ಗುರುವಾರ , ಆಗಸ್ಟ್ 18, 2022
24 °C

ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು: ನ್ಯೂಜಿಲೆಂಡ್‌ಗೆ ಸರಣಿ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಬರ್ಮಿಂಗ್‌ಹ್ಯಾಮ್‌: ಭರ್ಜರಿ ಆಟವಾಡಿದ ನ್ಯೂಜಿಲೆಂಡ್ ತಂಡವು ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಭಾನುವಾರ ಎಂಟು ವಿಕೆಟ್‌ಗಳಿಂದ ಮಣಿಸಿದೆ. ಇದರೊಂದಿಗೆ ಎರಡು ಪಂದ್ಯಗಳ ಸರಣಿಯನ್ನು 1–0ಯಿಂದ ಗೆದ್ದುಕೊಂಡಿದೆ.

‍ಗೆಲುವಿಗೆ ಕೇವಲ 38 ರನ್‌ಗಳ ಗುರಿ ಪಡೆದಿದ್ದ ಪ್ರವಾಸಿ ತಂಡವು ಎರಡು ವಿಕೆಟ್‌ ಕಳೆದುಕೊಂಡು ಜಯದ ಸಂಭ್ರಮ ಆಚರಿಸಿತು. ಈ ಮೂಲಕ 1999ರ ಬಳಿಕ ಇಂಗ್ಲೆಂಡ್ ನೆಲದಲ್ಲಿ ಸರಣಿ ಜಯಿಸಿದ ಸಾಧನೆ ಮಾಡಿತು. ಇಂಗ್ಲೆಂಡ್‌ನಲ್ಲಿ ಕಿವೀಸ್‌ಗೆ ಒಟ್ಟಾರೆ ಮೂರನೇ ಸರಣಿ ಜಯ ಇದು.

2014ರ ಬಳಿಕ ಮೊದಲ ಬಾರಿ ಇಂಗ್ಲೆಂಡ್ ತವರಿನಲ್ಲಿ ಟೆಸ್ಟ್ ಸರಣಿಯಲ್ಲಿ ಸೋಲು ಅನುಭವಿಸಿತು.

ಪಂದ್ಯದ ಮೂರನೇ ದಿನವಾದ ಶನಿವಾರ ಆಟ ನಿಂತಾಗ ಇಂಗ್ಲೆಂಡ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ 9 ವಿಕೆಟ್‌ ಕಳೆದುಕೊಂಡು 122 ರನ್ ಗಳಿಸಿತ್ತು. ಭಾನುವಾರ ಟ್ರೆಂಟ್‌ ಬೌಲ್ಟ್ ಎಸೆದ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಒಲಿ ಸ್ಟೋನ್ ವಿಕೆಟ್ ಒಪ್ಪಿಸುವುದರೊಂದಿಗೆ ಆಲೌಟ್ ಆಗಿತ್ತು.

ಉತ್ತರವಾಗಿ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡವು 33 ರನ್‌ಗಳಾಗುವಷ್ಟರಲ್ಲಿ ಡೆವೊನ್ ಕಾನ್ವೆ (3) ಹಾಗೂ ವಿಲ್ ಯಂಗ್‌ (8) ಅವರ ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಗೂಡಿದ ಹಂಗಾಮಿ ನಾಯಕ ಟಾಮ್ ಲಥಾಮ್‌ (ಔಟಾಗದೆ 23) ಮತ್ತು ರಾಸ್‌ ಟೇಲರ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ಲಾರ್ಡ್ಸ್‌ನಲ್ಲಿ ನಡೆದಿದ್ದ ಉಭಯ ತಂಡಗಳ ನಡುವಣ ಮೊದಲ ಪಂದ್ಯವು ಡ್ರಾ ಆಗಿತ್ತು.

ಪಂದ್ಯ ನಾಲ್ಕೇ ದಿನಗಳಲ್ಲಿ ಮುಗಿದಿದ್ದರಿಂದ ಭಾರತ ತಂಡದ ಎದುರಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ಗೆ ಸಜ್ಜಾಗಲು ನ್ಯೂಜಿಲೆಂಡ್ ತಂಡಕ್ಕೆ ಹೆಚ್ಚುವರಿ ದಿನ ಸಿಕ್ಕಿದೆ.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್:ಇಂಗ್ಲೆಂಡ್‌: 101 ಓವರ್‌ಗಳಲ್ಲಿ 303: ನ್ಯೂಜಿಲೆಂಡ್‌ 119.1 ಓವರ್‌ಗಳಲ್ಲಿ 388: ಎರಡನೇ ಇನಿಂಗ್ಸ್: ಇಂಗ್ಲೆಂಡ್‌: 41.1 ಓವರ್‌ಗಳಲ್ಲಿ 122: ನ್ಯೂಜಿಲೆಂಡ್‌: 10.5 ಓವರ್‌ಗಳಲ್ಲಿ 2 ವಿಕೆಟ್‌ಗೆ 41 (ಟಾಮ್ ಲಥಾಮ್ ಔಟಾಗದೆ 23, ವಿಲ್ ಯಂಗ್ 8; ಸ್ಟುವರ್ಟ್‌ ಬ್ರಾಡ್‌ 13ಕ್ಕೆ 1, ಒಲಿ ಸ್ಟೋನ್‌ 5ಕ್ಕೆ 1).

ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ ಎಂಟು ವಿಕೆಟ್‌ಗಳ ಜಯ. 1–0ಯಿಂದ ಸರಣಿ ಗೆಲುವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು