ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ನಂ.1 ಆಗಬೇಕು: ಡಿ. ಜಯಶ್ರೀ

ಕರ್ನಾಟಕ ಮಹಿಳಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥೆ
Last Updated 1 ಜೂನ್ 2020, 3:07 IST
ಅಕ್ಷರ ಗಾತ್ರ

‘ಕೊರೊನಾ ಸಂಕಷ್ಟ ಕಳೆದ ಮೇಲೆ ಕರ್ನಾಟಕದ ಕ್ರಿಕೆಟ್‌ ವೈಭವ ಮರಳುವುದು ಖಚಿತ. ಅದೇ ರೀತಿ ನಮ್ಮ ರಾಜ್ಯದ ಮಹಿಳಾ ಕ್ರಿಕೆಟ್‌ ಕೂಡ ದೇಶದಲ್ಲಿಯೇ ಅಗ್ರಸ್ಥಾನಕ್ಕೇರುತ್ತದೆ. ಬಹಳಷ್ಟು ಪ್ರತಿಭಾನ್ವಿತ ಆಟಗಾರ್ತಿಯರು ಈಗ ಇದ್ದಾರೆ. ಅವರಲ್ಲಿಯೇ ಶ್ರೇಷ್ಠರನ್ನು ಆಯ್ಕೆ ಮಾಡಿ ಅವಕಾಶ ಕೊಟ್ಟು, ರಾಜ್ಯದ ಕ್ರಿಕೆಟ್‌ ಬೆಳವಣಿಗೆಗೆ ಪ್ರಯತ್ನಿಸುತ್ತೇನೆ.....’

ಕರ್ನಾಟಕ ರಾಜ್ಯ ಮಹಿಳಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ಡಿ. ಜಯಶ್ರೀ ಅವರ ವಿಶ್ವಾಸದ ನುಡಿಗಳಿವು. ಭಾರತ ಮಹಿಳಾ ಕ್ರಿಕೆಟ್ ತಂಡದ ಮೊದಲ ನಾಯಕಿ ಶಾಂತಾ ರಂಗಸ್ವಾಮಿ ಅವರ ಮಾರ್ಗದರ್ಶನದಲ್ಲಿ ಬೆಳೆದವರು ಜಯಶ್ರೀ. 1982ರಿಂದ 1995ರವರೆಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ವುಮನ್ ಆಗಿ ಕರ್ನಾಟಕ ಮತ್ತು ಸದರ್ನ್ ರೈಲ್ವೆ ತಂಡಗಳಲ್ಲಿ ಆಡಿದ್ದರು. ನಿವೃತ್ತಿಯ ನಂತರ ಯುವ ಆಟಗಾರ್ತಿಯರಿಗೆ ತರಬೇತಿ ಮಾರ್ಗದರ್ಶನ ಮಾಡುತ್ತ ಸಕ್ರಿಯವಾಗಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಟಿಕೆಟ್‌ ಕಾಯ್ದಿರಿಸುವಿಕೆ ವಿಭಾಗದ ಮೇಲ್ಚಿಚಾರಕರಾಗಿದ್ದಾರೆ. ತಮ್ಮ ಕ್ರಿಕೆಟ್ ಜೀವನ ಮತ್ತು ಮುಂದಿನ ಯೋಜನೆಗಳ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

ತಮಗೆ ಕ್ರಿಕೆಟ್‌ನತ್ತ ಒಲವು ಬೆಳೆದಿದ್ದು ಏಕೆ?

ನಮ್ಮ ಮನೆ ಚಾಮರಾಜಪೇಟೆಯಲ್ಲಿದೆ. ಅಣ್ಣ ರಾಮಪ್ರಿಯನ್ ಕ್ರಿಕೆಟ್ ಆಡುತ್ತಿದ್ದರು. ಅವರಿಂದಾಗಿ ಆಟದತ್ತ ಆಸಕ್ತಿ ಬೆಳೆಯಿತು. ನಮ್ಮ ತಂದೆ, ಮನೆಯ ಹುಡುಗರನ್ನು ಪಂದ್ಯಗಳನ್ನು ನೋಡಲು ಕರೆದುಕೊಂಡು ಹೋಗುತ್ತಿದ್ದರು. ಆಗ ನಾನು ಕೂಡ ಮ್ಯಾಚ್‌ಗೆ ಹೋಗುವುದಾಗಿ ಹಠ ಮಾಡುತ್ತಿದ್ದೆ. ಮನೆಯ ಹತ್ತಿರ ಕರ್ನಾಟಕ ಮಹಿಳಾ ಕ್ರಿಕೆಟ್‌ ಸಂಸ್ಥೆಯ ಕಾರ್ಯದರ್ಶಿ ಕೆ.ಆರ್. ರಘು ಇದ್ದರು. ಅವರ ಮನೆಗೆ ಆಗ ಶಾಂತಾ ರಂಗಸ್ವಾಮಿ ಮತ್ತಿತರರು ಬರುತ್ತಿದ್ದರು. ಅವರನ್ನು ನೋಡಿ ಕ್ರಿಕೆಟ್‌ ಬಗ್ಗೆ ಮತ್ತಷ್ಟು ಆಸಕ್ತಿ ಬೆಳೆಯಿತು. 1982ರಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಮಹಿಳಾ ಕ್ರಿಕೆಟ್ ಶಿಬಿರಕ್ಕೆ ಸೇರಿದೆ. ಆ ಸಂದರ್ಭದಲ್ಲಿ ನನ್ನ ತಂದೆ ಆರೋಗ್ಯ ಕೂಡ ಸರಿಯಿರಲಿಲ್ಲ. ಆದೇ ವರ್ಷ ಅವರು ತೀರಿಕೊಂಡರು. ನಂತರದಲ್ಲಿ ನಾನು ಮಾಡಿದ ಕ್ರಿಕೆಟ್ ಸಾಧನೆಯನ್ನು ನೋಡಲು ಅವರಿರಲಿಲ್ಲವೆಂಬುದು ಬೇಸರದ ಸಂಗತಿ. ಆದರೆ ನನ್ನ ತಾಯಿ ನೀಡಿದ ಪ್ರೋತ್ಸಾಹ ದೊಡ್ಡದು. ಜಯನಗರದ ಎನ್‌.ಎಂ.ಕೆ.ಆರ್‌.ವಿ. ಕಾಲೇಜಿನಲ್ಲಿ ವಾಣಿಜ್ಯ ವಿಭಾಗಕ್ಕೆ ಸೇರಿಕೊಂಡೆ. ಅಲ್ಲಿ ಕ್ರೀಡೆಗೆ ಬಹಳ ಪ್ರೋತ್ಸಾಹ ಇತ್ತು. ಕಾಲೇಜು ತಂಡದ ನಾಯಕಿಯಾದೆ.

ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದು ಯಾವಾಗ?

1985ರಲ್ಲಿ ರಾಜ್ಯ ತಂಡಕ್ಕೆ ಆಯ್ಕೆಯಾದೆ. ಶಾಂತಾ ರಂಗಸ್ವಾಮಿ, ಕಲ್ಪನಾ, ಮುಕ್ತಾ ಅಳಗೇರಿ ಅವರಿದ್ದರು. ಅವರು ಅನುಭವಿ ಆಟಗಾರ್ತಿಯಾಗಿದ್ದರು. ಶಾಂತಾ ಅವರಂತೂ ನಮಗೆ ಮಾರ್ಗದರ್ಶಕರೂ ಆಗಿದ್ದರು. ಅವರ ಪ್ರೇರಣೆ ದೊಡ್ಡದರು. ನ್ಯಾಷನಲ್‌ ಕಾಲೇಜು ಮೈದಾನ ನಮ್ಮ ಪಾಲಿಗೆ ಲಾರ್ಡ್ಸ್‌ ಆಗಿತ್ತು. ಮುಂಬೈನಲ್ಲಿ ಮೊದಲ ಲೀಗ್ ಆಡಿದೆವು. 1995ರಲ್ಲಿ ಮುಂಬೈನಲ್ಲಿ ಮೊದಲ ಬಾರಿ ಟೂರ್ನಿ ಆಡಲು ಹೋಗಿದ್ದೆ. 1991ರಲ್ಲಿ ಸದರ್ನ್ ರೈಲ್ವೆಯಲ್ಲಿ ಕೆಲಸ ಸಿಕ್ಕಿತು. 1995ರಿಂದ ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಸತತ ಮೂರು ಬಾರಿ ರನ್ನರ್ಸ್ ಅಪ್ ಆಗಿದ್ದೆವು. ಶಾಂತಾ ಅವರೇ ಆಧಾರಸ್ತಂಭ. ನಾನು ಬೌಲಿಂಗ್ ಮಾಡುತ್ತಿದ್ದೆ. ಆದರೆ ಅದು ಒಲಿಯಲಿಲ್ಲ. ಬ್ಯಾಟಿಂಗ್‌ನಲ್ಲಿ ಮುಂದುವರಿದೆ.

ಸದ್ಯ ರಾಜ್ಯದಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆ ಅವಕಾಶ ಇದೆಯೇ?

ನಾನು ಕೆಲವು ಕಾಲ ಆಯ್ಕೆ ಸಮಿತಿಯಲ್ಲಿ ಸದಸ್ಯೆಯಾಗಿದ್ದೆ. ಕೋಚ್ ಕೂಡ ಆಗಿದ್ದೆ. 16 ವರ್ಷದೊಳಗಿನವರ ವಿಭಾಗದಲ್ಲಿ ಸದ್ಯ 300ಕ್ಕೂ ಹೆಚ್ಚು ಹುಡುಗಿಯರು ಕ್ರಿಕೆಟ್ ಆಡುತ್ತಿದ್ದಾರೆ. ಸೀನಿಯರ್ ವಿಭಾಗದಲ್ಲಿ ಬಹಳಷ್ಟು ಹುಡುಗಿಯರು ಬರುತ್ತಿದ್ದಾರೆ. ನಾವು ಆಡುವಾಗ ಇಷ್ಟೊಂದು ಸೌಲಭ್ಯಗಳು ಇರಲಿಲ್ಲ. ಆಧುನಿಕ ಫಿಟ್‌ನೆಸ್ ಸೌಲಭ್ಯಗಳು ಇರಲಿಲ್ಲ. ಮೈದಾನ, ಲಾಲ್‌ಬಾಗ್‌ನಲ್ಲಿ ಓಟದ ಅಭ್ಯಾಸ ಮಾಡಿ ಫಿಟ್‌ನೆಸ್‌ ಮಾಡಿಕೊಳ್ಳುತ್ತಿದ್ದೆವು. ಈಗ ಎಲ್ಲವೂ ಇದೆ. ತಮ್ಮ ಸಾಮರ್ಥ್ಯ ತೋರಿಸಬೇಕಷ್ಟೇ. ಆದರೆ ನಮ್ಮ ಕಾಲದಲ್ಲಿ ದೇಶಿ ಟೂರ್ನಿಗಳು, ಲೀಗ್‌ಗಳು ಇದ್ದವು. ಈಗ ಕಡಿಮೆ ಯಾಗಿವೆ. ಟೂರ್ನಿಗಳು, ಆಹ್ವಾನಿತ ಲೀಗ್‌ಗಳನ್ನು ಹೆಚ್ಚಿಸಬೇಕು. ಆಗ ಎಲ್ಲರಿಗೂ ಪ್ರತಿಭೆ ತೋರಲು ಸಹಾಯವಾಗುತ್ತದೆ.

ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನಿಮ್ಮ ಮುಂದಿರುವ ಸವಾಲುಗಳೇನು?

2017ರಲ್ಲಿ ಭಾರತ ಮಹಿಳಾ ತಂಡವು ವಿಶ್ವಕಪ್‌ನಲ್ಲಿ ರನ್ನರ್ಸ್ ಅಪ್ ಆದ ನಂತರ ಬಹಳಷ್ಟು ಜನರು ಪ್ರೇರಣೆಗೊಂಡು ಕ್ರಿಕೆಟ್‌ಗೆ ಬರುತ್ತಿದ್ದಾರೆ. ಪಾಲಕರೂ ತಮ್ಮ ಹೆಣ್ಣುಮಕ್ಕಳನ್ನು ಕ್ರಿಕೆಟ್‌ಗೆ ಕಳುಹಿಸುತ್ತಿದ್ದಾರೆ. ಅವರೆಲ್ಲರ ಪ್ರತಿಭೆಗೆ ತಕ್ಕ ಮನ್ನಣೆ ನೀಡುವುದು ನನ್ನ ಆದ್ಯತೆ. ಭಾರತ ತಂಡದಲ್ಲಿ ಸ್ಥಾನ ಪಡೆಯುವಂತಹ ಆಟಗಾರ್ತಿಯರ ಪ್ರತಿಭೆ ಗುರುತಿಸಿ ರಾಜ್ಯ ತಂಡಗಳಲ್ಲಿ ಸ್ಥಾನ ಕೊಡುವುದುನನ್ನ ಮುಂದಿರುವ ಪ್ರಮುಖ ಸವಾಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT