ಮುಖ್ಯವಾಗಿ ಆಟಗಾರರೂ ಪ್ರೇಕ್ಷಕರಿಂದ ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ಬಯಸುತ್ತಾರೆ. ಒಳ್ಳೆಯ ಹೊಡೆತಗಳಿಗೆ, ವಿಕೆಟ್‌ ಕೀಳುವ ಎಸೆತಗಳಿಗೆ ಚಪ್ಪಾಳೆ, ಹರ್ಷೋದ್ಗಾರಗಳು ಆಟಗಾರರಿಗೆ ಬೆಂಬಲ, ಸ್ಫೂರ್ತಿ ಒದಗಿಸುತ್ತವೆ. ಪ್ರೇಕ್ಷಕರ ಕರತಾಡನ ಆಟಗಾರರ ಹುಮ್ಮಸ್ಸನ್ನು ಇಮ್ಮಡಿಸುತ್ತದೆ. ಈಗ ಅರ್ಧ ಶತಕ, ಶತಕ ಹೊಡೆದಾಗ ಬ್ಯಾಟ್‌ ಎತ್ತಿ ಖಾಲಿ ಕ್ರೀಡಾಂಗಣಕ್ಕೆ ತೋರಿಸುವಂಥ ಸ್ಥಿತಿ ಅನಿವಾರ್ಯವಾಗಿದೆ. ಇದಕ್ಕೆ ಆ ತಂಡದ ಉಳಿದ ಆಟಗಾರರಷ್ಟೇ ಸಂಭ್ರಮಪಡಬೇಕಾಗಿದೆ!

ಹೀಗಾಗಿಯೇ ಕೆಲವು ಸಮಯದ ಹಿಂದೆ ಖಾಲಿ ಕ್ರೀಡಾಂಗಣಗಳಲ್ಲಿ ಐಪಿಎಲ್‌ ನಡೆಸುವುದು ಬೇಡ ಎಂಬ ಮಾತುಗಳು ಮದನ್‌ಲಾಲ್‌ ಸೇರಿದಂತೆ ಕೆಲವು ಆಟಗಾರರಿಂದ ಕೇಳಿಬಂದಿದ್ದವು. ಪ್ರೇಕ್ಷಕರಿಲ್ಲದೇ ಆಡುವುದು ಆಟಗಾರರಿಗೂ ಹೊಸ ಸವಾಲು. ‘ಹೊಸ ವಾತಾವರಣಕ್ಕೆ’ ಮಾನಸಿಕವಾಗಿ ಸಜ್ಜಾಗಿಯೇ ಬರಬೇಕಾದ ಅನಿವಾರ್ಯತೆ.

ಭಾರತದಲ್ಲಿ, ಕ್ರೀಡಾಂಗಣಕ್ಕೆ ಲಗ್ಗೆಯಿಡುವ ಪ್ರೇಕ್ಷಕರಿಂದ ಅಷ್ಟೊ–ಇಷ್ಟೊ ಸಂಪಾದಿಸಿ ಹೊಟ್ಟೆ ಹೊರೆಯುತ್ತಿದ್ದವರ ಸಂಖ್ಯೆಯೂ ಕಡಿಮೆಯಿರಲಿಲ್ಲ. ಕ್ರೀಡಾಂಗಣದ ಕಡೆ ಹೋಗುವ ರಸ್ತೆಗಳ ಬದಿ ಜೆರ್ಸಿ, ಟಿ ಶರ್ಟ್‌ಗಳನ್ನು ಮಾರುವವರು, ಮುಖಗಳಿಗೆ ಧ್ವಜ, ಚಿತ್ತಾರ ಬಿಡಿಸುವವರು, ಕ್ಯಾಪ್‌ಗಳನ್ನು ಮಾರುವವರು.... ಹೀಗೆ ಎಲ್ಲರ ಆದಾಯಕ್ಕೆ ಕೊರೊನಾದಿಂದ ಕತ್ತರಿ.

ಸಾಂಕ್ರಾಮಿಕ ಪಿಡುಗಿನ ಕಾರಣ ಎಲ್ಲ ಮನರಂಜನಾ ಚಟುವಟಿಕೆಗೆ ಪೆಟ್ಟುಬಿದ್ದಿದ್ದು, ಐಪಿಎಲ್‌ ಹೊರತಾಗಿಲ್ಲ. ಈಗ ಪ್ರೇಕ್ಷಕರು ಬಂದರೇನು? ಬಿಟ್ಟರೇನು? ಜನರಿಗೆ ಮನರಂಜನೆ ಬೇಕಾಗಿದೆ. ಮಂಡಳಿಗೆ ದುಡ್ಡು ಹರಿದುಬಂದರೆ ಸಾಕು. ಹೀಗಾಗಿಯೇ ಮುಂದಿನ ಐಪಿಎಲ್‌ ಅನ್ನು ಯುಎಇಯಲ್ಲೇ ನಡೆಸುವ ಚಿಂತನೆಯ ಸುದ್ದಿ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT