ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ಕ್ರಿಕೆಟ್‌ನಿಂದ ಆಟಗಾರರಿಗೆ ಆರ್ಥಿಕ ಭದ್ರತೆ ಸಿಕ್ಕಿದೆ: ವೀರೇಂದ್ರ ಸೆಹ್ವಾಗ್

Last Updated 2 ಡಿಸೆಂಬರ್ 2022, 10:01 IST
ಅಕ್ಷರ ಗಾತ್ರ

ನವದೆಹಲಿ: ಆಟಗಾರರಿಗೆ ಬೇಕಿರುವ ಆರ್ಥಿಕ ಭದ್ರತೆಯನ್ನು ಟಿ20 ಕ್ರಿಕೆಟ್‌ ಒದಗಿಸಿದೆ. ಇದರಿಂದಾಗಿ ಆಟಗಾರರು ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ನಿಂದ ವಿಮುಖವಾಗುವ ಸಾಧ್ಯತೆ ಇದೆ ಎಂಬ ಕಳವಳ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಮೂರೂ ಮಾದರಿಯ ಕ್ರಿಕೆಟ್‌ ಒಟ್ಟಾಗಿ ಅಸ್ತಿತ್ವದಲ್ಲಿರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) ಯಶಸ್ಸು ವಿಶ್ವದಾದ್ಯಂತ ಟಿ20 ಚಾಂಪಿಯನ್‌ಷಿಪ್‌ಗಳು ನಡೆಯಲು ಪ್ರೇರಣೆ ನೀಡಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು (ಐಸಿಸಿ) ಟಿ20 ಕ್ರಿಕೆಟ್‌ ಅನ್ನು ಒಲಿಂಪಿಕ್‌ಗೆ ಸೇರ್ಪಡೆ ಮಾಡುವ ಪ್ರಯತ್ನ ನಡೆಸುತ್ತಿದೆ.

ಕ್ಯಾಲೆಂಡರ್‌ ವರ್ಷವೊಂದರಲ್ಲಿ ಸಾಕಷ್ಟು ಸಂಖ್ಯೆಯ ಪಂದ್ಯಗಳು ನಡೆಯುತ್ತಿರುವುದು ಕೆಲ ಆಟಗಾರರು ತಮ್ಮ ಆಟಕ್ಕೆ ಹೊಂದುವ ಮಾದರಿಗೆ ಹೆಚ್ಚು ಆದ್ಯತೆ ನೀಡುವಂತೆ ಮಾಡುತ್ತಿದೆ. ಕೆಲವರು ಲಾಭದಾಯಕ ಲೀಗ್‌ಗಳಿಂದಲೇ ಹೊರ ನಡೆದು, ರಾಷ್ಟ್ರೀಯ ತಂಡಗಳ ಪರ ಮಾತ್ರವೇ ಆಡುತ್ತಿದ್ದಾರೆ.

ಟಿ20 ಕ್ರಿಕೆಟ್‌ ಜನಪ್ರಿಯತೆಯಿಂದಾಗಿ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ಗೆ ಹಿನ್ನಡೆಯಾಗುತ್ತಿದೆಯೇ ಎಂಬ ಬಗ್ಗೆ ಮಾತನಾಡಿರುವ ಸೆಹ್ವಾಗ್‌, 'ಟಿ20 ಕ್ರಿಕೆಟ್‌ ಮಾತ್ರವೇ ಉಳಿದುಕೊಳ್ಳಲಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಉಳಿದ ಎರಡೂ ಮಾದರಿಗಳೂ ಅಸ್ತಿತ್ವದಲ್ಲಿರಲಿವೆ. ಏಕೆಂದರೆ, ಐಸಿಸಿಯು ವಿವಿಧ ರಾಷ್ಟ್ರಗಳು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ ಆಡುವಂತೆ ಮಾಡುತ್ತಿದೆ. ಅದಕ್ಕಾಗಿಯೇ ಟೆಸ್ಟ್‌ ಚಾಂಪಿಯನ್‌ಷಿಪ್‌ ಮತ್ತು ಏಕದಿನ ವಿಶ್ವಕಪ್‌ ಟೂರ್ನಿಗಳನ್ನು ಆಯೋಜಿಸುತ್ತಿದೆ' ಎಂದು ಹೇಳಿದ್ದಾರೆ.

'ಕ್ರಿಕೆಟ್‌ ಮುಂದುವರಿಯಲು ಟೆಸ್ಟ್‌ ಹಾಗೂ ಏಕದಿನ ಮಾದರಿಯ ಪಾತ್ರ ಅಗಾಧವಾದದ್ದು' ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್‌ನ ಏಳು ಆವೃತ್ತಿಗಳಲ್ಲಿ ಆಡಿರುವ ಸೆಹ್ವಾಗ್‌, 'ನನ್ನ ಪ್ರಕಾರ ಕ್ರಿಕೆಟ್ ಆಡಲು ಇದು ಉತ್ತಮವಾದ ಕಾಲ. ನೀವು ರಾಷ್ಟ್ರೀಯ ತಂಡದ ಪರ ಆಡದಿದ್ದರೂ, ಟಿ20 ಲೀಗ್‌ಗಳಲ್ಲಿ ಆಡಿದರೂ ಹಣಕಾಸಿನ ದೃಷ್ಠಿಯಿಂದ ಭದ್ರತೆ ಪಡೆಯಬಹುದು' ಎಂದಿದ್ದಾರೆ.

ಯುಎಇಯಲ್ಲಿ ಈ ವರ್ಷದಿಂದ ಇಂಟರ್‌ನ್ಯಾಷನಲ್‌ ಲೀಗ್‌ ಟಿ20 (ಐಎಲ್‌ಟಿ20) ಆರಂಭವಾಗಲಿದೆ. ಇದರ ಪ್ರಚಾರ ಅಭಿಯಾನದಲ್ಲಿ ಭಾಗವಹಿಸಿರುವವರಲ್ಲಿ ಸೆಹ್ವಾಗ್‌ ಪ್ರಮುಖರಾಗಿದ್ದಾರೆ. ಆರು ತಂಡಗಳು ಭಾಗವಹಿಸುವ ಐಎಲ್‌ಟಿ20 ಲೀಗ್‌ ಯಶಸ್ವಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಈ ಲೀಗ್‌ ಅನ್ನು ವೃತ್ತಿಪರರು ಮುನ್ನಡೆಸುತ್ತಿದ್ದಾರೆ. ಅತ್ಯುತ್ತಮ ಆಟಗಾರರು ಇರಲಿದ್ದಾರೆ. ಪ್ರಾಂಚೈಸ್‌ಗಳ ಮಾಲೀಕರು ವಿವಿಧ ಕ್ರೀಡಾ ತಂಡಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ' ಎಂದು ತಿಳಿಸಿದ್ದಾರೆ.

ಲೀಗ್‌ನಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್‌ ಕ್ರಿಸ್‌ ಲಿನ್‌, ವೆಸ್ಟ್‌ ಇಂಡೀಸ್‌ನ ಸುನೀಲ್‌ ನರೇನ್‌, ಆ್ಯಂಡ್ರೆ ರಸೆಲ್‌, ಕೀರನ್ ಪೊಲಾರ್ಡ್‌, ಇಂಗ್ಲೆಂಡ್‌ನ ಅಲೆಕ್ಸ್‌ ಹೇಲ್ಸ್‌, ಮೋಯಿನ್‌ ಅಲಿ ಸೇರಿದಂತೆ ಹಲವು ಖ್ಯಾತ ಆಟಗಾರರು ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT