ಶುಕ್ರವಾರ, ಜೂನ್ 5, 2020
27 °C

ಕೊರೊನಾ ಸೋಂಕು ಭೀತಿ: ಭಾರತ–ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಸರಣಿ ರದ್ದು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ಭೀತಿಯಿಂದಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಏಕದಿನ ಕ್ರಿಕೆಟ್‌ ಸರಣಿಯ ಎರಡು ಮತ್ತು ಮೂರನೇ ಪಂದ್ಯಗಳನ್ನು ರದ್ದು ಮಾಡಲಾಗಿದೆ.

ಭಾರತದಲ್ಲಿ ಕೊರೊನಾ ಶಂಕಿತರ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಲಖನೌ (ಮಾರ್ಚ್‌ 15) ಹಾಗೂ ಕೋಲ್ಕತ್ತದಲ್ಲಿ (ಮಾರ್ಚ್‌ 18) ನಿಗದಿಯಾಗಿರುವ ಪಂದ್ಯಗಳಲ್ಲಿ ಆಡಲು ದಕ್ಷಿಣ ಆಫ್ರಿಕಾದ ಆಟಗಾರರು ಹಿಂದೇಟು ಹಾಕಿದ್ದಾರೆ. ಹೀಗಾಗಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಅನಿವಾರ್ಯವಾಗಿ ಸರಣಿಯನ್ನು ಅರ್ಧದಲ್ಲೇ ರದ್ದು ಮಾಡಿದೆ.

‘ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಆತಂಕಗೊಂಡಿದ್ದಾರೆ. ಆದಷ್ಟು ಬೇಗ ತವರಿಗೆ ಹಿಂತಿರುಗಲು ಮುಂದಾಗಿದ್ದಾರೆ. ಹೀಗಾಗಿ ಸರಣಿಯನ್ನು ರದ್ದು ಮಾಡಲಾಗಿದೆ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕೊರೊನಾ ಆತಂಕ ದೂರವಾದ ಬಳಿಕ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಮತ್ತೊಮ್ಮೆ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿ ಆಯೋಜಿಸಲು ನಿರ್ಧರಿಸಿದ್ದೇವೆ. ಈ ಸಂಬಂಧ ಕ್ರಿಕೆಟ್‌ ದಕ್ಷಿಣ ಆಫ್ರಿಕಾ (ಸಿಎಸ್‌ಎ) ಜೊತೆ ಚರ್ಚಿಸಿ ದಿನಾಂಕ ಮತ್ತು ಸ್ಥಳವನ್ನು ನಿಗದಿಪಡಿಸುತ್ತೇವೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದ್ದಾರೆ.

‘ದಕ್ಷಿಣ ಆಫ್ರಿಕಾದ ಆಟಗಾರರು ನವದೆಹಲಿಗೆ ಬಂದು ಅಲ್ಲಿಂದ ಲಭ್ಯವಿರುವ ವಿಮಾನದಲ್ಲಿ ತವರಿಗೆ ಹೋಗಲಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.

‘ಹಣಕ್ಕಿಂತಲೂ ಆಟಗಾರರ ಆರೋಗ್ಯವೇ ಮುಖ್ಯ. ಹೀಗಾಗಿ ಸರಣಿ ರದ್ದು ಮಾಡಲಾಗಿದೆ. ಇದು ಉತ್ತಮ ನಿರ್ಧಾರ’ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಪ್ರತಿಕ್ರಿಯಿಸಿದ್ದಾರೆ.

ಧರ್ಮಶಾಲಾದಲ್ಲಿ ನಿಗದಿಯಾಗಿದ್ದ ಉಭಯ ತಂಡಗಳ ನಡುವಣ ಮೊದಲ ಏಕದಿನ ಪಂದ್ಯವು ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾಗಿತ್ತು. ಕೊರೊನಾ ಆತಂಕದಿಂದಾಗಿ ಉಳಿದ ಎರಡು ಪಂದ್ಯಗಳನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ಈ ಮೊದಲು ಬಿಸಿಸಿಐ ಚಿಂತಿಸಿತ್ತು.

ಇಂಗ್ಲೆಂಡ್‌–ಲಂಕಾ ಸರಣಿ ರದ್ದು: ಕೊರೊನಾ ಆತಂಕದಿಂದಾಗಿ ಇಂಗ್ಲೆಂಡ್‌ ಮತ್ತು ಶ್ರೀಲಂಕಾ ನಡುವಣ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ರದ್ದು ಮಾಡಲಾಗಿದೆ.

ಉಭಯ ತಂಡಗಳ ನಡುವಣ ಮೊದಲ ಟೆಸ್ಟ್‌ ಇದೇ ತಿಂಗಳ 19ರಂದು ಗಾಲ್‌ನಲ್ಲಿ ನಿಗದಿಯಾಗಿತ್ತು.

‘ವಿಶ್ವದೆಲ್ಲೆಡೆ ಕೊರೊನಾ ಕರಿನೆರಳು ಆವರಿಸಿರುವುದರಿಂದ ಆಟಗಾರರಲ್ಲೂ ಆತಂಕ ಮನೆಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ನಮಗೆ ಕ್ರಿಕೆಟ್‌ಗಿಂತಲೂ ಆಟಗಾರರ ಹಿತ ಮುಖ್ಯ. ಹೀಗಾಗಿ ಅವರನ್ನು ತವರಿಗೆ ಮರಳುವಂತೆ ಸೂಚಿಸಿದ್ದೇವೆ’ ಎಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು