ಸೋಮವಾರ, ಜನವರಿ 17, 2022
27 °C

IND vs SA: ಭಾರತಕ್ಕೆ ಸಿಗದ ಸಂಕ್ರಾಂತಿ ಸಿಹಿ, ದಕ್ಷಿಣ ಆಫ್ರಿಕಾಗೆ ಸರಣಿ ಗೆಲುವು

ಪಿಟಿಐ/ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಕೇಪ್‌ಟೌನ್: ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಜಯದ ಸಿಹಿ ಸವಿದು, ಸಂಕ್ರಾಂತಿಯನ್ನು ಸ್ಮರಣೀಯಗೊಳಿಸಿಕೊಳ್ಳುವ ಭಾರತ ತಂಡದ ಕನಸು ನನಸಾಗಲಿಲ್ಲ. 

ಕೀಗನ್ ಪೀಟರ್ಸನ್ ಕೌಶಲಯುತ ಬ್ಯಾಟಿಂಗ್‌ ಬಲದಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ಶುಕ್ರವಾರ ಇಲ್ಲಿ ಮುಕ್ತಾಯವಾದ ಮೂರನೇ ಟೆಸ್ಟ್‌ನಲ್ಲಿ 7 ವಿಕೆಟ್‌ಗಳಿಂದ ಗೆದ್ದಿತು. ಅದರೊಂದಿಗೆ 2–1ರಿಂದ ಸರಣಿ ಜಯಿಸಿತು. ತಂಡವು  212 ರನ್‌ಗಳ ಗುರಿಯನ್ನು  63.3 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಮುಟ್ಟಿತು.

ಭಾರತದ ಬೌಲರ್‌ಗಳ ಎಲ್ಲ ಪ್ರಯತ್ನಗಳಿಗೂ ಕೀಗನ್ (82; 113ಎ, 4X10) ಮತ್ತು ರೆಸಿ ವ್ಯಾನ್ ಡರ್ ಡಸೆನ್ (ಔಟಾಗದೆ 41; 95ಎ, 4X3) ಅಡ್ಡಗೋಡೆಯಂತೆ ನಿಂತರು. ಪಂದ್ಯದ ಮೂರನೇ ದಿನ ದಿಟ್ಟ ಶತಕ ಗಳಿಸಿದ್ದ ರಿಷಭ್ ಪಂತ್ ಆಟದಿಂದಾಗಿ ಭಾರತ ತಂಡವು ಇನ್ನೂರಕ್ಕೂ ಹೆಚ್ಚು ರನ್‌ಗಳ ಗುರಿಯೊಡ್ಡಲು ಸಾಧ್ಯವಾಗಿತ್ತು. ಗುರುವಾರ ಸಂಜೆ ಎರಡನೇ ಇನಿಂಗ್ಸ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ಎರಡು ವಿಕೆಟ್‌ಗಳ ನಷ್ಟಕ್ಕೆ 101 ರನ್ ಗಳಿಸಿತ್ತು.

ನಾಲ್ಕನೇ ದಿನದಾಟದಲ್ಲಿ ಭಾರತಕ್ಕೆ ದಕ್ಕಿದ್ದು ಒಂದೇ ಒಂದು ವಿಕೆಟ್ ಮಾತ್ರ. 47ನೇ ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಎಸೆತದಲ್ಲಿ ಕ್ಲೀನ್ ಬೌಲ್ಡ್‌ ಆಗುವ ಮುನ್ನ ಕೀಗನ್ ತಮ್ಮ ತಂಡವನ್ನು ಜಯದ ಸನಿಹ ತಂದು ನಿಲ್ಲಿಸಿದ್ದರು. ಡಸೆನ್ ಜೊತೆಗೂಡಿದ ತೆಂಬಾ ಬವುಮಾ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಮೊದಲ ಇನಿಂಗ್ಸ್‌ನಲ್ಲಿಯೂ ಅರ್ಧಶತಕ ಗಳಿಸಿದ್ದ ಕೀಗನ್ ಎರಡನೇ ಇನಿಂಗ್ಸ್‌ನ 40ನೇ ಓವರ್‌ನಲ್ಲಿ ಪೂಜಾರ ಕೈಬಿಟ್ಟ ಕ್ಯಾಚಿನ ಲಾಭ ಪಡೆದರು.

‘ನಾವು ಮೊದಲ ಪಂದ್ಯದಲ್ಲಿ ಚೆನ್ನಾಗಿ ಆಡಿದ್ದೆವು. ಅರ್ಹ ಜಯ ಸಾಧಿಸಿದ್ದೆವು. ಉಳಿದೆರಡು ಪಂದ್ಯಗಳಲ್ಲಿಯೂ ನಮ್ಮ ಆಟ ಉತ್ತಮವಾಗಿದ್ದರೂ, ದಕ್ಷಿಣ ಆಫ್ರಿಕಾ ಪ್ರಮುಖ ಘಟ್ಟಗಳಲ್ಲಿ ಚಾಣಾಕ್ಷತೆ ಮೆರೆಯಿತು. ಪುಟಿದೆದ್ದು ಜಯ ಸಾಧಿಸಿತು’ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದರು.

ಸೆಂಚುರಿಯನ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಗೆದ್ದಿದ್ದ ಭಾರತವು ಜೋಹಾನ್ಸ್‌ಬರ್ಗ್‌ನ ಎರಡನೇ ಪಂದ್ಯ ಮತ್ತು ಇಲ್ಲಿಯ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯದಿಂದಾಗಿ ಸೋಲನುಭವಿಸಿತು.

ಕೊನೆಯ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಆರಂಭಿಕ ಜೋಡಿ ಮಯಂಕ್ ಅಗರವಾಲ್ ಮತ್ತು ರಾಹುಲ್,  ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರಿಂದ ನಿರೀಕ್ಷಿತ ಆಟ ಮೂಡಿಬರಲಿಲ್ಲ. ಅದರಿಂದಾಗಿ ಮೊದಲ ಇನಿಂಗ್ಸ್‌ನಲ್ಲಿ 223 ರನ್‌ಗಳಿಸಲಷ್ಟೇ ವಿರಾಟ್ ಪಡೆಗೆ ಸಾಧ್ಯವಾಗಿತ್ತು. ಆದರೆ ಜಸ್‌ಪ್ರೀತ್ ಬೂಮ್ರಾ  ಐದು ವಿಕೆಟ್‌ಗಳನ್ನು ಗಳಿಸಿ ಮಿಂಚಿದ್ದರಿಂದ ಆತಿಥೇಯ ತಂಡವು 13 ರನ್‌ಗಳ ಅಲ್ಪ ಹಿನ್ನಡೆ ಅನುಭವಿಸಿತ್ತು.

ಆದರೆ ಕೊನೆಯ ಇನಿಂಗ್ಸ್‌ನಲ್ಲಿ ಬೌಲರ್‌ಗಳ ಆಟ ನಡೆಯಲಿಲ್ಲ. ಕೀಗನ್ ಪೀಟರ್ಸನ್ ಪಂದ್ಯ ಮತ್ತು ಸರಣಿಶ್ರೇಷ್ಠ ಗೌರವ ಗಳಿಸಿದರು.

ಓದಿ... ಪಂತ್ ಸೆಂಚುರಿ ಪಂಚ್; ಆಕಾಶಕ್ಕೆ ಚಿಮ್ಮಿದ ಬ್ಯಾಟ್, ಬೌಂಡರಿ ಗೆರೆ ದಾಟಿದ ಚೆಂಡು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು